IND vs SL: ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಕನ್ನಡಿಗ ದೇವದತ್ ಪಡಿಕ್ಕಲ್!
ಶ್ರೀಲಂಕಾ ವಿರುದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಚೊಚ್ಚಲ ಟೆಸ್ಟ್ ಶತಕವನ್ನು ಬಾರಿಸಿದರು. ಅವರು 167 ರನ್‌ಗಳನ್ನು ಕಲೆ ಹಾಕಿದರು. ಎರಡನೇ ದಿನದಾಟದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಪಡಿಕ್ಕಲ್, ತಮ್ಮ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಹಿಂದಿನ ತಯಾರಿ ಹೇಗಿತ್ತೆಂದು ಬಹಿರಂಗಪಡಿಸಿದ್ದಾರೆ.
ತಮ್ಮ ಚೊಚ್ಚಲ ಶತಕದ ಬಗ್ಗೆ ಪ್ರತಿಕ್ರಿಯಿಸಿದ ದೇವದತ್ ಪಡಿಕ್ಕಲ್. -
ಗಾಲೆ: ಶ್ರೀಲಂಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ (IND vs SL) ತಮ್ಮ ದೀರ್ಘಾವಧಿ ವೃತ್ತಿ ಜೀವನದ ಚೊಚ್ಚಲ ಶತಕ ಸಿಡಿಸಿದ ಬಗ್ಗೆ ಭಾರತ ತಂಡದ ಯುವ ಬ್ಯಾಟ್ಸ್‌ಮನ್ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ (Devdutt padikkal) ಸಂತಸ ವ್ಯಕ್ತಪಡಿಸಿದರು. ಭಾರತ ಟೆಸ್ಟ್ ತಂಡದ ಪರ ಕಮ್‌ಬ್ಯಾಕ್ ಪಂದ್ಯದಲ್ಲಿಯೇ ಚೊಚ್ಚಲ ಶತಕ ಸಿಡಿಸಿದ ಪಡಿಕ್ಕಲ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಮಾಧ್ಯಮಗಳ ಜೊತೆ ಮಾತನಾಡಿದ ಆರ್‌ಸಿಬಿ ಬ್ಯಾಟ್ಸ್‌ಮನ್, ತಮ್ಮ ಟೆಸ್ಟ್ ವೃತ್ತಿ ಜೀವನದ ಚೊಚ್ಚಲ ಶತಕ ಸಿಡಿಸಿದ ಹಿಂದಿನ ಪರಿಶ್ರಮ ಹಾಗೂ ತಯಾರಿ ಬಗ್ಗೆ ಬಹಿರಂಗಪಡಿಸಿದ್ದಾರೆ.
ಮಳೆಯ ಕಾಟದ ಹೊರತಾಗಿಯೂ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ಪರ ಮೂರನೇ ಕ್ರಮಾಂಕದಲ್ಲಿ ಅದ್ಭುತ ಬ್ಯಾಟ್ ಮಾಡಿದ ದೇವದತ್ ಪಡಿಕ್ಕಲ್, ಶ್ರೀಲಂಕಾ ಬೌಲರ್‌ಗಳನ್ನು ದೀರ್ಘಾವಧಿ ಕಾಡಿದರು. ಅವರ ಆಡಿದ 167 ರನ್‌ಗಳ ಅತ್ಯದ್ಭುತ ಇನಿಂಗ್ಸ್ ಆಡಿ ತಂಡದ ಬೃಹತ್ ಮೊತ್ತಕ್ಕೆ ನೆರವು ನೀಡಿದರು. ಈ ಮೂಲಕ ಟೆಸ್ಟ್ ಕ್ರಕೆಟ್‌ನಲ್ಲಿ ಭಾರತದ ಪರ ಮೂರನೇ ಕ್ರಮಾಂಕದಲ್ಲಿ ಶತಕ ಗಳಿಸಿದ ಭಾರತದ ಎರಡನೇ ಎಡಗೈ ಬ್ಯಾಟರ್ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.
IND vs SL: ಮೂರನೇ ದಿನ ಟೇಲ್‌ಎಂಡರ್ಸ್ ಆಡಿದ್ದೇಕೆ? ಗಭೀರ್, ಗಿಲ್ ವಿರುದ್ಧ ದೊಡ್ಡ ಗಣೇಶ್ ಕಿಡಿ!
ಎರಡನೇ ದಿನದಾಟದ ಬಳಿಕ ಮಾತನಾಡಿದ ದೇವದತ್ ಪಡಿಕ್ಕಲ್, "ಕಳೆದ ಎರಡು ವರ್ಷಗಳಿಂದ ಟೆಸ್ಟ್ ಕ್ರಕೆಟ್‌ಗೆ ಮರಳಲು ನಾನು ಸತತ ಕಠಿಣ ಪರಿಶ್ರಮ ಪಟ್ಟಿದ್ದೆ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಭಾರತದ ತಂಡಕ್ಕಾಗಿ ನಾನು ಮಾಡಿರುವ ಸಾಧನೆ ನನಗೆ ಅತ್ಯಂತ ತೃಪ್ತಿ ತಂದಿದೆ," ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಎರಡು ವರ್ಷಗಳಿಂದ ಕಠಿಣ ಅಭ್ಯಾಸ
ಭಾರತದ ಟೆಸ್ಟ್ ತಂಡದಲ್ಲಿ ಮರಳಿ ಸ್ಥಾನ ಪಡೆಯಲು ಪಡಿಕ್ಕಲ್ ಅವರಿಗೆ ಬರೋಬ್ಬರಿ ಎರಡು ವರ್ಷಗಳ ಕಾಲ ಕಾಯಬೇಕಾಯಿತು. ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡು ತಮ್ಮ ಕನಸಿನ ಶತಕವನ್ನು ಸಿಡಿಸಿದ ಬಳಿಕ ಮಾತನಾಡಿದ ಅವರು "ಕಳೆದ ಎರಡು ವರ್ಷಗಳಿಂದ ನಾನು ಸತತವಾಗಿ ಕಠಣ ಅಭ್ಯಾಸ ನಡೆಸುತ್ತಿದ್ದೆ. ಮರಳಿ ಅವಕಾಶ ಸಿಕ್ಕಾಗ ತಂಡಕ್ಕಾಗಿ ವಿಶೇಷವಾದ್ದನ್ನು ನೀಡಬೇಕೆಂಬುದು ನನ್ನ ಕನಸಾಗಿತ್ತು. ಅದನ್ನು ಸಾಧಿಸಿದಕ್ಕೆ ನನಗೆ ನಿಜಕ್ಕೂ ಸಂತೋಷವಿದೆ," ಎಂದು ಹೇಳಿದ್ದಾರೆ.
IND vs SL: ಕಮಿಂದು ಮೆಂಡಿಸ್‌ರ ಸ್ಟನಿಂಗ್ ಕ್ಯಾಚ್ ಪಡೆದ ಶುಭಮನ್ ಗಿಲ್! ವಿಡಿಯೊ
ಸಾಮನ್ಯವಾಗಿ ಬ್ಯಾಟರ್‌ಗಳು ಶತಕ ಪೂರೈಸಿದ ತಕ್ಷಣ ನಿರಾಳವಾಗಿ ವಿಕೆಟ್ ಒಪ್ಪಿಸುವ ಸಾಧ್ಯತೆ ಹೆಚ್ಚು. ಆದರೆ ಸೆಂಚುರಿ ಹೊಡೆದ ಮೇಲೆಯೂ ನಿಂತು 67 ರನ್‌ಗಳನ್ನು ಕಲೆಹಾಕಿದ ಪಡಿಕ್ಕಲ್, ತಮ್ಮ ಬ್ಯಾಟಿಂಗ್ ರಣತಂತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಶತಕ ಪೂರೈಸಿದ ನಂತರದ 20 ರಿಂದ 30 ಎಸೆತಗಳು ಅತ್ಯಂತ ನಿರ್ಣಾಯಕವಾಗಿರುತ್ತವೆ. ಆ ಸಮಯದಲ್ಲಿ ಸಂಪೂರ್ಣ ಗಮನಹರಿಸಿ ಕ್ರೀಸ್‌ನಲ್ಲಿ ನಿಲ್ಲುವುದು ಮುಖ್ಯ. ಮೊದಲ 10 ರಿಂದ 15 ಎಸೆತಗಳನ್ನು ಎಚ್ಚರಿಕೆಯಿಂದ ಆಡಿದರೆ, ಮುಂದೆ ಮತ್ತಷ್ಟು ದೊಡ್ಡ ಇನಿಂಗ್ಸ್ ಆಡುವುದು ಸುಲಭ," ಎಂದು ತಿಳಿಸಿದ್ದಾರೆ.
ಭಾರತ ತಂಡಕ್ಕೆ ದೊಡ್ಡ ಮುನ್ನಡೆ
ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 462 ರನ್‌ಗಳಿಗೆ ಆಲ್‌ಔಟ್ ಆದ ಬಳಿಕ ಆತಿಥೇಯ ಶ್ರೀಲಂಕಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ. ಮಾನವ್ ಸುತಾರ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಶ್ರೀಲಂಕಾ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ 284 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಟೀಮ್ ಇಂಡಿಯಾ 178 ರನ್‌ಗಳ ಮುನ್ನಡೆಯನ್ನು ಸಾಧಿಸಿದೆ.