ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs DC: ಕೊಹ್ಲಿ-ಕೃಣಾಲ್‌ ಅಬ್ಬರ, ಡೆಲ್ಲಿ ಎದುರು ಸೇಡು ತೀರಿಸಿಕೊಂಡ ಆರ್‌ಸಿಬಿ!

RCB vs DC Match Highlights: ಕೃಣಾಲ್‌ ಪಾಂಡ್ಯ (73*) ಹಾಗೂ ವಿರಾಟ್‌ ಕೊಹ್ಲಿ (51) ಅವರ ನಿರ್ಣಾಯಕ ಅರ್ಧಶತಕಗಳನ್ನು ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ 6 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಆರ್‌ಸಿಬಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ!

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ 6 ವಿಕೆಟ್‌ ಜಯ.

Profile Ramesh Kote Apr 27, 2025 11:27 PM

ನವದೆಹಲಿ: ಕೃಣಾಲ್‌ ಪಾಂಡ್ಯ (73*) ಹಾಗೂ ವಿರಾಟ್‌ ಕೊಹ್ಲಿ (51) ಅವರ ನಿರ್ಣಾಯಕ ಜೊತೆಯಾಟದ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ (DC) ವಿರುದ್ಧ 6 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಡೆಲ್ಲಿ ಎದುರು ಬೆಂಗಳೂರಿನ ಸೋಲಿನ ಸೇಡನ್ನು ಆರ್‌ಸಿಬಿ ತೀರಿಸಿಕೊಂಡಿತು. ಅಲ್ಲದೆ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಅಂಕಪಟ್ಟಿಯಲ್ಲಿ ರಜತ್‌ ಪಾಟಿದಾರ್‌ ನಾಯಕತ್ವದ ಬೆಂಗಳೂರು ತಂಡ ಅಗ್ರ ಸ್ಥಾನವನ್ನು ಅಲಂಕರಿಸಿತು. ಸೋಲಿನ ಮೂಲಕ ಅಕ್ಷರ್‌ ಪಟೇಲ್‌ ನಾಯಕತ್ವದ ಡಿಸಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಇಳಿಯಿತು.

ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಬೆಂಗಳೂರಿನ ಪಂದ್ಯದಲ್ಲಿ ಸೋತಿದ್ದ ಆರ್‌ಸಿಬಿ, ಭಾನುವಾರದ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. ಅದರಂತೆ ಆರ್‌ಸಿಬಿ, ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿ, ಈ ಆವೃತ್ತಿಯಲ್ಲಿ ತವರು ಹೊರಗೆ ಸತತ ಏಳನೇ ಪಂದ್ಯವನ್ನು ಗೆದ್ದು ಬೀಗಿತು. ಒಟ್ಟು 14 ಅಂಕಗಳನ್ನು ಕಲೆ ಹಾಕಿದ ಆರ್‌ಸಿಬಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಪ್ರಾಬಲ್ಯ ಮೆರೆಯಿತು.

MI vs LSG: ಮುಂಬೈ ಎದುರು ಸೋಲಿನ ಬೇಸರದಲ್ಲಿದ್ದ ರಿಷಭ್‌ ಪಂತ್‌ಗೆ ಮತ್ತೊಂದು ಆಘಾತ!

ಆರಂಭಿಕ ಆಘಾತ ಅನುಭವಿಸಿದ್ದ ಆರ್‌ಸಿಬಿ

ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ 163 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 26 ರನ್‌ ಇರುವಾಗಲೇ ಜಾಕೋಬ್‌ ಭೆಥೆಲ್‌, ದೇವದತ್‌ ಪಡಿಕ್ಕಲ್‌ ಹಾಗೂ ನಾಯಕ ರಜತ್‌ ಪಾಟಿದಾರ್‌ ಅವರ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.



ಕೃಣಾಲ್-ಕೊಹ್ಲಿ ಜುಗಲ್‌ಬಂದಿ

ಆರ್‌ಸಿಬಿ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಜತೆಯಾದ ವಿರಾಟ್‌ ಕೊಹ್ಲಿ ಹಾಗೂ ಕೃಣಾಲ್‌ ಪಾಂಡ್ಯ ಅತ್ಯಂತ ಜವಾಬ್ದಾರಿಯುತ ಆಟವನ್ನು ಆಡಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಇವರು, ಡೆಲ್ಲಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 119 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿತು. ಆ ಮೂಲಕ ಆರ್‌ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು.



ವಿರಾಟ್‌ ಕೊಹ್ಲಿ ಅರ್ಧಶತಕ

ಆರ್‌ಸಿಬಿಯ ಚೇಸಿಂಗ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಕೃಣಾಲ್‌ ಪಾಂಡ್ಯ ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟ್‌ ಮಾಡಿದರು. ವಿರಾಟ್‌ ಕೊಹ್ಲಿ ಒಂದು ತುದಿಯಲ್ಲಿ ನಿಂತು ಆಂಕರ್‌ ಪಾತ್ರವನ್ನು ನಿರ್ವಹಿಸಿದರೆ, ಪಾಂಡ್ಯ ಮತ್ತೊಂದು ತುದಿಯಲ್ಲಿ ಆಕ್ರಮಣಕಾರಿ ಆಟವನ್ನು ಆಡಿದರು. ಕೊಹ್ಲಿ 47 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 51 ರನ್‌ ಗಳಿಸಿ ತಂಡವನ್ನು ಗೆಲ್ಲಿಸುವ ಸಮಯದಲ್ಲಿ ವಿಕೆಟ್‌ ಒಪ್ಪಿಸಿದರು.



ಕೃಣಾಲ್‌ ಪಾಂಡ್ಯಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ

ಈ ಸೀಸನ್‌ನಲ್ಲಿ ಬ್ಯಾಟಿಂಗ್‌ನಲ್ಲಿ ನಿರೀಕ್ಷೆ ಹುಸಿಗೊಳಿಸಿದ್ದ ಕೃಣಾಲ್‌ ಪಾಂಡ್ಯ, ಭಾನುವಾರ ತಮ್ಮ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್‌ ಅನ್ನು ಆಡಿದರು. ಅವರು ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದರು. ಇವರು ಆಡಿದ 47 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 73 ರನ್‌ ಗಳಿಸಿ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಆರ್‌ಸಿಬಿಯನ್ನು ಗೆಲುವಿನ ದಡ ಸೇರಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

162 ರನ್‌ ಕಲೆ ಹಾಕಿದ್ದ ಡೆಲ್ಲಿ ಕ್ಯಾಪಿಟಲ್ಸ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ನಿರೀಕ್ಷಿತ ಬ್ಯಾಟಿಂಗ್‌ ಮೂಡಿಬರಲಿಲ್ಲ. ಭುವನೇಶ್ವರ್‌ ಕುಮಾರ್‌ ಹಾಗೂ ಜಾಶ ಹೇಝಲ್‌ವುಡ್‌ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ನಲುಗಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್‌ ನಷ್ಟಕ್ಕೆ 162 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದರಾಳಿ ಆರ್‌ಸಿಬಿಗೆ 163 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು.



ಕೆಎಲ್‌ ರಾಹುಲ್‌ 41 ರನ್‌

ಅಭಿಷೇಕ್‌ ಪೊರೆಲ್‌ (28) ಹಾಗೂ ಫಾಫ್‌ ಡು ಪ್ಲೆಸಿಸ್‌ (22) ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಎಡವಿದರು. ಕನ್ನಡಿಗ ಕರುಣ್‌ ನಾಯರ್‌ ವೈಫಲ್ಯ ಅನುಭವಿಸಿದರು. ಅಕ್ಷರ್‌ ಪಟೇಲ್‌ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟ್‌ ಮಾಡಿದ ಕೆಎಲ್‌ ರಾಹುಲ್‌ 39 ಎಸೆತಗಳಲ್ಲಿ 41 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿ ದೊಡ್ಡ ಇನಿಂಗ್ಸ್‌ ಆಡುವಲ್ಲಿ ವಿಫಲರಾದರು. ಕೊನೆಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಟ್ರಿಸ್ಟನ್‌ ಸ್ಟಬ್ಸ್‌ 18 ಎಸೆತಗಳಲ್ಲಿ ನಿರ್ಣಾಯಕ 34 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಡೆಲ್ಲಿ 160ರ ಗಡಿ ದಾಟಲು ನೆರವಾದರು.

ಆರ್‌ಸಿಬಿ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಭುವನೇಶ್ವರ್‌ ಕುಮಾರ್‌ 3 ವಿಕೆಟ್‌ ಕಿತ್ತರೆ, ಜಾಶ್‌ ಹೇಝಲ್‌ವುಡ್‌ ಎರಡು ವಿಕೆಟ್‌ ಕಿತ್ತರು.