IND vs ENG 1st Test: ಲೀಡ್ಸ್ನಲ್ಲಿ ಭಾರತದ ಟೆಸ್ಟ್ ಸಾಧನೆ ಹೇಗಿದೆ?
ಭಾರತ ಇಲ್ಲಿ ಕೊನೆಯ ಬಾರಿಗೆ ಟೆಸ್ಟ್ ಆಡಿದ್ದು 2021ರಲ್ಲಿ. ಆದರೆ ಈ ಪಂದ್ಯವನ್ನು ಇನಿಂಗ್ಸ್ ಹಾಗೂ 76 ರನ್ ಅಂತರದಿಂದ ಸೋಲು ಕಂಡಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಭಾರತ ಇಲ್ಲಿ ಪಂದ್ಯ ಆಡುತ್ತಿದೆ. ಈ ಬಾರಿ ಹೊಸ ನಾಯಕ, ಕೋಚ್ ಮತ್ತು ಆಟಗಾರರನ್ನೊಳಗೊಂಡ ತಂಡ ಹೇಗೆ ಪ್ರದರ್ಶನ ತೋರಲಿದೆ ಎಂದು ಕಾದು ನೋಡಬೇಕಿದೆ.


ಲೀಡ್ಸ್: ಬಹುನಿರೀಕ್ಷಿತ ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಗೆ(IND vs ENG Test Series) ಶುಕ್ರವಾರ ಅಧಿಕೃತ ಚಾಲನೆ ಸಿಗಲಿದೆ. ಐತಿಹಾಸಿಕ ಲೀಡ್ಸ್(Leeds) ಹೇಡಿಂಗ್ಲೆ ಅಂಗಳದಲ್ಲಿ ನಾಳೆ ಮೊದಲ ಟೆಸ್ಟ್(IND vs ENG 1st Test) ಆರಂಭವಾಗಲಿದೆ. ಯುವ ಆಟಗಾರರನ್ನು ನೆಚ್ಚಿಕೊಂಡಿರುವ ಭಾರತ ಈ ಬಾರಿ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡೀತೇ ಎಂದು ಕಾದು ನೋಡಬೇಕಿದೆ. ಇದಕ್ಕೂ ಮುನ್ನ ಮೊದಲ ಪಂದ್ಯ ನಡೆಯುವ ಲೀಡ್ಸ್ ಮೈದಾನದಲ್ಲಿ ಭಾರತ ತಂಡ ಟೆಸ್ಟ್ ಸಾಧನೆ ಹೇಗಿದೆ ಎಂಬ ಇಣುಕು ನೋಟ ಇಲ್ಲಿದೆ.
7 ಪಂದ್ಯ
ಭಾರತ ಲೀಡ್ಸ್ನಲ್ಲಿ ಇದುವರೆಗೆ ಏಳು ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಪೈಕಿ ಭಾರತ ಎರಡರಲ್ಲಿ ಜಯ ಸಾಧಿಸಿವೆ. ಒಂದು ಟೆಸ್ಟ್ ಡ್ರಾಗೊಂಡಿದೆ. ಇಂಗ್ಲೆಂಡ್ ನಾಲ್ಕರಲ್ಲಿ ಗೆದ್ದಿದೆ. ಭಾರತ ತಂಡ ಇಲ್ಲಿ ಮೊತ್ತ ಮೊದಲ ಬಾರಿಗೆ ಟೆಸ್ಟ್ ಪಂದ್ಯ ಆಡಿದ್ದು 1952ರಲ್ಲಿ ವಿಜಯ್ ಹಜಾರೆ ನೇತೃತ್ವದ ಭಾರತ ತಂಡ ಈ ಪಂದ್ಯದಲ್ಲಿ 7 ವಿಕೆಟ್ ಅಂತರದ ಸೋಲು ಕಂಡಿತ್ತು.
1986ರಲ್ಲಿ ಮೊದಲ ಗೆಲುವು
ಭಾರತಕ್ಕೆ ಲೀಡ್ಸ್ನಲ್ಲಿ ಮೊದಲ ಗೆಲುವು ಒಲಿದದ್ದು 1986ರಲ್ಲಿ. ಕಪಿಲ್ದೇವ್ ನಾಯಕತ್ವದ ತಂಡ ಆಂಗ್ಲರನ್ನು 279 ರನ್ ಅಂತರದಿಂದ ಮಣಿಸಿ ಗೆಲುವು ಸಾಧಿಸಿತ್ತು. ಅಲ್ಲದೆ ಈ ಗೆಲುವಿನೊಂದಿಗೆ ಭಾರತ ಸರಣಿ ಕೂಡ ಜಯಿಸಿತ್ತು. ಲಾರ್ಡ್ಸ್ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಕಪಿಲ್ ಪಡೆ 5 ವಿಕೆಟ್ ಅಂತರದ ಗೆಲುವು ಕಂಡಿತ್ತು. ಲೀಡ್ಸ್ನಲ್ಲಿ ರೋಜರ್ ಬಿನ್ನಿ 5, ಮದನ್ಲಾಲ್ 3 ವಿಕೆಟ್ ಉಡಾಯಿಸಿ ಆಂಗ್ಲರನ್ನು ಕಾಡಿದರೆ, ದಿಲೀಪ್ ವೆಂಗ್ಸರ್ಕಾರ್ 102 ರನ್ ಬಾರಿಸಿ ಪಂದ್ಯಶ್ರೇಷ್ಠರೆನಿಸಿದರು.
2002ರಲ್ಲಿ 2ನೇ ಗೆಲುವು
ಭಾರತ ತಂಡ 1986ರ ಮೊದಲ ಗೆಲುವಿನ ಬಳಿಕ ಮತ್ತೆ ಲೀಡ್ಸ್ನಲ್ಲಿ ಆಡಿದ್ದು 2002ರಲ್ಲಿ. ಸೌರವ್ ಗಂಗೂಲಿ ಸಾರಥ್ಯದಲ್ಲಿ ಆಡಲಿಳಿದ ಭಾರತ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 46 ರನ್ನುಗಳಿಂದ ಗೆದ್ದು ಸಂಭ್ರಮಿಸಿತ್ತು. ಕನ್ನಡಿಗ ರಾಹುಲ್ ದ್ರಾವಿಡ್ 148, ಸಚಿನ್ ತೆಂಡುಲ್ಕರ್ 193, ನಾಯಕ ಗಂಗೂಲಿ 128 ಶತಕ ಬಾರಿಸಿ ಮಿಂಚಿದ್ದರು. ತ್ರಿವಳಿ ಶತಕದ ನೆರವಿನಿಂದ ಭಾರತ 8ಕ್ಕೆ 628 ರನ್ ಪೇರಿಸಿ ಡಿಕ್ಲೇರ್ ಮಾಡಿತು. ಇಂಗ್ಲೆಂಡ್ 273ಕ್ಕೆ ಆಲೌಟ್ ಆಗಿ ಫಾಲೋಆನ್ಗೆ ಸಿಲುಕಿತು. ದ್ವಿತೀಯ ಇನ್ನಿಂಗ್ಸ್ನಲ್ಲೂ ಇಂಗ್ಲೆಂಡ್ ಕಳಪೆ ಬ್ಯಾಟಿಂಗ್ ನಡೆಸಿ ತವರಿನಲ್ಲಿ ಹೀನಾಯ ಸೋಲು ಕಂಡಿತ್ತು.
ಇದನ್ನೂ ಓದಿ IND vs ENG: ಭಾರತ ತಂಡಕ್ಕೆ ಬ್ಯಾಟಿಂಗ್ ಕ್ರಮಾಂಕ ಆರಿಸಿದ ದಿನೇಶ್ ಕಾರ್ತಿಕ್!
ಭಾರತ ಇಲ್ಲಿ ಕೊನೆಯ ಬಾರಿಗೆ ಟೆಸ್ಟ್ ಆಡಿದ್ದು 2021ರಲ್ಲಿ. ಆದರೆ ಈ ಪಂದ್ಯವನ್ನು ಇನಿಂಗ್ಸ್ ಹಾಗೂ 76 ರನ್ ಅಂತರದಿಂದ ಸೋಲು ಕಂಡಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಭಾರತ ಇಲ್ಲಿ ಪಂದ್ಯ ಆಡುತ್ತಿದೆ.