IPL 2025: ಆರ್‌ಸಿಬಿ ತಂಡ ಹಳೆಯ ಆವೃತ್ತಿಗಳಿಗಿಂತ 10 ಪಟ್ಟು ಉತ್ತಮವಾಗಿದೆ ಎಂದ ಎಬಿ ಡಿ ವಿಲಿಯರ್ಸ್!
ABD on RCB's Combination: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಕಯ ಎಂಟನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಆ ಮೂಲಕ 17 ವರ್ಷಗಳ ಬಳಿಕೆ ಚೆಪಾಕ್‌ನಲ್ಲಿ ಸಿಎಸ್‌ಕೆಗೆ ಆರ್‌ಸಿಬಿ ಸೊಲಿನ ರುಚಿ ತೋರಿಸಿದೆ. ಈ ಪಂದ್ಯದ ಬಳಿಕ ಆರ್‌ಸಿಬಿ ತಂಡದ ಸಂಯೋಜನೆಯನ್ನು ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿವಿಲಿಯರ್ಸ್ ಶ್ಲಾಘಿಸಿದ್ದಾರೆ.

ಆರ್‌ಸಿಬಿ ತಂಡದ ಸಮತೋಲವನ್ನು ಶ್ಲಾಘಿಸಿದ ಎಬಿಡಿ.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ದಕ್ಷಿಣ ಆಫ್ರಿಕಾ ದಿಗ್ಗಜ ಎ ಬಿ ಡಿವಿಲಿಯರ್ಸ್ (AB De Villiers) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಈ ಬಾರಿ ಆರ್‌ಸಿಬಿ ತಂಡದ ಸಂಯೋಜನೆ ಕಳೆದ ಆವೃತ್ತಿಗಳಿಗಿಂತ 10 ಪಟ್ಟು ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಜತ್ ಪಾಟಿದಾರ್ ನಾಯಕತ್ವ ಆರ್‌ಸಿಬಿ ಶುಕ್ರವಾರ 17 ವರ್ಷಗಳ ನಂತರ ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.
'ಎಬಿ ಡಿವಿಲಿಯರ್ಸ್ 360' ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಆರ್‌ಸಿಬಿ ಮಾಜಿ ಬ್ಯಾಟ್ಸ್‌ಮನ್, "ಈ ಬಾರಿ ಆರ್‌ಸಿಬಿ ತಂಡದ ಸಂಯೋಜನೆ ಹಿಂದಿನ ಆವೃತ್ತಿಗಳಿಗಿಂತ ಹತ್ತು ಪಟ್ಟು ಉತ್ತಮವಾಗಿದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, "ಕಳೆದ ವರ್ಷ ಐಪಿಎಲ್ ಮೆಗಾ ಹರಾಜಿನ ವೇಳೆ ಆರ್‌ಸಿಬಿಗೆ ಅತ್ಯುತ್ತಮ ಸಮತೋಲನ ಬೇಕು ಎಂದು ಹೇಳಿದ್ದೆ. ಇದು ಬೌಲರ್‌ಗಳು, ಬ್ಯಾಟ್ಸ್‌ಮನ್‌ಗಳು ಅಥವಾ ಫೀಲ್ಡರ್‌ಗಳ ಬಗ್ಗೆ ಅಲ್ಲ. ಇದು ಐಪಿಎಲ್ ತಂಡಗಳು ಮತ್ತು ಆಯ್ಕೆಗಳ ನಡುವೆ ಉತ್ತಮ ಸಮತೋಲನವನ್ನು ಹೊಂದಿರುವ ಬಗ್ಗೆ," ಎಂದಿದ್ದಾರೆ.
RCB vs CSK: ʻಸಿಲ್ಲಿ ಪ್ರಶ್ನೆ ಕೇಳಬೇಡಿʼ-ಪತ್ರಕರ್ತನಿಗೆ ಬೆವರಿಳಿಸಿದ ಸ್ಟೀಫನ್ ಫ್ಲೆಮಿಂಗ್!
ಭುವನೇಶ್ವರ್ ಆಗಮನವನ್ನು ಶ್ಲಾಘಿಸಿದ ಎಬಿಡಿ
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಆಡಿರಲಿಲ್ಲ. ಸಣ್ಣ ಗಾಯದ ಕಾರಣ ಅವರು ವಿಶ್ರಾಂತಿ ಪಡೆದಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ಗಳಿಂದ ಕೆಕೆಆರ್ ತಂಡವನ್ನು ಮಣಿಸಿತ್ತು. ನಂತರ ಮಾರ್ಚ್ 28 ರಂದು ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತನ್ನ ಎರಡನೇ ಪಂದ್ಯದಲ್ಲಿ ಆರ್‌ಸಿಬಿ ಭುವನೇಶ್ವರ್ ಕುಮಾರ್ ಅವರನ್ನು ಕರೆಸಿಕೊಂಡಿತ್ತು. ಅದರಂತೆ ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಒಂದು ವಿಕೆಟ್ ಕಿತ್ತು ಬೌಲಿಂಗ್‌ನಲ್ಲಿ ಗಮನ ಸೆಳೆದಿದ್ದರು. ಭುವನೇಶ್ವರ್ ಸೇರ್ಪಡೆ ಬಗ್ಗೆ ಎಬಿಡಿ ಮಾತನಾಡಿದ್ದಾರೆ.
"ಭುವನೇಶ್ವರ್ ಕುಮಾರ್ ಅವರನ್ನು ನೋಡಿದಾಗ ಅವರು ಆಡುತ್ತಿಲ್ಲ ಎಂದು ಭಾವಿಸಿದ್ದೆ ಮತ್ತು ನಂತರ ಅವರು ಎರಡನೇ ಪಂದ್ಯದಲ್ಲಿ ತಂಡದಲ್ಲಿದ್ದರು. ಇದು ನಿಮಗೆ ಬೇಕಾಗಿತ್ತು. ಮೊದಲ ಪಂದ್ಯದಲ್ಲಿ (ಕೆಕೆಆರ್ ವಿರುದ್ಧ) ಅವರು ತಂಡದಲ್ಲಿ ಇರಲಿಲ್ಲ ಮತ್ತು ಎರಡನೇ ಪಂದ್ಯದಲ್ಲಿ ಅವರು ಬೇರೆಯವರ ಸ್ಥಾನದಲ್ಲಿ ತಂಡದಲ್ಲಿದ್ದರು. ಇದು ತಂಡಕ್ಕೆ ಅಗತ್ಯವಿರುವ ಸಮತೋಲನ ಮತ್ತು ಆಳವಾಗಿದೆ," ಎಂದು ಎಬಿಡಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
RCB vs CSK: 17 ವರ್ಷಗಳ ಬಳಿಕ ಚೆಪಾಕ್‌ನಲ್ಲಿ ಚೆನ್ನೈ ವಿರುದ್ಧ ಗೆದ್ದು ಇತಿಹಾಸ ಬರೆದ ಆರ್‌ಸಿಬಿ!
ಆರ್‌ಸಿಬಿ ಪ್ರದರ್ಶನ ಉತ್ತಮವಾಗಿದೆ
"ಟೂರ್ನಿಯಲ್ಲಿ ಆರ್‌ಸಿಬಿಗೆ ಇದು ಅತ್ಯುತ್ತಮ ಆರಂಭವಾಗಿದೆ. ಫಲಿತಾಂಶದ ದೃಷ್ಟಿಕೋನದಿಂದ ಮಾತ್ರವಲ್ಲದೆ ತಂಡದ ದೃಷ್ಟಿಕೋನದಿಂದಲೂ. ಕೆಕೆಆರ್ ತಂಡವನ್ನು ತವರಿನಲ್ಲಿ ಸೋಲಿಸಿ ನಂತರ ಚೆಪಾಕ್‌ನಲ್ಲಿ ಚೆನ್ನೈ ತಂಡವನ್ನು ಸೋಲಿಸಿದ್ದು ಅದ್ಭುತವಾಗಿತ್ತು. ಈಗ ಇದು ಪಾಯಿಂಟ್ಸ್ ಟೇಬಲ್‌ನಲ್ಲಿನ ಮಾರ್ಗವನ್ನು ಸುಲಭಗೊಳಿಸುತ್ತದೆ," ಎಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ತಿಳಿಸಿದ್ದಾರೆ.
"ಟೂರ್ನಿಯಲ್ಲಿ ಈ ರೀತಿ ಅದ್ಭುತವಾದ ಆರಂಭ ಪಡೆಯುವುದು ಅಷ್ಟೊಂದು ಸುಲಭವಲ್ಲ. ಆದರೆ, ಈ ಕೆಲಸವನ್ನು ಆರ್‌ಸಿಬಿ ಮಾಡಿದೆ. ಬೇರೆ ಅಂಗಣಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿರುವ ಇವರು ಇದೀಗ ತವರು ಕಡೆಗೆ ಮುಖವನ್ನು ಮಾಡಿದ್ದಾರೆ. ನಂತರ ಹೊರಗಡೆ, ಬಳಿಕ ತವರು ಅಂಗಣ, ಹೊರಗಡೆ, ತವರು ಹಾಗೂ ಹೊರಗಡೆ ಇದು ನೋಡಲು ಆಹ್ಲಾದಕರವಾಗಿದೆ. ಈ ರೀತಿಯ ಸನ್ನಿವೇಶವನ್ನು ನಾನು ಎಂದಿಗೂ ನೋಡಿಲ್ಲ. ಇದು ಸವಾಲುದಾಯಕವಾಗಿದೆ. ಆದರೆ, ಇದು ನಿಮ್ಮ ಸಾಮರ್ಥ್ಯಗಳಲ್ಲಿ ಒಂದು ಆಗಬಹುದು," ಎಂದು ಎಬಿಡಿ ಹೇಳಿದ್ದಾರೆ.