IND vs AFG: ಸಂಜು or ಅಭಿ or ವೈಭವ್? ಆರಂಭಿಕರ ಬಗ್ಗೆ ತಲೆ ನೋವಾಗಿದೆ ಎಂದ ಶ್ರೇಯಸ್ ಅಯ್ಯರ್!
ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕೂ ಮುನ್ನ ಭಾರತ ತಂಡದ ಓಪನಿಂಗ್ ಕಾಂಬಿನೇಷನ್ ಆಯ್ಕೆ ಮಾಡುವುದು ಕಠಿಣ ಸವಾಲಾಗಿದೆ ಎಂದು ನಾಯಕ ಶ್ರೇಯಸ್ ಅಯ್ಯರ್ ಒಪ್ಪಿಕೊಂಡಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗಳ ಸ್ಥಾನಕ್ಕೆ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಮೊದಲನೇ ಟಿ20ಐಗೂ ಮುನ್ನ ತಲೆ ನೋವಾಗಿರುವ ಸಂಗತಿ ತಿಳಿಸಿದ ಶ್ರೇಯಸ್ ಅಯ್ಯರ್. -
ನವದೆಹಲಿ: ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅವರು ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕೂ (IND vs AFG) ಮುನ್ನ ತಂಡದ ಮ್ಯಾನೇಜ್‌ಮೆಂಟ್‌ಗೆ ಆಯ್ಕೆಯ ವಿಚಾರದಲ್ಲಿ ಗೊಂದಲ ಎದುರಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅಗ್ರ ಎರಡು ಸ್ಥಾನಗಳಿಗೆ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ನಡುವೆ ಪೈಪೋಟಿ ಏರ್ಪಟ್ಟಿದೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯ ಭಾನುವಾರ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಪಂದ್ಯಕ್ಕೂ ಮುನ್ನ ಭಾರತದ ಪರ ಯಾರು ಇನಿಂಗ್ಸ್ ಆರಂಭಿಸಲಿದ್ದಾರೆ ಎಂಬುದನ್ನು ಶ್ರೇಯಸ್ ಅಯ್ಯರ್ ಬಹಿರಂಗಪಡಿಸಿಲ್ಲ.
ಈ ಮೂವರು ಬ್ಯಾಟರ್‌ಗಳು ಉತ್ತಮ ಫಾರ್ಮ್ ಹಾಗೂ ಅನುಭವದೊಂದಿಗೆ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಸಂಜು ಸ್ಯಾಮ್ಸನ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ಲೇಯರ್ ಆಫ್ ದಿ ಟೂರ್ನಿ ಪ್ರಶಸ್ತಿ ಗೆದ್ದಿದ್ದರು. ಮತ್ತೊಂದೆಡೆ, ಕೇವಲ 15 ವಯಸ್ಸಿನ ವೈಭವ್ ಸೂರ್ಯವಂಶಿ ಇತ್ತೀಚೆಗೆ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು ಇಂಗ್ಲೆಂಡ್ ಪ್ರವಾಸದ ವೇಳೆ ವೈಭವ್ ಸೂರ್ಯವಂಶಿ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ, ಸಂಜು ಸ್ಯಾಮ್ಸನ್‌ಗಿಂತ ಅಭಿಷೇಕ್ ಶರ್ಮಾ ಅವರಿಗೆ ಆದ್ಯತೆ ನೀಡಲಾಗಿತ್ತು.
ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಶ್ರೇಷ್ಠ ನಾಯಕ ಎಂಎಸ್ ಧೋನಿ ಎಂದ ರಾಹುಲ್ ದ್ರಾವಿಡ್!
ಕಠಿಣ ನಿರ್ಧಾರವಾಗಲಿದೆ ಎಂದ ಶ್ರೇಯಸ್ ಅಯ್ಯರ್
ಈ ಮೂವರು ಆಟಗಾರರಲ್ಲಿ ಇಬ್ಬರನ್ನು ಆಯ್ಕೆ ಮಾಡುವುದು ತಮಗೆ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಕಠಿಣ ನಿರ್ಧಾರವಾಗಲಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಯ್ಯರ್, “ಈ ಮೂವರೂ ತಂಡದಲ್ಲಿರುವುದು ಮೊದಲನೆಯದಾಗಿ ನಮಗೆ ಸಿಕ್ಕಿರುವ ಐಷಾರಾಮಿ ಅವಕಾಶ. ತಮ್ಮ ತಮ್ಮ ವಿಭಾಗಗಳಲ್ಲಿ ಮೂವರೂ ಅತ್ಯುತ್ತಮರಾಗಿದ್ದಾರೆ. ಅವರು ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಇದು ನಿಜಕ್ಕೂ ಕಠಿಣ ನಿರ್ಧಾರವಾಗಲಿದೆ,” ಎಂದು ತಿಳಿಸಿದ್ದಾರೆ.
“ಯಾರಿಗೆ ಅವಕಾಶ ಸಿಕ್ಕರೂ ಅದು ಖಂಡಿತವಾಗಿಯೂ ತಂಡದ ಪ್ರಯೋಜನವಾಗಲಿದೆ. ಹೊರಗೆ ಕುಳಿತುಕೊಳ್ಳುವ ಆಟಗಾರನೊಂದಿಗೆ ನಾನು ಹಾಗೂ ಕೋಚ್ ಮಾತನಾಡಿ, ಅವರಿಗೆ ಆತ್ಮವಿಶ್ವಾಸ ನೀಡುವುದು ಮುಖ್ಯ. ‘ಯಾವುದೇ ಪರಿಸ್ಥಿತಿಯಲ್ಲೂ, ನಿಮ್ಮ ದಿನ ಬಂದಾಗ ನಿಮಗೆ ಅವಕಾಶ ಸಿಗುತ್ತದೆ’ ಎಂಬ ನಂಬಿಕೆಯನ್ನು ಅವರಿಗೆ ನೀಡಬೇಕು,” ಎಂದು ಅಯ್ಯರ್ ಹೇಳಿದ್ದಾರೆ.
ಆಫ್ಘಾನ್ ಸವಾಲಿಗೆ ಭಾರತ ಸಜ್ಜು; ನಾಳೆ ಮೊದಲ ಟಿ20
ಸ್ಯಾಮ್ಸನ್, ಸೂರ್ಯವಂಶಿಗೆ ಮಿಶ್ರ ಫಲಿತಾಂಶ
ಭಾರತದ ಇತ್ತೀಚಿನ ಟಿ20ಐ ಸರಣಿಗಳಲ್ಲಿ ಸಂಜು ಸ್ಯಾಮ್ಸನ್ ಹಾಗೂ ವೈಭವ್ ಸೂರ್ಯವಂಶಿ ಇಬ್ಬರೂ ಮಿಶ್ರ ಫಲಿತಾಂಶ ಅನುಭವಿಸಿದ್ದಾರೆ. ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳು ಹಾಗೂ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಸ್ಯಾಮ್ಸನ್ ಆಡಿದ್ದರು. ಬಳಿಕ ಅವರನ್ನು ತಂಡದಿಂದ ಕೈಬಿಡಲಾಯಿತು. ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಎರಡನೇ, ಮೂರನೇ ಹಾಗೂ ನಾಲ್ಕನೇ ಟಿ20ಐ ಪಂದ್ಯಗಳಲ್ಲಿ ಆಡಿದ್ದು, ನಂತರ ಅಂತಿಮ ಪಂದ್ಯಕ್ಕೂ ತಂಡಕ್ಕೆ ಮರಳಿದ್ದರು.
Aggressive. Trusting. Fearless 🫡
— BCCI (@BCCI) September 12, 2026
🎥 #TeamIndia Captain @ShreyasIyer15 on the mindset of Head Coach @GautamGambhir & the bond they share 🤝#AFGvIND pic.twitter.com/IURQ8F3dax
ಜಿಂಬಾಬ್ವೆ ವಿರುದ್ಧ ಮಿಂಚಿದ್ದ ಸೂರ್ಯವಂಶಿ
ಇಂಗ್ಲೆಂಡ್ ಸರಣಿಯ ಬಳಿಕ ಜಿಂಬಾಬ್ವೆ ಪ್ರವಾಸದಲ್ಲಿ ಸೂರ್ಯವಂಶಿ ಅದ್ಭುತ ಪ್ರದರ್ಶನ ನೀಡಿದರು. ಮೂರು ಪಂದ್ಯಗಳಲ್ಲೂ ಅವರು ಅಭಿಷೇಕ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದು ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿ ಪಡೆದರು. ಈ ಪ್ರವಾಸದಲ್ಲಿ ಸ್ಯಾಮ್ಸನ್‌ಗೆ ವಿಶ್ರಾಂತಿ ನೀಡಲಾಗಿತ್ತು. ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಗಳಲ್ಲಿ ಸ್ಯಾಮ್ಸನ್ ಹಾಗೂ ಸೂರ್ಯವಂಶಿಯನ್ನು ನಿರ್ವಹಿಸಿದ ರೀತಿಯ ಬಗ್ಗೆ ಟೀಕೆಗಳು ಕೂಡ ವ್ಯಕ್ತವಾಗಿದ್ದವು. ಹೀಗಾಗಿ ಅಫ್ಘಾನಿಸ್ತಾನ ವಿರುದ್ಧದ ಸರಣಿ ಭಾರತಕ್ಕೆ ತನ್ನ ನೆಚ್ಚಿನ ಓಪನಿಂಗ್ ಕಾಂಬಿನೇಷನ್ ಅನ್ನು ಅಂತಿಮಗೊಳಿಸಲು ಮಹತ್ವದ ಅವಕಾಶವಾಗಿದೆ.
ENG vs PAK: ಅರ್ಧಶತಕ ಬಾರಿಸಿ ಸಚಿನ್ ತೆಂಡೂಲ್ಕರ್‌ರ ಮತ್ತೊಂದು ದಾಖಲೆ ಮುರಿದ ಜೋ ರೂಟ್!
ಅಯ್ಯರ್‌ಗೂ ಬ್ಯಾಟಿಂಗ್‌ನಲ್ಲಿ ಮಿಂಚುವ ಅವಕಾಶ
ಭಾನುವಾರದ ಪಂದ್ಯ ಶ್ರೇಯಸ್ ಅಯ್ಯರ್ ಅವರಿಗೂ ಬ್ಯಾಟಿಂಗ್‌ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಮತ್ತೊಂದು ಅವಕಾಶವಾಗಿದೆ. ಅಯ್ಯರ್ ನಾಯಕತ್ವದಲ್ಲಿ ಭಾರತ, ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಳನ್ನು ಸೋತಿತ್ತು. ಆದರೆ ಬಳಿಕ ಜಿಂಬಾಬ್ವೆ ವಿರುದ್ಧ 3-0 ಅಂತರದಲ್ಲಿ ಸರಣಿ ಕ್ಲೀನ್‌ಸ್ವೀಪ್ ಮಾಡುವ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿತ್ತು. ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಭಾರತ ಇದೇ ಗೆಲುವಿನ ಲಯವನ್ನು ಮುಂದುವರಿಸುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.