Asian Games 2026: ಮಹಿಳೆಯರ 10,000 ಓಟದಲ್ಲಿ ಕಂಚಿನ ಪದಕ ಗೆದ್ದ ಸೀಮಾ ಕುಮಾರಿ!
ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಸೇರ್ಪಡೆಯಾಗಿದೆ. 10,000 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಸೀಮಾ ಕುಮಾರಿ ಅವರು ಮೂರನೇ ಸ್ಥಾನವನ್ನು ಪಡೆಯುವ ಮೂಲಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಆ ಮೂಲಕ ಭಾರತಕ್ಕೆ ಒಟ್ಟು 17 ಪದಕಗಳು ಸೇರ್ಪಡೆಯಾದಂತಾಗಿದೆ.
ಏಷ್ಯಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಸೀಮಾ ಕುಮಾರಿ. -
ನವದೆಹಲಿ: ಜಪಾನ್ ಆತಿಥ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದಲ್ಲಿ (Asian Games 2026) ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಗುರುವಾರ ನಡೆದಿದ್ದ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಿಂದ ಒಂದು ಸಂತೋಷದಾಯಕ ಸುದ್ದಿ ಹೊರಬಂದಿದ್ದು, ಮಹಿಳೆಯರ 10,000 ಮೀಟರ್ ಓಟದ ಸ್ಪರ್ಧೆಯಲ್ಲಿ ಓಟಗಾರ್ತಿ ಸೀಮಾ ಕುಮಾರಿ (Seema Kumari) ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಐತಿಹಾಸಿಕ ಗೆಲುವು, ಏಷ್ಯನ್ ಕ್ರೀಡಾಕೂಟದ ಈ ಸವಾಲಿನ ಸ್ಪರ್ಧೆಯಲ್ಲಿ ಭಾರತಕ್ಕಿದ್ದ 16 ವರ್ಷಗಳ ಪದಕದ ಬರಕ್ಕೆ ತೆರೆ ಎಳೆದಿದೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಓಟದ ಸ್ಪರ್ಧೆಯಲ್ಲಿ, ಸೀಮಾ ಕುಮಾರಿ 32 ನಿಮಿಷ 50.05 ಸೆಕೆಂಡುಗಳ ಸಮಯದೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡು ಭಾರತಕ್ಕೆ ಪದಕದ ವೇದಿಕೆಯಲ್ಲಿ ಸ್ಥಾನವನ್ನು ಖಚಿತಪಡಿಸಿಕೊಂಡರು. ಬಹ್ರೇನ್‌ನ ವಿನ್‌ಫ್ರೆಡ್ ಯಾವಿ 32:39.18 ಸಮಯದೊಂದಿಗೆ ಚಿನ್ನದ ಪದಕವನ್ನು ಗೆದ್ದರೆ, ಆತಿಥೇಯ ರಾಷ್ಟ್ರ ಜಪಾನ್‌ನ ನೊಜೊಮಿ ತನಕಾ 32:41.54 ಸಮಯದೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಓಟದ ಅಂತಿಮ ಹಂತದಲ್ಲಿ ಯಾವಿ ಮತ್ತು ತನಕಾ ನಡುವೆ ಚಿನ್ನ ಮತ್ತು ಬೆಳ್ಳಿಗಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದಾಗ, ಸೀಮಾ ತಮ್ಮ ಸಂಯಮವನ್ನು ಕಾಯ್ದುಕೊಂಡು ಮೂರನೇ ಸ್ಥಾನಕ್ಕಾಗಿ ಭದ್ರವಾದ ಮುನ್ನಡೆಯನ್ನು ಕಾಯ್ದುಕೊಂಡರು.
Asian Games 2026: ಮಿಶ್ರ 4x400 ಮೀಟರ್ ರಿಲೇಯಲ್ಲಿ ಭಾರತಕ್ಕೆ ಬೆಳ್ಳಿ ಪದಕ!
2001r ಜನವರಿ 10, ರಂದು ಜನಿಸಿದ ಸೀಮಾ ಕುಮಾರಿ ಹಿಮಾಚಲ ಪ್ರದೇಶದವರು. ಅವರು ದೇಶದ ಪ್ರಮುಖ 5,000 ಮೀಟರ್ ಮತ್ತು 10,000 ಮೀಟರ್ ಓಟಗಾರರ ಸಾಲಿನಲ್ಲಿ ತಮ್ಮದೇ ಆದ ಸ್ಥಾನವನ್ನು ತ್ವರಿತವಾಗಿ ಭದ್ರಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ, ಅವರು ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಇದಕ್ಕೂ ಮುನ್ನ, ಮಾರ್ಚ್ 2026 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ 'ದಿ ಟೆನ್' (The Ten) ಸ್ಪರ್ಧೆಯ 10,000 ಮೀಟರ್ ಓಟದಲ್ಲಿ, ಅವರು 32:02.43 ರ ವೈಯಕ್ತಿಕ ಶ್ರೇಷ್ಠ ಸಮಯದೊಂದಿಗೆ ಐದನೇ ಸ್ಥಾನವನ್ನು ಪಡೆದಿದ್ದರು. ಜೊತೆಗೆ, ಏಪ್ರಿಲ್ 2026 ರಲ್ಲಿ 5,000 ಮೀಟರ್ ಓಟದಲ್ಲಿ 15:16.20 ರ ವೈಯಕ್ತಿಕ ಶ್ರೇಷ್ಠ ಸಮಯವನ್ನು ದಾಖಲಿಸಿದ್ದರು.
Bronze on the track for Bharat!
— Kiren Rijiju (@KirenRijiju) September 24, 2026
Heartiest congratulations to Seema on winning the Bronze Medal in the Women’s 10,000m at the #AsianGames2026.
A proud achievement for Indian athletics!#Cheer4Bharat pic.twitter.com/9OhVu1PPE1
ಸೀಮಾ ಕುಮಾರಿ ಅವರ ಅಂತರರಾಷ್ಟ್ರೀಯ ಮತ್ತು ದೇಶಿ ಕ್ರೀಡಾ ಜೀವನವು ಅನೇಕ ಸಾಧನೆಗಳಿಂದ ಕೂಡಿದೆ. ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೊದಲು, ಅವರು 2025 ರ FISU ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದ (World University Games) 5,000 ಮೀಟರ್ ಓಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಇದಲ್ಲದೆ, 2024 ರಲ್ಲಿ ಹಾಂಗ್ ಕಾಂಗ್‌ನಲ್ಲಿ ನಡೆದ ಏಷ್ಯನ್ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್‌ನ ಹಿರಿಯ ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಅವರು ಭಾರತಕ್ಕೆ ಕೀರ್ತಿ ತಂದರು. ರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಪ್ರಾಬಲ್ಯವನ್ನು ಕಾಯ್ದುಕೊಂಡಿರುವ ಅವರು, 2026 ರಲ್ಲಿ ನಡೆದ 65 ನೇ ರಾಷ್ಟ್ರೀಯ ಅಂತರ-ರಾಜ್ಯ ಹಿರಿಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 10,000 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.