ʻಏನಾಯಿತು ಎಂದು ನನಗೂ ಅರ್ಥವಾಗಲಿಲ್ಲʼ: ಡೆಲ್ಲಿ ಪತನದ ಬಗ್ಗೆ ಅಕ್ಷರ್ ಪಟೇಲ್ ಹೇಳಿದ್ದಿದು!
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ತಂಡದ ಪ್ರದರ್ಶನ ಏಕೆ ಅಚಾನಕ್ ಆಗಿ ಕುಸಿದಿದೆ ಎಂಬುದರ ಬಗ್ಗೆ ತಮಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯವಾಗಿ ಸೋಲಿಸಿತು.
ಡೆಲ್ಲಿ ನಾಯಕ ಅಕ್ಷರ ಪಟೇಲ್ -
ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC)ಹೀನಾಯವಾಗಿ ಸೋಲು ಅನುಭವಿಸಿದ ಬಳಿಕ ನಾಯಕ ಅಕ್ಷರ್ ಪಟೇಲ್ (Axar Patel) ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಮ್ಮ ತಂಡ ಏನು ತಪ್ಪು ಮಾಡುತ್ತಿದೆ ಅಥವಾ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಮಧ್ಯೆದಲ್ಲಿ ನಮ್ಮ ತಂಡದ ತ್ವರಿತ ಕುಸಿತಕ್ಕೆ ಕಾರಣ ಏನೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ. ಆರ್‌ಸಿಬಿ ಎದುರು ಡೆಲ್ಲಿ ತಂಡ 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಆ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಆರ್‌ಸಿಬಿ ಎದುರು ಬೆಂಗಳೂರಿನ ಪಂದ್ಯದಲ್ಲಿ ಗೆಲುವು ಪಡೆದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಹಾಗೂ ಆರ್‌ಸಿಬಿ ಎದುರು ಸೋತಿದೆ. ಅಂದಹಾಗೆ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 264 ರನ್‌ಗಳನ್ನು ಕಲೆ ಹಾಕಿದ್ದರೂ ಡೆಲ್ಲಿ ಈ ಪಂದ್ಯವನ್ನು ಸೋತಿತ್ತು. 265 ರನ್‌ಗಳ ಗುರಿಯನ್ನು ಪಂಜಾಬ್ ಕಿಂಗ್ಸ್ 18.5 ಓವರ್‌ಗಳಿಗೆ ತಲುಪಿತ್ತು. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ತಂಡ ಎಂಬ ದಾಖಲೆಯನ್ನು ಪಂಜಾಬ್ ಬರೆದಿತ್ತು.
ಸೋಮವಾರ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೇವಲ 75 ರನ್‌ಗಳಿಗೆ ಆಲ್‌ಔಟ್ ಆಯಿತು. ಜಾಶ್ ಹೇಝಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರ ಅದ್ಭುತ ಬೌಲಿಂಗ್ ಸ್ಪೆಲ್ ಇದಕ್ಕೆ ಪ್ರಮುಖ ಕಾರಣವಾಗಿತ್ತು. 76 ರನ್‌ಗಳ ಗುರಿಯನ್ನು ಆರ್‌ಸಿಬಿ ಸುಲಭವಾಗಿ ಕೇವಲ 6.3 ಓವರ್‌ಗಳಲ್ಲಿ ಸಾಧಿಸಿತು.
ಡಿಸಿ ನಾಯಕ ಅಕ್ಷರ್ ಪಟೇಲ್ ಹೇಳಿಕೆ
“ನನಗೂ ಏನಾಯಿತು ಎಂಬುದು ತಿಳಿದಿಲ್ಲ. ಕ್ರಿಕೆಟ್‌ನಲ್ಲಿ ನೀವು ಯಾವಾಗಲೂ ಎಚ್ಚರಿಕೆಯಿಂದ ಇರಬೇಕು. ಈ ಸೋಲುಗಳನ್ನು ಮರೆತು ಮುಂದಕ್ಕೆ ಸಾಗಬೇಕಾಗಿದೆ,” ಎಂದು ಅಕ್ಷರ್ ಪಟೇಲ್ ಪಂದ್ಯದ ನಂತರ ಹೇಳಿದರು. ತಂಡದ ಪ್ರದರ್ಶನದ ಬಗ್ಗೆ ಸೂಕ್ಷ್ಮವಾಗಿ ವಿಮರ್ಶೆ ಮಾಡಬಹುದು, ಆದರೆ ಐಪಿಎಲ್‌ನಲ್ಲಿ ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಬಾರದು ಎಂದು ಅವರು ಸಲಹೆ ನೀಡಿದರು.
“ನೀವು ಅದರ ಬಗ್ಗೆ ಯೋಚಿಸಬಹುದು, ಆದರೆ ‘ಇದಾಗಿದ್ದರೆ, ಅದಾಗುತ್ತಿದ್ದರೆ’ ಎಂಬ ಚರ್ಚೆಗಳು ಮುಂದುವರಿಯುತ್ತವೆ. ಪಂಜಾಬ್ ವಿರುದ್ಧ ಒಂದು ಕ್ಯಾಚ್ ಅಥವಾ ಜಿಟಿ ವಿರುದ್ಧ ಒಂದು ರನ್ —ಇವುಗಳಲ್ಲಿ ಯಾವುದಾದರೂ ಒಂದು ನಮ್ಮ ಪರವಾಗಿ ನಡೆಯಬೇಕಿತ್ತು. ಆದರೆ ನೀವು ಯಾವಾಗಲೂ ಎಚ್ಚರಿಕೆಯಿಂದ ಇರಬೇಕು ಮತ್ತು ನಿಮ್ಮ ಪ್ರದರ್ಶನದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು. ಐಪಿಎಲ್‌ನಲ್ಲಿ ಯಾವುದನ್ನೂ ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದು ಎಷ್ಟು ಕಠಿಣ ಟೂರ್ನಿ ಎಂಬುದು ನಿಮಗೆ ಗೊತ್ತಿದೆ. ಹಳೆಯದನ್ನು ಯೋಚಿಸದೆ ಭವಿಷ್ಯದತ್ತ ಗಮನ ಹರಿಸಬೇಕು,” ಎಂದು ಅವರು ಸೇರಿಸಿದ್ದಾರೆ.
ಸಕಾರಾತ್ಮಕವಾಗಿ ಉಳಿಯಬೇಕೆಂದ ಅಕ್ಷರ್ ಪಟೇಲ್
ತಂಡ ಈ ಸೋಲಿನಿಂದ ಬೇಗನೆ ಹೊರಬಂದು, ಟೂರ್ನಿಯ ಎರಡನೇ ಹಂತದಲ್ಲಿ ಧನಾತ್ಮಕ ಮನೋಭಾವವನ್ನು ಉಳಿಸಿಕೊಳ್ಳಬೇಕೆಂದು ಅವರು ಹೇಳಿದ್ದಾರೆ. “ನಾವು ಮುಂದಕ್ಕೆ ಸಾಗಲೇಬೇಕು. ನೀವು ನಕಾರಾತ್ಮಕವಾಗಿದ್ದರೂ ಆಡಬೇಕಾಗುತ್ತದೆ, ಧನಾತ್ಮಕವಾಗಿದ್ದರೂ ಆಡಬೇಕಾಗುತ್ತದೆ. ಅದನ್ನೇ ನಾನು ತಂಡಕ್ಕೂ ಹೇಳುತ್ತೇನೆ — ಧನಾತ್ಮಕವಾಗಿರಿ ಮತ್ತು ಈ ಸೋಲಿನಿಂದ ಮುಂದೆ ಸಾಗಿರಿ,” ಎಂದು ಅಕ್ಷರ್ ಪಟೇಲ್ ತಮ್ಮ ತಂಡದ ಆಟಗಾರರಿಗೆ ಸಲಹೆ ನೀಡಿದ್ದಾರೆ.