ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

DC vs MI: ಸಮೀರ್‌ ರಿಝ್ವಿ ಫಿಫ್ಟಿ, ಮುಂಬೈ ಇಂಡಿಯನ್ಸ್‌ಗೆ ಶಾಕ್‌ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌!

DC vs MI Match Highlights: ಸಮೀರ್‌ ರಿಝ್ವಿ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಐದು ಬಾರಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ವಿರುದ್ಧ 6 ವಿಕೆಟ್‌ಗಳ ಗೆಲುವು ಪಡೆಯಿತು. ಇದರೊಂದಿಗೆ ಅಕ್ಷರ್‌ ಪಟೇಲ್‌ ನಾಯಕತ್ವದ ಡೆಲ್ಲಿ 2026ರ ಐಪಿಎಲ್‌ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಪಡೆಯಿತು.

IPL 2026: ಮುಂಬೈ ಇಂಡಿಯನ್ಸ್‌ಗೆ ಶಾಕ್‌ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌!

ಮುಂಬೈ ಇಂಡಿಯನ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯ. -

Profile
Ramesh Kote Apr 4, 2026 7:08 PM

ನವದೆಹಲಿ: ಸತತ ಎರಡನೇ ಗೆಲುವು ಪಡೆಯಲು ಎದುರು ನೋಡುತ್ತಿದ್ದ ಐದು ಬಾರಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಆಸೆಗೆ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals ತಂಡದ ಯುವ ಬ್ಯಾಟ್ಸ್‌ಮನ್‌ ಸಮೀರ್‌ ರಿಝ್ವಿ (Sameer Rizvi) ತಣ್ಣೀರೆರಚಿದರು. ಸಮೀರ್‌ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ (IPL 2026) 8ನೇ ಪಂದ್ಯದಲ್ಲಿ ಮುಂಬೈ ಎದುರು 6 ವಿಕೆಟ್‌ ಗೆಲುವು ದಾಖಲಿಸಿತು. ಆ ಮೂಲಕ ಸತತ ಎರಡನೇ ಗೆಲುವು ಪಡೆದು ಅಂಕಪಟ್ಟಿಯಲ್ಲಿ ಅಕ್ಷರ್‌ ಪಡೆ ಅಗ್ರ ಸ್ಥಾನವನ್ನು ಅಲಂಕರಿಸಿತು.

ಶನಿವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ನೀಡಿದ್ದ 163 ರನ್‌ಗಳ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸುಲಭವಾಗಿ ಮುಟ್ಟಿತು. ಆರಂಭದಲ್ಲಿ ಕೆಎಲ್‌ ರಾಹುಲ್‌ ಹಾಗೂ ನಿತೀಶ್‌ ರಾಣಾ ಬಹುಬೇಗ ವಿಕೆಟ್‌ ಕಳೆದುಕೊಂಡರೂ, ಸಮೀರ್‌ ರಿಝಿ ಅವರ ಸತತ ಎರಡನೇ ಅರ್ಧಶತಕದ ಬಲದಿಂದ ಡಲ್ಲಿ 18.1 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 164 ರನ ಗಳಿಸಿ ತವರು ಅಭಿಮಾನಿಗಳ ಎದುರು ಗೆದ್ದು ಬೀಗಿತು.

DC vs MI: ತಮ್ಮ ಅದ್ಭುತ ರಣತಂತ್ರದಿಂದ ತಿಲಕ್‌ ವರ್ಮಾರನ್ನು ಔಟ್‌ ಮಾಡಿದ ಮುಖೇಶ್‌ ಕುಮಾರ್‌!

ಶತಕ ವಂಚಿತರಾದ ಸಮೀರ್‌ ರಿಝ್ವಿ

ಕಳೆದ ಪಂದ್ಯದಲ್ಲಿಯೂ ಸ್ಪೋಟಕ ಅರ್ಧಶತಕವನ್ನು ಬಾರಿಸಿದ್ದ ಸಮೀರ್‌ ರಿಝ್ವಿ, ಇದೀಗ ಎರಡನೇ ಪಂದ್ಯದಲ್ಲಿಯೂ ಸ್ಪೋಟಕ ಫಿಫ್ಟಿ ಬಾರಿಸಿದರು. ಡೆಲ್ಲಿ ಬಹುಬೇಗ ಎರಡು ವಿಕೆಟ್‌ ಕಳೆದುಕೊಂಡ ಬಳಿಕ ಕ್ರೀಸ್‌ಗೆ ಬಂದ ಸಮೀರ್‌ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟ್‌ ಮಾಡಿದರು. ನಂತರ ಹಂತ-ಹಂತವಾಗಿ ತಮ್ಮ ಬ್ಯಾಟಿಂಗ್‌ ವೇಗವನ್ನು ಹೆಚ್ಚಿಸಿದರು. ಅವರು ಆಡಿದ 51 ಎಸೆತಗಳಲ್ಲಿ 7 ಸಿಕ್ಸರ್‌ಹಾಗೂ 7 ಬೌಂಡರಿಗಳೊಂದಿಗೆ 90 ರನ್‌ ಸಿಡಿಸಿದರು. ಇನ್ನೇನು ಶತಕ ಸಿಡಿಸುವ ಸನಿಹದಲ್ಲಿ ಕಾರ್ಬಿನ್‌ ಬಾಷ್‌ಗೆ ವಿಕೆಟ್‌ ಒಪ್ಪಿಸಿದರು. ಅಲ್ಲದೆ 44 ರನ್‌ ಗಳಿಸಿದ ಪಥುಮ್‌ ನಿಸಾಂಕ ಅವರ ಜೊತೆಗೆ 66 ರನ್‌ ಜೊತೆಯಾಟವಾಡಿದ ರಿಝ್ವಿ, ಬಳಿಕ ಡೇವಿಡ್‌ ಮಿಲ್ಲರ್‌ ಜೊತೆಗೆ 78 ರನ್‌ಗಳ ಜೊತೆಯಾಟವನ್ನು ಆಡಿದರು. ಮಿಲ್ಲರ್‌ ಕೊನೆಯಲ್ಲಿ ಅಜೇಯ 21 ರನ್‌ ಗಳಿಸಿದರು.



162 ರನ್‌ ಕಲೆ ಹಾಕಿದ್ದ ಮುಂಬೈ ಇಂಡಿಯನ್ಸ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಮುಂಬೈ ಇಂಡಿಯನ್ಸ್‌ ತಂಡದಿಂದ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ತೋರುವಲ್ಲಿ ವಿಫಲವಾಯಿತು. ಆದರೂ ಸೂರ್ಯಕುಮಾರ್‌ ಯಾದವ್‌ ಅವರ ಅರ್ಧಶತಕದ ಬಲದಿಂದ ಐದು ಬಾರಿ ಚಾಂಪಿಯನ್ಸ್‌ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 162 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಡೆಲ್ಲಿಗೆ 163 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು.



ಮುಂಬೈಗೆ ಆರಂಭಿಕ ಆಘಾತ ನೀಡಿದ್ದ ಮುಖೇಶ್‌ ಕುಮಾರ್‌

ಮುಖೇಶ್‌ ಕುಮಾರ್‌ ಯಾದವ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಮುಂಬೈ ಇಂಡಿಯನ್ಸ್‌ ಆರಂಭದಲ್ಲಿಯೇ ರಯಾನ್‌ ರಿಕೆಲ್ಟನ್‌ ಹಾಗೂ ತಿಲಕ್‌ ವರ್ಮಾ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಮೂರನೇ ವಿಕೆಟ್‌ಗೆ ಜೊತೆಯಾದ ರೋಹಿತ್‌ ಶರ್ಮಾ ಹಾಗೂ ಸೂರ್ಯಕುಮಾರ್‌ ಯಾದವ್‌ 53 ರನ್‌ಗಳ ಜೊತೆಯಾಟವನ್ನು ಆಡಿದರು. 26 ಎಸೆತಗಳಲ್ಲಿ 35 ರನ್‌ ಸಿಡಿಸಿದ ಬಳಿಕ ರೋಹಿತ್‌ ಶರ್ಮಾ, ಅಕ್ಷರ್‌ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದರು.



ಸೂರ್ಯಕುಮಾರ್‌ ಯಾದವ್‌ ಅರ್ಧಶತಕ

ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಆಟವನ್ನು ಹೊರಹಾಕುವಲ್ಲಿ ವಿಫಲವಾಯಿತು. ಆದರೆ, ನಾಯಕ ಸೂರ್ಯಕುಮಾರ್‌ ಯಾದವ್‌, ಕೆಲ ಕಾಲ ಕ್ರೀಸ್‌ನಲ್ಲಿ ನಿಂತು 36 ಎಸೆತಗಳಲ್ಲಿ 51 ರನ್‌ ಗಳಿಸಿದರು. ನಮನ್‌ ಧೀರ್‌ 21 ರನ್‌ ಗಳಿಸಿದರು. ಡೆಲ್ಲಿ ಪರ ಲುಂಗಿ ಎನ್ಗಿಡಿ, ಟಿ ನಟರಾಜನ್‌, ವಿಪ್ರಜ್‌ ನಿಗಮ ಹಾಗೂ ಅಕ್ಷರ್‌ ಪಟೇಲ್‌ ಪರಿಣಾಮಕಾರಿ ಬೌಲ್‌ ಮಾಡಿ ಮುಂಬೈ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು.