IPL 2025: ಮೊಹಮ್ಮದ್ ಸಿರಾಜ್‌ರನ್ನು ಕೈ ಬಿಟ್ಟು ಆರ್‌ಸಿಬಿ ತಪ್ಪು ಮಾಡಿದೆ ಎಂದ ವೀರೇಂದ್ರ ಸೆಹ್ವಾಗ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ 3 ವಿಕೆಟ್‌ಗಳನ್ನು ಪಡೆದರು ಹಾಗೂ ಅತ್ಯುತ್ತಮ ಎಕಾನಮಿ ರೇಟ್‌ನಲ್ಲಿ ಬೌಲ್ ಮಾಡಿದ್ದಾರೆ.ಈ ಹಿನ್ನೆಲೆಯಲ್ಲಿ ಗುಜರಾತ್ ಜಯಂಟ್ಸ್ ತಂಡದ ವೇಗಿಯನ್ನು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ಸಿರಾಜ್ ಅವರನ್ನು ಆರ್‌ಸಿಬಿ ಬಿಡುಗಡೆ ಮಾಡಬಾರದಿತ್ತು ಎಂದು ಹೇಳಿದ್ದಾರೆ.

ಮೊಹಮ್ಮದ್ ಸಿರಾಜ್ ಬಗ್ಗೆ ವೀರೇಂದ್ರ ಸೆಹ್ವಾಗ್ ಮೆಚ್ಚುಗೆ.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದ ಗುಜರಾತ್ ಟೈಟನ್ಸ್ ತಂಡದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ (Virender sehwag) ಶ್ಲಾಘಿಸಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದ ಹೊರಗುಳಿದಿದ್ದ ಬೇಸರ ಆರ್‌ಸಿಬಿ ಪಂದ್ಯದಲ್ಲಿ ಸಿರಾಜ್ ಮುಖದಲ್ಲಿ ಕಾಣುತ್ತಿದ್ದು ಎಂದ ಸೆಹ್ವಾಗ್, ಹಿರಿಯ ವೇಗಿಯನ್ನು ಬೆಂಗಳೂರು ಫ್ರಾಂಚೈಸಿ ಬಿಡುಗಡೆ ಮಾಡಬಾರದಿತ್ತು ಎಂದು ಹೇಳಿದ್ದಾರೆ.
ಬುಧವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವೇಗಿ ಸಿರಾಜ್ ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದರು. ಈ ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ್ದ ಅವರು 19 ರನ್ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದ್ದು ಮಾತ್ರವಲ್ಲದೆ ಅತ್ಯುತ್ತಮ ಎಕಾನಮಿಯಲ್ಲಿ ಬೌಲ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಸಿರಾಜ್ ಅವರನ್ನು ಕೈ ಬಿಟ್ಟ ಬೆಂಗಳೂರು ಫ್ರಾಂಚೈಸಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
IPL 2025: ವಿರಾಟ್ ಕೊಹ್ಲಿಯ ಬೆರಳಿನ ಗಾಯದ ಬಗ್ಗೆ ಅಪ್‌ಡೇಟ್ ನೀಡಿದ ಆರ್‌ಸಿಬಿ ಕೋಚ್ ಆಂಡಿ ಫ್ಲವರ್!
ಮೊಹಮ್ಮದ್ ಸಿರಾಜ್ ಮುಖದಲ್ಲಿ ಬೇಸರವಿದೆ
ಕ್ರಿಕ್‌ಬಝ್ ಜೊತೆ ಮಾತನಾಡಿದ ವೀರೇಂದ್ರ ಸೆಹ್ವಾಗ್, "ಎಲ್ಲೋ ಒಂದು ಕಡೆ ಚಾಂಪಿಯನ್ಸ್ ಟ್ರೋಫಿ ತಂಡದ ಭಾಗವಾಗದಿರುವುದಕ್ಕೆ ಸಿರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಮೊಹಮ್ಮದ್ ಸಿರಾಜ್ ಒಳಗೆ ಬೆಂಕಿ ಇದೆ ಮತ್ತು ನಾನು ಅವರಲ್ಲಿ ಆ ಬೆಂಕಿಯನ್ನು ನೋಡಿದ್ದೇನೆ. ಯುವ ವೇಗಿಯಿಂದ ನಾವು ನಿರೀಕ್ಷೆ ಮಾಡುವುದು ಕೂಡ ಇದನ್ನೇ. ಅವರು ಹೌದು, ನೀವು ನನ್ನನ್ನು ಆಯ್ಕೆ ಮಾಡಲಿಲ್ಲ ಎಂದು ಹೇಳಲು ಪ್ರಯತ್ನಿಸುತ್ತಿದ್ದಾರೆ? ಈಗ ನಾನು ನಿಮಗೆ ತೋರಿಸುತ್ತೇನೆ. ಅವರು ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸುತ್ತಾರೆ ಮತ್ತು ಶೀಘ್ರದಲ್ಲೇ ಭಾರತ ತಂಡಕ್ಕೆ ಮರಳುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಭವಿಷ್ಯ ನುಡಿದಿದ್ದಾರೆ.
ಮೊಹಮ್ಮದ್ ಸಿರಾಜ್ ಅವರನ್ನು ಕೈ ಬಿಡುವ ಮೂಲಕ ಆರ್‌ಸಿಬಿ ದೊಡ್ಡ ತಪ್ಪು ಮಾಡಿದೆ. ಅವರ ಪವರ್‌ಪ್ಲೇ ಅಂಕಿಅಂಶಗಳು ಅದ್ಭುತವಾಗಿವೆ, ಅವರು ಡೆತ್ ಓವರ್‌ಗಳಲ್ಲಿ ಕಷ್ಟವನ್ನು ಎದುರಿಸುತ್ತಿದ್ದರು. ಧೋನಿಯ ಉದಾಹರಣೆಯನ್ನೇ ತೆಗೆದುಕೊಂಡರೆ, ಅವರು ದೀಪಕ್ ಚಹರ್‌ರನ್ನು ಹಲವು ವರ್ಷಗಳ ಕಾಲ ಸರಿಯಾದ ರೀತಿಯಲ್ಲಿ ಬಳಸಿಕೊಂಡರು. ಅವರು ಪವರ್‌ಪ್ಲೇನಲ್ಲಿ ಸಂಪೂರ್ಣ ಕೋಟಾವನ್ನು ಪಡೆಯುತ್ತಿದ್ದರು ಮತ್ತು ನಂತರದ ಓವರ್‌ಗಳಿಂದ ಅವರನ್ನು ದೂರವಿಡಲಾಗುತ್ತಿತ್ತು. ರಾಜಸ್ಥಾನ್ ರಾಯಲ್ಸ್ ಕೂಡ ಟ್ರೆಂಟ್ ಬೌಲ್ಟ್ ಅವರನ್ನು ಕೂಡ ಅದೇ ರೀತಿ ಬಳಿಸಿಕೊಂಡಿದೆ. ಆದರೆ ಆರ್‌ಸಿಬಿ ತಂಡದ ನಾಯಕರು ಸಿರಾಜ್ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಇದರಿಂದಾಗಿ ಅವರ ಸಾಮರ್ಥ್ಯದ ಲಾಭ ಪಡೆಯಲು ಆರ್‌ಸಿಬಿಗೆ ಸಾಧ್ಯವಾಗಲಿಲ್ಲ.
RCB vs GT: ತವರಿನಲ್ಲಿ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣಗಳಿವು!
"ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರು (ಮೊಹಮ್ಮದ್ ಸಿರಾಜ್) ಹೊಸ ಚೆಂಡಿನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಅವರು ಆರಂಭಿಕ ಮೂರು ಓವರ್‌ಗಳಲ್ಲಿ 12 ಅಥವಾ 13 ರನ್‌ಗಳನ್ನು ನೀಡುತ್ತಿದ್ದರು. ಬಹುಶಃ ಅವರು ತಮ್ಮ ನಾಲ್ಕನೇ ಓವರ್ ಅನ್ನು ಕೂಡ ಇದೇ ಬೌಲ್ ಮಾಡುತ್ತಿದ್ದರು ಹಾಗೂ ಮತ್ತೊಂದು ವಿಕೆಟ್ ಅನ್ನು ಪಡೆಯುತ್ತಿದ್ದರು. ಅವರು ಚೆಂಡನ್ನು ಸ್ವಿಂಗ್ ಮಾಡುತ್ತಾರೆ. ಬುಧವಾರವೂ ಅವರು ಪಿಚ್‌ನ ಲಾಭವನ್ನು ಪಡೆದಿದ್ದಾರೆ,"ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.
ಆರ್‌ಸಿಬಿ ಬಗ್ಗೆ ಸಿರಾಜ್ ಹೇಳಿದ್ದೇನು?
"ಇದು ತುಂಬಾ ಭಾವನಾತ್ಮಕವಾಗಿತ್ತು, ಏಕೆಂದರೆ ನಾನು 7 ವರ್ಷಗಳ ಕಾಲ ಆರ್‌ಸಿಬಿ ತಂಡದಲ್ಲಿ ಆಡಿದ್ದೇನೆ. ಸ್ವಲ್ಪ ಆತಂಕ ಮತ್ತು ಕೆಲ ಭಾವನೆಗಳು ನನ್ನಲ್ಲಿ ಇದ್ದವು. ಆದರೆ ಚೆಂಡು ನನ್ನ ಕೈಗೆ ಬಂದ ತಕ್ಷಣ ಸಂಗತಿಗಳು ಸಾಮಾನ್ಯವಾಯಿತು,"ಎಂದು ಪಂದ್ಯದ ಬಳಿಕ ಮೊಹಮ್ಮದ್ ಸಿರಾಜ್ ತಿಳಿಸಿದ್ದಾರೆ.