IND vs SL: ಮೂರನೇ ದಿನ ಟೇಲ್‌ಎಂಡರ್ಸ್ ಆಡಿದ್ದೇಕೆ? ಗಭೀರ್, ಗಿಲ್ ವಿರುದ್ಧ ದೊಡ್ಡ ಗಣೇಶ್ ಕಿಡಿ!
ಶ್ರೀಲಂಕಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ರಕ್ಷಣಾತ್ಮಕ ತಂತ್ರವನ್ನು ಅನುಸರಿಸಿದ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶುಭಮನ್ ಗಿಲ್ ವಿರುದ್ಧ ಭಾರತೀಯ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರು ಟೀಕಿಸಿದ್ದಾರೆ. ಮೂರನೇ ದಿನ ಇಬ್ಬರು ಟೇಲ್‌ಎಂಡರ್‌ಗಳ ಮೂಲಕ ಬ್ಯಾಟಿಂಗ್ ಮುಂದುವರಿಸಿದ ನಿರ್ಧಾರವನ್ನು ಗಣೇಶ್ ಪ್ರಶ್ನೆ ಮಾಡಿದ್ದಾರೆ.
ಗೌತಮ್ ಗಂಭೀರ್ ನಿರ್ಧಾರವನ್ನು ಟೀಕಿಸಿದ ದೊಡ್ಡ ಗಣೇಶ್. -
ಗಾಲೆ: ಇಲ್ಲಿನ ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ (IND vs SL) ಭಾರತ ತಂಡದ ನಾಯಕ ಶುಭಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅನುಸರಿಸಿದ ರಕ್ಷಣಾತ್ಮಕ ತಂತ್ರವನ್ನು ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ (Dodda Ganesh) ಟೀಕಿಸಿದ್ದಾರೆ. ಮೂರನೇ ದಿನದಾಟದಲ್ಲಿ ಮಳೆಯ ಮುನ್ಸೂಚನೆ ಇದ್ದರೂ ಭಾರತ ತಂಡ ಬ್ಯಾಟಿಂಗ್ ಮುಂದುವರಿಸಿದ ನಿರ್ಧಾರವನ್ನು ಗಣೇಶ್ ಪ್ರಶ್ನಿಸಿದ್ದಾರೆ. ಅದರಲ್ಲೂ ಇಬ್ಬರು ಟೇಲ್‌ಎಂಡರ್‌ಗಳು ಕ್ರೀಸ್‌ನಲ್ಲಿದ್ದಾಗ ಬ್ಯಾಟಿಂಗ್ ಮುಂದುವರಿಸುವ ಅಗತ್ಯವೇನಿತ್ತು ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಮೂರನೇ ದಿನ ಬೆಳಿಗ್ಗೆ ಕುಲ್‌ದೀಪ್ ಯಾದವ್ ಮತ್ತು ಪ್ರಸಿಧ್ ಕೃಷ್ಣ ಕೇವಲ ನಾಲ್ಕು ಎಸೆತಗಳನ್ನು ಎದುರಿಸಿದ್ದಾಗ, ಅಸಿತಾ ಫೆರ್ನಾಂಡೊ ಪ್ರಸಿಧ್ ಕೃಷ್ಣ ಅವರನ್ನು 2 ರನ್‌ಗೆ ಔಟ್ ಮಾಡಿದರು. ಇದರೊಂದಿಗೆ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 462 ರನ್‌ಗಳಿಗೆ ಆಲೌಟ್ ಆಯಿತು. ಮೂರನೇ ದಿನವಾದ ಸೋಮವಾರ ಈ ನಿರ್ಧಾರದ ಬಗ್ಗೆ ದೊಡ್ಡ ಗಣೇಶ್ ತಮ್ಮ ಸೋಶಿಯಲ್ ಮೀಡಿಯಾ ‘ಎಕ್ಸ್’ ಖಾತೆಯಲ್ಲಿ, “ಇಬ್ಬರು ಟೇಲ್‌ಎಂಡರ್‌ಗಳು ಕ್ರೀಸ್‌ನಲ್ಲಿರುವಾಗ ಮೂರನೇ ದಿನದ ಬೆಳಿಗ್ಗೆಯೇ ಏಕೆ ಬ್ಯಾಟ್ ಮಾಡಬೇಕು?" ಎಂದು ಬರೆದಿದ್ದಾರೆ.
ಗಾಲೆ ಟೆಸ್ಟ್; ಮಳೆ ಅಡಚಣೆ ನಡುವೆ ಬೃಹತ್ ಮೊತ್ತ ಕಲೆಹಾಕಿದ ಭಾರತ
ಮೊದಲ ಎರಡು ದಿನಗಳ ಆಟಕ್ಕೆ ಮಳೆ ಅಡ್ಡಿಯಾಗಿತ್ತು. ಮಳೆಯಿಂದಾಗಿ ಸುಮಾರು 64 ಓವರ್‌ಗಳ ಆಟ ನಷ್ಟವಾಗಿತ್ತು. ಹೀಗಾಗಿ ಉಳಿದ ಸಮಯದಲ್ಲಿ ಭಾರತ ವೇಗವಾಗಿ ಆಡಬೇಕಾದ ಅನಿವಾರ್ಯತೆ ಇತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ಉಳಿದ ಒಂಬತ್ತು ಟೆಸ್ಟ್‌ಗಳಲ್ಲಿ ಏಳು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪಂದ್ಯದಲ್ಲಿ ವೇಗವಾಗಿ ಫಲಿತಾಂಶದತ್ತ ಸಾಗುವ ಪ್ರಯತ್ನ ಮಾಡಬೇಕಿತ್ತು ಎಂಬುದು ಗಣೇಶ್ ಅವರ ಅಭಿಪ್ರಾಯವಾಗಿದೆ. ಮೂರನೇ ದಿನವೂ ಮಳೆಯ ಮುನ್ಸೂಚನೆ ಇದ್ದ ಕಾರಣ, ಭಾರತದ ಬ್ಯಾಟಿಂಗ್ ನಿರ್ಧಾರ ಮತ್ತಷ್ಟು ಪ್ರಶ್ನೆಗೆ ಎಡೆ ಮಾಡಿಕೊಟ್ಟಿದೆ.
Why would you bat on third day morning with two tail enders? #SLvIND
— Dodda Ganesh | ದೊಡ್ಡ ಗಣೇಶ್ (@doddaganesha) August 17, 2026
ಭಾರತದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್, ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ದಿನವೂ ಭಾರತ ತಂಡದ ತಂತ್ರವನ್ನು ಟೀಕಿಸಿದ್ದರು. ಭಾನುವಾರ ಧ್ರುವ್ ಜುರೆಲ್ ಔಟಾದ ಬಳಿಕ ಭಾರತ ತಂಡ ತನ್ನ ಮೊದಲ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಬೇಕಿತ್ತು ಎಂದು ಗಣೇಶ್ ಅಭಿಪ್ರಾಯಪಟ್ಟಿದ್ದಾರೆ. “ಜುರೆಲ್ ಔಟಾದ ಬಳಿಕವೂ ನಾವು ಏಕೆ ಡಿಕ್ಲೇರ್ ಮಾಡಿಲ್ಲ ಎಂಬುದು ಅರ್ಥವಾಗುತ್ತಿಲ್ಲ,” ಎಂದು ಗಣೇಶ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
ಮಳೆಯಿಂದಾಗಿ ಮೊದಲ ಎರಡು ದಿನಗಳ ಆಟಕ್ಕೆ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ, ಉಳಿದ ಸಮಯದಲ್ಲಿ ಶ್ರೀಲಂಕಾ ಮೇಲೆ ಒತ್ತಡ ಹೇರಲು ಭಾರತ ಬೇಗನೆ ಡಿಕ್ಲೇರ್ ಮಾಡಬೇಕಿತ್ತು ಎಂಬುದು ಗಣೇಶ್ ಅವರ ಅಭಿಪ್ರಾಯ.
Don’t understand why we haven’t declared even after Jurel’s dismissal #SLvIND
— Dodda Ganesh | ದೊಡ್ಡ ಗಣೇಶ್ (@doddaganesha) August 16, 2026
ದೇವದತ್ ಪಡಿಕ್ಕಲ್ ಅವರ 167 ರನ್‌ಗಳ ಭರ್ಜರಿ ಇನಿಂಗ್ಸ್ ನೆರವಿನಿಂದ ಭಾರತ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ 462 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಭಾರತ 400 ರನ್‌ಗಳ ಗಡಿ ದಾಟುವಲ್ಲಿ ಕೆಎಲ್ ರಾಹುಲ್ (82) ಮತ್ತು ಧ್ರುವ್ ಜುರೆಲ್ (51) ಕೂಡ ಮಹತ್ವದ ಕೊಡುಗೆ ನೀಡಿದರು. ಶ್ರೀಲಂಕಾ ಪರ ಕೆಶರ ನುವಾಂತ ಮೂರು ವಿಕೆಟ್ ಹಾಗೂ ಪ್ರಭತ್ ಜಯಸೂರ್ಯ ನಾಲ್ಕು ವಿಕೆಟ್ ಪಡೆದು ಭಾರತದ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು.
ಆದರೆ ಭಾರತದ ಬೌಲರ್‌ಗಳ ಮುಂದೆ ಶ್ರೀಲಂಕಾದ ಮೇಲಿನ ಕ್ರಮಾಂಕ ಸಂಪೂರ್ಣವಾಗಿ ಕುಸಿಯಿತು. ಆರಂಭಿಕ ಓವರ್‌ನಲ್ಲೇ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್, ನಿಶಾನ್ ಫೆರ್ನಾಂಡೊ ಅವರನ್ನು ಕೇವಲ ಎರಡು ಎಸೆತಗಳಲ್ಲಿ ಶೂನ್ಯಕ್ಕೆ ಔಟ್ ಮಾಡುವ ಮೂಲಕ ಆತಿಥೇಯರಿಗೆ ಆರಂಭಿಕ ಆಘಾತ ನೀಡಿದರು. ಬಳಿಕ ಮಾನವ್ ಸುತಾರ್ ವೇಗವಾಗಿ ಎರಡು ವಿಕೆಟ್ ಪಡೆದು ದಿನೇಶ್ ಚಾಂಡಿಮಲ್ ಮತ್ತು ಲಹಿರು ಉದಾರಾ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.
ತವರಿನಲ್ಲಿ ಟೆಸ್ಟ್ ಸೋತು ಗ್ರೆಗ್ ಚಾಪೆಲ್ ಬಳಿಕ ಅನಗತ್ಯ ದಾಖಲೆ ಬರೆದ ಪ್ಯಾಟ್ ಕಮಿನ್ಸ್
ನಂತರ ಕುಲ್‌ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಕೂಡ ವಿಕೆಟ್ ಬೇಟೆಗೆ ಕೈಜೋಡಿಸಿದರು. ಪರಿಣಾಮವಾಗಿ ಶ್ರೀಲಂಕಾ ಊಟದ ವಿರಾಮಕ್ಕೆ 99 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೂರನೇ ದಿನದಾಟದಲ್ಲಿ ಭಾರತ ಬ್ಯಾಟಿಂಗ್ ಬಳಿಕ ಬೌಲಿಂಗ್‌ನಲ್ಲೂ ಪ್ರಾಬಲ್ಯ ಸಾಧಿಸಿ ಪಂದ್ಯವನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು.