IPL 2026: ಆರ್‌ಸಿಬಿ ಪಂದ್ಯದ ವೇಳೆ ಡಗೌಟ್‌ನಲ್ಲಿ ಫೋನ್ ಬಳಸಿದ ರಾಜಸ್ಥಾನ್ ರಾಯಲ್ಸ್ ಮ್ಯಾನೇಜರ್!
IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ವೇಳೆ ಡಗೌಟ್‌ನಲ್ಲಿ ಫೋನ್ ಬಳಸಿದ ಕಾರಣ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರಿಗೆ ಸಂಕಷ್ಟ ಎದುರಾಗಿದೆ. ಅವರು ಫೋನ್ ಬಳಸಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆರ್‌ಸಿಬಿ ಪಂದ್ಯದ ವೇಳೆ ಮೊಬೈಲ್ ಫೋನ್ ಬಳಸಿದ ಆರ್‌ಆರ್ ಮ್ತಾನೇಜರ್. -
ನವದೆಹಲಿ: ಸತತ ನಾಲ್ಕು ಪಂದ್ಯಗಳನ್ನು ಗೆದ್ದು 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (IPL 2026) ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿರುವ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡಕ್ಕೆ ಇದೀಗ ಸಂಕಷ್ಟ ಎದುರಾಗಿದೆ. ಏಪ್ರಿಲ್ 10 ರಂದು ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ವೇಳೆ ಡಗೌಟ್‌ನಲ್ಲಿ ಆರ್‌ಆರ್ ತಂಡದ ಮ್ಯಾನೇಜರ್ ರೋಮಿ ಭಿಂದರ್ (Romi Bhinder) ಅವರು ಫೋನ್ ಬಳಸಿರುವ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ. ಹಾಗಾಗಿ, ಅವರು ಬಿಸಿಸಿಐನಿಂದ ಅಮಾನತು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ಡಗೌಟ್‌ನಲ್ಲಿ ವೈಭವ್ ಸೂರ್ಯವಂಶಿ ಅವರ ಪಕ್ಕ ಕುಳಿತಿದ್ದ ಆರ್‌ಆರ್ ಮ್ಯಾನೇಜರ್ ಫೋನ್ ಬಳಸುತ್ತಿದ್ದ ವಿಡಿಯೊವನ್ನು ಸೋಶಿಯಲ್ ಮೀಡಿಯಾ ಇನ್‌ಪ್ಲೂಯೆನ್ಸರ್ ಒಬ್ಬರು ಹಂಚಿಕೊಂಡಿದ್ದರು. ಬಿಸಿಸಿಐ ಅಧಿಕಾರಿಯೊಬ್ಬರು ದೃಢಪಡಿಸಿದಂತೆ, ಭಿಂದರ್ ಅವರು ಪ್ಲೇಯರ್ಸ್ ಅಂಡ್ ಮ್ಯಾಚ್ ಆಫಿಷಿಯಲ್ಸ್ ಸ್ಥಳಕ್ಕೆ ಸಂಬಂಧಿಸಿದ (PMOA) ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ನಿಯಮದ ಪ್ರಕಾರ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧಿಸಲಾಗಿದೆ.
IPL 2026: ʻಸ್ಟಾರ್ ಬೌಲರ್‌ಗಳೇ ಇವರಿಗೆ ಟಾರ್ಗೆಟ್ʼ-ವೈಭವ್ ಸೂರ್ಯವಂಶಿ ಬಗ್ಗೆ ಇರ್ಫಾನ್ ಪಠಾಣ್ ಮಹತ್ವದ ಹೇಳಿಕೆ!
“ಹೌದು, ಪಂದ್ಯ ನಡೆಯುವ ವೇಳೆ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧವಾಗಿರುವುದರಿಂದ, ಭಿಂದರ್ ಅವರು ಪ್ಲೇಯರ್ಸ್ ಅಂಡ್ ಮ್ಯಾಚ್ ಆಫಿಷಿಯಲ್ಸ್ ಏರಿಯಾ (PMOA) ನಿಯಮವನ್ನು ಉಲ್ಲಂಘಿಸಿದ್ದಾರೆ,” ಎಂದು ಬಿಸಿಸಿಐ ಮೂಲವು ಪಿಟಿಐಗೆ ತಿಳಿಸಿದೆ.
“ಇದು ಅನೈಚ್ಛಿಕವಾಗಿರಬಹುದು, ಆದರೆ ಇದು ನಿಯಮ ಉಲ್ಲಂಘನೆ ಆಗಿರುವುದರಿಂದ ಕ್ರಮ ಕೈಗೊಳ್ಳಲೇಬೇಕು. ಎಚ್ಚರಿಕೆ ಅಥವಾ ಪಂದ್ಯ ನಿಷೇಧವೇ ಎಂಬುದು ಮ್ಯಾಚ್ ರೆಫರಿ ಮತ್ತು ಎಸಿಯು ವರದಿಯ ಮೇಲೆ ಅವಲಂಬಿತವಾಗಿರುತ್ತದೆ. ಅದನ್ನು ಆಧರಿಸಿ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ತೀರ್ಮಾನ ಕೈಗೊಳ್ಳಲಿದೆ,” ಎಂದು ಮೂಲವು ಹೇಳಿಸಿದೆ.
ಕ್ಯಾಮೆರಾಗಳು ಡಗೌಟ್‌ನಲ್ಲಿ ಭಿಂದರ್ ಅವರು ಮೊಬೈಲ್ ಫೋನ್ ಬಳಸುತ್ತಿರುವುದನ್ನು ಪತ್ತೆಹಚ್ಚಿದಾಗ ವಿವಾದ ಉಂಟಾಯಿತು. ಐಪಿಎಲ್ ನಿಯಮಗಳ ಪ್ರಕಾರ ಇದು ನಿರ್ಬಂಧಿತ ಪ್ರದೇಶವಾಗಿದೆ. ಈ ಘಟನೆ ರಾಜಸ್ಥಾನ್ ರಾಯಲ್ಸ್ ತಂಡದ 202 ರನ್ ಗುರಿಯನ್ನು ಚೇಸ್ ಮಾಡುವ ವೇಳೆ ಸೂರ್ಯವಂಶಿ ಔಟಾದ ಬಳಿಕ ನಡೆದಿದೆ.
ಅವರು ಏಕೆ ಫೋನ್ ಬಳಸುತ್ತಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಪಂದ್ಯದ ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್ ಸಂವಹನಕ್ಕೆ ಕಠಿಣ ನಿರ್ಬಂಧಗಳಿರುವುದರಿಂದ, ಈ ನಡೆ ಆತಂಕಕ್ಕೆ ಕಾರಣವಾಗಿದೆ.
CSK vs DC: ಕೈಗವಸು ಬದಲಾವಣೆಗೆ ನಿರಾಕರಣೆ; ಅಂಪೈರ್ ನಿರ್ಧಾರಕ್ಕೆ ಸ್ಟಬ್ಸ್ ಆಕ್ರೋಶ
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಯಿತು ಮತ್ತು ಇದು ಟೀಕೆಗಳಿಗೆ ಕಾರಣವಾಯಿತು. ಮಾಜಿ ಐಪಿಎಲ್ ಆಯುಕ್ತ ಲಲಿತ್ ಮೋದಿ ಸೇರಿದಂತೆ ಹಲವರು ಇದನ್ನು ಟೀಕಿಸಿ, ಭ್ರಷ್ಟಾಚಾರ ವಿರೋಧಿ ಅಧಿಕಾರಿಗಳ ಮೇಲ್ವಿಚಾರಣೆಯ ಬಗ್ಗೆ ಪ್ರಶ್ನೆ ಎತ್ತಿದರು.