ʻಗೌತಮ್ ಗಂಭೀರ್ ಮಾತು ಸರಿಯಾಗಿದೆʼ: ಭಾರತ ತಂಡದ ಸಮಸ್ಯೆಯನ್ನು ಗುರುತಿಸಿದ ರವಿ ಶಾಸ್ತ್ರಿ!
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಗೆಲುವಿನ ಹೊರತಾಗಿಯೂ ಭಾರತ ತಂಡದಲ್ಲಿನ ಸಮಸ್ಯೆಗಳನ್ನು ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ರಿವೀಲ್ ಮಾಡಿದ್ದಾರೆ. ಈ ವಿಷಯವನ್ನೇ ಗೌತಮ್ ಗಂಭೀರ್ ಕೂಡ ಹೇಳಿದ್ದಾರೆ. ಇದನ್ನು ನಾನು ಒಪ್ಪಿಕೊಳ್ಳುತ್ತೇನ ಎಂದು ಅವರು ಹೇಳಿದ್ದಾರೆ.
ಗೌತಮ್ ಗಂಭೀರ್ ಮಾತಿಗೆ ಒಪ್ಪಿಗೆ ಸೂಚಿಸಿದ ರವಿ ಶಾಸ್ತ್ರಿ. -
ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ (IND vs NZ) ಹೀನಾಯ ಸೋಲು ಅನುಭವಿಸಿದ್ದ ಭಾರತ ತಂಡ, ಐದನೇ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಆದರೆ ಸರಣಿಯಲ್ಲಿ ಭಾರತದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಕಳವಳ ವ್ಯಕ್ತವಾಗಿದ್ದು, ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರ ಅಭಿಪ್ರಾಯಕ್ಕೆ ಮಾಜಿ ಆಟಗಾರ ರವಿಶಾಸ್ತ್ರಿ (Ravi Shastri) ಕೂಡ ಧ್ವನಿಗೂಡಿಸಿದ್ದಾರೆ.
ಮೌಂಟ್ ಮೌಂಗನುಯಿಯ ಬೇ ಓವಲ್ನಲ್ಲಿ ನಡೆದಿದ್ದ ನಾಲ್ಕನೇ ಏಕದಿನ ಪಂದ್ಯದಲ್ಲಿ ಸ್ವಿಂಗ್ ಮತ್ತು ಸೀಮ್ಗೆ ನೆರವಾಗಿದ್ದ ಪಿಚ್ನಲ್ಲಿ ಭಾರತದ ಬ್ಯಾಟಿಂಗ್ ಸಂಪೂರ್ಣ ಕುಸಿದಿತ್ತು. ತಂಡ ಕೇವಲ 89 ರನ್ಗಳಿಗೆ ಆಲೌಟ್ ಆಗಿತ್ತು. ಐದನೇ ಪಂದ್ಯದಲ್ಲಿ ಗೆದ್ದರೂ ಭಾರತ ಗಳಿಸಿದ್ದು 209 ರನ್ ಮಾತ್ರ.
ನಾಲ್ಕನೇ ಪಂದ್ಯದ ಸೋಲಿನ ಬಳಿಕ ಮಾತನಾಡಿದ್ದ ಗೌತಮ್ ಗಂಭೀರ್, ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತದ ಬ್ಯಾಟಿಂಗ್ ಪ್ರದರ್ಶನ ಕಳವಳಕಾರಿ ಸಂಗತಿಯಾಗಿದೆ ಎಂದು ಒಪ್ಪಿಕೊಂಡಿದ್ದರು. ತಂಡ ಪದೇ-ಪದೆ ವಿಕೆಟ್ಗಳನ್ನು ಕಳೆದುಕೊಳ್ಳುತ್ತಿದ್ದು, ದೊಡ್ಡ ಮೊತ್ತ ಗಳಿಸಲು ವಿಫಲವಾಗುತ್ತಿದೆ ಎಂದು ಹೇಳಿದ್ದರು. ಗಂಭೀರ್ ಅವರ ಈ ಕಳವಳ ಸರಿಯಾಗಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
IND vs NZ: ಮೊದಲನೇ ಟೆಸ್ಟ್ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಆರಿಸಿದ ದೊಡ್ಡ ಗಣೇಶ್!
ಗೌತಮ್ ಗಂಭೀರ್ ಹೇಳಿದ್ದೇನು?
ನಾಲ್ಕನೇ ಏಕದಿನ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಗಂಭೀರ್, ನ್ಯೂಜಿಲೆಂಡ್ನಲ್ಲಿನ ಪರಿಸ್ಥಿತಿಗಳು 2027ರ ವಿಶ್ವಕಪ್ ವೇಳೆ ದಕ್ಷಿಣ ಆಫ್ರಿಕಾದಲ್ಲಿ ಎದುರಾಗಬಹುದಾದ ಪರಿಸ್ಥಿತಿಗಳಿಗೆ ಹತ್ತಿರವಾಗಿವೆ ಎಂದು ಎಚ್ಚರಿಸಿದ್ದರು.
“90ರ ಆಸುಪಾಸಿನಲ್ಲಿ ತಂಡ ಆಲೌಟ್ ಆದರೆ ಕಳವಳವಾಗುವುದು ಸಹಜ. ನನಗೂ ಕಳವಳವಿದೆ. ವಿಶ್ವಕಪ್ ವೇಳೆ ನಾವು ಎದುರಿಸಬಹುದಾದ ಪರಿಸ್ಥಿತಿಗಳಿಗೆ ಇಲ್ಲಿನ ವಾತಾವರಣ ಅತ್ಯಂತ ಹತ್ತಿರವಾಗಿದೆ,” ಎಂದು ಗಂಭೀರ್ ಹೇಳಿದ್ದರು.
“ಬೌಲರ್ಗಳಿಗೆ ಇಲ್ಲಿ ನೆರವು ಸಿಗುತ್ತಿದೆ. ಹೀಗಾಗಿ ಮಾನಸಿಕವಾಗಿ ಮಾತ್ರವಲ್ಲ, ಕೌಶಲದ ದೃಷ್ಟಿಯಿಂದಲೂ ನಾವು ಸಿದ್ಧರಾಗಿರಬೇಕು. ನನಗೆ ಹೆಚ್ಚು ಕಳವಳವಾಗಿರುವುದು ರನ್ಗಳ ಬಗ್ಗೆ ಅಲ್ಲ. ಕೇವಲ 26 ಅಥವಾ 27 ಓವರ್ಗಳಲ್ಲೇ ನಾವು ಆಲೌಟ್ ಆಗಿರುವುದು ದೊಡ್ಡ ಸಮಸ್ಯೆ. ಇದನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳಬೇಕು” ಎಂದು ಅವರು ತಿಳಿಸಿದ್ದರು.
ಭಾರತ ಅಂಡರ್-19 ಏಷ್ಯಾ ಕಪ್ ಗೆದ್ದರೂ ಪಾಕಿಸ್ತಾನ ಬಲಿಷ್ಠ ತಂಡ ಎಂದ ಶೋಯೆಬ್ ಅಖ್ತರ್!
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಎದುರಿಸಲಾಗದ ಎಸೆತಗಳಿರುವುದಿಲ್ಲ. ಮ್ಯಾಟ್ ಹೆನ್ರಿ ಉತ್ತಮವಾಗಿ ಬೌಲ್ ಮಾಡಿದ್ದರೂ, ಅದನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ನಮ್ಮಲ್ಲಿರಬೇಕು ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದರು. ಹಿಂದಿನ ಪಂದ್ಯದಲ್ಲೂ ಭಾರತ 111 ರನ್ಗಳಿಗೆ ಏಳು ವಿಕೆಟ್ ಕಳೆದುಕೊಂಡಿದ್ದನ್ನು ಅವರು ನೆನಪಿಸಿದ್ದರು.
300 ರನ್ಗಳ ಗುರಿಯೊಂದೇ ಇರಬಾರದು: ರವಿ ಶಾಸ್ತ್ರಿ
ಐದನೇ ಏಕದಿನ ಪಂದ್ಯದ ಬಳಿಕ ಸೋನಿ ಸ್ಪೋರ್ಟ್ಸ್ನಲ್ಲಿ ಮಾತನಾಡಿದ ರವಿಶಾಸ್ತ್ರಿ, ಗಂಭೀರ್ ಅವರ ಕಳವಳವನ್ನು ಸಮರ್ಥಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ವಿಶ್ವಕಪ್ ಟೂರ್ನಿಗೂ ಮುನ್ನ ಇಂತಹ ಪರಿಸ್ಥಿತಿಗಳಲ್ಲಿ ಬ್ಯಾಟಿಂಗ್ ಸುಧಾರಿಸಿಕೊಳ್ಳುವುದು ಅಗತ್ಯ ಎಂದು ಹೇಳಿದ್ದಾರೆ.
“ಕೊನೆಯ ಸುದ್ದಿಗೋಷ್ಠಿಯಲ್ಲಿ ಗಂಭೀರ್ ಹೇಳಿದ್ದು ಸರಿಯಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಎದುರಾಗಬಹುದಾದ ಪರಿಸ್ಥಿತಿಗಳಿಗೆ ಇವು ಅತ್ಯಂತ ಹತ್ತಿರವಾಗಿವೆ. ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತೇವೆ. ಬ್ಯಾಟರ್ಗಳ ಜವಾಬ್ದಾರಿಯುತ ಆಟ ಇಲ್ಲಿ ಮುಖ್ಯವಾಗುತ್ತದೆ. ಕೆಲವೊಮ್ಮೆ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಮಯ ತೆಗೆದುಕೊಳ್ಳಬೇಕಾಗುತ್ತದೆ” ಎಂದು ಶಾಸ್ತ್ರಿ ತಿಳಿಸಿದ್ದಾರೆ.
“ಪ್ರತಿ ಬಾರಿಯೂ 300ರಿಂದ 320 ರನ್ಗಳನ್ನು ಗಳಿಸುವ ಗುರಿ ಇಟ್ಟುಕೊಳ್ಳಬಾರದು. ಕೆಲವು ಪಿಚ್ಗಳಲ್ಲಿ 260 ಅಥವಾ 270 ರನ್ಗಳ ಮೊತ್ತವೂ ಗೆಲುವು ತಂದುಕೊಡಬಹುದು,” ಎಂದು ಅವರು ಸಲಹೆ ನೀಡಿದ್ದಾರೆ.