'ವಿರಾಟ್ ಕೊಹ್ಲಿ, ರವಿ ಶಾಸ್ತ್ರಿ ನನಗೆ ಕ್ಲಾರಿಟಿ ನೀಡಲಿಲ್ಲ, ಎಂಎಸ್ ಧೋನಿ ಸತ್ಯ ಹೇಳಿದ್ರು'- ಯುವರಾಜ್ ಸಿಂಗ್!
ತಮ್ಮ ಕ್ರಿಕೆಟ್ ವೃತ್ತಿ ಜೀವನದ ಕೊನೆಯ ವರ್ಷಗಳಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ತಮ್ಮ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆ ನೀಡಿರಲಿಲ್ಲ ಎಂದು ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಆದರೆ, ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನನ್ನ ಬಳಿ ಸನ್ನಿವೇಶದ ಬಗ್ಗೆ ಪ್ರಾಮಾಣಿಕ ಸಂಭಾಷಣೆಯನ್ನು ನಡೆಸಿದ್ದರು ಹಾಗೂ ಹಿರಿಯ ಆಟಗಾರರ ಬಳಿ ಉತ್ತಮ ಸಂವಹನ ನಡೆಸಬೇಕೆಂದು ಆಗ್ರಹಿಸಿದ್ದರು ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.
ಎಂಎಸ್ ಧೋನಿ ವಾಸ್ತವ ಏನೆಂದು ತಿಳಿಸಿದ್ದರೆಂದ ಯುವರಾಜ್ ಸಿಂಗ್. -
ನವದೆಹಲಿ: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ಗಳ ಸಾಲಿನಲ್ಲಿ ಒಬ್ಬರಾಗಿರುವ ಯುವರಾಜ್ ಸಿಂಗ್ (Yuvraj Singh) ಅವರು ತಮ್ಮ ವೃತ್ತಿ ಜೀವನದ ಕೊನೆಯ ವರ್ಷಗಳಲ್ಲಿ ಆದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ವೃತ್ತಿ ಜೀವನದ ಕೊನೆಯ ಹಂತದಲ್ಲಿ ಅಂದಿನ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಹೆಡ್ ಕೋಚ್ ರವಿಶಾಸ್ತ್ರಿ ನನ್ನ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆ ನೀಡಿರಲಿಲ್ಲ, ಆದರೆ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರು ಮಾತ್ರ ನನ್ನ ಬಳಿ ಪ್ರಾಮಾಣಿಕ ಸಂಭಾಷಣೆ ನಡೆಸಿ, ವಾಸ್ತವ ಏನೆಂದು ತೆರೆದಿಟ್ಟಿದ್ದರು ಎಂದು ಎರಡು ವಿಶ್ವಕಪ್ ವಿಜೇತ ಯುವರಾಜ್ ಸಿಂಗ್ ತಿಳಿಸಿದ್ದಾರೆ.
ವಿಕ್ರಾಂತ್ ಗುಪ್ತಾ ಅವರ ಸ್ಪೋರ್ಟ್ಸ್ ತಕ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಯುವರಾಜ್ ಸಿಂಗ್, ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ ಹಿರಿಯ ಆಟಗಾರರು ವೃತ್ತಿ ಜೀವನದ ಕೊನೆಯ ಹಂತದಲ್ಲಿ ಸ್ಪಷ್ಟತೆಯನ್ನು ಅರಿತುಕೊಳ್ಳಲು ಅರ್ಹರಾಗಿದ್ದಾರೆಂದು ಹೇಳಿದ್ದಾರೆ. ಇದೇ ವೇಳೆ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸಲುವಾಗಿ ಭಾರತ ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟತೆ ಪಡೆಯಲು ಅರ್ಹರಾಗಿದ್ದಾರೆಂದು ಹೇಳಿದ್ದಾರೆ.
ʻರಿಷಭ್ ಪಂತ್ ಭಾರತ ವೈಟ್‌ಬಾಲ್ ತಂಡಕ್ಕೆ ಕಮ್‌ಬ್ಯಾಕ್ ಮಾಡಬೇಕುʼ-ಯುವರಾಜ್ ಸಿಂಗ್!
“ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿರುವವರಿಗೆ ಸ್ಪಷ್ಟತೆ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ನನಗೆ ಅದು ದೊರಕಲಿಲ್ಲ, ಜಹೀರ್ ಖಾನ್, ವೀರೇಂದ್ರ ಸೆಹ್ವಾಗ್ ಅಥವಾ ಹರ್ಭಜನ್ ಸಿಂಗ್ ಅವರಿಗೆ ಸಹ ದೊರಕಲಿಲ್ಲ. ನಾಯಕ, ಕೋಚ್ ಅಥವಾ ಆಯ್ಕೆದಾರ, ಯಾರಾದರೂ ಆಟಗಾರನೊಂದಿಗೆ ಕುಳಿತು, ಅವರು ವಿಷಯಗಳನ್ನು ಹೇಗೆ ಕಾಣುತ್ತಿದ್ದಾರೆ ಎಂಬುದನ್ನು ವಿವರಿಸಬೇಕು. ಸಂಭಾಷಣೆ ಚೆನ್ನಾಗಿ ಸಾಗದಿದ್ದರೂ, ಕನಿಷ್ಠ ಪ್ರಯತ್ನ ಹಾಕಬೇಕು,” ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.
ನನ್ನ ವೃತ್ತಿ ಜೀವನದ ಬಗ್ಗೆ ನನಗೆ ಸ್ಪಷ್ಟತೆ ಇರಲಿಲ್ಲ
ಯುವರಾಜ್ ಸಿಂಗ್ 2000ರ ದಶಕದ ಆರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು 2003, 2007 ಹಾಗೂ 2011ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದರು. ಇದರಲ್ಲಿ 2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಹಾಗೂ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಭಾರತ ಚಾಂಪಿಯನ್ ಆಗಿತ್ತು. ಈ ಎರಡರಲ್ಲೂ ಯುವರಾಜ್ ಸಿಂಗ್ ಟೂರ್ನಿ ಶ್ರೇಷ್ಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು. ಏಕದಿನ ವಿಶ್ವಕಪ್ ಬಳಿಕ ಯುವಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಈ ವೇಳೆ ಯುವರಾಜ್ ಸಿಂಗ್ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ಮರಳುವುದು ಅನುಮಾನ ಎಂದೇ ಹೇಳಲಾಗಿತ್ತು. ಆದರೆ, ಅವರು ಕ್ಯಾನ್ಸರ್ ರೋಗವನ್ನು ಗೆದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದರು. ಆದರೂ ಅವರು 2015 ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಆಡಲು ಅವಕಾಶ ಸಿಗಲಿಲ್ಲ.
ತನ್ನ ತಂದೆಯ ತಪ್ಪಿನಿಂದ ಎಂಎಸ್ ಧೋನಿ, ಕಪಿಲ್ ದೇವ್ ಬಳಿ ಕ್ಷಮೆ ಕೇಳಿದ ಯುವರಾಜ್ ಸಿಂಗ್!
"ಉದಾಹರಣೆ ನೀಡುವುದಾದರೆ, ಸ್ವತಃ ನನ್ನ ಸನ್ನಿವೇಶದಲ್ಲಿಯೇ ನನಗೇ ಸ್ಪಷ್ಟತೆ ಇರಲಿಲ್ಲ. ನ್ಯಾಷಕಲ್ ಕ್ರಿಕೆಟ್ ಅಕಾಡೆಮಿ, ನಾಯಕ ಅಥವಾ ಕೋಚ್ ಕಡೆಯಿಂದಲೂ ನನಗೆ ಕ್ಲಾರಿಟಿ ಸಿಕ್ಕಿರಲಿಲ್ಲ. 36 ವರ್ಷ ವಯಸ್ಸು ಮುಗಿಸಿ 37ಕ್ಕೆ ತಲುಪುತ್ತಿದ್ದೆ, ಆಗ ಏನು ಮಾಡಬೇಕೆಂದು ನನಗೆ ಗೊತ್ತಿರಲಿಲ್ಲ. ಕನಿಷ್ಠ ರಾಷ್ಟ್ರೀಯ ತಂಡಕ್ಕೆ ಸಾಕಷ್ಟು ಕ್ರಿಕೆಟ್ ಆಡಿರುವವರಾದರೂ ಗೌರವಕ್ಕೆ ಅರ್ಹರಾಗಿದ್ದಾರೆ," ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.
"ಎಂಎಸ್ ಧೋನಿ ಬಳಿ ನಾನು ಮಾತನಾಡಿದ್ದೆ. ನಾವಿಬ್ಬರೂ ಫೋನ್‌ನಲ್ಲಿ ಮಾತನಾಡಿದ್ದೆವು. ಅವರು ನನಗೆ ಸರಿಯಾದ ದೃಷ್ಟಿಕೋನವನ್ನು ನೀಡಿದ್ದರು. ಅವರಿಗೆ ಲಾಭ ಇಲ್ಲದಿದ್ದರೂ, ತಂಡದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಂಡಿದ್ದರು," ಎಂದು ಯುವಿ ಹೇಳಿದ್ದಾರೆ.