ಕುಚುಕು ಗೆಳೆಯ ವಿರಾಟ್ ಕೊಹ್ಲಿಗೆ ಎ ಬಿ ಡಿವಿಲಿಯರ್ಸ್ ವಿಶೇಷ ಸಂದೇಶ!
ಅಂತಾರಾಷ್ಟ್ರಿಯ ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಕ್ರಿಕೆಟ್ ದಿಗ್ಗಜರು ಕೊಹ್ಲಿ ಟೆಸ್ಟ್ ಕೆರಿಯರ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆ ತಿಳಿಸಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾ ದಿಗ್ಗಜ ಎ ಬಿ ಡಿವಿಲಿಯರ್ಸ್ ಕೂಡ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಆತ್ಮೀಯ ಗೆಳೆಯನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವಿರಾಟ್ ಕೊಹ್ಲಿಗೆ ಎಬಿ ಡಿ ವಿಲಿಯರ್ಸ್ ವಿಶೇಷ ಸಂದೇಶ.

ನವದೆಹಲಿ: ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ (Virat Kohli) ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ಮೇ 12 ರಂದು ಸೋಮವಾರ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದರಲ್ಲಿ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ದಕ್ಷಿಣ ಆಫ್ರಿಕಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ದಿಗ್ಗಜ ಎ ಬಿ ಡಿವಿಲಿಯರ್ಸ್ (AB De Villiers) ಕೂಡ ತಮ್ಮ ಕುಚುಕು ಗೆಳೆಯ ವಿರಾಟ್ ಕೊಹ್ಲಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ 14 ವರ್ಷಗಳ ಟೆಸ್ಟ್ ವೃತ್ತಿ ಜೀವನದಲ್ಲಿ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಂದು ದಶಕದ ಅವಧಿ ಜೊತೆಯಾಗಿ ಆಡಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಂದಾಗ ಕೊಹ್ಲಿ ಭಾರತದ ಪರ ಆಡಿದರೆ, ಎಬಿಡಿ ದಕ್ಷಿಣ ಆಫ್ರಿಕಾ ಪರ ಆಡಲಿದ್ದಾರೆ. ಆದರೆ, ಇವರಿಬ್ಬರ ನಡುವಣ ಬಾಂಧವ್ಯ ಅದ್ಬುತವಾಗಿದೆ. ಒಬ್ಬರನ್ನೊಬ್ಬರು ಎಂದಿಗೂ ಬಿಟ್ಟು ಕೊಡುವುದಿಲ್ಲ.
ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿಗೆ ಸಚಿನ್ ತೆಂಡೊಲ್ಕರ್ ವಿಶೇಷ ಸಂದೇಶ!
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಿವೃತ್ತಿಯ ಕುರಿತು ಎ ಬಿ ಡಿವಿಲಿಯರ್ಸ್ ಹಂಚಿಕೊಂಡಿರುವ ಪೋಸ್ಟ್ ಇಬ್ಬರ ನಡುವಣ ಅನನ್ಯ ಸಂಬಂಧವನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ. ಎಬಿಡಿ ಮಾಡಿರುವ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ವಿರಾಟ್ ಕೊಹ್ಲಿಗೆ ಎಬಿಡಿ ಅಭಿನಂದನೆ
"ನನ್ನ ಆತ್ಮೀಯ ಸ್ನೇಹಿತನ ಅದ್ಭುತ ಟೆಸ್ಟ್ ಕೆರಿಯರ್‌ಗೆ ಅಭಿನಂದನೆಗಳು! ನಿನ್ನ ಧೃಡ ಸಂಕಲ್ಪ ಮತ್ತು ಕೌಶಲ ನನಗೆ ಯಾವಾಗಲೂ ಸ್ಪೂರ್ತಿ ನೀಡುತ್ತದೆ. ನೀವು ನಿಜವಾದ ದಂತಕತೆ," ಎಂದು ಎ ಬಿ ಡಿವಿಲಿಯರ್ಸ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ತಮ್ಮ ಗೆಳೆಯ ವಿರಾಟ್ ಕೊಹ್ಲಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
Congrats to my biscotti @imVkohli on an epic Test career! Your determination & skill have always inspired me. True legend! ❤️🙌🏻 #ViratKohli𓃵 pic.twitter.com/2DnNLRzSrI
— AB de Villiers (@ABdeVilliers17) May 12, 2025
ವಿರಾಟ್ ಕೊಹ್ಲಿಯ ಟೆಸ್ಟ್ ಅಂಕಿಅಂಶ
2011 ರಲ್ಲಿ ಕಿಂಗ್ಸ್‌ಸ್ಟನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಮುಂದಿನ 10 ವರ್ಷಗಳಲ್ಲಿ ಕೊಹ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಆಗಿ ಮೂಡಿ ಬಂದರು. ಅವರು 59.47ರ ಸರಾಸರಿಯಲ್ಲಿ 27 ಶತಕಗಳನ್ನು ಹೊಡೆಯುವುದರ ಮೂಲಕ 7202 ರನ್ ಗಳಿಸಿದ್ದರು. ಅಂತಿಮವಾಗಿ ತಮ್ಮ 123 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ, 9230 ರನ್‌ಗಳ ಮೂಲಕ ತಮ್ಮ ಟೆಸ್ಟ್ ಕೆರಿಯರ್ ಅನ್ನು ಮುಗಿಸಿದರು. ಇದರಲ್ಲಿ ಅವರು 7 ದ್ವಿಶತಕಗಳು, 30 ಶತಕಗಳು ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ.
Virat Kohli: ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ ಅತ್ಯಂತ ಶ್ರೇಷ್ಠ ಇನಿಂಗ್ಸ್‌ಗಳು!
ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಸಚಿನ್ ತೆಂಡೂಲ್ಕರ್ (15,921), ರಾಹುಲ್ ದ್ರಾವಿಡ್ (13,265) ಹಾಗೂ ಸುನೀಲ್ ಗವಾಸ್ಕಾರ್ (10,122) ಕ್ರಮವಾಗಿ ಅಗ್ರ ಮೂರು ಸ್ಥಾನಗಳನ್ನು ಅಲಂಕರಿಸಿದ್ದಾರೆ.