ದ್ರಾವಿಡ್ ಪುತ್ರನ ಜತೆಗೆ ಭಾರತ ಅಂಡರ್-19 ತಂಡದ ಪರ ಚೊಚ್ಚಲ ಪಂದ್ಯವನ್ನಾಡಿದ ಆರ್ಯವೀರ್ ಸೆಹ್ವಾಗ್!
ಭಾರತ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಭಾರತ ಅಂಡರ್-19 ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ರಾಜ್‌ಕೋಟ್‌ನಲ್ಲಿ ಆಸ್ಟ್ರೇಲಿಯಾ ಅಂಡರ್-19 ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಆರ್ಯವೀರ್ ಭಾರತ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಪುತ್ರ ಕೂಡ ಆಡುತ್ತಿದ್ದಾರೆ.
ಭಾರತ ಅಂಡರ್-19 ತಂಡದ ಪರ ಆಡಿದ ಆರ್ಯವೀರ್ ಸೆಹ್ವಾಗ್. -
ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ಅವರ ಪುತ್ರ ಆರ್ಯವೀರ್ ಸೆಹ್ವಾಗ್ (Aaryavir Sehwag) ಶುಕ್ರವಾರ (ಸೆಪ್ಟೆಂಬರ್ 18) ಭಾರತ ಅಂಡರ್-19 ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಅಂಡರ್-19 ವಿರುದ್ಧ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಯೂತ್ ಏಕದಿನ ಪಂದ್ಯದಲ್ಲಿ ಆರ್ಯವೀರ್ ಕಣಕ್ಕಿಳಿದರು. ವೈಟ್-ಬಾಲ್ ಸರಣಿಗಾಗಿ ಕಿರಿಯರ ರಾಷ್ಟ್ರೀಯ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದ ಬೆನ್ನಲ್ಲೇ ಆರ್ಯವೀರ್ ಭಾರತ ಅಂಡರ್-19 ತಂಡದಲ್ಲಿ ಪದಾರ್ಪಣೆ ಮಾಡುವ ಅವಕಾಶ ಪಡೆದಿದ್ದಾರೆ.
ಆರ್ಯವೀರ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದು ನಾಯಕ ಲಕ್ಷ್ಯ ರೈಚಂದಾನಿ ಅವರೊಂದಿಗೆ ಇನಿಂಗ್ಸ್ ಆರಂಭಿಸಿದರು. ಇದೇ ವೇಳೆ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಕೂಡ ತಂಡದಲ್ಲಿ ಸ್ಥಾನ ಪಡೆದರು. ಅನ್ವಯ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದು, ತಂಡದ ವಿಕೆಟ್‌ಕೀಪರ್ ಬ್ಯಾಟರ್ ಆಗಿಯೂ ಜವಾಬ್ದಾರಿ ನಿರ್ವಹಿಸಿದರು.
ಭಾರತ ತಂಡದ ಟ್ರೋಫಿ ಸಂಭ್ರಮಕ್ಕೆ ಇಬ್ರಾಂಹಿಂ ಝದ್ರಾನ್‌ಗೆ ಆಹ್ವಾನ ನೀಡಿದ ಶ್ರೇಯಸ್ ಅಯ್ಯರ್!
ಮಳೆಯಿಂದಾಗಿ ಪಂದ್ಯವನ್ನು 20 ಓವರ್‌ಗಳಿಗೆ ಇಳಿಸಲಾಯಿತು. ಈ ಸಂದರ್ಭದಲ್ಲಿ ಆರ್ಯವೀರ್ ಉತ್ತಮ ಆರಂಭ ನೀಡಿದ್ದು, ಕೇವಲ 26 ಎಸೆತಗಳಲ್ಲಿ 28 ರನ್ ಗಳಿಸಿದರು. 45 ರನ್‌ಗಳ ಆರಂಭಿಕ ಜೊತೆಯಾಟದ ಬಳಿಕ 7ನೇ ಓವರ್‌ನಲ್ಲಿ ಸ್ಪೆನ್ಸರ್ ಗ್ರೀನ್ ಅವರ ಬೌಲಿಂಗ್‌ನಲ್ಲಿ ಆರ್ಯವೀರ್ ಔಟಾದರು. ಬಳಿಕ ಅನ್ವಯ್ ದ್ರಾವಿಡ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 18 ಎಸೆತಗಳಲ್ಲಿ 38 ರನ್ ಗಳಿಸಿದರು. ಅವರ ಉಪಯುಕ್ತ ಇನಿಂಗ್ಸ್ ನೆರವಿನಿಂದ ಭಾರತ ಅಂಡರ್-19 ತಂಡ 20 ಓವರ್‌ಗಳಲ್ಲಿ 182 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.
Aaryavir Sehwag scored 28(26) , while Anvay Dravid made 38(18)
— ONE7 (@17pixles) September 18, 2026
in their first outing against Australia U19 in the Youth ODIs.
📸 [sportstarweb] pic.twitter.com/5HMFlSKMFf
ಸ್ಟೇಡಿಯಂನಲ್ಲಿ ವೀರೇಂದ್ರ ಸೆಹ್ವಾಗ್
ಇನ್ನು ಮಗ ಆರ್ಯವೀರ್‌ಗೆ ಮೊದಲ ಬಾರಿ ಭಾರತ ಅಂಡರ್-19 ತಂಡದ ಕ್ಯಾಪ್ ನೀಡುವ ಸಂದರ್ಭದಲ್ಲಿ ವೀರೇಂದ್ರ ಸೆಹ್ವಾಗ್ ಕೂಡ ಸ್ಟೇಡಿಯಂನ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡರು. ಭಾರತದ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಅವರ ಇಬ್ಬರು ಪುತ್ರರೂ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತಿದ್ದಾರೆ. ಇದೇ ರೀತಿ ರಾಹುಲ್ ದ್ರಾವಿಡ್ ಕುಟುಂಬದಲ್ಲೂ ಕ್ರಿಕೆಟ್ ಪರಂಪರೆ ಮುಂದುವರಿದಿದೆ. ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿದ್ದು, 2024ರಲ್ಲಿ ಭಾರತ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು.
Aaryavir Sehwag, the son of @virendersehwag , makes his India U-19 debut against Australia U-19... @sportstarweb pic.twitter.com/RS1i6c0aHd
— Shayan Acharya (@ShayanAcharya) September 18, 2026
ಆದರೆ, 2025ರ ಅಕ್ಟೋಬರ್‌ನಲ್ಲಿ 20ನೇ ವರ್ಷಕ್ಕೆ ಕಾಲಿಟ್ಟ ಕಾರಣ ಸಮಿತ್ ದ್ರಾವಿಡ್ 2026ರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಆಡಲು ಅರ್ಹರಾಗಿರಲಿಲ್ಲ. ಇದೇ ಪರಿಸ್ಥಿತಿ ಆರ್ಯವೀರ್‌ಗೂ ಎದುರಾಗಲಿದೆ. ಆರ್ಯವೀರ್ 2027ರಲ್ಲಿ 20ನೇ ವರ್ಷಕ್ಕೆ ಕಾಲಿಡಲಿದ್ದು, ಹೀಗಾಗಿ 2028ರ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಅವರು ಅರ್ಹರಾಗಿರುವುದಿಲ್ಲ. ಆದರೆ, 17 ವರ್ಷದ ಅನ್ವಯ್ ದ್ರಾವಿಡ್ ಮುಂದಿನ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿಯೂ ಆಡಲು ಅರ್ಹರಾಗಿದ್ದಾರೆ. ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.