IND vs ENG: 72 ವರ್ಷಗಳ ಹಳೆಯ ದಾಖಲೆ ಮುರಿದ ಝ್ಯಾಕ್ ಕ್ರಾವ್ಲಿ-ಬೆನ್ ಡಕೆಟ್ ಜೋಡಿ!
ಲೀಡ್ಸ್ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಭಾರತ ತಂಡದ ವಿರುದ್ದದ ಮೊದಲನೇ ಟೆಸ್ಟ್ ಪಂದ್ಯದ ನಾಲ್ಕನೇ ಇನಿಂಗ್ಸ್ನಲ್ಲಿ ಆರಂಭಿಕ ವಿಕೆಟ್ಗೆ ಬೆನ್ ಡಕೆಟ್ ಹಾಗೂ ಝ್ಯಾಕ್ ಕ್ರಾವ್ಲಿ 188 ರನ್ಗಳನ್ನು ಕಲೆ ಹಾಕಿದರು. ಆ ಮೂಲಕ 72 ವರ್ಷಗಳ ಹಳೆಯ ದಾಖಲೆಯನ್ನು ಈ ಇಬ್ಬರೂ ಮುರಿದಿದ್ದಾರೆ.

188 ರನ್ಗಳ ಜೊತೆಯಾಟದ ಮೂಲಕ ಇತಿಹಾಸ ಬರೆದ ಝ್ಯಾಕ್ ಕ್ರಾವ್ಲಿ-ಬೆನ್ ಡಕೆಟ್ ಜೋಡಿ.

ಲೀಡ್ಸ್: ಇಲ್ಲಿನ ಹೆಡಿಂಗ್ಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಡೆದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯ (IND vs ENG) ಮೊದಲನೇ ಪಂದ್ಯದ ಐದನೇ ದಿನ ಇಂಗ್ಲೆಂಡ್ ತಂಡದ ಅರಂಭಿಕ ಬ್ಯಾಟ್ಸ್ಮನ್ಗಳಾದ ಝ್ಯಾಕ್ ಕ್ರಾವ್ಲಿ(Zak Crawley) ಹಾಗೂ ಬೆನ್ ಡಕೆಟ್ (Ben Duckett) ಅವರು ದೊಡ್ಡ ಮೊತ್ತದ ಜೊತೆಯಾಟವನ್ನು ಆಡುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. ಈ ಜೋಡಿ ಪಂದ್ಯದ ನಾಲ್ಕನೇ ಇನಿಂಗ್ಸ್ನಲ್ಲಿ 188 ರನ್ಗಳ ಜೊತೆಯಾಟವನ್ನು ಆಡುವ ಮೂಲಕ 72 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ.
ಮಂಗಳವಾರ ಬೆಳಗ್ಗೆ 26 ರನ್ಗಳಿಂದ ಐದನೇ ದಿನವನ್ನು ಆರಂಭಿಸಿದ್ದ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲ್ಲು 350 ರನ್ಗಳು ಅಗತ್ಯವಿತ್ತು. ಅದರಂತೆ ಬ್ಯಾಟಿಂಗ್ ಮುಂದುವರಿಸಿದ ಝ್ಯಾಕ್ ಕ್ರಾವ್ಲಿ ಹಾಗೂ ಬೆನ್ ಡಕೆಟ್ ಜೋಡಿ ಭಾರತದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿತು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಇಬ್ಬರೂ ಲೀಲಾ ಜಾಲವಾಗಿ ಬ್ಯಾಟ್ ಬೀಸಿದರು. ಡಕೆಟ್ ಹಾಗೂ ಕ್ರಾವ್ಲಿ ಮುರಿಯದ ಮೊದಲನೇ ವಿಕೆಟ್ಗೆ 188 ರನ್ಗಳನ್ನು ಕಲೆ ಹಾಕಿದರು. ಆ ಮೂಲಕ ಇಂಗ್ಲೆಂಡ್ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು.
IND vs ENG: ಬೆನ್ ಡಕೆಟ್ ಜತೆ ಮಾತಿನ ಚಕಮಕಿ ನಡೆಸಿದ ಮೊಹಮ್ಮದ್ ಸಿರಾಜ್!
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡುತ್ತಿದ್ದ ಝ್ಯಾಕ್ ಕ್ರಾವ್ಲಿ ಅವರು 65 ರನ್ ಗಳಿಸಿದ್ದರು ಹಾಗೂ ಕ್ರೀಸ್ನಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಂಡಿದ್ದರು. ಆದರೆ, 42ನೇ ಓವರ್ನಲ್ಲಿ ಪ್ರಸಿಧ್ ಕೃಷ್ಣ ಎಸೆತದಲ್ಲಿ ಕ್ರಾವ್ಲಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಇಂಗ್ಲೆಂಡ್ ತಂಡ ತನ್ನ ಮೊದಲನೇ ವಿಕೆಟ್ ಅನ್ನು ಕಳೆದುಕೊಂಡಿತು. ಆದರೆ, ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್ ಮುಂದುವರಿಸಿದ್ದ ಬೆನ್ ಡಕೆಟ್, 170 ಎಸೆತಗಳಲ್ಲಿ 149 ರನ್ಗಳನ್ನು ಗಳಿಸಿ ಶಾರ್ದುಲ್ ಠಾಕೂರ್ಗೆ ವಿಕೆಟ್ ಒಪ್ಪಿಸಿದರು.
ಇತಿಹಾಸ ಸೃಷ್ಟಿಸಿದ ಕ್ರಾವ್ಲಿ-ಡಕೆಟ್
ಭಾರತದ ವಿರುದ್ದ ಟೆಸ್ಟ್ ಪಂದ್ಯವೊಂದರ ನಾಲ್ಕನೇ ಇನಿಂಗ್ಸ್ನಲ್ಲಿ ಆರಂಭಿಕ ವಿಕೆಟ್ಗೆ 150 ಅಥವಾ ಅದಕ್ಕಿಂತ ಹೆಚ್ಚಿನ ರನ್ಗಳನ್ನು ಕಲೆ ಹಾಕಿದ ವಿಶ್ವದ ಮೊದಲ ಜೋಡಿ ಎಂಬ ದಾಖಲೆಯನ್ನು ಬೆನ್ ಡಕೆಟ್ ಹಾಗೂ ಝ್ಯಾಕ್ ಕ್ರಾವ್ಲಿ ಜೋಡಿ ಭಾಜನವಾಗಿದೆ. ಆ ಮೂಲಕ ವೆಸ್ಟ್ ಇಂಡೀಸ್ನ ಅಲನ್ ರೇ ಮತ್ತು ಜೆಫ್ರಿ ಸ್ಟಾಲಿಮೋರ್ ಅವರ 72 ವರ್ಷಗಳ ಹಳೆಯ ದಾಖಲೆಯನ್ನು ಇಂಗ್ಲೆಂಡ್ ಜೋಡಿ ಮುರಿದಿದೆ. 1953ರಲ್ಲಿ ಟ್ರಿನಿಡಾಡ್ನ ಪೋರ್ಟ್ ಆಫ್ ಸ್ಪೇನ್ನಲ್ಲಿ ಭಾರತದ ವಿರುದ್ದ ಈ ಜೋಡಿ ನಾಲ್ಕನೇ ಇನಿಂಗ್ಸ್ನಲ್ಲಿ 142 ರನ್ಗಳನ್ನು ಕಲೆ ಹಾಕಿತ್ತು.
IND vs ENG: ʻಪಲ್ಟಿ ಹೊಡೆದು ಸಂಭ್ರಮಿಸಿʼ-ರಿಷಭ್ ಪಂತ್ಗೆ ಸುನೀಲ್ ಗವಾಸ್ಕರ್ ಆಗ್ರಹ! ವಿಡಿಯೊ
ಭಾರತದ ವಿರುದ್ದದ ಟೆಸ್ಟ್ ಪಂದ್ಯದ ನಾಲ್ಕನೇ ಇನಿಂಗ್ಸ್ನಲ್ಲಿ ಆರಂಭಿಕ ವಿಕೆಟ್ಗೆ ಅತಿ ಹೆಚ್ಚು ಜೊತೆಯಾಟ
ಬೆನ್ ಡಕೆಟ್-ಝ್ಯಾಕ್ ಕ್ರಾವ್ಲಿ (ಇಂಗ್ಲೆಂಡ್): 188 ರನ್ಗಳು (2025, ಹೆಡಿಂಗ್ಲೆ)
ಅಲನ್ ರೇ- ಜೆಫ್ರಿ ಸ್ಟಾಲಿಮೋರ್ (ವೆಸ್ಟ್ ಇಂಡೀಸ್): 142 ರನ್ಗಳು (1953, ಪೋರ್ಟ್ ಆಫ್ ಸ್ಪೇನ್)
ಗ್ಯಾರಿ ಸ್ಟೀಡ್-ಮ್ಯಾಟ್ ಹಾರ್ನಿ (ನ್ಯೂಜಿಲೆಂಡ್): 131 ರನ್ಗಳು (1999, ಅಹಮದಾಬಾದ್)
ಬ್ರಿಯಾನ್ ಬೊಲುಸ್-ಮೈಕ್ ಸ್ಮಿತ್ (ಇಂಗ್ಲೆಂಡ್): 125 ರನ್ಗಳು (1964, ಬ್ರೆಬೋರ್ನ್, ಮುಂಬೈ)
ನಜ್ಮುಲ್ ಹುಸೇನ್ ಶಾಂಟೊ-ಝಕೀರ್ ಹುಸೇನ್ (ಬಾಂಗ್ಲಾದೇಶ): 124 ರನ್ಗಳು (2022, ಚಟ್ಟೋಗ್ರಾಮ್)
IND vs ENG: ರಾಹುಲ್ ದ್ರಾವಿಡ್ ವಿಶ್ವ ದಾಖಲೆ ಸರಿಗಟ್ಟಿದ ಜೋ ರೂಟ್
ಜೋ ರೂಟ್-ಜಾನಿ ಬೈರ್ಸ್ಟೋವ್ಗೆ ಅಗ್ರ ಸ್ಥಾನ
ಡಕೆಟ್ ಮತ್ತು ಕ್ರಾವ್ಲಿ ಅವರ 188 ರನ್ಗಳು ಭಾರತದ ವಿರುದ್ಧ ನಾಲ್ಕನೇ ಇನಿಂಗ್ಸ್ನಲ್ಲಿ ದಾಖಲಾದ ನಾಲ್ಕನೇ ಗರಿಷ್ಠ ಜೊತೆಯಾಟವಾಗಿದೆ. ಜೋ ರೂಟ್ ಹಾಗೂ ಬೈರ್ಸ್ಟೋವ್ ಜೋಡಿ ಅಗ್ರ ಸ್ಥಾನದಲ್ಲಿದೆ. 2022ರಲ್ಲಿ ಈ ಜೋಡಿ ಭಾರತದ ವಿರುದ್ಧ ನಾಲ್ಕನೇ ಇನಿಂಗ್ಸ್ನಲ್ಲಿ 267 ರನ್ಗಳನ್ನು ಕಲೆ ಹಾಕಿತ್ತು. ಎರಡನೇ ಸ್ಥಾನದಲ್ಲಿ ರಾಯ್ ಡಿಯಾಸ್ ಹಾಗೂ ದುಲೀಪ್ ಮೆಂಡಿಸ್ (216 ರನ್, 1985) ಹಾಗೂ ಮೂರನೇ ಸ್ಥಾನದಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಫಾಫ್ ಡು ಪ್ಲೆಸಿಸ್ (205 ರನ್, 2013) ಇದ್ದಾರೆ.