ಭಾರತ ಏಕದಿನ ತಂಡಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರ ಮಹತ್ವವನ್ನು ತಿಳಿಸಿದ ಸುರೇಶ್ ರೈನಾ!
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶವನ್ನು ತೋರಿದೆ. ಆದರೆ, ಭಾರತ ಏಕದಿನ ತಂಡ, ಈ ಇಬ್ಬರ ಅನುಪಸ್ಥಿತಿಯಲ್ಲಿ ಆಡುವುದು ಅಷ್ಟೊಂದು ಸುಲಭವಲ್ಲ ಎಂದು ಭಾರತದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಎಚ್ಚರಿಕೆಯನ್ನು ನೀಡಿದ್ದಾರೆ.

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಬಗ್ಗೆ ಸುರೇಶ್ ರೈನಾ ಮಹತ್ವದ ಹೇಳಿಕೆ.

ನವದೆಹಲಿ: ವಿರಾಟ್ ಕೊಹ್ಲಿ(Virat Kohli), ರೋಹಿತ್ ಶರ್ಮಾ (Rohit Sharma) ಹಾಗೂ ಆರ್ ಅಶ್ವಿನ್ ಅವರ ಅನುಪಸ್ಥಿತಿಯಲ್ಲಿ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಮನಾರ್ಹ ಪ್ರದರ್ಶನವನ್ನು ತೋರಿತ್ತು ಹಾಗೂ 2-2 ಅಂತರದಲ್ಲಿ ಡ್ರಾ ಸಾಧಿಸಿತ್ತು. ಆದರೆ, ಈ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ಏಕದಿನ ತಂಡ ಆಡುವುದು ಅಷ್ಟೊಂದು ಸುಲಭವಲ್ಲ ಎಂದು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ (Suresh Raina) ಎಚ್ಚರಿಕೆ ನೀಡಿದ್ದಾರೆ. ಭಾರತ ಒಡಿಐ ತಂಡದಲ್ಲಿ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಸ್ಥಾನಗಳನ್ನು ತುಂಬುವುದು ಸುಲಭವಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಭಾರತ ಏಕದಿನ ತಂಡ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಂದಿನ ಏಕದಿನ ಸರಣಿಯನ್ನು ಆಡಲಿದೆ. 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನೂ ಎರಡು ವರ್ಷಗಳು ಬಾಕಿ ಇವೆ. ಏಕದಿನ ವಿಶ್ವಕಪ್ ಟೂರ್ನಿಯ ಹೊತ್ತಿಗೆ ವಿರಾಟ್ ಕೊಹ್ಲಿಗೆ 39 ವರ್ಷ ವಯಸ್ಸು ಹಾಗೂ ರೋಹಿತ್ ಶರ್ಮಾಗೆ 40 ವರ್ಷ ವಯಸ್ಸಾಗಲಿದೆ. ಹಾಗಾಗಿ ಅಲ್ಲಿಯ ತನಕ ಈ ಇಬ್ಬರೂ ಆಟಗಾರರು ಆಡಲಿದ್ದಾರಾ? ಅಥವಾ ಇಲ್ಲವಾ? ಎಂಬ ಬಗ್ಗೆ ಈಗಲೇ ಅಂದಾಜಿಸುವುದು ಕಷ್ಟ ಸಾಧ್ಯ.
"ಭಾರತ ತಂಡ ಪ್ರಸ್ತುತ (ಏಕದಿನ ಕ್ರಿಕೆಟ್) ಅಗ್ರ ಸ್ಥಾನ ಮತ್ತು ಮೂರನೇ ಕ್ರಮಾಂಕಗಳಿಗೆ ವಿಶ್ವಾಸಾರ್ಹ ಆಟಗಾರರನ್ನು ಹೊಂದಿಲ್ಲ. ಅದರಲ್ಲಿಯೂ ವಿಶೇಷವಾಗಿ ಚೇಸಿಂಗ್‌ನಲ್ಲಿ ಇಲ್ಲವೇ ಇಲ್ಲ," ಎಂದು ಸುರೇಶ್ ರೈನಾ ಟೆಲಿಕಾಂ ಏಷ್ಯಾ ಸ್ಪೋರ್ಟ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಲಂಡನ್‌ಗೆ ಶಿಫ್ಟ್ ಆಗಲು ಬಲವಾದ ಕಾರಣ ಇಲ್ಲಿದೆ!
"ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಅನುಭವ ತಂಡಕ್ಕೆ ತುಂಬಾ ಮುಖ್ಯವಾಗಿದೆ. ಕಿರಿಯ ಆಟಗಾರರ ಜೊತೆ ಹಿರಿಯ ಆಟಗಾರರು ತೊಡಗಿಸಿಕೊಳ್ಳುವುದು ನಿರ್ಣಾಯಕವಾಗಿದೆ. ಶುಭಮನ್ ಗಿಲ್ ನಿಜಕ್ಕೂ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದಾರೆ. ಆದರೂ ಅವರಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂಥ ಆಟಗಾರರ ಅಗತ್ಯವಿದೆ," ಎಂದು 2021ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ಆಟಗಾರ ತಿಳಿಸಿದ್ದಾರೆ.
"ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ, ಅವರು ವಿಶ್ವಕಪ್ ಅನ್ನು ಗೆದ್ದಿದ್ದಾರೆ. ವಿರಾಟ್ ಕೊಹ್ಲಿ ಕೊನೆಯ ಐಪಿಎಲ್ ಟ್ರೋಫಿಯನ್ನು ಗೆದ್ದಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ತೋರಿಸಿರುವ ಚತುರ ನಾಯಕತ್ವಕ್ಕಾಗಿ ಅವರು ಡ್ರೆಸ್ಸಿಂಗ್ ಕೋಣೆಯ ಭಾಗವಾಗಿರಬೇಕು," ಎಂದು ಮಾಜಿ ಆಲ್‌ರೌಂಡರ್ ಹೇಳಿದ್ದಾರೆ.
ಒಡಿಐ ಕ್ರಿಕೆಟ್ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ ರೋಹಿತ್ ಶರ್ಮಾ!
ಕೊಹ್ಲಿ, ರೋಹಿತ್ ಲಭ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಗವಾಸ್ಕರ್
ಮುಂದಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಡುವುದು ಅನುಮಾನ ಎಂದು ಈ ಹಿಂದೆ ಬ್ಯಾಟಿಂಗ್ ದಿಗ್ಗಜ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
"ಏಕದಿನ ಕ್ರಿಕೆಟ್‌ನಲ್ಲಿ ಈ ಇಬ್ಬರೂ ಆಟಗಾರರು ಅದ್ಭುತ ಪ್ರದರ್ಶನ ತೋರುವವರಾಗಿದ್ದಾರೆ. ಅದರಂತೆ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ನಿಮಿತ್ತ ಈ ಇಬ್ಬರೂ ಆಟಗಾರರನ್ನು ಪರಿಗಣಿಸಲು ಬಿಸಿಸಿಐ ಆಯ್ಕೆ ಸಮಿತಿ ಯೋಚಿಸುತ್ತಿರಬಹುದು. 2027ರ ಐಸಿಸಿ ಏಕದಿನ ತಂಡಕ್ಕೆ ಅವರನ್ನು ಆಯ್ಕೆ ಮಾಡಬಹುದಾ ಎಂದು ಆಯ್ಕೆದಾರರು ಚಿಂತಿಸುತ್ತಿರಬಹುದು. ಅದರಂತೆ ಅವರು ಮುಂದಿನ ಸರಣಿಗಳಲ್ಲಿ ಸ್ಥಿರ ಪ್ರದರ್ಶನವನ್ನು ಮುಂದುವರಿಸಿದರೆ, ಅವರನ್ನು ಏಕದಿನ ವಿಶ್ವಕಪ್‌ಗೆ ಉಳಿಸಿಕೊಳ್ಳಬಹುದು. ಆದರೆ, ಈ ಇಬ್ಬರು ಮುಂದಿನ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಯಾವುದೇ ಖಚಿತತೆ ಇಲ್ಲ," ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.