IND vs SA: ಭಾರತ ತಂಡದ ಹೆಡ್ ಕೋಚ್ ಸ್ಥಾನದಿಂದ ಗೌತಮ್ ಗಂಭೀರ್‌ರನ್ನು ಕಿತ್ತಾಕಿ ಎಂದ ಮನೋಜ್ ತಿವಾರಿ!
ಭಾರತ ತಂಡದ ಹೆಡ್ ಕೋಚ್ ಹುದ್ದೆಯಿಂದ ಗೌತಮ್ ಗಂಭೀರ್ ಅವರನ್ನು ತೆಗೆದು ಹಾಕಬೇಕೆಂದು ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಆಗ್ರಹಿಸಿದ್ದಾರೆ. ಗಂಭೀರ್ ಹೆಡ್ ಕೋಚ್ ಅವಧಿಯಲ್ಲಿ ಭಾರತ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದರೂ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರದರ್ಶನ ಕುಸಿದಿದೆ. ನ್ಯೂಜಿಲೆಂಡ್ ಬಳಿಕ ಇದೀಹ ದಕ್ಷಿಣ ಆಫ್ರಿಕಾ ವಿರುದ್ಧ ವೈಟ್‌ವಾಷ್ ಆಘಾತ ಅನುಭವಿಸಿದೆ.
ಗೌತಮ್ ಗಂಭೀರ್ ವಿರುದ್ಧ ಮನೋಜ್ ತಿವಾರಿ ಆಕ್ರೋಶ. -
ನವದೆಹಲಿ: ಭಾರತ ತಂಡ, ದಕ್ಷಿಣ ಆಫ್ರಿಕಾ (IND vs SA) ವಿರುದ್ಧ ಟೆಸ್ಟ್ ಸರಣಿಯನ್ನು 0-2 ಅಂತರದಲ್ಲಿ ವೈಟ್‌ವಾಷ್ ಆಘಾತ ಅನುಭವಿಸಿದ ಬೆನ್ನಲ್ಲೆ ಹೆಡ್ ಕೋಚ್ ಸ್ಥಾನದಿಂದ ಗೌತಮ್ ಗಂಭೀರ್ (Gautam Gambhir) ಅವರನ್ನು ತೆಗೆಯಬೇಕೆಂದು ಮಾಜಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಮನೋಜ್ ತಿವಾರಿ (Manoj Tiwary) ಆಗ್ರಹಿಸಿದ್ದಾರೆ. ಭಾರತ ತಂಡ ಬುಧವಾರ ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿಅಂತ್ಯವಾಗಿದ್ದ ಎರಡನೇ ಟೆಸ್ಟ್ ಪಂದ್ಯವನ್ನು 408 ರನ್‌ಗಳ ಭಾರಿ ಅಂತರದಲ್ಲಿ ಸೋತಿತ್ತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಇದು ಭಾರತ ತಂಡ ಅತ್ಯಂತ ದೊಡ್ಡ ಅಂತರದ (ರನ್‌ಗಳಿಂದ) ಸೋಲಾಗಿದೆ.
ಹಿಂದೂಸ್ಥಾನ್ ಟೈಮ್ಸ್ ಜೊತೆ ಮಾತನಾಡಿದ ಮನೋಜ್ ತಿವಾರಿ, "ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ, ನೀವು ಬೇಕಿದ್ದರೆ ಇದನ್ನು ಗೋಡೆಯ ಮೇಲೆ ಬರೆದುಕೊಳ್ಳಬಹುದು. ಇದು ಮುಗಿದು ಹೋಯಿತು. ಸಂಗತಿಗಳು ಸರಿಯಾದ ಹಾದಿಯಲ್ಲಿ ಸಾಗಲಿಲ್ಲ ಎಂದು ನನಗೂ ಗೊತ್ತಿದೆ. ಅವರು ಹಿಂಬಾಲಿಸಿದ ಯೋಜನೆ ಅಥವಾ ತಂತ್ರ ಸರಿಯಾಗಿಲ್ಲ. ತಂಡದಲ್ಲಿ ನಿರಂತರವಾಗಿ ಬದಲಾವಣೆಯನ್ನು ತರಲಾಗುತ್ತಿದೆ ಹಾಗೂ ಇದಕ್ಕೆ ಸಾಕ್ಷಿ ಇದೆ. ಬಾರ್ಡರ್-ಗವಾಸ್ಕರ್ ಟ್ರೋಫಿ, ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಹಾಗೂ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋತಿದೆ," ಎಂದು ಹೇಳಿದ್ದಾರೆ.
IND vs SA: ʻಭಾರತ ಟೆಸ್ಟ್ ತಂಡಕ್ಕೆ ಹೊಸ ಕೋಚ್ ನೇಮಿಸಬೇಕುʼ-ಬಿಸಿಸಿಐಗೆ ಡಿ.ಸಿ ಮಾಲೀಕ ಮನವಿ!
ಟೆಸ್ಟ್ ತಂಡಕ್ಕೆ ಕೋಚ್ ಬದಲಾವಣೆಯಾಗಲಿ
ಭಾರತ ಟೆಸ್ಟ್ ತಂಡಕ್ಕೆ ಪ್ರತ್ಯೇಕ ಕೋಚ್ ಅನ್ನು ನೇಮಕ ಮಾಡಿ ಎಂದು ಇದೇ ವೇಳೆ ಬಿಸಿಸಿಐಗೆ ಮನೋಜ್ ತಿವಾರಿ ಆಗ್ರಹಿಸಿದ್ದಾರೆ. "ನಿಸ್ಸಂಶಯವಾಗಿ, ಇದರಲ್ಲಿ ಯಾವುದೇ ಅನುಮಾನ ಬೇಡ. ಬೇಕಿದ್ದರೆ, ಟೆಸ್ಟ್ ಕ್ರಿಕೆಟ್‌ಗೆ ಮಾತ್ರ ಪ್ರತ್ಯೇಕ ಕೋಚ್ ಅನ್ನು ನೇಮಿಸಲಿ. ಭಾರತೀಯ ಕ್ರಿಕೆಟ್ ಅನ್ನು ಉಳಿಸಲು ಇದು ಸರಿಯಾದ ಸಮಯ,"ಎಂದು ಮಾಜಿ ಬ್ಯಾಟ್ಸ್‌ಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ಗೌತಮ್ ಗಂಭೀರ್ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದರು. ಇಂಗ್ಲೆಂಡ್‌ನಲ್ಲಿ ಭಾರತ ಉತ್ತಮವಾಗಿ ಕಾರ್ಯನಿರ್ವಹಿಸಿದ ಮತ್ತು ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾ ಕಪ್ ಗೆದ್ದ ಅದೇ ಕೋಚ್ ನಾನು ಎಂದು ಹೇಳಿದ್ದರು. ಆದಾಗ್ಯೂ, ಈ ಹೇಳಿಕೆ ತಿವಾರಿಗೆ ಸಮಾಧಾನ ತಂದಿಲ್ಲ. ಭಾರತ ತಂಡ ಇಂಗ್ಲೆಂಡ್‌ನಲ್ಲಿ ಸರಣಿಯನ್ನು ಸುಲಭವಾಗಿ ಕಳೆದುಕೊಳ್ಳಬಹುದಿತ್ತು ಎಂದು ಹೇಳಿದ ಅವರು, ಏಕದಿನ ತಂಡವನ್ನು ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಕಟ್ಟಿದ್ದಾರೆ ಎಂದು ಹೇಳಿದರು. ಗಂಭೀರ್ ಟೀಮ್ ಇಂಡಿಯಾದ ಕೋಚ್ ಅಲ್ಲದಿದ್ದರೂ ಭಾರತ ಟೂರ್ನಿಗಳಲ್ಲಿ ಗೆಲ್ಲುತ್ತಿತ್ತು ಎಂದು ಅವರು ಹೇಳಿದ್ದಾರೆ.
IND vs SA: ಭಾರತದ ಬ್ಯಾಟ್ಸ್‌ಮನ್‌ಗಳ ಸ್ಪಿನ್ ವೈಫಲ್ಯಕ್ಕೆ ಕಾರಣ ತಿಳಿಸಿದ ಆರ್ ಅಶ್ವಿನ್!
"ಭಾರತ ಯುವ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಉಳಿಸಿಕೊಂಡಿತ್ತು ಎಂದು ಗೌತಮ್ ಗಂಭೀರ್ ಹೇಳುತ್ತಿದ್ದಾರೆ. ಆದರೆ, ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಡ್ರಾ ಸಾಧಿಸುವುದು ದೊಡ್ಡ ಸಾಧನೆ ಏನೂ ಅಲ್ಲ. ಇದು ಒಳ್ಳೆಯ ಫಲತಾಂಶ ಅಲ್ಲ, ಏಕೆಂದರೆ ಆ ರೀತಿಯ ಉತ್ತಮ ಆಟಗಾರರು ನಮ್ಮಲ್ಲಿದ್ದಾರೆ. ಕೊನೆಯ ದಿನ ಇಷ್ಟ ಬಂದ ಶಾಟ್‌ಗಳನ್ನು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಆಡಲು ತಪ್ಪು ಮಾಡಿದ್ದರು. ಹಾಗಾಗಿ ಭಾರತ 3-1 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲಬಹುದಿತ್ತು. ಇದು ಆಗಿದ್ದರೆ, ಅವರ ಅವಧಿಯಲ್ಲಿ ಇದು ದೊಡ್ಡ ಸಾಧನೆ ಆಗುತ್ತಿತ್ತು," ಎಂದು ಮನೋಜ್ ತಿವಾರಿ ತಿಳಿಸಿದ್ದಾರೆ.
"ನನ್ನ ಅವಧಿಯಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ಏಷ್ಯಾ ಕಪ್ ಗೆದ್ದಿದ್ದೇನೆಂದು ಅವರು ಹೇಳಿರುವ ವಿಡಿಯೊವನ್ನು ನಾನು ನೋಡಿದೆ. ಈ ತಂಡವನ್ನು ಕಟ್ಟಿ ಬೆಳೆಸಿದ್ದು, ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ. ಒಂದು ಈ ಟೂರ್ನಿಗಳಲ್ಲಿ ಕೋಚ್ ಇಲ್ಲದೇ ಇದ್ದರೂ ಭಾರತ ಗೆಲುವು ಪಡೆಯುತ್ತಿತ್ತು. ಏಕೆಂದರೆ ತಂಡ ಅಷ್ಟು ಬಲಿಷ್ಠವಾಗಿದೆ. ವೈಟ್ ಬಾಲ್ ಮೆಂಟರ್ ಟೀಮ್ ಇಂಡಿಯಾದ ಹೆಡ್ ಕೋಚ್ ಆಡುತ್ತಿರುವುದು ಅನಿರೀಕ್ಷಿತ. ಗ್ರೌಂಡ್ ಲೆವೆಲ್‌ನಲ್ಲಿ ನಿಮ್ಮಲ್ಲಿ ಅನುಭವ ಇಲ್ಲವಾದಲ್ಲಿ, ಅಗ್ರ ದರ್ಜೆಯಲ್ಲಿ ಫಲಿತಾಂಶವನ್ನು ಹೇಗೆ ನಿರೀಕ್ಷೆ ಮಾಡಬಹುದು," ಎಂದು ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಹೇಳಿದ್ದಾರೆ.