ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs WI: ಮೂರನೇ ಕ್ರಮಾಂಕದಲ್ಲಿ ಆಡಬೇಕೆಂಬ ಆಸೆ ಇದೆ, ಆದರೆ....! ತಿಲಕ್‌ ವರ್ಮಾ ಹೇಳಿದ್ದೇನು?

ಭಾರತ ಟಿ20 ತಂಡದ ಉಪನಾಯಕ ತಿಲಕ್ ವರ್ಮಾ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಹೆಚ್ಚು ಇಷ್ಟಪಡುತ್ತಿದ್ದರೂ ತಂಡದ ಅಗತ್ಯಕ್ಕೆ ಅನುಗುಣವಾಗಿ ಯಾವುದೇ ಕ್ರಮಾಂಕದಲ್ಲಾದರೂ ಆಡಲು ಸಿದ್ಧ ಎಂದು ತಿಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಹೈದರಾಬಾದ್‌ನಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಅವರು ತಮ್ಮ ಮಧ್ಯಮ ಕ್ರಮಾಂಕದ ಪಾತ್ರ ಹಾಗೂ ತಾಜಾ ಪಿಚ್‌ನ ಪರಿಸ್ಥಿತಿಗಳ ಕುರಿತು ಮಾತನಾಡಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಆಡಬೇಕೆಂಬ ಆಸೆ ಇದೆ: ತಿಲಕ್‌ ವರ್ಮಾ!

ಮೂರನೇ ಕ್ರಮಾಂಕದಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ ತಿಲಕ್‌ ವರ್ಮಾ. -

Profile
Ramesh Kote Oct 13, 2026 11:20 PM

ಹೈದರಾಬಾದ್‌: ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಹೆಚ್ಚು ಇಷ್ಟಪಡುತ್ತೇನೆ. ಆದರೆ ತಂಡಕ್ಕೆ ಯಾವ ಸಂದರ್ಭದಲ್ಲಿ ನನ್ನ ಅಗತ್ಯವಿದೆಯೋ, ಆಗ ಆ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧನಿದ್ದೇನೆ ಎಂದು ಭಾರತ ಟಿ20 ತಂಡದ ಉಪನಾಯಕ ತಿಲಕ್ ವರ್ಮಾ (Tilak Verma) ಹೇಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಬುಧವಾರ ಹೈದರಾಬಾದ್‌ನಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯಕ್ಕೂ (IND vs WI) ಮುನ್ನ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

23ರ ವಯಸ್ಸಿನ ಎಡಗೈ ಬ್ಯಾಟರ್ ತಿಲಕ್ ವರ್ಮಾ, ಭಾರತ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಆಡಿದಾಗ ಹಲವು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ. 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20ಐ ಸರಣಿಯಲ್ಲಿ ಇದೇ ಕ್ರಮಾಂಕದಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿ ಗಮನ ಸೆಳೆದಿದ್ದರು. ಹೀಗಾಗಿ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಅವರ ನೆಚ್ಚಿನ ಆಯ್ಕೆಯಾಗಿದೆ.

ಆದರೆ, ಭಾರತ ತಂಡದ ಅಗ್ರ ಕ್ರಮಾಂಕದಲ್ಲಿ ಈಗಾಗಲೇ ಅನುಭವಿ ಹಾಗೂ ಉತ್ತಮ ಫಾರ್ಮ್‌ನಲ್ಲಿರುವ ಆಟಗಾರರಿದ್ದಾರೆ. ಈ ಹಿನ್ನೆಲೆಯಲ್ಲಿ ತಿಲಕ್ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಅವರು, ಮಧ್ಯಮ ಓವರ್‌ಗಳಲ್ಲಿ ತಂಡದ ಇನಿಂಗ್ಸ್‌ಗೆ ಸ್ಥಿರತೆ ಒದಗಿಸುವುದರ ಜೊತೆಗೆ ಕೊನೆಯ ಹಂತದಲ್ಲಿ ರನ್ ವೇಗ ಹೆಚ್ಚಿಸುವ ಗುರಿ ಹೊಂದಿದ್ದಾರೆ.

IND vs WI 4th T20I: ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌, ಮುಖಾಮುಖಿ ದಾಖಲೆ ವಿವರ!

ಭಾರತ ತಂಡದ ಉಪನಾಯಕನ ಜವಾಬ್ದಾರಿ ತಿಲಕ್ ಅವರ ಪಾತ್ರಕ್ಕೆ ಮತ್ತೊಂದು ಆಯಾಮವನ್ನು ನೀಡಿದೆ. ವೈಯಕ್ತಿಕವಾಗಿ ನೆಚ್ಚಿನ ಕ್ರಮಾಂಕದಲ್ಲಿ ಆಡುವುದಕ್ಕಿಂತ ತಂಡದ ಅಗತ್ಯಕ್ಕೆ ಆದ್ಯತೆ ನೀಡುವುದು ಮುಖ್ಯ ಎಂಬ ಮನೋಭಾವವನ್ನು ಅವರು ಹೊಂದಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಉತ್ತಮವಾಗಿ ಆಡುತ್ತಿರುವುದರಿಂದ ಕೆಲ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದ ಆಟಗಾರರಿಗೆ ಹೆಚ್ಚು ಸಮಯ ಬ್ಯಾಟಿಂಗ್ ಮಾಡುವ ಅವಕಾಶ ಸಿಗದಿದ್ದರೂ, ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ತಿಲಕ್ ಸಿದ್ಧರಾಗಿದ್ದಾರೆ.

ಒತ್ತಡದ ಸಂದರ್ಭಗಳಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧ

ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಿಲಕ್ ವರ್ಮಾ, “ನನಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವುದು ತುಂಬಾ ಇಷ್ಟ. ಈ ವಿಚಾರವನ್ನು ನಾನು ಹಲವು ಬಾರಿ ಹೇಳಿದ್ದೇನೆ. ಆದರೆ ತಂಡಕ್ಕೆ ನನ್ನ ಅಗತ್ಯವಿರುವಾಗ ಒತ್ತಡವನ್ನು ಎದುರಿಸಲು ನಾನು ಯಾವಾಗಲೂ ಬಯಸುತ್ತೇನೆ. ಮುಂದೆ ಬಂದು ಆ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಇಷ್ಟಪಡುತ್ತೇನೆ,” ಎಂದು ತಿಳಿಸಿದ್ದಾರೆ.

ತಮ್ಮ ಬ್ಯಾಟಿಂಗ್ ಪಾತ್ರದ ಕುರಿತು ವಿವರಿಸಿದ ತಿಲಕ್ ವರ್ಮಾ, ಕೇವಲ ಕ್ರೀಸ್‌ಗೆ ಬಂದು ವೇಗವಾಗಿ ರನ್ ಗಳಿಸುವುದಷ್ಟೇ ತಮ್ಮ ಕೆಲಸವಲ್ಲ. ಪಂದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಬ್ಯಾಟಿಂಗ್ ತಂತ್ರವನ್ನು ಬದಲಿಸಿಕೊಳ್ಳುವುದು ಮುಖ್ಯ ಎಂದು ಹೇಳಿದ್ದಾರೆ.

4ನೇ ಟಿ20; ಸಂಜು ಅಥವಾ ಸೂರ್ಯವಂಶಿ? ಯಾರಿಗೆ ಚಾನ್ಸ್‌? ಹೀಗಿರಬಹುದು ಭಾರತದ ಸಂಭಾವ್ಯ XI

“ನಾವು ಆರಂಭದಲ್ಲೇ ವೇಗವಾಗಿ ವಿಕೆಟ್‌ಗಳನ್ನು ಕಳೆದುಕೊಂಡರೆ, ನಾನು ಸ್ವಲ್ಪ ಸಮಯ ತೆಗೆದುಕೊಂಡು ಇನಿಂಗ್ಸ್ ಕಟ್ಟಬಹುದು. ಕೊನೆಯವರೆಗೂ ಕ್ರೀಸ್‌ನಲ್ಲಿದ್ದು ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುವ ಜವಾಬ್ದಾರಿಯನ್ನೂ ನಿಭಾಯಿಸಬಲ್ಲೆ,” ಎಂದು ತಿಲಕ್ ತಿಳಿಸಿದ್ದಾರೆ.

“ಆದರೆ ಆರಂಭಿಕರು ಅಥವಾ ಅಗ್ರ ಕ್ರಮಾಂಕದ ಬ್ಯಾಟರ್‌ಗಳು 14ನೇ ಅಥವಾ 15ನೇ ಓವರ್‌ವರೆಗೂ ಬ್ಯಾಟಿಂಗ್ ನಡೆಸಿದರೆ, ಮೊದಲ ಎಸೆತದಿಂದಲೇ ವೇಗವಾಗಿ ರನ್ ಗಳಿಸುವ ರೀತಿಯಲ್ಲಿ ನನ್ನ ಆಟವನ್ನು ಬದಲಿಸಿಕೊಳ್ಳಲು ನನಗೆ ಗೊತ್ತಿದೆ. ಇದಕ್ಕಾಗಿ ವಿಶೇಷವಾಗಿ ನನ್ನ ಮನಸ್ಥಿತಿಯನ್ನು ಸಿದ್ಧಪಡಿಸಿಕೊಳ್ಳುತ್ತಾ ಅಭ್ಯಾಸ ಮಾಡುತ್ತಿದ್ದೇನೆ,” ಎಂದು ಅವರು ಹೇಳಿದ್ದಾರೆ.