ಸಚಿನ್ ತೆಂಡೂಲ್ಕರ್ vs ವಿರಾಟ್ ಕೊಹ್ಲಿ ನಡುವೆ ಗ್ರೇಟ್ ಬ್ಯಾಟ್ಸ್‌ಮನ್ ಯಾರು? ಆರ್ ಅಶ್ವಿನ್ ಉತ್ತರ ಹೀಗಿದೆ..!
ಭಾರತೀಯ ಕ್ರಿಕೆಟ್‌ನ ಅತ್ಯಂತ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಹೋಲಿಕೆ ಮಾಡಲು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ನಿರಾಕರಿಸಿದ್ದಾರೆ. ಈ ಇಬ್ಬರೂ ಬ್ಯಾಟ್ಸ್‌ಮನ್, ಆಯಾ ತಲೆಮಾರಿನಲ್ಲಿ ಆಡಿದ್ದಾರೆಂದು ಅವರು ಹೇಳಿದ್ದಾರೆ.
ಸಚಿನ್-ಕೊಹ್ಲಿ ನಡುವಣ ಹೋಲಿಕೆಯನ್ನು ನಿರಾಕರಿಸಿದ ಅಶ್ವಿನ್. -
ನವದೆಹಲಿ: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) ಹಾಗೂ ವಿರಾಟ್ ಕೊಹ್ಲಿ (Virat Kohli) ಇದ್ದಾರೆ. ಈ ಇಬ್ಬರ ನಡುವಣ ಹೋಲಿಕೆಗಳು ನಿರಂತರವಾಗಿ ನಡೆಯುತ್ತಲೇ ಇವೆ ಹಾಗೂ ಹಲವು ಮಾಜಿ ಕ್ರಿಕೆಟಿಗರೂ ಕೂಡ ಕೊಹ್ಲಿ ಹಾಗೂ ಸಚಿನ್ ನಡುವಣ ಹೋಲಿಕೆಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಇದೀಗ ಈ ಸಾಲಿಗೆ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ಸೇರ್ಪಡೆಯಾಗಿದ್ದಾರೆ. ಆದರೆ, ಅಶ್ವಿನ್ ತಮ್ಮ ವಿಭಿನ್ನ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಈ ಇಬ್ಬರೂ ದಿಗ್ಗಜರ ನಡುವೆ ಹೋಲಿಕೆ ಮಾಡಲು ಅವರ ನಿರಾಕರಿಸಿದ್ದಾರೆ. ಏಕೆಂದರೆ ಇವರು ವಿಭಿನ್ನ ತಲೆ ಮಾರಿನಲ್ಲಿ ಆಡಿದ್ದಾರೆಂದು ತಿಳಿಸಿದ್ದರೆ.
ಸಚಿನ್ ತೆಂಡೂಲ್ಕರ್ ಅವರು ಬ್ಯಾಟಿಂಗ್ ಸ್ನೇಹವಲ್ಲದ ವಿಭಿನ್ನ ತಲೆಮಾರಿನಲ್ಲಿ ಆಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಗಳನ್ನು ಕೊಹ್ಲಿ ಮುರಿದಿದ್ದಾರೆ. ಒಡಿಐ ಕ್ರಿಕೆಟ್‌ನಲ್ಲಿ ಶತಕಗಳ ದಾಖಲೆಯನ್ನು ಕೊಹ್ಲಿ ಈಗಾಗಲೇ ಮುರಿದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ಅವರ 100 ಶತಕಗಳ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಇನ್ನೂ ಕೇವಲ 14 ಶತಕಗಳ ಅಗತ್ಯವಿದೆ.
IND vs WI: ಎರಡನೇ ಒಡಿಐನಲ್ಲಿ ಮೊಹಮ್ಮದ್ ಸಿರಾಜ್ ಆಡದೇ ಇರಲು ಕಾರಣವೇನು? ಇಲ್ಲಿದೆ 2 ಕಾರಣ!
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆರ್ ಅಶ್ವಿನ್, "ಎರಡು ಎಣಿಕೆಗಳಲ್ಲಿ ವಿರಾಟ್ ಕೊಹ್ಲಿಗಿಂತ ಸಚಿನ್ ತೆಂಡೂಲ್ಕರ್ ಮುಂದಿದ್ದಾರೆಂದು ನಾನು ತಲೆ ಎತ್ತಿ ಹೇಳುತ್ತೇನೆ. ನಾನು ಸಚಿನ್ ಅವರ ದೊಡ್ಡ ಅಭಿಮಾನಿ. ಭಾರತೀಯ ಕ್ರಿಕೆಟ್‌ಗೆ ಸಚಿನ್ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇದು ವಿರಾಟ್ ಕೊಹ್ಲಿಯ ಎಡವಟ್ಟು ಅಲ್ಲ. ವಿರಾಟ್ ಕೊಹ್ಲಿ ಯಾವುದೇ ತಲೆಮಾರಿನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರೂ ಅವರು ಚಾಂಪಿಯನ್ ಆಟಗಾರನಾಗುತ್ತಿದ್ದರು. ಇದರ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ," ಎಂದು ಹೇಳಿದ್ದಾರೆ.
“ಆದರೆ ನಿಯಮಗಳನ್ನು ಗಮನಿಸಿ. ನಿನ್ನೆಯ ಮೊದಲ ಇನಿಂಗ್ಸ್‌ನಲ್ಲೂ ವೆಸ್ಟ್ ಇಂಡೀಸ್ ಬ್ಯಾಟ್ ಮಾಡುತ್ತಿದ್ದಾಗ 34 ಓವರ್‌ಗಳ ಬಳಿಕ ಹೊಸ ಚೆಂಡನ್ನು ಬಳಸಬೇಕಾಯಿತು. ಹಗಲು ಬೆಳಕಿನಲ್ಲಿ ಚೆಂಡು ಸಂಪೂರ್ಣ ಹಳೆಯದಾಗಿತ್ತು. ಸಚಿನ್ ತೆಂಡೂಲ್ಕರ್ ಹಗಲಿನಲ್ಲೇ ಸಾಕಷ್ಟು 50 ಓವರ್‌ಗಳ ಕ್ರಿಕೆಟ್ ಆಡಿದ್ದಾರೆ. ಎರಡು ತಲೆಮಾರಿನ ಆಟಗಾರರನ್ನು ಹೋಲಿಕೆ ಮಾಡುವುದು ನನ್ನ ದೃಷ್ಟಿಯಲ್ಲಿ ಸಂಪೂರ್ಣ ಅನ್ಯಾಯದ ಸಂಗತಿ,” ಎಂದು ಅಶ್ವಿನ್ ತಿಳಿಸಿದ್ದಾರೆ.
ಭಾರತ ತಂಡಕ್ಕೆ ಮುಂದಿನ ಚೀಫ್ ಸೆಲೆಕ್ಟರ್ ಸ್ಥಾನಕ್ಕೆ ಪ್ರಜ್ಞಾನ್ ಓಜಾರನ್ನು ಪರಿಗಣಿಸಲು ಕಾರಣವೇನು?
ಇದೇ ವೇಳೆ ವಿರಾಟ್ ಕೊಹ್ಲಿ ಅವರೊಂದಿಗಿನ ತಮ್ಮ ಬಾಂಧವ್ಯದ ಬಗ್ಗೆಯೂ ಅಶ್ವಿನ್ ಮಾತನಾಡಿದ್ದಾರೆ. ಕಳೆದ ಐದರಿಂದ ಏಳು ವರ್ಷಗಳಲ್ಲಿ ಕೊಹ್ಲಿ ಅವರೊಂದಿಗಿನ ಸಂಬಂಧ ಮತ್ತಷ್ಟು ಉತ್ತಮವಾಗಿದೆ ಎಂದು ಅವರು ತಿಳಿಸಿದ್ದಾರೆ. “ವಿರಾಟ್ ಕೊಹ್ಲಿ ಅವರೊಂದಿಗಿನ ನನ್ನ ಸಂಬಂಧ ಕಳೆದ ಐದಾರು ಅಥವಾ ಏಳು ವರ್ಷಗಳಲ್ಲಿ ಸಾಕಷ್ಟು ಸುಧಾರಿಸಿದೆ. ನಮ್ಮಿಬ್ಬರ ನಡುವಿನ ಬಾಂಧವ್ಯ ಮತ್ತಷ್ಟು ಉತ್ತಮವಾಗಿದೆ,” ಎಂದು ಅಶ್ವಿನ್ ಹೇಳಿದ್ದಾರೆ.
100 ಅಂತಾರಾಷ್ಟ್ರೀಯ ಶತಕಗಳ ಬಗ್ಗೆ ಪ್ರತಿಕ್ರಿಯೆ ನೀಡಿ, “ತಾರ್ಕಿಕವಾಗಿ ನೋಡಿದರೆ, ಕೊಹ್ಲಿ ಈ ಸಾಧನೆ ಮಾಡುವುದು ಸಾಧ್ಯವಿದೆ. ಆದರೆ ಅವರು 100 ಶತಕಗಳ ದಾಖಲೆಯನ್ನು ಸರಿಗಟ್ಟಿದರೆ, ನಾನು ಅವರಿಗೆ ಗೌರವಪೂರ್ವಕವಾಗಿ ತಲೆಬಾಗುತ್ತೇನೆ. ಅದು ನಿಜಕ್ಕೂ ಅದ್ಭುತ ಸಾಧನೆಯಾಗಲಿದೆ. ನನ್ನ ಮಾತನ್ನು ನೆನಪಿಟ್ಟುಕೊಳ್ಳಿ, ಇದು ಅಸಾಧಾರಣ ಸಾಧನೆಯಾಗಿರುತ್ತದೆ. ಕೊಹ್ಲಿ ಈ ಸಾಧನೆ ಮಾಡಿದರೆ, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ನಡುವಿನ ಹೋಲಿಕೆಯ ಬಗ್ಗೆ ಮತ್ತೊಮ್ಮೆ ಇದೇ ಪ್ರಶ್ನೆ ಕೇಳಿ. ಆಗ ಯಾವುದೇ ಅನುಮಾನವಿಲ್ಲದೆ ಇಬ್ಬರೂ ಸಮಾನ ಮಟ್ಟದ ಆಟಗಾರರು ಎಂದು ನಾನು ಹೇಳುತ್ತೇನೆ,” ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.