India at ICC Champions Trophy: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಸಾಧನೆಯ ಹಿನ್ನೋಟ
ದಕ್ಷಿಣ ಆಫ್ರಿಕಾ ತಂಡ ಚೊಚ್ಚಲ ಆವೃತ್ತಿಯಲ್ಲಿ(ICC Champions Trophy) ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿದ ಹ್ಯಾನ್ಸಿ ಕ್ರೋನಿಯೆ ನಾಯಕತ್ವದ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗಿ ಮೂಡಿಬಂದಿತ್ತು.


ಬೆಂಗಳೂರು: ಚಾಂಪಿಯನ್ಸ್ ಟ್ರೋಫಿ ಹುಟ್ಟಿಕೊಳ್ಳಲು ಪ್ರಮುಖ ಕಾರಣ ಭಾರತದ ಖ್ಯಾತ ಉದ್ಯಮಿ ಜಗಮೋಹನ್ ದಾಲ್ಮಿಯಾ. ಐಸಿಸಿ ಅಧ್ಯಕ್ಷರಾಗಿದ್ದ ಅವರು ಉದಯೋನ್ಮುಖ ರಾಷ್ಟ್ರಗಳಲ್ಲಿ ಕ್ರಿಕೆಟ್ ಬೆಳೆಸಲು ಹಾಗೂ ಐಸಿಸಿಗೆ ಹಣ ಸಂಗ್ರಹಿಸಲು ವಿಶ್ವಕಪ್‌ಗೆ ಪರ್ಯಾಯವಾಗಿ ಆರಂಭಿಸಿದ ಟೂರ್ನಿ ಇದಾಗಿತ್ತು.1997ರಿಂದ 2000ರ ವರೆಗೆ ಇವರು ಐಸಿಸಿ ಅಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲೇ 1998ರಲ್ಲಿ ಚೊಚ್ಚಲ ಟೂರ್ನಿಗೆ ಚಾಲನೆ ಲಭಿಸಿತ್ತು. ಈ ಟೂರ್ನಿಯಲ್ಲಿ ಭಾರತ ತಂಡದ ಸಾಧನೆ ಹೇಗಿದೆ?, ಎಷ್ಟು ಬಾರಿ ಪ್ರಶಸ್ತಿ ಗೆದ್ದಿದೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
1998ರಲ್ಲಿ ಸೆಮಿಫೈನಲ್
ಚೊಚ್ಚಲ ಆವೃತ್ತಿಯ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ ತನಕ ಸಾಗಿ ಸೋಲು ಕಂಡಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ಸೆಮಿ ಪಂದ್ಯದಲ್ಲಿ 6 ವಿಕೆಟ್ ಅಂತರದ ಸೋಲು ಕಂಡಿತ್ತು. ಟೂರ್ನಿಯಲ್ಲಿ ಭಾರತ ಪರ ಸಚಿನ್ ತೆಂಡೂಲ್ಕರ್ ಅತ್ಯಧಿಕ ರನ್(149) ಮತ್ತು ವಿಕೆಟ್(6) ಕಿತ್ತ ಆಟಗಾರ ಎನಿಸಿಕೊಂಡಿದ್ದರು.
2000 ರನ್ನರ್ ಅಪ್
ಕೀನ್ಯಾದಲ್ಲಿ ನಡೆದಿದ್ದ ಈ ಆವೃತ್ತಿಯಲ್ಲಿ ಗಂಗೂಲಿ ಸಾರಥ್ಯದ ಭಾರತ ತಂಡ ಅಮೋಘ ಪ್ರದರ್ಶನದೊಂದಿಗೆ ಫೈನಲ್‌ಗೆ ಲಗ್ಗೆ ಇರಿಸಿತ್ತು. ಆದರೆ ಅಲ್ಲಿ ನ್ಯೂಜಿಲೆಂಡಿಗೆ ಶರಣಾಗಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಫೈನಲ್ ಪಂದ್ಯದಲ್ಲಿ ಗಂಗೂಲಿ (117)-ತೆಂಡೂಲ್ಕರ್ (69) ಜೋಡಿಯ ಅಮೋಘ ಆರಂಭದ ನೆರವಿನಿಂದ ಭಾರತ 6ಕ್ಕೆ 264 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಕಿವೀಸ್ ಕ್ರಿಸ್ ಕೇರ್ನ್ಸ್ ಅವರ ಅಜೇಯ ಶತಕ (102)ದ ನೆರವಿನಿಂದ 49.4 ಓವರ್‌ಗಳಲ್ಲಿ 6ಕ್ಕೆ 265 ರನ್ ಪೇರಿಸಿ ಗೆದ್ದಿತು. ಇದು ನ್ಯೂಜಿಲೆಂಡ್ ಗೆದ್ದ ಮೊದಲ ಐಸಿಸಿ ಟ್ರೋಫಿಯಾಗಿತ್ತು. ಭಾರತದ ಯುವರಾಜ್ ಸಿಂಗ್, ಜಹೀರ್ ಖಾನ್ ಪಾಲಿಗೆ ಇದು ಪದಾರ್ಪಣಾ ಸರಣಿಯಾಗಿತ್ತು.
ಲಂಕಾ ಜತೆ ಜಂಟಿ ವಿಜೇತ
ಮೂರನೇ ಆವೃತ್ತಿಯ ಆತಿಥ್ಯ ಭಾರತ ವಹಿಸಬೇಕಿತ್ತು, ಆದರೆ ಕೇಂದ್ರ ಸರಕಾರ ತೆರಿಗೆ ವಿನಾಯಿತಿ ನೀಡದ ಕಾರಣ ಆತಿಥ್ಯವನ್ನು ಶ್ರೀಲಂಕಾಕ್ಕೆ ನೀಡಲಾಯಿತು. ಭಾರತ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿತ್ತು. ಆದರೆ ಭಾರತ-ಶ್ರೀಲಂಕಾ ನಡುವಿನ ಫೈನಲ್ ಪಂದ್ಯ ಮಳೆಯಿಂದ ಕೊಚ್ಚಿಹೋದ್ದರಿಂದ ಇತ್ತಂಡಗಳನ್ನೂ ಜಂಟಿ ವಿಜೇತರೆಂದು ಘೋಷಿಸಬೇಕಾಯಿತು. ಶ್ರೀಲಂಕಾ 7 ವಿಕೆಟಿಗೆ 222 ರನ್ ಮಾಡಿದರೆ, ಭಾರತದ ಚೇಸಿಂಗ್ ವೇಳೆ ಒಂದು ವಿಕೆಟ್‌ಗೆ 38 ರನ್ ಮಾಡಿತ್ತು.
ಲೀಗ್ ಹಂತದಲ್ಲೇ ಸೋಲು
2004ರಲ್ಲಿ ಇಂಗ್ಲೆಂಡ್ ಆತಿಥ್ಯದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧವೂ ಸೋಲು ಕಂಡು ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು.
2006ರಲ್ಲಿಯೂ ಕಳಪೆ ಆಟ
ಭಾರತದ ಆತಿಥ್ಯದಲ್ಲೇ ನಡೆಸಿದ್ದ ಈ ಟೂರ್ನಿಯಲ್ಲಿ ಭಾರತ ತಂಡ ಲೀಗ್ ಹಂತದಲ್ಲೇ ನಿರ್ಗಮಿಸಿತ್ತು. ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಜತೆ 'ಎ' ಗುಂಪಿನಲ್ಲಿದ್ದ ಭಾರತ ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಸಾಧಿಸಿತ್ತು. ಏಕೈಕ ಗೆಲುವು ಇಂಗ್ಲೆಂಡ್ ವಿರುದ್ಧ ದಾಖಲಾಗಿತ್ತು.
2009ರಲ್ಲಿ ಲೀಗ್ ಹಂತದಲ್ಲೇ ನಿರ್ಗಮನ
ಚೊಚ್ಚಲ ಆವೃತ್ತಿಯ ಚಾಂಪಿಯನ್ ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆದ ಈ ಟೂರ್ನಿಯಲ್ಲಿಯೂ ಭಾರತ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಏಕೈಕ ಗೆಲುವಿನೊಂದಿಗೆ ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು. ಪಾಕ್ ವಿರುದ್ಧ 54 ರನ್ ಸೋಲು ಎದುರಾಗಿತ್ತು.
ಇದನ್ನೂ ಓದಿ 1998 ICC Knock Out Trophy: ಚೋಕರ್ಸ್ ದಕ್ಷಿಣ ಆಫ್ರಿಕಾ ಚೊಚ್ಚಲ ಚಾಂಪಿಯನ್
2013ರಲ್ಲಿ ಚಾಂಪಿಯನ್
2011ರ ಏಕದಿನ ವಿಶ್ವಕಪ್ ಗೆಲುವಿನ 2 ವರ್ಷಗಳ ಬಳಿಕ ನಡೆದಿದ್ದ ಈ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಭಾರತ ಅತ್ಯಂತ ಆಕ್ರಮಣಕಾರಿ ಆಟವಾಡಿ ಅಜೇಯವಾಗಿ ಫೈನಲಿಗೆ ಲಗ್ಗೆ ಇರಿಸಿತು. ಬರ್ಮಿಂಗಂನಲ್ಲಿ ನಡೆದಿದ್ದ ಫೈನಲ್ ಪಂದ್ಯಕ್ಕೆ ಭಾರೀ ಮಳೆ ಸುರಿದುದರಿಂದ ಈ ಪಂದ್ಯವನ್ನು 20 ಓವರ್‌ಗಳಿಗೆ ಇಳಿಸಲಾಯಿತು. ಭಾರತ 5 ರನ್ನಿನಿಂದ ಇಂಗ್ಲೆಂಡನ್ನು ಉರುಳಿಸಿ ಚಾಂಪಿಯನ್ ಎನಿಸಿಕೊಂಡಿತು. ಇದು ಭಾರತ ಪೂರ್ಣ ಪ್ರಮಾಣದಲ್ಲಿ ಗೆದ್ದ ಮೊದಲ ಟ್ರೋಫಿಯಾಗಿತ್ತು.
2017ರಲ್ಲಿ ರನ್ನರ್ ಅಪ್
ಹಾಲಿ ಚಾಂಪಿಯನ್ ಆಗಿದ್ದ ಭಾರತ ತಂಡ 2017ರ ಆವೃತ್ತಿಯಲ್ಲಿಯೂ ಫೈನಲ್ ಪ್ರವೇಶಿಸಿತ್ತು. ಆದರೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಲೀಗ್ ಹಂತದಲ್ಲಿ ಪಾಕಿಸ್ತಾನಕ್ಕೆ 8 ವಿಕೆಟ್ ಸೋಲುಣಿಸಿದ್ದ ಭಾರತ ಫೈನಲ್‌ನಲ್ಲಿ ಶರಣಾಯಿತು. ಅದು ಕೂಡ 180 ರನ್ ಅಂತರದ ಸೋಲು. ವಿರಾಟ್ ಕೊಹ್ಲಿ ಭಾರತ ತಂಡದ ನಾಯಕನಾಗಿದ್ದರು.