ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ಅಂಡರ್‌-19 ಏಷ್ಯಾ ಕಪ್‌ ಗೆದ್ದರೂ ಪಾಕಿಸ್ತಾನ ಬಲಿಷ್ಠ ತಂಡ ಎಂದ ಶೋಯೆಬ್‌ ಅಖ್ತರ್‌!

ಅಂಡರ್‌-19 ಏಷ್ಯಾಕಪ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ, ಒಂದು ವಿಕೆಟ್ ರೋಚಕ ಗೆಲುವು ಸಾಧಿಸಿ ದಾಖಲೆಯ ಒಂಬತ್ತನೇ ಬಾರಿ ಚಾಂಪಿಯನ್ ಆಯಿತು. ಭಾರತದ ಆಟಗಾರರ ಆಕ್ರಮಣಕಾರಿ ಸಂಭ್ರಮಕ್ಕೆ ಶೋಯೆಬ್ ಅಖ್ತರ್ ಅಸಮಾಧಾನ ವ್ಯಕ್ತಪಡಿಸಿದ್ದು, ಇಡೀ ಟೂರ್ನಿಯಲ್ಲಿ ಪಾಕಿಸ್ತಾನವೇ ಬಲಿಷ್ಠ ತಂಡವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಅಂಡರ್‌-19 ಏಷ್ಯಾ ಕಪ್‌ ಗೆದ್ದರೂ ಪಾಕ್‌ ಬಲಿಷ್ಠ ತಂಡ: ಅಖ್ತರ್‌!

ಭಾರತ ಅಂಡರ್‌-19 ತಂಡದ ಆಕ್ರಮಣಕಾರಿ ಸಂಭ್ರಮದ ಬಗ್ಗೆ ಶೋಯೆಬ್‌ ಅಖ್ತರ್‌ ಪ್ರತಿಕ್ರಿಯೆ. -

Profile
Ramesh Kote Nov 16, 2026 4:35 PM

ನವದೆಹಲಿ: ಅಂಡರ್‌ 19 ಏಷ್ಯಾಕಪ್ (U-19 Asia Cup 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ (IND vs PAK) ಪಾಕಿಸ್ತಾನ ವಿರುದ್ಧ ಭಾರತ ತಂಡ, ಒಂದು ವಿಕೆಟ್ ರೋಚಕ ಗೆಲುವು ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. 338 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ, ಕೊನೆಯ ಎಸೆತದಲ್ಲಿ ಗೆಲುವಿನ ಗಡಿ ತಲುಪಿತು. ಆ ಮೂಲಕ ಕಿರಿಯರ ಏಷ್ಯಾಕಪ್ ಇತಿಹಾಸದಲ್ಲಿ ಭಾರತ ದಾಖಲೆಯ ಒಂಬತ್ತನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಶನಿವಾರ ಅಲ್ ಅಮೆರತ್‌ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತದ ಯುವ ಆಟಗಾರರು ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಮೊಹಿತ್ ಉಲ್ವಾ ಮತ್ತು ಮನಾಲ್ ಚೌಹಾಣ್ ಅವರ ಅಮೋಘ ಬ್ಯಾಟಿಂಗ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿತು. ಈ ಜೋಡಿ ಕೇವಲ 35 ಎಸೆತಗಳಲ್ಲಿ 57 ರನ್‌ಗಳ ನಿರ್ಣಾಯಕ ಜೊತೆಯಾಟವಾಡಿತು.

ಮೊಹಿತ್ ಉಲ್ವಾ 26 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿ ಮ್ಯಾಚ್‌ ವಿನ್ನಿಂಗ್‌ ಬೌಂಡರಿ ಬಾರಿಸಿದರು. ಮತ್ತೊಂದೆಡೆ ಮನಾಲ್ ಚೌಹಾಣ್ 32 ಎಸೆತಗಳಲ್ಲಿ 47 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಗೆಲುವಿನ ಬಳಿಕ ಭಾರತ ತಂಡದ ಆಟಗಾರರು, ಪಾಕಿಸ್ತಾನ ತಂಡದ ಆಟಗಾರರ ಎದುರು ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಯಿತು.

U19 ಏಷ್ಯಾ ಕಪ್‌: Last ball Sensation! ಥಂಡಾ ಹೊಡೆದ ಪಾಕ್! ಟೀಮ್‌ ಇಂಡಿಯಾ ರಣಕೇಕೆ!

ಭಾರತೀಯ ಆಟಗಾರರ ವರ್ತನೆ ಬಗ್ಗೆ ಶೋಯೆಬ್ ಅಖ್ತರ್ ಪ್ರತಿಕ್ರಿಯೆ

ಭಾರತದ ಯುವ ಆಟಗಾರರ ಆಕ್ರಮಣಕಾರಿ ಸಂಭ್ರಮದ ಕುರಿತು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಪ್ರತಿಕ್ರಿಯಿಸಿದ್ದಾರೆ. ಮೈದಾನದಲ್ಲಿ ಆಕ್ರಮಣಶೀಲತೆ ಇರಬಹುದು. ಆದರೆ ಆಟದ ಜತೆಗೆ ಮೌಲ್ಯಗಳನ್ನೂ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

“ನಾವು ಕೇವಲ ಕ್ರಿಕೆಟ್ ಆಡಬೇಕಂತಿಲ್ಲ, ಮೌಲ್ಯಗಳನ್ನೂ ಪಾಲಿಸಬೇಕು. ಇಂದಿಗೂ ಸಚಿನ್ ತೆಂಡೂಲ್ಕರ್ ಬಗ್ಗೆ ಒಳ್ಳೆಯ ಮಾತುಗಳನ್ನೇ ಹೇಳುತ್ತೇನೆ. ಅವರು ವಿಶ್ವದ ಅತ್ಯುತ್ತಮ ಬ್ಯಾಟರ್ ಎಂದು ನಾನು ಭಾವಿಸುತ್ತೇನೆ. ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ಕೂಡ ನನ್ನ ಉತ್ತಮ ಸ್ನೇಹಿತರು. ನಾವು ಎಂದಿಗೂ ಪರಸ್ಪರ ಈ ರೀತಿ ವರ್ತಿಸಿಲ್ಲ” ಎಂದು ಅಖ್ತರ್ ತಿಳಿಸಿದ್ದಾರೆ.

ಅಂಡರ್-19 ಏಷ್ಯಾ ಕಪ್: 361 ರನ್ ಸಿಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್

ಪಾಕಿಸ್ತಾನವೇ ಟೂರ್ನಿಯ ಅತ್ಯುತ್ತಮ ತಂಡ: ಅಖ್ತರ್

ಇದೇ ವೇಳೆ, ಇಡೀ ಟೂರ್ನಿಯಲ್ಲಿ ಪಾಕಿಸ್ತಾನ ತಂಡವೇ ಹೆಚ್ಚು ಬಲಿಷ್ಠವಾಗಿತ್ತು ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಫೈನಲ್‌ನ ನಿರ್ಣಾಯಕ ಕ್ಷಣಗಳಲ್ಲಿ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದ ಕಾರಣ ಪ್ರಶಸ್ತಿ ಕೈತಪ್ಪಿತು ಎಂದಿದ್ದಾರೆ.

“ಭಾರತದ ಅಂಡರ್‌-19 ಆಟಗಾರರಿಗೆ ನನ್ನ ಸಂದೇಶವೆಂದರೆ, ಆಕ್ರಮಣಶೀಲತೆಯನ್ನು ತೋರಿಸಿ. ಅದು ನನಗೆ ಇಷ್ಟವಾಯಿತು. ಆದರೆ ಇಡೀ ಟೂರ್ನಿಯಲ್ಲಿ ಪಾಕಿಸ್ತಾನವೇ ಅತ್ಯಂತ ಬಲಿಷ್ಠ ತಂಡವಾಗಿತ್ತು. ಆದರೂ ನಿರ್ಣಾಯಕ ಕ್ಷಣಗಳಲ್ಲಿ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಮಹತ್ವದ ಸಂದರ್ಭಗಳಲ್ಲಿ ಒತ್ತಡವನ್ನು ಹೇಗೆ ಎದುರಿಸಬೇಕೆಂದು ಭಾರತಕ್ಕೆ ಚೆನ್ನಾಗಿ ಗೊತ್ತಿದೆ,” ಎಂದು ಶೋಯೆಬ್‌ ಅಖ್ತರ್ ಹೇಳಿದ್ದಾರೆ.

ಮೋಹಿತ್‌ ಉಲ್ವಾ: ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಆಡುತ್ತಿದ್ದ ಹಳ್ಳಿ ಹುಡುಗ ಈಗ ಹೀರೊ!

ಭಾರತದ ಆಟವನ್ನು ಮೆಚ್ಚಿದ ಅಖ್ತರ್‌

“ಭಾರತ ತಂಡಕ್ಕೆ ಅಭಿನಂದನೆಗಳು. ಭಾರತ ಅದ್ಭುತ ಕ್ರಿಕೆಟ್ ಆಡಿದೆ. ಪಂದ್ಯವನ್ನು ಮುಗಿಸುವ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಪ್ರತಿಭಾವಂತ ಆಟಗಾರರು ಭಾರತ ತಂಡದ್ದಲ್ಲಿದ್ದಾರು,” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಈ ಗೆಲುವಿನೊಂದಿಗೆ ಭಾರತ U-19 ಏಷ್ಯಾಕಪ್ ಇತಿಹಾಸದಲ್ಲಿ ದಾಖಲೆಯ ಒಂಬತ್ತನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.