ʻಎರಡೂವರೆ ತಿಂಗಳ ಕಾಲ ಏಕೆ ಆಡಿಸಬೇಕು?ʼ: ಐಪಿಎಲ್ ಟೂರ್ನಿಯನ್ನು ಟೀಕಿಸಿದ ವಸೀಮ್ ಅಕ್ರಮ್!
ವಿಶ್ವದ ಟಿ20 ಫ್ರಾಂಚೈಸಿ ಲೀಗ್‌ಗಳ ಅವಧಿಯ ಬಗ್ಗೆ ಮಾತನಾಡಿದ ಪಾಕಿಸ್ತಾನ ಮಾಜಿ ವೇಗದ ಬೌಲರ್ ವಸೀಮ್ ಅಕ್ರಮ್, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಟೀಕಿಸಿದ್ದಾರೆ. ಎರಡರಿಂದ ಎರಡೂವರೆ ತಿಂಗಳ ಕಾಲ ನಡೆಯುವ ಐಪಿಎಲ್ ಟೂರ್ನಿಯ ಅವಧಿಯನ್ನು ಕಡಿಮೆಗೊಳಿಬೇಕೆಂದು ಆಗ್ರಹಿಸಿದ್ದಾರೆ.
ಐಪಿಎಲ್ ಟೂರ್ನಿಯ ಬಗ್ಗೆ ವ್ಯಂಗ್ಯವಾಡಿದ ವಸೀಮ್ ಅಕ್ರಮ್. -
ನವದೆಹಲಿ: ಭಾರತದಲ್ಲಿ ನಡೆಯುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಹಾಗೂ ವಿಶ್ವದಾದ್ಯಂತ ನಡೆಯುವ ಟಿ20 ಫ್ರಾಂಚೈಸಿ ಲೀಗ್‌ಗಳನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ವಸೀಮ್ ಅಕ್ರಮ್ (Wasim Akram) ಟೀಕಿಸಿದ್ದಾರೆ. ಆದರೆ, ತಮ್ಮದೇ ದೇಶದಲ್ಲಿ ನಡೆಯುವ ಪಾಕಿಸ್ತಾನ ಸೂಪರ್ ಲೀಗ್ (PSL 2026) ಅನ್ನು ಅವರು ಶ್ಲಾಘಿಸಿದ್ದಾರೆ. ಪಿಎಸ್‌ಎಲ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಸೀಮ್ ಅಕ್ರಮ್ ಐಪಿಎಲ್‌ನ ವಿಸ್ತೃತ ಅವಧಿಯ ಬಗ್ಗೆ ಹಗುರವಾದ ಹೇಳಿಕೆ ನೀಡಿದ್ದಾರೆ. ಈ ಟೂರ್ನಿಯು ಎಂದಿಗೂ ಕೊನೆಗೊಳ್ಳುವುದಿಲ್ಲ ಎಂದು ಹಾಸ್ಯ ಮಾಡಿದ್ದಾರೆ.
ಭಾರತದಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿರುವಾಗಲೇ ಮಕ್ಕಳು ಬೆಳೆಯುತ್ತಾರೆ ಎಂದು ವ್ಯಂಗ್ಯವಾಡಿದರು. ಐಪಿಎಲ್‌ನ ಎರಡು ತಿಂಗಳಿಗಿಂತ ಹೆಚ್ಚಿನ ವೇಳಾಪಟ್ಟಿಯನ್ನು ಪಿಎಸ್‌ಎಲ್‌ನ ಸಾಂದ್ರೀಕೃತ, ಹೈ-ಟೆಂಪೋ ಸ್ವರೂಪದೊಂದಿಗೆ ಅವರು ಹೋಲಿಸಿದ್ದಾರೆ. ಪಾಕಿಸ್ತಾನ ಪ್ರೀಮಿಯರ್ ಲೀಗ್ ಟೂರ್ನಿಯು ಸಾಮಾನ್ಯವಾಗಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಇರುತ್ತದೆ.
IND vs SA: ತಮಗೆ ಭೀತಿ ಹುಟ್ಟಿಸಿರುವ ಭಾರತೀಯ ಬ್ಯಾಟ್ಸ್‌ಮನ್ ಹೆಸರಿಸಿದ ಏಡೆನ್ ಮಾರ್ಕ್ರಮ್!
ಐಪಿಎಲ್ ಟೂರ್ನಿ ನಡೆಯುತ್ತಿರುವ ವೇಳೆಯೇ ಮಕ್ಕಳು ಬೆಳೆಯುತ್ತಾರೆ
"ಲೀಗ್ ಪಾಲಿಗೆ ಒಂದು ಒಳ್ಳೆಯ ಸಂಗತಿ ಏನೆಂದರೆ, ಇದು 34 ರಿಂದ 35 ದಿನಗಳ ಕಾಲ ನಡೆಯಲಿದೆ ಹಾಗೂ ಬಹುಶಃ ಮುಂದಿನ ಒಂದು ಅವಧಿಯನ್ನು ಹೆಚ್ಚಿಸಬಹುದು. ಬೇರೆ ಲೀಗ್‌ಗಳ ರೀತಿ ಇದು ಮೂರು ತಿಂಗಳ ಕಾಲ ನಡೆಯುವುದಿಲ್ಲ. ಈ ಲೀಗ್ (ಐಪಿಎಲ್) ನಡೆಯುತ್ತಿರುವಾಗಲೇ ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ. ವಿದೇಶಿ ಆಟಗಾರರು ಪಾಕಿಸ್ತಾನಕ್ಕೆ ಯಾವುದೇ ಲೀಗ್ ಆಡಲು ಬರಬೇಕೆಂದರೆ ಅವರಿಗೆ ತಯಾರಿ ನಡೆಸಲು 35 ರಿಂದ 40 ದಿನಗಳು ಸಾಕು. ಆದರೆ, ಎರಡು ಹಾಗೂ ಎರಡೂವರೆ ಮೂರು ತಿಂಗಳ ಅವಧಿ ಎಂದರೆ, ಪ್ರತಿಯೊಬ್ಬರಿಗೂ ಇದು ಸ್ವಲ್ಪ ಜಾಸ್ತಿಯಾಗುತ್ತದೆ. ಈ ಟೂರ್ನಿಯನ್ನು ದೀರ್ಘಾವಧಿ ನೋಡಲು ನನಗೂ ಕೂಡ ಬೇಸರವಾಗುತ್ತದೆ,"ಎಂದು ವಸೀಮ್ ಅಕ್ರಮ್ ದೂರಿದ್ದಾರೆ.
ಬಿಗ್ ಬ್ಯಾಷ್ ಲೀಗ್‌ನ ಅವಧಿಯನ್ನು ಇಳಿಸಲಾಗಿದೆ: ವಸೀಮ್ ಅಕ್ರಮ್
ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್‌ಬ್ಯಾಷ್ ಲೀಗ್ ಅನ್ನು ಆರಂಭದಲ್ಲಿ ಸ್ವಲ್ಪ ದೀರ್ಘಾವಧಿ ಆಡಿಸಲಾಗಿತ್ತು. ಆದರೆ, ಇದಾದ ಬಳಿಕ ಇದರ ಅವಧಿಯನ್ನು ಇಳಿಸಲಾಗಿದೆ ಎಂದು ಇದೇ ವೇಳೆ ಪಾಕ್ ದಿಗ್ಗಜ ಉಲ್ಲೇಖಿಸಿದ್ದಾರೆ. ಅಲ್ಲದೆ ಪ್ರತಿಭೆಗಳ ವಿಷಯದಲ್ಲಿ ಪಿಎಸ್‌ಎಲ್ ಅಗ್ರ ದರ್ಜೆಯ ಟೂರ್ನಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ಇದಕ್ಕೆ ಪ್ರಮುಖ ಉದಾಹರಣೆ ಬಿಬಿಎಲ್. ಅವರು ಎರಡೂವರೆ ತಿಂಗಳುಗಳಿಂದ ಟೂರ್ನಿಯನ್ನು ಪ್ರಾರಂಭಿಸಿದರು. ನಾಲ್ಕು ಅಥವಾ ಐದು ವರ್ಷಗಳ ನಂತರ ಅದು ಕೆಲಸ ಮಾಡುತ್ತಿಲ್ಲ ಎಂದು ಅವರು ಅರಿತುಕೊಂಡರು. ಈಗ ಬಿಗ್‌ಬ್ಯಾಷ್ ಲೀಗ್ ಟೂರ್ನಿಯ ಅವಧಿ ಸುಮಾರು 40 ದಿನಗಳು. ಅಷ್ಟೇ. ಪಿಎಸ್ಎಲ್‌ನ ಸೌಂದರ್ಯ ಅದು. ಖಂಡಿತ, ಪ್ರತಿಭೆ. ವಿದೇಶದಲ್ಲಿರುವ ಪ್ರತಿಯೊಬ್ಬರ ಬಳಿಕ ನಾನು ಮಾತನಾಡಿದ್ದೇನೆ. ಅವರು ಐಪಿಎಲ್ ಮತ್ತು ಇತರ ಲೀಗ್‌ಗಳಲ್ಲಿ ಬೌಲಿಂಗ್ ಬಗ್ಗೆ ಮಾತನಾಡಿದರು. ಪ್ರತಿಭೆಗೆ ಸಂಬಂಧಿಸಿದಂತೆ, ಪಿಎಸ್ಎಲ್ ಖಂಡಿತವಾಗಿಯೂ ಅಗ್ರ ಸ್ಥಾನದಲ್ಲಿದೆ ಎಂದು ಅವರು ಹೇಳುತ್ತಾರೆ ಏಕೆಂದರೆ ನಮ್ಮಲ್ಲಿ ಪ್ರಮಾಣವಲ್ಲ, ಗುಣಮಟ್ಟವಿದೆ," ಎಂದು ವಸೀಮ್ ಅಕ್ರಮ್ ತಿಳಿಸಿದ್ದಾರೆ.