LSG vs SRH: ಮೊಹಮ್ಮದ್ ಶಮಿ ಮಾರಕ ದಾಳಿ, ಲಖನೌ ಸೂಪರ್ ಜಯಂಟ್ಸ್‌ಗೆ ಮೊದಲ ಜಯ!
ಲಖನೌ ಸೂಪರ್ ಜಯಂಟ್ಸ್ ತಂಡ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 157 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಲಖನೌ, ನಾಯಕ ರಿಷಭ್ ಪಂತ್ ಅರ್ಧಶತಕದ ಬಲದಿಂದ ಗೆದ್ದು ಬೀಗಿತು. ಈ ಜಯದ ಮೂಲಕ ಎಲ್‌ಎಸ್‌ಜಿ ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು.
ಎಸ್‌ಆರ್‌ಎಚ್ ಎದುರು 2 ವಿಕೆಟ್ ಕಿತ್ತ ಮೊಹಮ್ಮದ್ ಶಮಿ. -
ಹೈದರಾಬಾದ್: ಮೊಹಮ್ಮದ್ ಶಮಿ (Mohammed Shami) ಮಾರಕ ಬೌಲಿಂಗ್ ಹಾಗೂ ರಿಷಭ್ ಪಂತ್ ಅರ್ಧಶತಕದ ಬಲದಿಂದ ಲಖನೌ ಸೂಪರ್ ಜಯಂಟ್ಸ್, ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ (LSG vs SRH) 5 ವಿಕೆಟ್ ಗೆಲುವು ಪಡೆಯುವ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಅಂಕಪಟ್ಟಿಯಲ್ಲಿ ಖಾತೆಯನ್ನು ತೆರೆದಿದೆ. ಆರಂಭಿಕ ಪಂದ್ಯದಲ್ಲಿ ಸೋತಿದ್ದ ಎಲ್‌ಎಸ್‌ಜಿ ಇದೀಗ ಗೆಲುವಿನ ಲಯಕ್ಕೆ ಮರಳಿ ಪಾಯಿಂಟ್ಸ್ ಟೇಬಲ್‌ನಲ್ಲಿ ಏಳನೇ ಸ್ಥಾನಕ್ಕೆ ಬಂದಿದೆ. ಇನ್ನು ಇಶಾನ್ ಕಿಶನ್ ನಾಯಕತ್ವದ ಎಸ್‌ಆರ್‌ಎಚ್ ಈ ಟೂರ್ನಿಯಲ್ಲಿ ಎರಡನೇ ಸೋಲು ಒಪ್ಪಿಕೊಂಡಿತು.
ಭಾನುವಾರ ಇಲ್ಲಿನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಹೆಡರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್‌ಗೆ ಬೌಲರ್‌ಗಳು ಸಾಥ್ ನೀಡಿದರು. ಹೊಸ ಚೆಂಡಿನಲ್ಲಿ ಮಾರಕ ದಾಳಿ ನಡೆಸಿದ ಮೊಹಮ್ಮದ್ ಶಮಿ, ಅಪಾಯಕಾರಿ ಓಪನಿಂಗ್ ಬ್ಯಾಟ್ಸ್‌ಮನ್‌ಗಳಾದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಅವರನ್ನು 2 ಮತ್ತು 3ನೇ ಓವರ್ಗಳಲ್ಲಿ ಔಟ್ ಮಾಡಿದರು. ನಂತರ ಪ್ರಿನ್ಸ್ ಯಾದವ್, ನಾಯಕ ಇಶಾನ್ ಕಿಶನ್‌ಗೆ ಪೆವಿಲಿಯನ್ ಹಾದಿ ತೋರಿಸಿದರೆ, ದಿಗ್ವೇಶ್ ಸಿಂಗ್, ಅಪಾಯಕಾರಿ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಔಟ್ ಮಾಡಿದರು. ಆ ಮೂಲಕ ಎಸ್‌ಆರ್‌ಎಚ್ ಕೇವಲ 26 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು.
IPL 2026: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಸಂಜು ಸ್ಯಾಮ್ಸನ್ ಬಗ್ಗೆ ಇರ್ಫಾನ್ ಪಠಾಣ್ ದೊಡ್ಡ ಭವಿಷ್ಯ!
ಹೈದರಾಬಾದ್‌ಗೆ ನಿತೀಶ್, ಕ್ಲಾಸೆನ್ ಆಸರೆ
ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ್ದ ಎಸ್‌ಆರ್‌ಎಚ್ 100 ರನ್ ಗಳಿಸುವುದೂ ಕಷ್ಟ ಎಂದೇ ಭಾವಿಸಲಾಗಿತ್ತು. ಆದರೆ, ನಿತೀಶ್ ಕುಮಾರ್ ರೆಡ್ಡಿ ಹಾಗೂ ಹೆನ್ರಿಕ್ ಕ್ಲಾಸೆನ್, ಒತ್ತಡವನ್ನು ಮೆಟ್ಟಿ ನಿಂತು 116 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು150ರ ಗಡಿ ಸನಿಹ ತರುವಲ್ಲಿ ಯಶಸ್ವಿಯಾದರು.
OVER THE IN-FIELD! 😍
— IndianPremierLeague (@IPL) April 5, 2026
Captain Rishabh Pant guides the chase and finishes it off in style 🤌@LucknowIPL off the mark on the points table +2️⃣
Scorecard ▶️ https://t.co/qC2rF1Hiiz#TATAIPL | #KhelBindaas | #SRHvLSG pic.twitter.com/SEDFsub4UD
ಅರ್ಧಶತಕ ಬಾರಿಸಿದ ಲೋಕಲ್ ಬಾಯ್ ರೆಡ್ಡಿ
ಲೋಕಲ್ ಬಾಯ್ ನಿತೀಶ್ ರೆಡ್ಡಿ ಆಡಿದ 33 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 56 ರನ್ ಸಿಡಿಸಿ ಕೊನೆಯಲ್ಲಿ ವಿಕೆಟ್ ಒಪ್ಪಿಸಿದರೆ, ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ್ದ ಕ್ಲಾಸೆನ್, 41 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 5 ಬೌಂಡರಿಯೊಂದಿಗೆ 62 ರನ್ ಚಚ್ಚಿದರು. ಈ ಇಬ್ಬರೂ ವಿಕೆಟ್ ಒಪ್ಪಿಸಿದ ಬಳಿಕ 19 ಮತ್ತು 20ನೇ ಓವರ್‌ಗಳಲ್ಲಿ ಎಸ್‌ಆರ್‌ಎಚ್‌ಗೆ ರನ್ ಬರಲಿಲ್ಲ. ಅಂತಿಮವಾಗಿ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 157 ರನ್‌ಗಳನ್ನು ಕಲೆ ಹಾಕಿತು.
Yeh toh bas shuruaat hai 👊 pic.twitter.com/jUoncIoWkl
— Lucknow Super Giants (@LucknowIPL) April 5, 2026
ಲಖನೌಗೆ ಮೊದಲ ಜಯ
ಕಳೆದ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿ ರನ್‌ಔಟ್ ಆಗಿ ಟೀಕೆಗಳಿಗೆ ಗುರಿಯಾಗಿದ್ದ ರಿಷಭ್ ಪಂತ್, ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬಂದು ಯಶಸ್ವಿಯಾದರು. 158 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಎಲ್‌ಎಸ್‌ಜಿ ಪರ, ಆರಂಭಿಕ ಮಿಚೆಲ್ ಮಾರ್ಷ್ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ನಂತರ ಜೊತೆಯಾದ ಏಡೆನ್ ಮಾರ್ಕ್ರಮ್ ಹಾಗೂ ರಿಷಭ್ ಪಂತ್ 40 ರನ್‌ಗಳ ಜೊತೆಯಾಟವನ್ನು ಆಡಿದರು.
ರಿಷಭ್ ಪಂತ್ ಅರ್ಧಶತಕ
ಏಡೆನ್ ಮಾರ್ಕ್ರಮ್ ಅವರು 27 ಎಸೆತಗಳಲ್ಲಿ 45 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ರಿಷಭ್ ಪಂತ್ ಕೊನೆಯವರೆಗೂ ಬ್ಯಾಟ್ ಮಾಡಿ 50 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ ಅಜೇಯ 68 ರನ್ ಗಳಿಸಿ ತಮ್ಮ ತಂಡವನ್ನು ಕೊನೆಯ ಓವರ್‌ನಲ್ಲಿ ಗೆಲ್ಲಿಸಿದರು. ಕಡಿಮೆ ಗುರಿ ನೀಡಿದ್ದರ ಹೊರತಾಗಿಯೂ ಎಸ್‌ಅರ್‌ಎಚ್ ಬೌಲರ್‌ಗಳ ಕೊನೆಯ ಓವರ್‌ವರೆಗೆ ತೆಗೆದುಕೊಂಡು ಹೋಗಿದ್ದರು. ಅಂತಿಮವಾಗಿ ಲಖನೌ 19.5 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಮೊದಲ ಗೆಲುವು ದಾಖಲಿಸಿತು. ತಮ್ಮ ತಂಡ ಗೆಲುವು ಪಡೆಯುತ್ತಿದ್ದಂತೆ ಮಾಲೀಕ ಸಂಜೀವ್ ಗೊಯಾಂಕ ಹರ್ಷಭರಿತರಾದರು.
ಹೈದರಾಬಾದ್ ಪರ ಹರ್ಷ್ ದುಬೇ 4 ಓವರ್‌ಗಳಿಗೆ ಕೇವಲ 18 ರನ್ ನೀಡಿ 2 ವಿಕೆಟ್ ಕಿತ್ತರು ಹಾಗೂ ಯಶಸ್ವಿ ಬೌಲರ್ ಎನಿಸಿಕೊಂಡರು.