RCB vs CSK: ವಿರಾಟ್ ಕೊಹ್ಲಿ ಜತೆಗಿನ ತರಬೇತಿಯ ಅನುಭವ ತೆರೆದಿಟ್ಟ ಜಾಶ್ ಹೇಝಲ್‌ವುಡ್!
Josh Hazlewood on Virat Kohli's Training: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ ಜತೆಗಿನ ತರಬೇತಿಯ ಅನುಭವನ್ನು ಹಿರಿಯ ವೇಗಿ ಜಾಶ್ ಹೇಝಲ್‌ವುಡ್ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿಯ ಕಠಿಣ ತರಬೇತಿಯನ್ನು ವೀಕ್ಷಿಸಿದಾಗ ಇತರೆ ಆಟಗಾರರಿಗೂ ಅದೇ ರೀತಿಯ ತೀವ್ರ ತರಬೇತಿಯನ್ನು ಪಡೆಯಬೇಕೆನಿಸುತ್ತದೆ ಎಂದು ಅವರು ಹೇಳಿದ್ದಾರೆ.

ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ ಜಾಶ ಹೇಝಲ್‌ವುಡ್.

ಬೆಂಗಳೂರು: ಭಾರತೀಯ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ (Virat Kohli) ಹಾಗೂ ಆಸ್ಟ್ರೇಲಿಯಾ ಹಿರಿಯ ವೇಗದ ಬೌಲರ್ ಜಾಶ್ ಹೇಝಲ್‌ವುಡ್ (Josh Hazlewood) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಬಾರಿ ಮುಖಾಮುಖಿಯಾಗಿದ್ದಾರೆ. ಆದರೆ, ಕಳೆದ ಕೆಲ ಆವೃತ್ತಿಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ( IPL 2025) ಟೂರ್ನಿಯಲ್ಲಿ ಇವರಿಬ್ಬರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. ಜತೆಯಲ್ಲಿಯೇ ಅಭ್ಯಾಸ ನಡೆಸುವ ಇವರು, ಜೊತೆಯಲ್ಲಿಯೇ ಪಂದ್ಯವನ್ನು ಆಡುತ್ತಾರೆ. ಅದರಂತೆ ವಿರಾಟ್ ಕೊಹ್ಲಿ ಜೊತೆಗಿನ ತರಬೇತಿ ಅತ್ಯಂತ ಕಠಿಣವಾಗಿರುತ್ತದೆ ಹಾಗೂ ಅವರು ತಮ್ಮ ಕಠಿಣ ತರಬೇತಿಯ ಮೂಲಕ ಇತರೆ ಆಟಗಾರರಾಗಿ ಸಾಕಷ್ಟು ಪ್ರೇರಣೆ ನೀಡುತ್ತಾರೆ ಎಂದು ಜಾಶ್ ಹೇಝಲ್‌ವುಡ್ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಜೊತೆ ಕ್ರಿಕೆಟ್ ಆಡುವುದು ಯಾವಾಗಲೂ ಲಾಭದಾಯಕವಾಗಲಿದೆ ಹಾಗೂ ಅವರಿಂದ ಸಾಕಷ್ಟು ವಿಷಯಗಳಲ್ಲಿ ಇತರೆ ಆಟಗಾರರು ಕಲಿಯಬಹುದು ಎಂದು ಆರ್‌ಸಿಬಿ ಹಿರಿಯ ವೇಗಿ ಹೇಳಿದ್ದಾರೆ. 36ನೇ ವಯಸ್ಸಿನ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ್ದಾರೆ. ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್ ಟೂರ್ನಿಯಲ್ಲಿ 8000 ರನ್‌ಗಳನ್ನು ಕಲೆ ಹಾಕಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ.
RCB vs CSK: ʻಚೆನ್ನೈನಲ್ಲಿ ಗೆಲ್ಲುವುದು ಸುಲಭವಲ್ಲʼ- ಆರ್‌ಸಿಬಿಗೆ ವಾರ್ನಿಂಗ್ ಕೊಟ್ಟ ಶೇನ್ ವ್ಯಾಟ್ಸನ್!
ಆರ್‌ಸಿಬಿ ಬೋಲ್ಡ್ ಡೈರಿಯಲ್ಲಿ ಮಾತನಾಡಿದ ಜಾಶ್ ಹೇಝಲ್‌ವುಡ್, "ನೀವು ಎಲ್ಲಾ ಸಮಯದಲ್ಲಿ ತರಬೇತಿಯನ್ನು ಪಡೆಯಲು ಸ್ವಲ್ಪ ಹಿಂದೇಟನ್ನು ಹಾಕಬಹುದು. ಆದರೂ ನೀವು ಅನಿವಾರ್ಯತೆಯ ಮನಸಿನಲ್ಲಿ ತರಬೇತಿಯನ್ನು ಪಡೆಯಬಹುದು. ಆದರೆ, ಪಿಚ್‌ಗಿಂತ ಹೊರಗಡೆ ನೀವು ವಿರಾಟ್ ಕೊಹ್ಲಿಯನ್ನು ನೋಡಿದಾಗ, ಅವರು ನಿಮ್ಮನ್ನು ತರಬೇತಿ ಪಡೆಯಬೇಕೆಂಬಂತೆ ಪ್ರೇರಣೆಯನ್ನು ನೀಡುತ್ತಾರೆ. ಅವರೊಂದಿಗೆ ತರಬೇತಿ ಪಡೆಯವಾಗ ಅದು ಒಂದು ರೀತಿಯ ಯುದ್ದದ ರೀತಿ ಕಾಣುತ್ತದೆ. ವಿರಾಟ್ ಕೊಹ್ಲಿ ಅವರಲ್ಲಿ ಪ್ರಭಾವ ಬೀರಬಲ್ಲ ಸಾಮರ್ಥ್ಯವಿದೆ," ಎಂದು ಹೇಳಿದ್ದಾರೆ.
"ಕ್ರಿಕೆಟ್‌ನಲ್ಲಿ ಅವರು ಮಾಡಿರುವ ಸಾಧನೆ ಹಾಗೂ ಈಗಲೂ ಮಾಡುತ್ತಿರುವುದಕ್ಕೆ ನಾನು ಗೌರವಿಸುತ್ತೇನೆ. ನಿಮ್ಮ ಬೌಲಿಂಗ್‌ನಲ್ಲಿ ಅವರದೇ ಆದ ಹೊಡೆತಗಳನ್ನು ಆಡುವ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಅವರು ತಮ್ಮ ಶಾಟ್‌ಗಳನ್ನು ಆಡಿದರೆ, ರನ್‌ಗಳು ಸ್ಕೋರ್‌ಬೋರ್ಡ್‌ನಲ್ಲಿ ಏರುತ್ತಲೇ ಇರುತ್ತವೆ. ಇದು ಯಾವಾಗಲೂ ಒಳ್ಳೆಯ ಸಂಗತಿ," ಎಂದು ಆರ್‌ಸಿಬಿ ವೇಗಿ ತಮ್ಮ ಸಹ ಆಟಗಾರರನ್ನು ಕೊಂಡಾಡಿದ್ದಾರೆ.
ವಿರಾಟ್ ಕೊಹ್ಲಿ ನಮಗೆ ದೊಡ್ಡ ವಿಕೆಟ್
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ದ 2009ರಿಂದ ಆಡುತ್ತಾ ಬಂದಿದ್ದಾರೆ. ಅವರು 103 ಪಂದ್ಯಗಳಿಂದ 48.90ರ ಸರಾಸರಿಯಲ್ಲಿ 17 ಶತಕಗಳೊಂದಿಗೆ 5477 ರನ್‌ಗಳನ್ನು ಕಲೆ ಹಾಕಿದ್ದಾರೆ. ಕಳೆದ ವರ್ಷ ಪರ್ತ್ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಶತಕವನ್ನು ಬಾರಿಸಿದ್ದರು. ಜಾಶ್ ಹೇಝಲ್‌ವುಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯನ್ನು 11 ಬಾರಿ ಔಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಬೌಲರ್‌ಗಳ ಕೌಶಲ ಹಾಗೂ ಸಾಮರ್ಥ್ಯವನ್ನು ಟೆಸ್ಟ್ ಮಾಡುತ್ತಾರೆ ಎಂದು ಹೇಝಲ್‌ವುಡ್ ತಿಳಿಸಿದ್ದಾರೆ.
𝗧𝗵𝗲 𝗺𝗶𝗻𝗱𝘀𝗲𝘁 𝗼𝗳 𝗮 𝗰𝗵𝗮𝗺𝗽𝗶𝗼𝗻 𝗳𝗮𝘀𝘁 𝗯𝗼𝘄𝗹𝗲𝗿 𝗳𝘁. 𝗝𝗼𝘀𝗵 𝗛𝗮𝘇𝗹𝗲𝘄𝗼𝗼𝗱
— Royal Challengers Bengaluru (@RCBTweets) March 27, 2025
Keep it simple - is the mantra that’s worked for Josh! Watch him talk about his bowling, the ones he looked up to growing up, the Aussie bowling attack, playing for RCb,… pic.twitter.com/pk5zVPt2sL
"ಯಾವುದೇ ಸ್ವರೂಪದಲ್ಲಿ ವಿರಾಟ್ ಕೊಹ್ಲಿ ನಮಗೆ ದೊಡ್ಡ ವಿಕೆಟ್. ಎಲ್ಲಾ ಸ್ವರೂಪದಲ್ಲಿ ಅವರು ನಮ್ಮ ವಿರುದ್ದ ಹಲವು ಶತಕಗಳನ್ನು ಬಾರಿಸಿದ್ದಾರೆ. ಹಾಗಾಗಿ ನೆಟ್ಸ್‌ನಲ್ಲಿ ಅವರಿಗೆ ಬೌಲ್ ಮಾಡುವಾಗ ಸಾಕಷ್ಟು ಸವಾಲು ಎದುರಾಗುತ್ತದೆ. ನೀವು ವಿರಾಟ್ ಕೊಹ್ಲಿ ಎದುರು ಉತ್ತಮ ಬೌಲಿಂಗ್ ಪ್ರದರ್ಶನ ತೋರಿದರೆ, ನೀವು ಪಂದ್ಯಕ್ಕೆ ಸಿದ್ದರಾಗಿದ್ದೀರಿ ಎಂದರ್ಥ," ಎಂದು ಜಾಶ್ ಹೇಝಲ್‌ವುಡ್ ಹೇಳಿದ್ದಾರೆ.