ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದರೂ 2028ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತ ವನಿತೆಯರು!
ಪ್ರಸ್ತುತ ನಡೆಯುತ್ತಿರುವ 2026ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದರೂ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ, 2028ರ ಒಲಿಂಪಿಕ್ಸ್ ಕ್ರೀಡಾಕೂಡಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಆಸ್ಟ್ರೇಲಿಯಾ ಎದುರು ಕೊನೆಯ ಲೀಗ್ ಪಂದ್ಯದ ಸೋಲಿನ ನಂತರ ಭಾರತದ ಟಿ20 ವಿಶ್ವಕಪ್ ಗೆಲ್ಲುವ ಕನಸು ಭಗ್ನವಾಯಿತು.
ಭಾರತ ಮಹಿಳಾ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದೆ. -
ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ (Women's T20 World Cup 2026) ಕ್ರಿಕೆಟ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದರೂ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡಕ್ಕೆ (Indian women team) ಸಂತಸದ ಸುದ್ದಿ ಸಿಕ್ಕಿದೆ. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಆರು ವಿಕೆಟ್‌ಗಳ ಸೋಲಿನಿಂದಾಗಿ ಸೆಮಿಫೈನಲ್ ಟಿಕೆಟ್ ಕೈ ತಪ್ಪಿದರೂ ಐಸಿಸಿ ಪ್ರಕಟಿಸಿದ ಹೊಸ ಅರ್ಹತಾ ನಿಯಮಾವಳಿಯ ಮೂಲಕ ಭಾರತ ಮಹಿಳಾ ತಂಡ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಅರ್ಹತೆ ಪಡೆದುಕೊಂಡಿದೆ.
128 ವರ್ಷಗಳ ಬಳಿಕ ಕ್ರಿಕೆಟ್ ಒಲಿಂಪಿಕ್ಸ್‌ಗೆ ಮರಳಲಿದ್ದು, 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಪುರುಷರ ಹಾಗೂ ಮಹಿಳೆಯರ ಟಿ20 ಸ್ಪರ್ಧೆಗಳಲ್ಲಿ ತಲಾ ಆರು ತಂಡಗಳು ಭಾಗವಹಿಸಲಿವೆ. ಈ ಹಿನ್ನೆಲೆಯಲ್ಲಿ ಸೋಮವಾರ ಐಸಿಸಿ ಅರ್ಹತಾ ಮಾನದಂಡಗಳನ್ನು ಅಧಿಕೃತವಾಗಿ ಪ್ರಕಟಿಸಿದೆ.
ಸದ್ಯ ಸಾಗುತ್ತಿರುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಏಷ್ಯಾದ ಅಗ್ರ ಸ್ಥಾನ ಪಡೆದ ಅರ್ಹ ತಂಡವಾಗಿ ಭಾರತ ಒಲಿಂಪಿಕ್ಸ್ ಪ್ರವೇಶ ಖಚಿತಪಡಿಸಿಕೊಂಡಿದೆ. ಸೆಮಿಫೈನಲ್‌ಗೆ ತಲುಪಲು ವಿಫಲವಾದರೂ, ಇತರ ಏಷ್ಯಾದ ತಂಡಗಳಿಗಿಂತ ಉತ್ತಮ ಸ್ಥಾನದಲ್ಲಿದ್ದ ಕಾರಣ ಭಾರತಕ್ಕೆ ಏಷ್ಯಾದ ಏಕೈಕ ನೇರ ಒಲಿಂಪಿಕ್ ಸ್ಥಾನ ಲಭಿಸಿದೆ.
ಟಿ20 ವಿಶ್ವಕಪ್ ನಿರ್ಗಮನ; ಹರ್ಮನ್‌ಪ್ರೀತ್ ನಾಯಕತ್ವ ಭವಿಷ್ಯದ ಬಗ್ಗೆ ಕೋಚ್ ಮಹತ್ವದ ಹೇಳಿಕೆ
ಭಾರತ ಸೇರಿದಂತೆ ನಾಲ್ಕು ತಂಡಗಳು ಹೇಗೆ ಅರ್ಹತೆ ಪಡೆದವು?
ಐಸಿಸಿ ನೂತನ ನಿಯಮದ ಪ್ರಕಾರ, ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಫ್ರಿಕಾ, ಏಷ್ಯಾ, ಯುರೋಪ್ ಮತ್ತು ಓಶಿಯಾನಿಯಾ ಖಂಡಗಳಿಂದ ಅಗ್ರ ಸ್ಥಾನ ಪಡೆದ ತಲಾ ಒಂದು ತಂಡಕ್ಕೆ ನೇರ ಪ್ರವೇಶ ನೀಡಲಾಗಿದೆ. ಪ್ರತಿ ಖಂಡದಿಂದ ಕೇವಲ ಒಂದು ತಂಡಕ್ಕೆ ಮಾತ್ರ ಅವಕಾಶ ಇರುತ್ತದೆ.
ಆಸ್ಟ್ರೇಲಿಯಾ ತಂಡ ಓಶಿಯಾನಿಯಾದ ಪ್ರತಿನಿಧಿಯಾಗಿ ಅರ್ಹತೆ ಪಡೆದುಕೊಂಡಿದೆ. ದಕ್ಷಿಣ ಆಫ್ರಿಕಾ ತಂಡ ನಾಕೌಟ್ ಹಂತ ತಲುಪುವ ಮೂಲಕ ಆಫ್ರಿಕಾದ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಐಸಿಸಿ ಟೂರ್ನಿಗಳಲ್ಲಿ ಇಂಗ್ಲೆಂಡ್ ಪ್ರತಿನಿಧಿಸುವ ಗ್ರೇಟ್ ಬ್ರಿಟನ್ ಯುರೋಪಿನಿಂದ ಸ್ಥಾನ ಪಡೆದಿದೆ. ಭಾರತ ಏಷ್ಯಾದ ಅಗ್ರ ತಂಡವಾಗಿ ಒಲಿಂಪಿಕ್ಸ್ ಟಿಕೆಟ್ ಪಡೆದುಕೊಂಡಿದೆ. ಆ ಮೂಲಕ ಆಸ್ಟ್ರೇಲಿಯಾ, ಗ್ರೇಟ್ ಬ್ರಿಟನ್ (ಇಂಗ್ಲೆಂಡ್), ಭಾರತ ಮತ್ತು ದಕ್ಷಿಣ ಆಫ್ರಿಕಾ ಲಾಸ್ ಏಂಜಲೀಸ್ 2028ರ ಮಹಿಳಾ ಕ್ರಿಕೆಟ್ ಸ್ಪರ್ಧೆಗೆ ಅರ್ಹತೆ ಪಡೆದ ಮೊದಲ ನಾಲ್ಕು ತಂಡಗಳಾಗಿವೆ.
ಆಸ್ಟ್ರೇಲಿಯಾ ವಿರುದ್ಧ ಸೋತು ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಭಾರತ
ಉಳಿದ ಎರಡು ಸ್ಥಾನಗಳ ನಿರ್ಧಾರ ಹೇಗೆ?
ಐದನೇ ಸ್ಥಾನ ಆತಿಥೇಯ ಅಮೆರಿಕಕ್ಕೆ ಸಿಗುವ ಸಾಧ್ಯತೆಯಿದೆ. ಆದರೆ ಅದಕ್ಕಾಗಿ 2026ರ ಜೂನ್ 30ರಿಂದ ಡಿಸೆಂಬರ್ 31ರೊಳಗೆ ಐಸಿಸಿ ಮಹಿಳಾ ಟಿ20ಐ ರ‍್ಯಾಂಕಿಂಗ್‌ನಲ್ಲಿ ಅಗ್ರ 15ರೊಳಗೆ ಸ್ಥಾನ ಪಡೆಯಬೇಕು. ಅದು ಸಾಧ್ಯವಾಗದಿದ್ದರೆ, 2027ರ ಮಾರ್ಚ್ 1ರ ರ‍್ಯಾಂಕಿಂಗ್ ಆಧಾರದ ಮೇಲೆ ಈಗಾಗಲೇ ಅರ್ಹತೆ ಪಡೆಯದ ಅಗ್ರ ತಂಡಕ್ಕೆ ಆ ಸ್ಥಾನ ನೀಡಲಾಗುತ್ತದೆ.
ಆರನೇ ಹಾಗೂ ಅಂತಿಮ ಸ್ಥಾನವನ್ನು 2027ರಲ್ಲಿ ನಡೆಯಲಿರುವ ಮೊದಲ ಐಸಿಸಿ ಒಲಿಂಪಿಕ್ಸ್ ಕ್ವಾಲಿಫೈಯರ್ ಟೂರ್ನಿಯ ಮೂಲಕ ನಿರ್ಧರಿಸಲಾಗುತ್ತದೆ. ಈ ಎಂಟು ತಂಡಗಳ ಟೂರ್ನಿಯಲ್ಲಿ ಈಗಾಗಲೇ ಅರ್ಹತೆ ಪಡೆಯದ ಅಗ್ರ ಶ್ರೇಯಾಂಕದ ರಾಷ್ಟ್ರಗಳು ಭಾಗವಹಿಸಲಿವೆ.