ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಹೇ.. ಹೇಮಾಂಗ್‌, ಮೈಂಡ್‌ ಯುವರ್‌ ಬ್ಯುಸಿನೆಸ್‌ʼ: ಡಿಸಿ ಕೋಚ್‌ ಜನ್ಮ ಜಾಲಾಡಿದ ಶ್ರೀಕಾಂತ್‌!

ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಂದರ್ಭದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಹೆಡ್‌ ಕೋಚ್‌ ಸ್ಟೀಫನ್‌ ಫ್ಲೇಮಿಂಗ್‌ ಅವರನ್ನು ಟೀಕಿಸಿದ್ದ ಈಗಿನ ಡೆಲ್ಲಿ ಕ್ಯಾಪಿಟಲ್ಸ್‌ ಕೋಚ್‌ ಹೇಮಾಂಗ್‌ ಬದಾನಿ ಅವರನ್ನು ಭಾರತ ತಂಡದ ಮಾಜಿ ಆಟಗಾರ ಕೆ ಶ್ರೀಕಾಂತ್‌ ತಿರುಗೇಟು ನೀಡಿದ್ದಾರೆ. ನೀವು ಬೇರೆಯವರ ಬಗ್ಗೆ ಕಾಮೆಂಟ್‌ ಹಾಕುವ ಬದಲು ನಿಮ್ಮ ಬಗ್ಗೆ ನೀವು ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

IPL 2026: ಡಿಸಿ ಕೋಚ್‌ ಹೇಮಾಂಗ್‌ ಬದಾನಿಗೆ ಕೆ ಶ್ರೀಕಾಂತ್‌ ತಿರುಗೇಟು!

ಹೇಮಾಂಗ್‌ ಬದಾನಿಯ ಜನ್ಮ ಜಾಲಾಡಿದ ಕೆ ಶ್ರೀಕಾಂತ್. -

Profile
Ramesh Kote Apr 28, 2026 9:08 PM

ನವದೆಹಲಿ: ಏಪ್ರಿಲ್‌ 27 ರಂದು ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 9 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಈ ಸೋಲಿನ ಬಳಿಕ ಡೆಲ್ಲಿ ತಂಡದ ಕೋಚ್‌ ಹೇಮಾಂಗ್‌ ಬದೋನಿ (Hemang Badani) ಅವರು 2025ರ ಐಪಿಎಲ್‌ ಟೂರ್ನಿಯ ಸಂದರ್ಭದಲ್ಲಿ ನೀಡಿದ್ದ ಸಂದರ್ಶನದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹೆಡ್‌ ಕೋಚ್‌ ಸ್ಟೀಫನ್‌ ಪ್ಲೇಮಿಂಗ್‌ (Stephen Fleming) ಬಗ್ಗೆ ಹಾಕಿದ್ದ ಕಾಮೆಂಟ್‌ ಅನ್ನು ಇದೀಗ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ (K Srikkanth) ಸ್ಮರಿಸಿಕೊಂಡಿದ್ದಾರೆ. ಇದೀಗ ಅವರು ಹೇಮಂಗ್‌ ಬದಾನಿ ಅವರ ಕೋಚಿಂಗ್‌ ಅನ್ನು ಟೀಕಿಸಿದ್ದಾರೆ. ಮೊದಲು ನೀವು ನಿಮ್ಮ ಕೆಲಸವನ್ನು ಉತ್ತಮವಾಗಿ ಮಾಡಿ, ಆ ಮೇಲೆ ಇನ್ನೊಬ್ಬರ ಬಗ್ಗೆ ಮಾತನಾಡಿ ಎಂದು ಡೆಲ್ಲಿ ಕೋಚ್‌ಗೆ ಕೆ ಶ್ರೀಕಾಂತ್‌ ತಿರುಗೇಟು ನೀಡಿದ್ದಾರೆ.

2025ರ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಕೊನೆಯ ಸ್ಥಾನದ ಮೂಲಕ ತನ್ನ ಅಭಿಯಾನವನ್ನು ಮುಗಿಸಿತ್ತು. ಈ ವೇಳೆ ಯೋ ಮಹೇಶ್‌ ಅವರ ಸಂದರ್ಶನದಲ್ಲಿ ಭಾಗವಹಿಸಿದ್ದ ಹೇಮಾಂಗ್‌ ಬದಾನಿ ಅವರು, ಸಿಎಸ್‌ಕೆ ಹೆಡ್‌ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಅವರನ್ನು ಟೀಕಿಸಿದ್ದರು. ಐಪಿಎಲ್‌ ಟೂರ್ನಿಯಲ್ಲಿ ಬಿಟ್ಟರೆ ಇವರು ಬೇರೆ ಟೂರ್ನಿಗಳಲ್ಲಿ ಯಶಸ್ವಿಯಾಗಿಲ್ಲ. ಐಪಿಎಲ್‌ ಟೂರ್ನಿಯಲ್ಲಿ ಸಿಎಸ್‌ಕೆ ಐದು ಭಾರಿ ಚಾಂಪಿಯನ್ಸ್‌ ಆಗಲು ಎಂಎಸ್‌ ಧೋನಿ ಕಾರಣ, ಸ್ಟಿಫನ್‌ ಅಲ್ಲ ಎಂದು ಹೇಮಾಂಗ್‌ ಬದಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ʻಏನಾಯಿತು ಎಂದು ನನಗೂ ಅರ್ಥವಾಗಲಿಲ್ಲʼ: ಡೆಲ್ಲಿ ಪತನದ ಬಗ್ಗೆ ಅಕ್ಷರ್‌ ಪಟೇಲ್‌ ಹೇಳಿದ್ದಿದು!

ಇದೀಗ ಹೇಮಾಂಗ್‌ ಬದಾನಿ ಮಾರ್ಗದರ್ಶನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಪ್ರಸ್ತುತ ಸತತ ವೈಫಲ್ಯ ಅನುಭವಿಸುತ್ತಿದೆ. ಇಲ್ಲಿಯವರೆಗೂ ಆಡಿದ 8 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ. ಅಂದ ಹಾಗೆ ಆರ್‌ಸಿಬಿ ಎದುರು ಡೆಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಕೆ ಶ್ರೀಕಾಂತ್‌, ಹೇಮಾಂಗ್‌ ಬದಾನಿ ಅವರ ಜನ್ಮವನ್ನು ಜಾಲಾಡಿದ್ದಾರೆ.

ಹೇಮಾಂಗ್‌ ಬದಾನಿಗೆ ಶ್ರೀಕಾಂತ್‌ ತಿರುಗೇಟು

"ಹೇ ಹೇಮಾಂಗ್‌. ಬೇರೆಯವರ ಬಗ್ಗೆ ಮಾತನಾಡುವುದಕ್ಕೂ ಮೊದಲು ನೀವು ನಿಮ್ಮ ಬಗ್ಗೆ ಎಚ್ಚರಿಕೆಯಿಂದ ಇರಿ. ʻಜೀವನದಲ್ಲಿ ನಾವು ಎಂದಿಗೂ ಜಾಸ್ತಿ ಮಾತನಾಡಬಾರದುʼ ಎಂದು ನಾನು ಯಾವಾಗಲೂ ಹೇಳುತ್ತಲೇ ಇರುತ್ತೇನೆ. ಅವರು ಸಾಕಷ್ಟು ಮಾತನಾಡಿದ್ದಾರೆ. ಆದರೆ ಈಗ ಅವರು ಬಾಯಿ ಮುಚ್ಚಿಕೊಂಡಿದ್ದಾರೆ ಹಾಗೂ ಏನಾಗುತ್ತಿದೆ ಎಂದು ನೋಡುತ್ತಿದ್ದಾರೆ," ಎಂದು ಕೃಷ್ಣಮಾಚಾರಿ ಶ್ರೀಕಾಂತ್‌ ಡೆಲ್ಲಿ ಕೋಚ್‌ಗೆ ತಿರುಗೇಟು ನೀಡಿದ್ದಾರೆ.

RCB vs DC: 8 ರನ್‌ಗೆ 6 ವಿಕೆಟ್‌ ಕಳೆದುಕೊಂಡು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್!

"ಪ್ರತಿಯೊಬ್ಬರು ಇದನ್ನು ನೆನೆಪಿಸಿಕೊಳ್ಳುತ್ತಿದ್ದಾರೆ ಹಾಗೂ ಅವರನ್ನು (ಹೇಮಾಂಗ್‌ ಬದಾನಿ) ಟೀಕಿಸುತ್ತಿದ್ದಾರೆ. ಬೇರೆಯವರ ಬಗ್ಗೆ ಏಕೆ ಮಾತನಾಡಬೇಕು? ನೀವು ನಿಮ್ಮ ಕೆಲಸದ ಬಗ್ಗೆ ಜಾಗರೂಕರಾಗಿರಬೇಕಾಗಿತ್ತು. ಕೇವಲ ಎಂಎಸ್‌ ಧೋನಿಯಿಂದ ಮಾತ್ರ ಸ್ಟೀಫನ್‌ ಫ್ಲೆಮಿಂಗ್‌ ಗೆದ್ದಿದ್ದಾರೆಂದು ಹೇಳಲು ನೀವು ಯಾರು? ನೀವು ಏನು ಸಾಧನೆ ಮಾಡಿದ್ದೀರಿ? ಏನಾದರೂ ವಿಶೇಷವಾದುದನ್ನು ಮಾಡಿದ್ದೀರಾ? ಇಲ್ಲವೇ ಇಲ್ಲ," ಎಂದು ಮಾಜಿ ಕ್ರಿಕೆಟಿಗ ಹೇಮಾಂಗ್‌ ಬದಾನಿಗೆ ಚುಚ್ಚಿದ್ದಾರೆ.

2025ರಲ್ಲಿ ಹೇಮಾಂಗ್‌ ಬದಾನಿ ಏನು ಹೇಳಿದ್ದರು?

“ಫ್ಲೆಮಿಂಗ್ ಇಷ್ಟು ದೊಡ್ಡ ಕೋಚ್ ಆಗಿದ್ದರೆ, ಐಪಿಎಲ್ ಹೊರತುಪಡಿಸಿ ಬೇರೆಡೆ ಏಕೆ ಗೆಲುವು ಸಾಧಿಸಿಲ್ಲ?” ಎಂದು ಬದಾನಿ ಪ್ರಶ್ನಿಸಿದ್ದಾರೆ. ಫ್ಲೆಮಿಂಗ್ ಅವರ SA20, ದಿ ಹಂಡ್ರೆಡ್ ಮತ್ತು ಬಿಗ್ ಬ್ಯಾಶ್ ಲೀಗ್ ಅನುಭವಗಳನ್ನು ಬದಾನಿ ಉಲ್ಲೇಖಿಸಿದ್ದರು. “ಸಿಎಸ್‌ಕೆ ಗೆಲ್ಲುವುದಕ್ಕೆ ಕಾರಣ ಧೋನಿ. ಧೋನಿಯೇ ಮುಖ್ಯ ವ್ಯಕ್ತಿ... ಯಾರಾದರೂ ಫ್ಲೆಮಿಂಗ್ ಒಳ್ಳೆಯ ಕೋಚ್ ಎಂದು ಹೇಳಿದರೆ, ನಾನು ಅದನ್ನು ಒಪ್ಪುವುದಿಲ್ಲ,” ಎಂದು ಹೇಮಾಂಗ್‌ ಬದಾನಿ ಹೇಳಿದ್ದರು.