Riyan Parag: ಡ್ರೆಸಿಂಗ್ ರೂಮ್‌ನಲ್ಲಿ ದಮ್ಮು ಎಳೆದ ಪರಾಗ್‌ಗೆ ಸಂಕಷ್ಟ; ತನಿಖೆಗೆ ಮುಂದಾದ ಬಿಸಿಸಿಐ
IPL vaping controversy: ಭಾರತದಲ್ಲಿ ಇ–ಸಿಗರೇಟ್ ಉತ್ಪಾದನೆ, ಮಾರಾಟ, ವಿತರಣೆಯನ್ನು 2019ರಲ್ಲೇ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಇದರ ಸೇವನೆಯಲ್ಲಿ ತೊಡಗಿದವರು (ಮೊದಲ ಬಾರಿಯ ತಪ್ಪಿಗೆ) ಒಂದು ವರ್ಷದವರೆಗೆ ಕಾರಾಗೃಹ ಶಿಕ್ಷೆ ಮತ್ತು/ ಅಥವಾ ₹1 ಲಕ್ಷ ದಂಡ ತೆರಬೇಕಾಗುತ್ತದೆ.
Riyan Parag -
ನವದೆಹಲಿ, ಎ.30: ರಾಜಸ್ಥಾನ್ ರಾಯಲ್ಸ್ ಮತ್ತು ಅದರ ನಾಯಕ ರಿಯಾನ್ ಪರಾಗ್(Riyan Parag) ಡ್ರೆಸ್ಸಿಂಗ್ ಕೋಣೆಯಲ್ಲಿ ವ್ಯಾಪಿಂಗ್(ಇ-ಸಿಗರೇಟ್) ಮಾಡಿದ ಪ್ರಕರಣದ(IPL vaping controversy) ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ವಿವರಣೆ ನೀಡಬೇಕೆಂದು ಬಿಸಿಸಿಐ ಮೂಲವೊಂದು ಇಂಡಿಯಾ ಟುಡೇಗೆ ತಿಳಿಸಿದೆ. ಏಪ್ರಿಲ್ 28 ರಂದು ನ್ಯೂ ಚಂಡೀಗಢದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಈ ಘಟನೆ ಸಂಭವಿಸಿತ್ತು.
ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದ ಸಂದರ್ಭದಲ್ಲಿ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ಪರಾಗ್ ವಾಪಿಂಗ್ ಮಾಡುತ್ತಿರುವುದನ್ನು ಸೆರೆಹಿಡಿದಿರುವ ವಿಡಿಯೋ ವೈರಲ್ ಆಗಿತ್ತು. ಅಭಿಮಾನಿಗಳು ಮತ್ತು ವೀಕ್ಷಕರಿಂದ ಭಾರೀ ಟೀಕೆಗೆ ಗುರಿಯಾಗಿತ್ತು. ಈ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ತ್ವರಿತವಾಗಿ ಹರಡಿ, ಉನ್ನತ ಮಟ್ಟದ ಪಂದ್ಯಾವಳಿಗಳಲ್ಲಿ ಆಟಗಾರರ ನಡವಳಿಕೆ ಮತ್ತು ವೃತ್ತಿಪರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದವು.
ಶಿಕ್ಷೆಯ ಕುರಿತು ಇಲ್ಲಿಯವರೆಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ, ಈ ವಿಷಯವು ಪ್ರಸ್ತುತ ಬಿಸಿಸಿಐ ಪರಿಶೀಲನೆಯಲ್ಲಿದೆ ಮತ್ತು ಸಂಶೋಧನೆಗಳನ್ನು ಅವಲಂಬಿಸಿ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ವರದಿಗಳು ಸೂಚಿಸಿವೆ.
‘ಹಲವು ಆಟಗಾರರು ಇ–ಸಿಗರೇಟ್ ಸೇವನೆಯಲ್ಲಿ ತೊಡಗುತ್ತಾರೆ. ಆದರೆ ಡ್ರೆಸಿಂಗ್ ರೂಮ್‌ನಲ್ಲಿ ಧೂಮಪಾನ ಮಾಡುವುದಿಲ್ಲ. ಎಲ್ಲೆಡೆ ಕ್ಯಾಮೆರಾ ಕಣ್ಣುಗಳಿರುವಾಗ ಇಂಥ ಕೆಲಸಕ್ಕೆ ಯಾರೂ ಮುಂದಾಗುವುದಿಲ್ಲ. ಪರಾಗ್ ಸಿಕ್ಕಿಬಿದ್ದಿದ್ದಾರೆ. ಈಗ ಕ್ರಮ ಕೈಗೊಳ್ಳುವುದು ಬಿಸಿಸಿಐಗೆ ಅನಿವಾರ್ಯವಾಗಲಿದೆ’ ಎಂದು ಮೂಲವೊಂದು ತಿಳಿಸಿದೆ.
ಸೋಲಿನ ಬೆನ್ನಲ್ಲೇ ಅಭಿಮಾನಿಗಳನ್ನು ಟೀಕಿಸಿದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ
ಭಾರತದಲ್ಲಿ ಇ–ಸಿಗರೇಟ್ ಉತ್ಪಾದನೆ, ಮಾರಾಟ, ವಿತರಣೆಯನ್ನು 2019ರಲ್ಲೇ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಇದರ ಸೇವನೆಯಲ್ಲಿ ತೊಡಗಿದವರು (ಮೊದಲ ಬಾರಿಯ ತಪ್ಪಿಗೆ) ಒಂದು ವರ್ಷದವರೆಗೆ ಕಾರಾಗೃಹ ಶಿಕ್ಷೆ ಮತ್ತು/ ಅಥವಾ ₹1 ಲಕ್ಷ ದಂಡ ತೆರಬೇಕಾಗುತ್ತದೆ.
ಈ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ಬಿಸಿಸಿಐ ಹಸ್ತಕ್ಷೇಪಕ್ಕೆ ಕಾರಣವಾದ ವಿವಾದದಲ್ಲಿ ಸಿಲುಕಿರುವುದು ಇದೇ ಮೊದಲಲ್ಲ. ಇದು ಫ್ರಾಂಚೈಸಿ ಮತ್ತು ಅದರ ಸಿಬ್ಬಂದಿಯಿಂದ ನೀತಿ ಸಂಹಿತೆಯ ಎರಡನೇ ಉಲ್ಲಂಘನೆಯಾಗಿದೆ. ಈ ಹಿಂದೆ ಗುವಾಹಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಸಮಯದಲ್ಲಿ ತಂಡದ ವ್ಯವಸ್ಥಾಪಕ ರೋಮಿ ಭಿಂದರ್ ಡಗೌಟ್ ಒಳಗೆ ಫೋನ್ ಬಳಸುತ್ತಿರುವುದು ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು, ಇದು ಲೀಗ್ ಶಿಷ್ಟಾಚಾರಗಳ ಪಾಲನೆಯ ಬಗ್ಗೆ ಚರ್ಚೆಯನ್ನೂ ಹುಟ್ಟುಹಾಕಿತು.
ನಂತರ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ACSU) ಭಿಂದರ್ ಅವರಿಗೆ ಎಚ್ಚರಿಕೆ ಮತ್ತು 1 ಲಕ್ಷ ರೂ. ದಂಡ ವಿಧಿಸಿತ್ತು. ಮಂಡಳಿಯು ತನ್ನ ACSU ವಿಭಾಗವನ್ನು ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಕೇಳಿಕೊಂಡಿತ್ತು, ಮತ್ತು ಭದ್ರತಾ ಘಟಕವು ಯಾವುದೇ ಗಂಭೀರ ತಪ್ಪು ಕಂಡುಕೊಂಡಿಲ್ಲ, ಇದನ್ನು ಪ್ರಮುಖ ಉಲ್ಲಂಘನೆಗಿಂತ ಸಣ್ಣ ಉಲ್ಲಂಘನೆ ಎಂದು ಪರಿಗಣಿಸಿತು.