ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನ್ಯೂಜಿಲೆಂಡ್‌ ಟೆಸ್ಟ್ ಸರಣಿಯ ಆಸ್ಟ್ರೇಲಿಯಾ ತಂಡದಿಂದ ಮಾರ್ನಸ್ ಲಾಬುಶೇನ್‌ಗೆ ಕೊಕ್!

ಕಳಪೆ ಬ್ಯಾಟಿಂಗ್ ಫಾರ್ಮ್‌ನಿಂದಾಗಿ ಮಾರ್ನಸ್ ಲಬುಶೇನ್ ನ್ಯೂಜಿಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. 49 ಇನ್ನಿಂಗ್ಸ್‌ಗಳಿಂದ ಶತಕ ಗಳಿಸದ ಅವರು, ಶೆಫೀಲ್ಡ್ ಶೀಲ್ಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೆ ಆಸ್ಟ್ರೇಲಿಯಾ ತಂಡಕ್ಕೆ ಮರಳುವ ಗುರಿ ಹೊಂದಿದ್ದಾರೆ.

ಆಸ್ಟ್ರೇಲಿಯಾ ಟೆಸ್ಟ್‌ ತಂಡದಿಂದ ಮಾರ್ನಸ್‌ ಲಾಬುಶೇನ್‌ಗೆ ಕೊಕ್‌!

ಆಸ್ಟ್ರೇಲಿಯಾ ಟೆಸ್ಟ್‌ ತಂಡದಿಂದ ಮಾರ್ನಸ್‌ ಲಾಬುಶೇನ್‌ಗೆ ಕೊಕ್‌. -

Profile
Ramesh Kote Nov 9, 2026 7:23 PM

ನವದೆಹಲಿ: ಆಸ್ಟ್ರೇಲಿಯಾದ ಪ್ರಮುಖ ಬ್ಯಾಟರ್ ಮಾರ್ನಸ್ ಲಾಬುಶೇನ್ (Marnus Labuschagne) ಅವರನ್ನು ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್ ಸರಣಿಗೆ (AUS vs NZ) ಪ್ರಕಟಿಸಿರುವ ತಂಡದಿಂದ ಕೈಬಿಡಲಾಗಿದೆ. ಈ ನಿರ್ಧಾರ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆಸ್ಟ್ರೇಲಿಯಾದ ಟೆಸ್ಟ್ ತಂಡದ ಪ್ರಮುಖ ಬ್ಯಾಟರ್ ಆಗಿದ್ದ ಮಾರ್ನಸ್ ಲಾಬುಶೇನ್ ಕಳೆದ ಹಲವು ಸರಣಿಗಳಿಂದ ನಿರಂತರವಾಗಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. 2023ರ ಆ್ಯಷಸ್ ಸರಣಿಯಲ್ಲಿ ಕೊನೆಯ ಬಾರಿ ಟೆಸ್ಟ್ ಶತಕ ಸಿಡಿಸಿದ್ದ ಅವರು, ಇದಾದ ಬಳಿಕ 49 ಇನಿಂಗ್ಸ್‌ಗಳಿಂದ ಶತಕ ದಾಖಲಿಸಲು ವಿಫಲರಾಗಿದ್ದಾರೆ. ಹೀಗಾಗಿ ಆಯ್ಕೆ ಸಮಿತಿ ಈ ಕಠಿಣ ನಿರ್ಧಾರ ಕೈಗೊಂಡಿದೆ.

ಆಸ್ಟ್ರೇಲಿಯಾ ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ಸೋಮವಾರ (ನವೆಂಬರ್ 9) ಈ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಲಾಬುಶೇನ್ ಅವರನ್ನು ಪರಿಗಣಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ. "ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಿರ್ಧಾರದಿಂದ ಅವರಿಗೆ ಸ್ವಲ್ಪ ಸಮಯ ಮತ್ತು ಅವಕಾಶ ಸಿಗಲಿದೆ. ಅವರ ಆಯ್ಕೆಯ ಕುರಿತಾದ ಗೊಂದಲವೂ ನಿವಾರಣೆಯಾಗಲಿದೆ," ಎಂದು ಬೈಲಿ ಹೇಳಿದ್ದಾರೆ.

ʻಇನ್ನೂ 30 ರಿಂದ 40 ವಿಕೆಟ್‌ ಪಡೆಯಬಹುದಿತ್ತುʼ: ಮೊಹಮ್ಮದ್‌ ಶಮಿ ಟೆಸ್ಟ್‌ ನಿವೃತ್ತಿಗೆ ರವಿಶಾಸ್ತ್ರಿ ಬೇಸರ!

ದಕ್ಷಿಣ ಆಫ್ರಿಕಾ ವಿರುದ್ಧವೂ ನಿರಾಸೆ

ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಲಾಬುಶೇನ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಆರು ಇನಿಂಗ್ಸ್‌ಗಳಲ್ಲಿ ಕೇವಲ 131 ರನ್ ಗಳಿಸಿದ್ದರು. ಸರಣಿಯ ಕೊನೆಯ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶೂನ್ಯ ಮತ್ತು ನಾಲ್ಕು ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಈ ಸರಣಿಯನ್ನು ಆಸ್ಟ್ರೇಲಿಯಾ 1-2 ಅಂತರದಲ್ಲಿ ಕಳೆದುಕೊಂಡಿತ್ತು. ಕಳೆದ ವರ್ಷ ವೆಸ್ಟ್ ಇಂಡೀಸ್ ಪ್ರವಾಸದ ಟೆಸ್ಟ್ ತಂಡದಿಂದಲೂ ಲಾಬುಶೇನ್ ಅವರನ್ನು ಕೈಬಿಡಲಾಗಿತ್ತು. ಆ ಬಳಿಕ ತಂಡಕ್ಕೆ ಮರಳಿದ್ದರೂ, ಕಳೆದ 10 ಟೆಸ್ಟ್ ಪಂದ್ಯಗಳಲ್ಲಿ 23.66ರ ಸರಾಸರಿಯಲ್ಲಿ ಕೇವಲ ಎರಡು ಅರ್ಧಶತಕಗಳನ್ನು ಮಾತ್ರ ಗಳಿಸಿದ್ದಾರೆ.

ಶೆಫೀಲ್ಡ್ ಶೀಲ್ಡ್‌ನಲ್ಲಿ ಮತ್ತೆ ಸಾಮರ್ಥ್ಯ ಸಾಬೀತುಪಡಿಸಬೇಕಿದೆ

ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿರುವ ಲಾಬುಶೇನ್ ಇದೀಗ ದೇಶಿ ಕ್ರಿಕೆಟ್‌ನತ್ತ ಗಮನಹರಿಸಲಿದ್ದಾರೆ. ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಕ್ವೀನ್ಸ್‌ಲ್ಯಾಂಡ್ ತಂಡದ ನಾಯಕನಾಗಿ ಕಣಕ್ಕಿಳಿದು ಉತ್ತಮ ರನ್ ಗಳಿಸುವ ಮೂಲಕ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ಪ್ರಯತ್ನ ಮಾಡಲಿದ್ದಾರೆ. ಅವರನ್ನು ಶಾಶ್ವತವಾಗಿ ತಂಡದಿಂದ ಹೊರಗಿಟ್ಟಿಲ್ಲ ಎಂದು ಜಾರ್ಜ್ ಬೈಲಿ ಸ್ಪಷ್ಟಪಡಿಸಿದ್ದಾರೆ. ಮುಂದಿನ ವರ್ಷ ಭಾರತ ಮತ್ತು ಇಂಗ್ಲೆಂಡ್ ಪ್ರವಾಸಗಳಿಗೆ ಮತ್ತೆ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶವಿದೆ ಎಂದು ತಿಳಿಸಿದ್ದಾರೆ.

Ball-tampering scandal: ʻಇದು ಶೇ 100 ರಷ್ಟು ಸತ್ಯʼ-ಉಸ್ಮಾನ್‌ ಖವಾಜ ಆರೋಪಕ್ಕೆ ಡೇವಿಡ್‌ ವಾರ್ನರ್‌ ಪ್ರತಿಕ್ರಿಯೆ!

ಮಾರ್ನಸ್‌ ಲಾಬುಶೇನ್ ಸ್ಥಾನಕ್ಕೆ ಯಾರು?

ಲಾಬುಶೇನ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಮೂರನೇ ಕ್ರಮಾಂಕದಲ್ಲಿ ಯಾರು ಬ್ಯಾಟ್ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸ್ಟೀವ್ ಸ್ಮಿತ್ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಕ್ಯಾಮೆರಾನ್ ಗ್ರೀನ್ ಮತ್ತು ಮ್ಯಾಟ್ ರೆನ್‌ಶಾ ಕೂಡ ಆಯ್ಕೆ ಸಮಿತಿಯ ಮುಂದಿರುವ ಆಯ್ಕೆಗಳಾಗಿದ್ದಾರೆ. ಆದರೆ ಅಂತಿಮ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ.

ನ್ಯೂಜಿಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬರ್ 9ರಂದು ಪರ್ತ್‌ನಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್ ಡಿಸೆಂಬರ್ 17ರಂದು ಅಡಿಲೇಡ್‌ನಲ್ಲಿ, ಮೂರನೇ ಟೆಸ್ಟ್ ಡಿಸೆಂಬರ್ 26ರಂದು ಮೆಲ್ಬರ್ನ್‌ನಲ್ಲಿ ಹಾಗೂ ನಾಲ್ಕನೇ ಟೆಸ್ಟ್ ಜನವರಿ 4ರಂದು ಸಿಡ್ನಿಯಲ್ಲಿ ನಡೆಯಲಿದೆ. ಸರಣಿಗೆ ಆಸ್ಟ್ರೇಲಿಯಾದ ಅಂತಿಮ ತಂಡವನ್ನು ಶೆಫೀಲ್ಡ್ ಶೀಲ್ಡ್‌ನ ಮುಂದಿನ ಸುತ್ತಿನ ಪಂದ್ಯಗಳ ಬಳಿಕ ಪ್ರಕಟಿಸುವ ನಿರೀಕ್ಷೆಯಿದೆ.