ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಲಾಸ್ಟ್ ಓವರ್ ಥ್ರಿಲ್ಲರ್; ನೇಪಾಳ ಎದುರು ಸೋಲಿನ ಭೀತಿಯಿಂದ ಪಾರಾದ ಇಂಗ್ಲೆಂಡ್‌

T20 World Cup 2026: ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ತಂಡ ಜಾಕೋಬ್ ಬೆಥೆಲ್(55) ಮತ್ತು ನಾಯಕ ಹ್ಯಾರಿ ಬ್ರೂಕ್(53) ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 184 ರನ್‌ ಬಾರಿಸಿತು. ಸವಾಲಿನ ಮೊತ್ತವನ್ನು ಹಿಂಬಾಲಿಸಿದ ನೇಪಾಳ 6 ವಿಕೆಟ್‌ಗೆ 180 ರನ್‌ ಗಳಿಸಲಷ್ಟೇ ಶಕ್ತವಾಗಿ ಕೇವಲ 4 ರನ್‌ ಅಂತರದಿಂದ ಸೋಲು ಕಂಡಿತು.

ಲಾಸ್ಟ್ ಓವರ್ ಥ್ರಿಲ್ಲರ್; ನೇಪಾಳ ವಿರುದ್ಧ ಇಂಗ್ಲೆಂಡ್‌ಗೆ ರೋಚಕ ಜಯ

England vs Nepal -

Abhilash BC
Abhilash BC Feb 8, 2026 8:00 PM

ಮುಂಬಯಿ, ಫೆ.8: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್‌(T20 World Cup 2026)ನ ಇಂಗ್ಲೆಂಡ್‌ ಮತ್ತು ನೇಪಾಳ(ENG vs NEP) ವಿರುದ್ಧದ ಪಂದ್ಯ ಲಾಸ್ಟ್ ಓವರ್ ಥ್ರಿಲ್ಲರ್‌ಗೆ ಸಾಕ್ಷಿಯಾಯಿತು. ರೋಚಕ ಪಂದ್ಯದಲ್ಲಿ ಇಂಗ್ಲೆಂಡ್‌ 4 ರನ್‌ಗಳ ಗೆಲುವು ಸಾಧಿಸಿದರೆ, ನೇಪಾಳ ತಂಡದ ಹೋರಾಟ ಕ್ರಿಕೆಟ್‌ ಅಭಿಮಾನಿಗಳ ಮನಗೆದ್ದಿತು.

ಕೊನೆಯ ಓವರ್‌ನಲ್ಲಿ ನೇಪಾಳ ತಂಡಕ್ಕೆ 10 ರನ್‌ ಗಳಿಸುವ ಸವಾಲು ಎದುರಾಯಿತು. ಸ್ಯಾಮ್‌ ಕರನ್‌ ಎಸೆದ ಈ ಓವರ್‌ನ ಮೊದಲ ಎಸೆತ ಡಾಟ್‌ ಆಯಿತು. ಎರಡನೇ ಮತ್ತು ಮೂರನೇ ಎಸೆತದಲ್ಲಿ ತಲಾ ಒಂದು ರನ್‌ ಬಂತು. ನಾಲ್ಕನೇ ಎಸೆತದಲ್ಲಿ ಎರಡು ರನ್‌ ದಾಖಲಾಯಿತು. ಐದನೇ ಎಸೆತ ಮತ್ತೆ ಡಾಟ್‌ ಬಾಲ್‌, ಅಂತಿಮ ಎಸೆತದಲ್ಲಿ ನೇಪಾಳ ಗೆಲುವಿಗೆ 6 ರನ್‌ ಬೇಕಾಯಿತು. ಆದರೆ ಇದರಲ್ಲಿ ವಿಫಲವಾಗಿ ಒಂದು ರನ್‌ ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್‌ 4 ರನ್‌ಗಳ ರೋಚಕ ಗೆಲುವು ಸಾಧಿಸಿತು. ಸ್ಯಾಮ್‌ ಕರನ್‌ ಗೆಲುವಿನ ಹೀರೋ ಎನಿಸಿದರು.

ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ತಂಡ ಜಾಕೋಬ್ ಬೆಥೆಲ್(55) ಮತ್ತು ನಾಯಕ ಹ್ಯಾರಿ ಬ್ರೂಕ್(53) ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 184 ರನ್‌ ಬಾರಿಸಿತು. ಸವಾಲಿನ ಮೊತ್ತವನ್ನು ಹಿಂಬಾಲಿಸಿದ ನೇಪಾಳ 6 ವಿಕೆಟ್‌ಗೆ 180 ರನ್‌ ಗಳಿಸಲಷ್ಟೇ ಶಕ್ತವಾಗಿ ಕೇವಲ 4 ರನ್‌ ಅಂತರದಿಂದ ಸೋಲು ಕಂಡಿತು. ಲ್ಯೂಕ್ ವುಡ್ ಮತ್ತು ಜೋಫ್ರಾ ಆರ್ಚರ್‌ ತಲಾ ಮೂರು ವಿಕೆಟ್‌ ಕಿತ್ತರೆ, ಲಿಯಾಮ್ ಡಾಸನ್ ಎರಡು ವಿಕೆಟ್‌ ಪಡೆದರು. ಗೆಲುವಿನ ಹೀರೋ ಕರನ್‌ ಒಂದು ವಿಕೆಟ್‌ ಪಡೆದರು.

ಬೃಹತ್‌ ಮೊತ್ತ ಪೇರಿಸಿಯೂ ಸೋಲು ಕಂಡ ಆಫ್ಘಾನ್‌; ಕಿವೀಸ್‌ಗೆ 5 ವಿಕೆಟ್‌ ಜಯ

ಚೇಸಿಂಗ್‌ ವೇಳೆ ನೇಪಾಳ ಪರ ಕುಶಾಲ್ ಭುರ್ತೆಲ್(29) ಮತ್ತು ರೋಹಿತ್ ಪೌಡೆಲ್(39) ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆ ಬಳಿಕ ದೀಪೇಂದ್ರ ಸಿಂಗ್ ಐರೀ ಆಂಗ್ಲ ಬೌಲರ್‌ಗಳ ಬೆವರಿಳಿಸಿ 29 ಎಸೆತಗಳಿಂದ 44 ರನ್‌ ಬಾರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಿದ ಲೋಕೇಶ್ ಬಿರುಸಿನ ಬ್ಯಾಟಿಂಗ್‌ ಮೂಲಕ ತಂಡದ ಗೆಲುವಿನ ಆಸೆ ಜೀವಂತವಿರಿಸಿದರು. ಆದರೆ ಅಂತಿಮ ಓವರ್‌ನಲ್ಲಿ 10 ರನ್‌ ಗಳಿಸವ ಸವಾಲು ಮೆಟ್ಟಿನಿಲ್ಲುವಲ್ಲಿ ವಿಫಲರಾದದರು. 20 ಎಸೆತ ಎದುರಿಸಿ ಅಜೇಯ 39 ರನ್‌ ಗಳಿಸಿದರು.

ಇಂಗ್ಲೆಂಡ್‌ಗೆ ಬೆಥೆಲ್-ಬ್ರೂಕ್‌ ಆಸರೆ

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ಆರಂಭಿ ಆಘಾತ ಎದುರಿಸಿತು. ಸ್ಫೋಟಕ ಬ್ಯಾಟರ್‌ ಫಿಲ್‌ ಸಾಲ್ಟ್‌(1) ವಿಕೆಟ್‌ ಕಳೆದುಕೊಂಡಿತು. ಈ ವೇಳೆ ಜಾಸ್‌ ಬಟ್ಲರ್‌(26) ಮತ್ತು ಜಾಕೋಬ್ ಬೆಥೆಲ್ ಸಣ್ಣ ಜತೆಯಾಟ ನಡೆಸಿ ತಂಡಕ್ಕೆ ನೆರವಾದರು. ಬೆಥೆಲ್ ಅರ್ಧಶತಕ ಬಾರಿಸಿದರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ ತಲಾ 4 ಬೌಂಡರಿ ಮತ್ತು ಸಿಕ್ಸರ್‌ ಸಿಡಿಯಿತು. ಬ್ರೂಕ್‌ ಕೂಡ 4 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿ 53 ರನ್‌ ಗಳಿಸಿದರು. ಅಂತಿಮವಾಗಿ ವಿಲ್‌ ಜಾಕ್ಸ್‌ 18 ಎಸೆತಗಳಿಂದ ಅಜೇಯ 39 ಕಲೆಹಾಕಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾದರು. ದೀಪೇಂದ್ರ ಸಿಂಗ್ ಐರೀ ಮತ್ತು ನಂದನ್ ಯಾದವ್ ತಲಾ ಎರಡು ವಿಕೆಟ್‌ ಕಿತ್ತರು.