ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: ಬ್ಯಾಟಿಂಗ್‌ ಸಕ್ಸಸ್‌ಗೆ ಸಚಿನ್‌ ತೆಂಡೂಲ್ಕರ್‌ ಕಾರಣ ಎಂದ ಸಂಜು ಸ್ಯಾಮ್ಸನ್!

Sanju samson on Sachin Tendulkar: ನ್ಯೂಜಿಲೆಂಡ್‌ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಪೈನಲ್‌ನಲ್ಲಿ 89 ರನ್‌ ಗಳಿಸುವ ಮೂಲಕ ಸಂಜು ಸ್ಯಾಮ್ಸನ್‌, ಭಾರತ ತಂಡದ 96 ರನ್‌ಗಳ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ಈ ಟೂರ್ನಿಯಲ್ಲಿ 321 ರನ್‌ಗಳ ಮೂಲಕ ಸಂಜು ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಸಂಜು ತಮ್ಮ ಬ್ಯಾಟಿಂಗ್‌ ಸಕ್ಸಸ್‌ಗೆ ಕಾರಣ ಯಾರೆಂದು ಬಹಿರಂಗಪಡಿಸಿದರು.

ತಮ್ಮ ಬ್ಯಾಟಿಂಗ್‌ ಸಕ್ಸಸ್‌ಗೆ ಸಚಿನ್‌ ಕಾರಣ ಎಂದ ಸಂಜು ಸ್ಯಾಮ್ಸನ್!

ಸಚಿನ್‌ ತೆಂಡೂಲ್ಕರ್‌ ಸಹಾಯವನ್ನು ಸ್ಮರಿಸಿದ ಸಂಜು ಸ್ಯಾಮ್ಸನ್‌. -

Profile
Ramesh Kote Mar 9, 2026 1:08 AM

ಅಹಮದಾಬಾದ್‌: ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಮಹತ್ತರ ಪಾತ್ರವನ್ನು ವಹಿಸಿದ ಭಾರತದ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ (sanju Samson) ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಪಂದ್ಯದ ಬಳಿಕ ಅವರು ತಮ್ಮ ವೃತ್ತಿ ಜೀವನದ ಕಠಿಣ ಅವಧಿಯಲ್ಲಿ ನೆರವು ನೀಡಿದ ಹಾಗೂ ತಮ್ಮ ಬ್ಯಾಟಿಂಗ್‌ ಸಕ್ಸಸ್‌ಗೆ ಕಾರಣರಾದ ದೊಡ್ಡ ದಿಗ್ಗಜನ ಹೆಸರನ್ನು ರಿವೀಲ್‌ ಮಾಡಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಬ್ಯಾಟಿಂಗ್‌ ದಿಗ್ಗಜ ಹಾಗೂ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ (Sachin Tendulkar). ಕ್ರಿಕೆಟ್‌ ದೇವರು ಯಾವ ರೀತಿ ನೆರವು ನೀಡಿದ್ದಾರೆಂದು ಸಂಜು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಸಂಜು ಸ್ಯಾಮ್ಸನ್‌, ಮತ್ತೊಂದು ಶ್ರೇಷ್ಠ ಇನಿಂಗ್ಸ್‌ ಆಡಿದರು. ಅವರು ಆಡಿದ 46 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 89 ರನ್‌ಗಳನ್ನು ಗಳಿಸಿದರು. ಅಲ್ಲದೆ ಅಭಿಷೇಕ್‌ ಶರ್ಮಾ ಜೊತೆಗೆ ಮೊದಲನೇ ವಿಕೆಟ್‌ಗೆ 98 ರನ್‌ ಜೊತೆಯಾಟ ಹಾಗೂ ಎರಡನೇ ವಿಕೆಟ್‌ಗೆ ಇಶಾನ್‌ ಕಿಶನ್‌ ಅವರ ಜೊತೆ 105 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಭಾರತ ತಂಡ 255 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು.

IND vs NZ: ಸಂಜು ಸ್ಯಾಮ್ಸನ್‌ ಅಬ್ಬರ, ನ್ಯೂಜಿಲೆಂಡ್‌ಗೆ ಆಘಾತ ನೀಡಿ ಮೂರನೇ ಟಿ20 ವಿಶ್ವಕಪ್‌ ಗೆದ್ದ ಭಾರತ!

ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ ವಿರುದ್ಧ ಸೂಪರ್‌-8 ರ ಪಂದ್ಯದಲ್ಲಿ 97 ರನ್‌ ಹಾಗೂ ಇಂಗ್ಲೆಂಡ್‌ ವಿರುದ್ಧ ಸೆಮಿಫೈನಲ್‌ನಲ್ಲಿ 89 ರನ್‌ ಬಾರಿಸಿದ್ದರು. ಅಂದ ಹಾಗೆ ಟಿ20 ವಿಶ್ವಕಪ್‌ ಟೂರ್ನಿಯ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್‌ ಟಿ20ಐ ಸರಣಿಯಲ್ಲಿ ವಿಫಲರಾಗಿದ್ದರು, ಅವರು ಅಲ್ಲಿ ಆಡಿದ್ದ 5 ಪಂದ್ಯಗಳಿಂದ ಗಳಿಸಿದ್ದು ಕೇವಲ 46 ರನ್‌ ಮಾತ್ರ. ಹಾಗಾಗಿ ಅವರನ್ನು ಟಿ20 ವಿಶ್ವಕಪ್‌ ಟೂರ್ನಿಯ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ಆಡಿಸಿರಲಿಲ್ಲ. ಆರಂಭಿಕ ಪಂದ್ಯಗಳಲ್ಲಿ ಬೆಂಚ್‌ ಕಾದಿದ್ದರು. ನಂತರ ಅಭಿಷೇಕ್‌ ಅನಾರೋಗ್ಯಕ್ಕೆ ತುತ್ತಾದ ಬಳಿಕ ನಮೀಬಿಯಾ ಎದುರು 22 ರನ್‌ ಗಳಿಸಿದ್ದರು. ಆದರೆ, ಗುಂಪು ಹಂತದಲ್ಲಿ ಆಡಿದ್ದು ಒಂದೇ ಒಂದು ಪಂದ್ಯ ಮಾತ್ರ.

ನಂತರ ಸೂಪರ್-‌8ರ ಹಂತದಲ್ಲಿ ದಕ್ಷಿಣ ಆಫ್ರಿಕಾ ಎದುರು ಸೋಲು ಅನುಭವಿಸಿದ ಬಳಿಕ ಸಂಜು, ಜಿಂಬಾಬ್ವೆ ಆಡಿದ್ದರು ಹಾಗೂ ಇಲ್ಲಿ ಅವರು ತಮ್ಮ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದರು. ನಂತರ ವೆಸ್ಟ್‌ ಇಂಡೀಸ್‌ ಹಾಗೂ ಇಂಗ್ಲೆಂಡ್‌ ವಿರುದ್ಧ ಅರ್ಧಶತಕಗಳನ್ನು ಬಾರಿಸಿದರು ಹಾಗೂ ಫೈನಲ್‌ನಲ್ಲಿಯೂ ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್‌ ಆಡಿದರು ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



ಸಚಿನ್‌ ಮಾಡಿದ್ದ ಸಹಾಯವನ್ನು ನೆನೆದ ಸಂಜು

ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್‌ ಮಾಸ್ಟರ್‌-ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಸಹಾಯವನ್ನು ಸ್ಮರಿಸಿಕೊಂಡರು.

"ನಾನು ಸಚಿನ್ ತೆಂಡೂಲ್ಕರ್ ಸರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಆಸ್ಟ್ರೇಲಿಯಾದಲ್ಲಿ ತಂಡದ ಹೊರಗಡೆ ಕುಳಿತಿದ್ದಾಗ ಹಾಗೂ ಪಂದ್ಯಗಳಲ್ಲಿ ಅವಕಾಶ ಸಿಗದ ಸಮಯದಲ್ಲಿ ‘ಈಗ ಯಾವ ಮನೋಭಾವನೆ ಅಗತ್ಯ?’ ಎಂದು ನಾನು ಯೋಚಿಸಿದ್ದೆ. ಅದಕ್ಕಾಗಿ ನಾನು ಸಚಿನ್‌ ಸರ್ ಅವರನ್ನು ಸಂಪರ್ಕಿಸಿ ಅವರೊಂದಿಗೆ ದೀರ್ಘವಾಗಿ ಮಾತುಕತೆ ನಡೆಸಿದ್ದೆ. ನಿನ್ನೆ(ಶನಿವಾರ) ಕೂಡ ಅವರು ನನಗೆ ಕರೆ ಮಾಡಿ ನನ್ನ ಭಾವನೆಗಳು ಹೇಗಿವೆ ಎಂದು ವಿಚಾರಿಸಿದ್ದರು. ಅವರಂಥ ಮಹಾನ್ ದಿಗ್ಗಜರಿಂದ ಮಾರ್ಗದರ್ಶನ ದೊರಕುವುದು ನನ್ನ ಪಾಲಿಗೆ ದೊಡ್ಡ ಭಾಗ್ಯ. ಆ ಸ್ಪಷ್ಟತೆ, ಆಟದ ಅರಿವು ಮತ್ತು ಆಟದ ಸಂವೇದನೆ ಅಭಿವೃದ್ಧಿಪಡಿಸಲು ಅವರು ನನಗೆ ಸಹಾಯ ಮಾಡಿದ್ದಾರೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಅತ್ಯಂತ ಕೃತಜ್ಞನಾಗಿದ್ದೇನೆ,” ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.