ʻಕೋಚ್ ಏನು ಮಾಡುತ್ತಿದ್ದಾರೆ?ʼ: ಭಾರತದ ಕಳಪೆ ಫೀಲ್ಡಿಂಗ್ ವಿರುದ್ದ ಅಮಿತ್ ಮಿಶ್ರಾ ಕಿಡಿ!
ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಕಳಪೆ ಫೀಲ್ಡಿಂಗ್‌ನಿಂದಾಗಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಅದರಂತೆ ಶುಕ್ರವಾರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಆಟಗಾರರು ಫೀಲ್ಡಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರು. ಈ ಬಗ್ಗೆ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಭಾರತ ತಂಡದ ಕಳಪೆ ಫೀಲ್ಡಿಂಗ್ ವಿರುದ್ಧ ಅಮಿತ್ ಮಿಶ್ರಾ ಕಿಡಿ. -

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ಭಾರತ ತಂಡದ ಕಳಪೆ ಫೀಲ್ಡಿಂಗ್ ವಿರುದ್ಧ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ (Amith Mishra) ಅಸಮಾಧಾನವನ್ನು ವ್ಯಕ್ಯಪಡಿಸಿದ್ದಾರೆ. ಭಾರತ ತಂಡ ಈ ಟೂರ್ನಿಯಲ್ಲಿ ಕಳಪೆ ಫೀಲ್ಡಿಂಗ್ ಮಾಡುತ್ತಿದೆ. ಸೂಪರ್-4ರ ಹಂತದಲ್ಲಿಯೂ ಮುಂದುವರಿದಿತ್ತು. ಪಾಕಿಸ್ತಾನ ವಿರುದ್ಧ ನಾಲ್ಕು ಕ್ಯಾಚ್‌ಗಳನ್ನು ಕೈಚೆಲ್ಲಿತ್ತು, ನಂತರ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿಯೂ ಐದು ಕ್ಯಾಚ್‌ಗಳನ್ನು ಬಿಟ್ಟಿತ್ತು. ಶುಕ್ರವಾರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿಯೂ ಭಾರತ ತಂಡದ ಆಟಗಾರರು ಕಳಪೆ ಫೀಲ್ಡಿಂಗ್ ಮಾಡಿದ್ದರು.
ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಫೀಲ್ಡಿಂಗ್‌ನಲ್ಲಿ ಒತ್ತಡದಲ್ಲಿರುವಂತೆ ಕಂಡಿದ್ದರು. ಹಾಗೆಯೇ ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಕ್ರೀಡಾಂಗಣದ ಲೈಟ್‌ಗಳ ಬೆಳಕಿನಲ್ಲಿ ಕ್ಯಾಚ್ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. ಇತ್ತೀಚೆಗೆ ಸ್ಪಿನ್ ದಿಗ್ಗಜ ಅಮಿತ್ ಮಿಶ್ರಾ ಅವರು, ಭಾರತ ತಂಡದ ಕಳಪೆ ಫೀಲ್ಡಿಂಗ್ ವಿರುದ್ಧ ದೂರಿದ್ದಾರೆ. ಭಾರತ ತಂಡ ಕೋಚ್‌ಗಳು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.
Asia Cup 2025 final: ಫೈನಲ್ ತನಕ ಭಾರತ ಗೆದ್ದು ಬಂದ ಹಾದಿಯ ಇಣುಕು ನೋಟ
ಎಎನ್‌ಐ ಜೊತೆ ಮಾತನಾಡಿದ ಅಮಿತ್ ಮಿಶ್ರಾ, "ನೀವು ಅಭ್ಯಾಸ ಮಾಡಬೇಕು. ಫೀಲ್ಡಿಂಗ್ ಕೋಚ್ ಏನು ಮಾಡುತ್ತಿದ್ದಾರೆ? ಅವರು ಬೆಳಕಿನಲ್ಲಿ ಕ್ಯಾಚ್‌ಗಳನ್ನು ತೆಗೆದುಕೊಳ್ಳುವುದನ್ನು ಅವರಿಗೆ ಅಭ್ಯಾಸ ಮಾಡಿಸಬೇಕು. ನೀವು ವೃತ್ತಿಪರ ಕ್ರಿಕೆಟಿಗರು. ನೀವು ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ಅದಕ್ಕೆ ಹೊಂದಿಕೊಳ್ಳಬೇಕು. ಒಂದು ಪಂದ್ಯದಲ್ಲಿ ಒಂದು ಅಥವಾ ಎರಡು ಕ್ಯಾಚ್‌ಗಳು ಕೈಬಿಡಬಹುದು ಎಂದು ನಾನು ಒಪ್ಪುತ್ತೇನೆ. ಆದರೆ ಅದು ನಿರಂತರವಾಗಿ ನಡೆಯುತ್ತಿದೆ. ಗೌತಮ್ ಗಂಭೀರ್ ಫೀಲ್ಡಿಂಗ್‌ನತ್ತ ಗಮನ ಹರಿಸಬೇಕು ಎಂದು ನಾನು ಭಾವಿಸುತ್ತೇನೆ," ಎಂದು ಹೇಳಿದ್ದಾರೆ.
"ಟಿ20ಐ ಪಂದ್ಯಗಳಲ್ಲಿ ಒಂದು ಕ್ಯಾಚ್ ಬಿಡುವುದು ದುಬಾರಿಯಾಗಬಹುದು ಮತ್ತು ಭಾರತ ತಂಡ ಮೂರರಿಂದ ನಾಲ್ಕು ಕ್ಯಾಚ್ ಬಿಡುತ್ತಿದೆ. ಅವರು ಫೀಲ್ಡಿಂಗ್ ಮೇಲೆ ಗಮನ ಹರಿಸಬೇಕು. ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಯಾವುದೇ ತಪ್ಪುಗಳು ಇರಬಾರದು. ಸಮಸ್ಯೆ ಇದ್ದರೂ ಸಹ ನೀವು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು," ಎಂದು ಅವರು ಸಲಹೆ ನೀಡಿದ್ದಾರೆ.
Asia Cup 2025 final: ನಾಳೆ ಭಾರತ vs ಪಾಕ್ ಫೈನಲ್; ಉಭಯ ತಂಡಗಳ ದಾಖಲೆ ಹೇಗಿದೆ?
ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 28ರ ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೂರನೇ ಬಾರಿ ಮುಖಾಮುಖಿಯಾಗಲಿವೆ. ಟೀಮ್ ಇಂಡಿಯಾ ಟೂರ್ನಿಯಲ್ಲಿ ಇದುವರೆಗಿನ ಎರಡು ಬಾರಿ ಮುಖಾಮುಖಿಯಾಗಿದ್ದವು. ಈ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನದ ಎದುರು ಭಾರತ ಪ್ರಾಬಲ್ಯ ಮೆರೆದಿತ್ತು. ಇದೀಗ ಫೈನಲ್ ಪಂದ್ಯದಲ್ಲಿಯೂ ಅದೇ ಲಯವನ್ನು ಮುಂದುವರಿಸಲು ಟೀಮ್ ಇಂಡಿಯಾ ಎದುರು ನೋಡುತ್ತಿದೆ. ಮತ್ತೊಂದೆಡೆ, ಪಾಕಿಸ್ತಾನ ತಂಡ, ಟೂರ್ನಿಯಲ್ಲಿ ಭಾರತದ ವಿರುದ್ಧ ಮಾತ್ರ ಸೋತಿದೆ ಮತ್ತು ತಮ್ಮ ಕೊನೆಯ ಎರಡು ಸೋಲುಗಳಿಗೆ ಸೇಡು ತೀರಿಸಿಕೊಳ್ಳಲು ಮತ್ತು ಮೂರನೇ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆಲ್ಲಲು ಪಾಕ್ ಎದುರು ನೋಡುತ್ತಿದೆ.