RCB vs GT: ತವರಿನಲ್ಲಿ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣಗಳಿವು!
ಈ ಪಂದ್ಯದಲ್ಲಿ ಟಾಸ್ ಕೂಡ ನಿರ್ಣಾಯಕವಾಗಿತ್ತು. ಆರ್‌ಸಿಬಿ ಟಾಸ್ ಗೆಲ್ಲುವಲ್ಲಿ ವಿಫಲವಾದದ್ದೂ ಸೋಲಿಗೆ ಒಂದು ಕಾರಣ. ಈ ಪಿಚ್ ಹಾಗೂ ಕ್ರೀಡಾಂಗಣದಲ್ಲಿ ಚೇಸಿಂಗ್ ಕೊಂಚ ಸುಲಭ. ಹೀಗಾಗಿ ಟಾಸ್ ಸೋಲು ತಂಡದ ಅರ್ಧ ಗೆಲುವನ್ನೇ ಕಸಿದುಕೊಂಡಿತ್ತು.


ಬೆಂಗಳೂರು: ಕನ್ನಡಿಗರ ನೆಚ್ಚಿನ ತಂಡದವಾದ ಆರ್‌ಸಿಬಿ(RCB vs GT) ಹಾಲಿ ಆವೃತ್ತಿಯ ಐಪಿಎಲ್(IPL 2025)ನಲ್ಲಿ ಈಡನ್ ಗಾರ್ಡನ್ಸ್ ಮತ್ತು ಚೆಪಾಕ್ನಲ್ಲಿ ಆಡಿದ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಮತ್ತು 5 ಬಾರಿಯ ಚಾಂಪಿಯನ್ ಸಿಎಸ್ಕೆ ತಂಡಗಳಿಗೆ ಸೋಲುಣಿಸಿ ಮೆರೆದಾಡಿತ್ತು. ಆದರೆ ತಾನಾಡಿದ ಮೊದಲ ತವರಿನ ಪಂದ್ಯದಲ್ಲಿ ಸೋಲು ಕಂಡಿದೆ. ಬುಧವಾರ ನಡೆದ ಗುಜರಾತ್ ಟೈಟಾನ್ಸ್(RCB vs GT) ವಿರುದ್ಧದ ಪಂದ್ಯದಲ್ಲಿ 8 ವಿಕೆಟ್ ಸೋಲಿಗೆ ತುತ್ತಾಯಿತು ಈ ಸೋಲಿಗೆ ಪ್ರಮುಖ ಕಾರಣ ಏನೆಂಬ ವರದಿ ಇಲ್ಲಿದೆ.
ಆರ್‌ಸಿಬಿ ತಂಡ ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಹೆಚ್ಚಿನ ಬಾರಿ ಗೆದ್ದು ಶುಭಾರಂಭ ಕಂಡ ದಾಖಲೆ ಹೊಂದಿದೆ. ಒಟ್ಟಾರೆ 9 ಆವೃತ್ತಿಗಳಲ್ಲಿ ತವರಿನ ಮೊದಲ ಪಂದ್ಯದಲ್ಲಿ ಗೆದ್ದ ದಾಖಲೆ ಹೊಂದಿದೆ. ಆದರೆ ಈ ಬಾರಿ ಸೋಲು ಕಂಡಿದೆ. ಇದಕ್ಕೂ ಮುನ್ನ 2008, 2011, 2015, 2019ರಲ್ಲಷ್ಟೇ ಆರ್‌ಸಿಬಿ ತವರಿನ ಮೊದಲ ಪಂದ್ಯದಲ್ಲಿ ಸೋತಿತ್ತು.
ಬ್ಯಾಟಿಂಗ್ ವೈಫಲ್ಯ
ಚಿನ್ನಸ್ವಾಮಿ ಸ್ಟೇಡಿಯಂ ಎಂದಿನಂತೆ ಈ ಸಲವೂ ಬ್ಯಾಟಿಂಗ್ ಸ್ನೇಹಿ ಆಗಿತ್ತು. ಗುಜರಾತ್ ತಂಡಕ್ಕೆ ಹೋಲಿಸಿದರೆ ಆರ್‌ಸಿಬಿ ಪರ 8ನೇ ಕ್ರಮಾಂಕದವರೆಗೂ ಉತ್ತಮ ಬ್ಯಾಟಿಂಗ್ ಲೈನ್ ಕೂಡ ಇತ್ತು. ಆದರೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ಸತತ ವಿಕೆಟ್ ಕಳೆದುಕೊಂಡರು. ಪವರ್ ಪ್ಲೇ ಮುಕ್ತಾಯಕ್ಕೂ ಮುನ್ನವೇ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಹೀಗಾಗಿ ಬಳಿಕ ಬಂದ ಬ್ಯಾಟರ್‌ಗಳು ಒತ್ತಡ ನಿಭಾಯಿಸುವಲ್ಲಿ ವಿಫಲರಾದರು.
ಇದನ್ನೂ ಓದಿ IPL 2025 Points Table: ಅಗ್ರಸ್ಥಾನ ಕಳೆದುಕೊಂಡ ಆರ್‌ಸಿಬಿ
ಟಾಸ್ ಸೋತದ್ದು
ಈ ಪಂದ್ಯದಲ್ಲಿ ಟಾಸ್ ಕೂಡ ನಿರ್ಣಾಯಕವಾಗಿತ್ತು. ಆರ್‌ಸಿಬಿ ಟಾಸ್ ಗೆಲ್ಲುವಲ್ಲಿ ವಿಫಲವಾದದ್ದೂ ಸೋಲಿಗೆ ಒಂದು ಕಾರಣ. ಈ ಪಿಚ್ ಹಾಗೂ ಕ್ರೀಡಾಂಗಣದಲ್ಲಿ ಚೇಸಿಂಗ್ ಕೊಂಚ ಸುಲಭ. ಹೀಗಾಗಿ ಟಾಸ್ ಸೋಲು ತಂಡದ ಅರ್ಧ ಗೆಲುವನ್ನೇ ಕಸಿದುಕೊಂಡಿತ್ತು.
Not a great day at the office! 💔
— Royal Challengers Bengaluru (@RCBTweets) April 2, 2025
Early days! Time to regroup and come back stronger. 🤝#PlayBold #ನಮ್ಮRCB #IPL2025 #RCBvGT pic.twitter.com/telsICCuN9
ಸಿರಾಜ್ ಘಾತಕ ದಾಳಿ
ಈ ಹಿಂದೆ ಆರ್‌ಸಿಬಿ ಪರ 7 ವರ್ಷ ಆಡಿದ್ದ ವೇಗಿ ಮೊಹಮ್ಮದ್ ಸಿರಾಜ್‌ಗೆ ಬೆಂಗಳೂರು ಪಿಚ್‌ನಲ್ಲಿ ಆಡಿದ ಅಪಾರ ಅನುಭವವಿತ್ತು. ಹೀಗಾಗಿ ಅವರು ಇದರ ಲಾಭವೆತ್ತಿ ಆರ್‌ಸಿಬಿಗೆ ಕಂಟಕವಾದರು. ಹೋದ ವರ್ಷದ ಟೂರ್ನಿಯಲ್ಲಿ ಇದೇ ಮೈದಾನದಲ್ಲಿ ಗುಜರಾತ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 29ಕ್ಕೆ2 ವಿಕೆಟ್ ಗಳಿಸಿದ್ದ ಸಿರಾಜ್ ಅವರು ಆರ್‌ಸಿಬಿಯ ಗೆಲುವಿನ ರೂವಾರಿಯೂ ಆಗಿದ್ದರು. ಈ ಬಾರಿ ಆರ್‌ಸಿಬಿಗೆ ಸೋಲುಣಿಸಿದರು. ನಾಲ್ಕು ಓವರ್ ಬೌಲಿಂಗ್ ದಾಳಿ ನಡೆಸದ ಅವರು ಕೇವಲ 19 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಿತ್ತು ಕಾಡಿದರು. ಅವರು ಕಳೆದ ಮೆಗಾ ಹರಾಜಿನಲ್ಲಿ ಗುಜರಾತ್ ತಂಡದ ಪಾಲಾಗಿದ್ದರು.
ಜೋಸ್ ಬಟ್ಲರ್ ಬ್ಯಾಟಿಂಗ್ ಲಯ ಕಂಡುಕೊಂಡದ್ದು ಕೂಡ ಆರ್‌ಸಿಬಿ ಸೋಲಿಗೆ ಕಾರಣವಾಯಿತು. ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಬಟ್ಲರ್ 39 ಎಸೆತಗಳಿಂದ ಅಜೇಯ 73 ರನ್ ಬಾರಿಸಿದರು. ಇವರಿಗೆ ಸಾಯಿ ಸುದರ್ಶನ್ ಕೂಡ ಉತ್ತಮ ಸಾಥ್ ನೀಡಿದರು. ಅವರು 49 ರನ್ ಬಾರಿಸಿದರು.