Asian Games 2026 wrestling: ಜಪಾನ್ ಕುಸ್ತಿಪಟು ವಿರುದ್ಧ ಸೋತ ನಿತೇಶ್ ಸಿವಾಚ್‌ಗೆ ಬೆಳ್ಳಿ ಪದಕ!
2026ರ ಏಷ್ಯನ್ ಗೇಮ್ಸ್ ಗ್ರೀಕೊ-ರೋಮನ್ ಕುಸ್ತಿ ವಿಭಾಗದಲ್ಲಿ ನಿತೇಶ್ ಸಿವಾಚ್ ಚಿನ್ನದ ಪದಕದ ಪಂದ್ಯದಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಫೈನಲ್‌ನಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಫೈನಲ್ ಪಂದ್ಯದಲ್ಲಿ ಅವರು ಜಪಾನ್ ಕುಸ್ತಪಿಟು ಯೂರಿ ನಕಝಾಟೊ ವಿರುದ್ಧ 0-4 ಅಂತರದಲ್ಲಿ ಸೋತು ಚಿನ್ನದ ಪದಕ ವಂಚಿತರಾದರು.
2026ರ ಏಷ್ಯನ್ ಗೇಮ್ಸ್ ಗ್ರೀಕೊ-ರೋಮನ್ ಕುಸ್ತಿ ವಿಭಾಗದಲ್ಲಿ ನಿತೇಶ್ ಸಿವಾಚ್‌ಗೆ ಬೆಳ್ಳಿ ಪದಕ. -
ನವದೆಹಲಿ: ಜಪಾನ್ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದ (Asian Games 2026) ಕುಸ್ತಿ ಸ್ಪರ್ಧೆಯಲ್ಲಿ ಭಾರತದ ನಿತೇಶ್ ಸಿವಾಚ್ (Nitesh Siwach) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪುರುಷರ 97 ಕೆ.ಜಿ ಗ್ರೀಕೊ-ರೋಮನ್ ಕುಸ್ತಿ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಅವರು 64 ವರ್ಷಗಳ ಬಳಿಕ ಈ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಗುರುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಜಪಾನ್‌ನ ಯೂರಿ ನಕಝಾಟೊ ವಿರುದ್ಧ 0-4 ಅಂತರದಿಂದ ಸೋತ ನಿತೇಶ್, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ನಗೋಯಾದಲ್ಲಿ ನಡೆದಿದ್ದ ಪುರುಷರ 97 ಕೆ.ಜಿ ಗ್ರೀಕೊ-ರೋಮನ್ ಕುಸ್ತಿ ಫೈನಲ್‌ನಲ್ಲಿ ಭಾರತದ ನಿತೇಶ್ ಸಿವಾಚ್ ಮತ್ತು ಜಪಾನ್‌ನ ಯೂರಿ ನಕಝಾಟೊ ಮುಖಾಮುಖಿಯಾಗಿದ್ದರು. ತವರು ಪ್ರೇಕ್ಷಕರ ಬೆಂಬಲದೊಂದಿಗೆ ಕಣಕ್ಕಿಳಿದ ನಕಝಾಟೊ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಮೊದಲ ಸುತ್ತಿನಲ್ಲಿ ನಿತೇಶ್ ನಿಷ್ಕ್ರಿಯವಾಗಿ ಆಡಿದ ಕಾರಣ ಅಂಕ ಕಳೆದುಕೊಂಡರು. ಇದರಿಂದ ನಕಝಾಟೊಗೆ 2-0 ಮುನ್ನಡೆ ಲಭಿಸಿತು. ಎದುರಾಳಿಯ ಆಕ್ರಮಣವನ್ನು ಸಮರ್ಥವಾಗಿ ಎದುರಿಸಿದ ನಿತೇಶ್, ಆರಂಭಿಕ ಹಂತದಲ್ಲಿ ಹೆಚ್ಚಿನ ಅಂಕಗಳನ್ನು ಬಿಟ್ಟುಕೊಡದೆ ಹೋರಾಡಿದರು. ಆದರೆ ಮೊದಲ ಸುತ್ತಿನ ಅಂತ್ಯದವರೆಗೂ ಅಂಕ ಗಳಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಪಾಕಿಸ್ತಾನದ ವಿರುದ್ಧ ರೋಚಕ ಸೆಮಿಫೈನಲ್ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ ಭಾರತ ಪುರುಷರ ಹಾಕಿ ತಂಡ
ಎರಡನೇ ಸುತ್ತಿನಲ್ಲಿ ನಕಝಾಟೊ ಮತ್ತಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ನಿತೇಶ್ ಅವರನ್ನು ನೆಲಕ್ಕೆ ಉರುಳಿಸುವ ಮೂಲಕ ಮತ್ತೆರಡು ಅಂಕಗಳನ್ನು ಗಳಿಸಿ ಮುನ್ನಡೆಯನ್ನು 4-0ಕ್ಕೆ ವಿಸ್ತರಿಸಿದರು. ಪಂದ್ಯದ ಕೊನೆಯ ಹಂತದಲ್ಲಿ ನಿತೇಶ್ ತಿರುಗೇಟು ನೀಡಲು ಪ್ರಯತ್ನಿಸಿದರೂ ಜಪಾನ್ ಕುಸ್ತಿಪಟುವಿನ ರಕ್ಷಣಾತ್ಮಕ ಆಟವನ್ನು ಭೇದಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ನಕಝಾಟೊ 4-0 ಅಂತರದಿಂದ ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡರು.
A Historic Silver for Bharat in Greco-Roman Wrestling!
— Om Birla (@ombirlakota) October 1, 2026
Many congratulations to Nitesh Siwach on winning the Silver Medal in the Men’s Greco-Roman 97kg event at the #AsianGames2026.
Nitesh ended a 64-year wait, becoming the first Indian Greco-Roman wrestler since 1962 to reach an… pic.twitter.com/yosOBIp4wY
ಸೆಮಿಫೈನಲ್‌ನಲ್ಲಿ ಭರ್ಜರಿ ಗೆಲುವು
ಫೈನಲ್‌ಗೂ ಮುನ್ನ ನಿತೇಶ್ ಸಿವಾಚ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಕ್ವಾರ್ಟರ್‌ಫೈನಲ್‌ನಲ್ಲಿ ತುರ್ಕಮೆನಿಸ್ತಾನದ ಅಮಾನ್ಬೆರ್ಡಿ ಅಗಮಮ್ಮದೋವ್ ಅವರನ್ನು 7-1 ಅಂತರದಿಂದ ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದರು. ನಂತರ ನಡೆದ ಸೆಮಿಫೈನಲ್‌ನಲ್ಲಿ ಮಂಗೋಲಿಯಾದ ಗನ್ಬಾತರಿನ್ ಗಂಖುಯಾಗ್ ವಿರುದ್ಧ 9-0 ಅಂತರದ ಪ್ರಚಂಡ ಗೆಲುವು ದಾಖಲಿಸಿದರು. ತಾಂತ್ರಿಕ ಮೇಲುಗೈ ಮೂಲಕ ಪಂದ್ಯವನ್ನು ಮುಗಿಸಿದ ನಿತೇಶ್, ಫೈನಲ್‌ಗೆ ಅರ್ಹತೆ ಪಡೆಯುವ ಮೂಲಕ 64 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ ಗ್ರೀಕೊ-ರೋಮನ್ ಕುಸ್ತಿ ಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
Asian Games 2026: ದಕ್ಷಿಣ ಕೊರಿಯಾ ವಿರುದ್ಧ 2-0 ಗೆಲುವು, ಫೈನಲ್‌ಗೆ ಲಗ್ಗೆ ಇಟ್ಟ ಭಾರತ ಮಹಿಳಾ ಹಾಕಿ ತಂಡ!
1962ರ ಬಳಿಕ ಭಾರತದ ಐತಿಹಾಸಿಕ ಸಾಧನೆ
ಏಷ್ಯನ್ ಗೇಮ್ಸ್‌ನಲ್ಲಿ ಗ್ರೀಕೊ-ರೋಮನ್ ಕುಸ್ತಿಯಲ್ಲಿ ಭಾರತ ಕೊನೆಯ ಬಾರಿ 1962ರಲ್ಲಿ ಫೈನಲ್ ತಲುಪಿತ್ತು. ಆ ವರ್ಷ ಮಾರುತಿ ಮಾನೆ ಬೆಳ್ಳಿ ಪದಕ ಗೆದ್ದಿದ್ದರು. ಇದೀಗ 64 ವರ್ಷಗಳ ಸುದೀರ್ಘ ಅವಧಿಯ ಬಳಿಕ ನಿತೇಶ್ ಫೈನಲ್ ಪ್ರವೇಶಿಸಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕುಸ್ತಿ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಬರೆದಿದ್ದಾರೆ.