ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಲ್ವಿದಾ ಲಿಯೋನೆಲ್‌ ಮೆಸ್ಸಿ: ಕಣ್ಣೀರ ವಿದಾಯದಲ್ಲೂ ಸಾರ್ಥಕತೆ ಕಂಡ ಮಾಂತ್ರಿಕ!

ಫುಟ್ಬಾಲ್‌ ದಂತಕಥೆ ಲಿಯೋನೆಲ್‌ ಮೆಸ್ಸಿಯ ಭಾವುಕ ಪಯಣ, 2014ರ ನಿರಾಶೆಯಿಂದ 2022ರ ವಿಶ್ವಕಪ್‌ ಗೆಲುವಿನವರೆಗೆ ಮತ್ತು 2026ರ ಕಣ್ಣೀರ ವಿದಾಯದ ಕಥೆಯನ್ನು ಈ ಲೇಖನದಲ್ಲಿ ತಿಳಿಯಿರಿ. ಅರ್ಜೆಂಟೀನಾದ ದಿಗ್ಗಜ ಆಟಗಾರ ಲಿಯೋನೆಲ್‌ ಮೆಸ್ಸಿ ಏಕೆ 'ದಿ GOAT' (ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌) ಎಂದು ಕರೆಯಲ್ಪಡುತ್ತಾರೆ ಎಂಬುದನ್ನು ಓದಿ.

ಅರ್ಜೆಂಟೀನಾದ ದಿಗ್ಗಜ ಲಿಯೋನೆಲ್‌ ಮೆಸ್ಸಿ

ಆತ ಜಗತ್ತು ಕಂಡ ಶ್ರೇಷ್ಠ ಫುಟ್ಬಾಲರ್. ಮೈದಾನಕ್ಕಿಳಿದರೆ ಮಂತ್ರಮುಗ್ಧರನ್ನಾಗಿಸುವ ಕಲೆ ಆತನಿಗೆ ಕರಗತ. ಆಡು ಮುಟ್ಟದ ಸೊಪ್ಪಿಲ್ಲ, ಲಿಯೋನೆಲ್ ಮೆಸ್ಸಿ ಗೆಲ್ಲದ ಟ್ರೋಫಿ ಇಲ್ಲ! ಇದೇ ಕಾರಣಕ್ಕೆ ಅರ್ಜೆಂಟೀನಾದ ಈ ದಂತಕಥೆಯನ್ನು ಇಡೀ ಜಗತ್ತು 'ದಿ ಗೋಟ್‌' (THE GOAT - Greatest Of All Time) ಅಂದರೆ 'ಸಾರ್ವಕಾಲಿಕ ಶ್ರೇಷ್ಠ ಆಟಗಾರ' ಎಂದೇ ಸಂಬೋಧಿಸುತ್ತದೆ.

ಆದರೆ, ಪ್ರತಿಯೊಂದು ರೋಚಕ ಕಥೆಗೂ ಒಂದು ಅಂತ್ಯವಿರುವಂತೆ, ಫುಟ್‌ಬಾಲ್ ಸಾಮ್ರಾಜ್ಯದ ಈ ಸುಲ್ತಾನನ ಅಂತರರಾಷ್ಟ್ರೀಯ ಕ್ರೀಡಾ ಪಯಣಕ್ಕೂ ಈಗ ತೆರೆ ಬಿದ್ದಿದೆ.

2026ರ ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ಎದುರು ಅರ್ಜೆಂಟೀನಾ ಸೋಲನ್ನು ಒಪ್ಪಿಕೊಂಡ ಬೆನ್ನಲ್ಲೇ, ಲಿಯೋನೆಲ್ ಮೆಸ್ಸಿ ಅವರ ಅಂತಾರಾಷ್ಟ್ರೀಯ ಫುಟ್‌ಬಾಲ್‌ ವೃತ್ತಿಬದುಕಿಗೆ ಬಹುತೇಕ ಅಲ್ವಿದಾ ಹೇಳಿದಂತ್ತಾಗಿದೆ. ಏಕೆಂದರೆ ಫೈನಲ್‌ ಸೋಲಿನ ಬಳಿಕ ಮೆಸ್ಸಿ ಕಣ್ಣೀರು ಹಾಕುತ್ತಾ ಮೈದಾನದಿಂದ ಹೊರನಡೆದ ಆ ಕ್ಷಣ, ಕೋಟ್ಯಂತರ ಅಭಿಮಾನಿಗಳ ಹೃದಯವನ್ನು ಹಿಂಡಿದೆ.

ಅರ್ಜೆಂಟೀನಾಗೆ ಆಘಾತ, ಸ್ಪೇನ್‌ಗೆ ಎರಡನೇ ಫಿಫಾ ವಿಶ್ವಕಪ್‌ ಗರಿ!

ಕಣ್ಣೀರು ಮತ್ತು ನಿವೃತ್ತಿಯ ಕರಾಳ ದಿನಗಳು

ಮೆಸ್ಸಿಯ ಇಂದಿನ ಯಶಸ್ಸಿನ ಹಿಂದೆ ಕರಾಳ ದಿನಗಳ ಇತಿಹಾಸವಿದೆ. ಅದು 2014ರ ಫಿಫಾ ವಿಶ್ವಕಪ್ ಟೂರ್ನಿ. ಲಿಯೋನೆಲ್ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ಇಡೀ ವಿಶ್ವವನ್ನೇ ಬೆರಗುಗೊಳಿಸಿ ಫೈನಲ್ ತಲುಪಿತ್ತು. ಆದರೆ ಜಿದ್ದಾಜಿದ್ದಿನ ಆ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡ 1-0 ಅಂತರದಲ್ಲಿ ಜರ್ಮನಿ ಎದುರು ಮಂಡಿಯೂರಿತು. ಅದಾಗಿ ಕೆಲವೇ ದಿನಗಳಲ್ಲಿ, ಅಂದರೆ 2016ರ ಕೋಪಾ ಅಮೆರಿಕ ಫೈನಲ್‌ನಲ್ಲೂ ಚಿಲಿ ಎದುರು ಅರ್ಜೆಂಟೀನಾ ಆಘಾತಕಾರಿ ಸೋಲು ಅನುಭವಿಸಿತು. ವಿಶ್ವದ ಬೇರೆಲ್ಲಾ ಕ್ಲಬ್ ಟ್ರೋಫಿಗಳನ್ನು ಗೆದ್ದರೂ, ದೇಶಕ್ಕಾಗಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ತೀವ್ರ ಹತಾಶೆ ಮೆಸ್ಸಿಯನ್ನು ಆವರಿಸಿತ್ತು. ಆ ನಿರಾಶೆಯ ಭಾರವನ್ನು ಹೊರಲಾರದೆ, "ನನ್ನಿಂದ ಇದು ಸಾಧ್ಯವಾಗುತ್ತಿಲ್ಲ" ಎಂದು ಕಣ್ಣೀರಲ್ಲೇ ಕೈತೊಳೆದ ಮೆಸ್ಸಿ ಅಂತರರಾಷ್ಟ್ರೀಯ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿಬಿಟ್ಟಿದ್ದರು.

ಫೈನಲ್‌ ಸೋಲಿನ ಆಘಾತದಿಂದ ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಮೆಸ್ಸಿ

ಅಭಿಮಾನಿಗಳ ಶಕ್ತಿ ಮತ್ತು ಐತಿಹಾಸಿಕ ಕಂಬ್ಯಾಕ್!

ಕ್ರೀಡಾಲೋಕದ ಲೆಕ್ಕಾಚಾರವೇ ಬೇರೆಯಾಗಿತ್ತು. ಹೀಗಾಗಿ ಮೆಸ್ಸಿಯನ್ನು ಅಷ್ಟು ಸುಲಭವಾಗಿ ಹೋಗಲು ಅಭಿಮಾನಿಗಳು ಬಿಡಲಿಲ್ಲ. ಇಡೀ ಜಗತ್ತಿನಾದ್ಯಂತ ಹರಿದುಬಂದ ಅಪಾರ ಬೆಂಬಲ ಮತ್ತು ಪ್ರೀತಿ ಮೆಸ್ಸಿ ತಮ್ಮ ನಿರ್ಧಾರವನ್ನು ಬದಲಿಸುವಂತೆ ಮಾಡಿತು. ನಿವೃತ್ತಿ ಹಿಂಪಡೆದು ಮರಳಿ ಕಾಲ್ಚೆಂಡಿನಾಟದಲ್ಲಿ ತಮ್ಮ ಮೋಡಿ ಶುರು ಮಾಡಿದ ಮೆಸ್ಸಿ, ಇತಿಹಾಸದ ಮೆಟ್ಟಿಲನ್ನು ಒಂದೊಂದಾಗಿ ಏರಲಾರಂಭಿಸಿದರು.

ಮೊದಲು ಕೋಪಾ ಅಮೆರಿಕ ಟ್ರೋಫಿ ಮುಡಿಗೇರಿಸಿಕೊಂಡರು. ತದನಂತರ 2022ರ ಕತಾರ್ ವಿಶ್ವಕಪ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಮೆಸ್ಸಿ, ಫೈನಲ್‌ನಲ್ಲಿ ಬಲಿಷ್ಠ ಫ್ರಾನ್ಸ್ ತಂಡವನ್ನು ಬಗ್ಗುಬಡಿದು ಅರ್ಜೆಂಟೀನಾಗೆ ವಿಶ್ವ ಚಾಂಪಿಯನ್ಸ್ ಕಿರೀಟ ತೊಡಿಸಿದರು. ಒಂದು ವೇಳೆ ಅಂದು ಮೆಸ್ಸಿ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ, ಇಂದು ಅಭಿಮಾನಿಗಳ ಕಣ್ಣಲ್ಲಿ 'ದಿ ಗೋಟ್‌' ಆಗಿ ಶಾಶ್ವತವಾಗಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ.

ಫಿಫಾ ವಿಶ್ವಕಪ್‌ ಗೆದ್ದ ಸ್ಪೇನ್‌ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

2026ರ ಕಣ್ಣೀರು ಮತ್ತು ಸಾರ್ಥಕತೆಯ ವಿದಾಯ

2014ರ ಆ ಸೋಲಿನ ಬಳಿಕ ಮೆಸ್ಸಿ ಕಣ್ಣೀರಿಟ್ಟಾಗ ಅದರಲ್ಲಿ ಏನೂ ಸಾಧಿಸಲಾಗಲಿಲ್ಲ ಎಂಬ ಹತಾಶೆ ಹಾಗೂ ನಿರಾಶೆ ಎದ್ದು ಕಾಣುತ್ತಿತ್ತು. ಆದರೆ, ಇದೀಗ 2026ರ ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್‌ ಎದುರು ಅರ್ಜೆಂಟೀನಾ ಸೋತಾಗಲೂ ಮೆಸ್ಸಿ ಕಣ್ಣಲ್ಲಿ ನೀರು ಹರಿದಿದೆ. ಆದರೆ, ಈ ಬಾರಿಯ ಕಣ್ಣೀರಲ್ಲಿ ಹತಾಶೆ ಇರಲಿಲ್ಲ, ಬದಲಿಗೆ ವಿದಾಯದ ಸಾರ್ಥಕತೆ ಇತ್ತು!

ತನಗೆ ಎಲ್ಲವನ್ನೂ ಕೊಟ್ಟ, ತಾನು ಜಗತ್ತಿನ ಅತ್ಯುನ್ನತ ಸ್ಥಾನಕ್ಕೇರಲು ಕಾರಣವಾದ ಫುಟ್‌ಬಾಲ್‌ಗೆ ಇಂದು ಅಲ್ವಿದಾ ಹೇಳುವ ಸರಿಯಾದ ಸಮಯ ಬಂದಿದೆ ಎಂಬ ಶಾಂತತೆ ಆ ಕಣ್ಣುಗಳಲ್ಲಿತ್ತು. ಅರ್ಜೆಂಟೀನಾಗೆ ಮತ್ತೊಮ್ಮೆ ವಿಶ್ವಕಪ್ ಗೆದ್ದುಕೊಟ್ಟು ವಿದಾಯ ಹೇಳಬೇಕೆಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ, ತಮ್ಮ ಕಟ್ಟಕಡೆಯ ಡ್ರಿಬಲ್‌ನಲ್ಲಿ ಮೆಸ್ಸಿ ಕೆಳಗೆ ಬಿದ್ದರು. ಗೆದ್ದು ವಿದಾಯ ಹೇಳಲು ಸಾಧ್ಯವಾಗದ್ದಿದ್ದರೂ, ಜಗತ್ತಿನ ಕೋಟ್ಯಂತರ ಫುಟ್‌ಬಾಲ್ ಪ್ರೇಮಿಗಳ ಹೃದಯದಲ್ಲಿ ಮಾತ್ರ ಅವರು ಸಾರ್ವಕಾಲಿಕ 'ದಿ ಗ್ರೇಟೆಸ್ಟ್‌ ಆಫ್ ಆಲ್ ಟೈಮ್' (THE GOAT) ಆಗಿ ಶಾಶ್ವತವಾಗಿ ನಿಂತಿದ್ದಾರೆ.

ಫುಟ್‌ಬಾಲ್ ಜಗತ್ತನ್ನು ಮಾಂತ್ರಿಕ ಆಟದೊಂದಿಗೆ ಇಷ್ಟು ಶ್ರೀಮಂತಗೊಳಿಸಿ ಲಿಯೋನೆಲ್ ಮೆಸ್ಸಿ ನಿಮಗೆ 'ಥ್ಯಾಂಕ್ ಯು'!