ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿರಾಟ್‌ ಕೊಹ್ಲಿ- ಸಚಿನ್‌ ತೆಂಡೂಲ್ಕರ್‌ ನಡುವೆ ಉತ್ತಮ ವಿದೇಶಿ ಟೆಸ್ಟ್‌ ಆಟಗಾರನನ್ನು ಆರಿಸಿದ ಎಬಿಡಿ!

ವಿರಾಟ್ ಕೊಹ್ಲಿಯ ವಿದೇಶಿ ನೆಲದ ಪ್ರದರ್ಶನವನ್ನು ಎಬಿ ಡಿವಿಲಿಯರ್ಸ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಪರಂಪರೆಯನ್ನು ಮುಂದುವರಿಸಿದ ಕೊಹ್ಲಿ, ವಿದೇಶಿ ಪರಿಸ್ಥಿತಿಗಳಲ್ಲಿ ಭಾರತೀಯ ಬ್ಯಾಟರ್‌ಗಳ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಕೊಹ್ಲಿ-ಸಚಿನ್‌ ನಡುವೆ ಉತ್ತಮ ಆಟಗಾರನನ್ನು ಆರಿಸಿದ ಎಬಿಡಿ!

ಸಚಿನ್‌-ಕೊಹ್ಲಿ ನಡುವಣ ವ್ಯತ್ಯಾಸವನ್ನು ತಿಳಿಸಿದ ಎಬಿಡಿ. -

Profile
Ramesh Kote Aug 20, 2026 4:30 PM

ನವದೆಹಲಿ: ವಿದೇಶಿ ಟೆಸ್ಟ್‌ ಸರಣಿಗಳಲ್ಲಿ ಭಾರತದ ದಿಗ್ಗಜ ಬ್ಯಾಟರ್‌ಗಳಾದ ಸಚಿನ್ ತೆಂಡೂಲ್ಕರ್ (Sachin Tendulkar) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಪ್ರದರ್ಶನವನ್ನು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಹೋಲಿಕೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಟ್ರೆಂಡ್‌ ಹುಟ್ಟುಹಾಕಿದ್ದು, ಉಪಖಂಡದ ಬ್ಯಾಟರ್‌ಗಳು ಬೌನ್ಸಿ ಹಾಗೂ ಸೀಮ್ ಪಿಚ್‌ಗಳಲ್ಲೂ ಯಶಸ್ವಿಯಾಗಬಹುದು ಎಂಬ ನಂಬಿಕೆಯನ್ನು ಮೂಡಿಸಿದರು. ಆದರೆ, ಕೊಹ್ಲಿ ಆ ನಂಬಿಕೆಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ದು ಗುಣಮಟ್ಟವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದರು ಎಂದು ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.

ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ಭಾರತ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟರ್ ಸಚಿನ್ ತೆಂಡೂಲ್ಕರ್. ಅವರು 200 ಪಂದ್ಯಗಳಲ್ಲಿ 15,921 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ವಿರಾಟ್ ಕೊಹ್ಲಿ 123 ಪಂದ್ಯಗಳಲ್ಲಿ 9,230 ರನ್ ಗಳಿಸಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ತಮ್ಮ ಒಟ್ಟು ಟೆಸ್ಟ್ ರನ್‌ಗಳಲ್ಲಿ ಸಚಿನ್ ವಿದೇಶಿ ನೆಲದಲ್ಲಿ 8,705 ರನ್ ಗಳಿಸಿದ್ದರೆ, ಕೊಹ್ಲಿ ಭಾರತದ ಹೊರಗೆ 4,774 ರನ್‌ಗಳನ್ನು ಕಲೆ ಹಾಕಿದ್ದಾರೆ.

IND vs SL: ಕೊಲಂಬೊದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿರುವ ಸಾರಾಂಶ್‌ ಜೈನ್?

ಸೇನಾ (SENA) ದೇಶಗಳಲ್ಲಿ ಸಚಿನ್ 63 ಟೆಸ್ಟ್‌ ಪಂದ್ಯಗಳಿಂದ 51.30ರ ಸರಾಸರಿಯಲ್ಲಿ 5,387 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 17 ಶತಕ ಹಾಗೂ 23 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಕೊಹ್ಲಿ 46 ಟೆಸ್ಟ್‌ ಪಂದ್ಯಗಳಿಂದ 42.08ರ ಸರಾಸರಿಯಲ್ಲಿ 3,661 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು 12 ಶತಕ ಹಾಗೂ 14 ಅರ್ಧಶತಕಗಳನ್ನು ಗಳಿಸಿದ್ದಾರೆ.

ಅಂಕಿ-ಅಂಶಗಳನ್ನು ಗಮನಿಸಿದರೆ ಸಚಿನ್ ಕೊಂಚ ಮುಂದಿದ್ದಾರೆ. ಆದರೆ, ತವರು ಹೊರಗೆ ಭಾರತವನ್ನು ಪ್ರಬಲ ತಂಡವನ್ನಾಗಿ ರೂಪಿಸುವಲ್ಲಿ ಕೊಹ್ಲಿಯ ಪ್ರಭಾವ ದೊಡ್ಡದಾಗಿದೆ ಎಂದು ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.

“ಸಚಿನ್ ತೆಂಡೂಲ್ಕರ್ ಅವರಂತಹ ಆಟಗಾರರು ಭಾರತದಲ್ಲಿ ಆ ಟ್ರೆಂಡ್‌ ಅನ್ನು ಆರಂಭಿಸಿದರು. ಉಪಖಂಡದ ಬ್ಯಾಟರ್‌ಗಳು ಬೌನ್ಸಿ ಮತ್ತು ಸೀಮ್ ಆಗುವ ಪರಿಸ್ಥಿತಿಗಳಲ್ಲೂ ಉತ್ತಮವಾಗಿ ಆಡಬಹುದು ಎಂಬುದನ್ನು ಸಚಿನ್ ಮೊದಲ ಬಾರಿ ತೋರಿಸಿಕೊಟ್ಟರು. ವಿರಾಟ್ ಅದನ್ನು ಮುಂದಕ್ಕೆ ಕೊಂಡೊಯ್ದು ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದರು,” ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ತಲಾ ಐದು ವಿಕೆಟ್‌; ಅರ್ಧ ಚೆಂಡು ಹಂಚಿಕೊಂಡ ಇಂಗ್ಲೆಂಡ್‌ ವೇಗಿಗಳು

ಸಚಿನ್ ಮತ್ತು ಕೊಹ್ಲಿಯಂತಹ ಆಟಗಾರರು ಈಗಿನ ಭಾರತೀಯ ಬ್ಯಾಟರ್‌ಗಳ ಮೇಲೂ ದೊಡ್ಡ ಪ್ರಭಾವ ಬೀರಿದ್ದಾರೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಕೆಎಲ್ ರಾಹುಲ್ ಮತ್ತು ದೇವದತ್‌ ಪಡಿಕ್ಕಲ್ ಸೇರಿದಂತೆ ಹಾಲಿ ಆಟಗಾರರು ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಲು ಇವರ ಸಾಧನೆಗಳು ಪ್ರೇರಣೆಯಾಗಿವೆ. ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಪಡಿಕ್ಕಲ್ ಅದ್ಭುತ ಪ್ರದರ್ಶನ ನೀಡಿ ಮ್ಯಾಚ್‌ ವಿನ್ನಿಂಗ್ ಶತಕವನ್ನು ದಾಖಲಿಸಿದ್ದರು. ಕೆಎಲ್ ರಾಹುಲ್ ಕೂಡ 82 ರನ್‌ಗಳ ಉತ್ತಮ ಇನಿಂಗ್ಸ್ ಆಡಿದ್ದರು. ಆದರೆ, ವಿದೇಶಿ ನೆಲದಲ್ಲಿ ರಾಹುಲ್ ಇನ್ನಷ್ಟು ಉತ್ತಮ ಪ್ರದರ್ಶನ ನೀಡಬೇಕಿದೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

“ಕೆಎಲ್ ರಾಹುಲ್ ಉತ್ತಮ ತಂತ್ರಗಾರಿಕೆಯೊಂದಿಗೆ ಆಡುವ ಬ್ಯಾಟರ್ ಹಾಗೂ ಭಾರತದ ತಂಡಕ್ಕೆ ದೊಡ್ಡ ಆಸ್ತಿ. ಆದರೆ ವಿದೇಶಿ ನೆಲದಲ್ಲಿ ಅವರ ಸರಾಸರಿ ಕೇವಲ 34ರಷ್ಟಿದೆ. ಹೀಗಾಗಿ ಅವರಿಂದ ಇನ್ನಷ್ಟು ಉತ್ತಮ ಪ್ರದರ್ಶನ ಮೂಡಿ ಬರಬೇಕಾದ ಅಗತ್ಯವಿದೆ. ಕ್ರೀಸ್‌ಗೆ ಬಂದ ಬಳಿಕ ದೊಡ್ಡ ಮೊತ್ತ ಗಳಿಸಬೇಕು. ಕೇವಲ ಶತಕ ಗಳಿಸುವುದಲ್ಲ, ಅದನ್ನು 180 ರನ್‌ಗಳಂತಹ ದೊಡ್ಡ ಇನಿಂಗ್ಸ್‌ ಆಗಿ ಪರಿವರ್ತಿಸಬೇಕು. ಆರಂಭದಲ್ಲೇ ಔಟಾಗುವುದು ಅಥವಾ ಹೊಸ ಚೆಂಡಿಗೆ ವಿಕೆಟ್ ಕಳೆದುಕೊಳ್ಳುವ ಅಪಾಯ ಯಾವಾಗಲೂ ಇರುತ್ತದೆ. ಹೀಗಾಗಿ ರಾಹುಲ್ ಸಣ್ಣ ದೊಡ್ಡ ಮೊತ್ತಗಳನ್ನು ಇನ್ನಷ್ಟು ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸುವತ್ತ ಗಮನಹರಿಸಬೇಕು,” ಎಂದು ಡಿವಿಲಿಯರ್ಸ್ ಸಲಹೆ ನೀಡಿದ್ದಾರೆ.