ARG vs SPA: ಲಿಯೊನೆಲ್ ಮೆಸ್ಸಿ ಕನಸು ಭಗ್ನ, ಎರಡನೇ ಫಿಫಾ ವಿಶ್ವಕಪ್ ಮುಡಿಗೇರಿಸಿಕೊಂಡ ಸ್ಪೇನ್!
FIFA World Cup 2026 Final Highlights: ಹೆಚ್ಚುವರಿ ಸಮಯದಲ್ಲಿ ಫೆರಾನ್ ಟೊರೆಸ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಸ್ಪೇನ್ ತಂಡ, 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು 1-0 ಮಣಿಸಿತು. ಆ ಮೂಲಕ ಎರಡನೇ ಭಾರಿ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.
ಅರ್ಜೆಂಟೀನಾ ತಂಡವನ್ನು ಮಣಿಸಿ ಫಿಫಾ ವಿಶ್ವಕಪ್ ಗೆದ್ದ ಸ್ಪೇನ್. -
ನ್ಯೂ ಜೆರ್ಸಿ: ಹೆಚ್ಚುವರಿ ಸಮಯದಲ್ಲಿ ಫೆರಾನ್ ಟೊರೆಸ್ (Ferran Torres) ಅವರು ಗಳಿಸಿದ ಏಕೈಕ ಗೋಲಿನ ಸಹಾಯದಿಂದ ಸ್ಪೇನ್ ತಂಡ, ಫೈನಲ್ ಪಂದ್ಯದಲ್ಲಿ (SPA vs ARG) ಲಿಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ವಿರುದ್ಧ 1-0 ಅಂತರದಲ್ಲಿ ಗೆದ್ದು, 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ (FIFA World Cup 2026) ಚಾಂಪಿಯನ್ ಆಯಿತು. ಇದರೊಂದಿಗೆ ಎರಡನೇ ಬಾರಿ ಸ್ಪಾನಿಷ್ ತಂಡ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಇನ್ನು ಪಂದ್ಯದುದ್ದಕ್ಕೂ ಕಠಿಣ ಹೋರಾಟ ನಡೆಸಿದ್ದ ಲಿಯೊನೆಲ್ ಮೆಸ್ಸಿ ತಂಡ, ಹೆಚ್ಚುವರಿ ಸಮಯದಲ್ಲಿ ಎದರಾಳಿ ತಂಡಕ್ಕೆ ಗೋಲು ನೀಡುವ ಮೂಲಕ ಸೋಲು ಒಪ್ಪಿಕೊಂಡಿತು. ಈ ಆಘಾತಕಾರಿ ಸೋಲಿನೊಂದಿಗೆ ಅರ್ಜೆಂಟೀನಾ ತಂಡದ ಸತತ ಎರಡನೇ ಬಾರಿ ವಿಶ್ವಕಪ್ ಗೆಲ್ಲುನ ಕನಸು ಭಗ್ನವಾಯಿತು.
ಭಾನುವಾರ ತಡರಾತ್ರಿ ಇಲ್ಲಿನ ಋದರ್‌ಫೋರ್ಡ್‌ನ ಮೆಡ್‌ಲೈಫ್ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್ ಪಂದ್ಯದ ನಿಗದಿತ ಅವಧಿಯ ಮುಕ್ತಾಯಕ್ಕೆ ಎರಡೂ ತಂಡಗಳ ಸಮಬಲದ ಹೋರಾಟದಿಂದ ಗೋಲು ದಾಖಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಂದ್ಯದ ರೆಫರಿಗಳು ಫಲಿತಾಂಶಕ್ಕಾಗಿ ಹೆಚ್ಚುವರಿ ಸಮಯವನ್ನು ಘೋಷಿಸಿದರು. ಹೆಚ್ಚುವರಿ ಸಮಯದ 106ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಫೆರಾನ್ ಟೊರೆಸ್ ಅವರು ಚೆಂಡನ್ನು ಗೋಲು ಪಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾದರು. ಈ ಏಕೈಕ ಗೋಲು ಸ್ಪೇನ್ ತಂಡವನ್ನು ಚಾಂಪಿಯನ್ ಮಾಡಿತು.
FIFA World Cup 2026 Final ಪಂದ್ಯದಲ್ಲಿ ಕಣಕ್ಕೆ ಇಳಿದು ಇತಿಹಾಸ ಸೃಷ್ಟಿಸಿದ ಲಮೀನ್ ಯಮಾಲ್!
ಹೆಚ್ಚುವರಿ ಸಮಯದ ಮೊದಲಾರ್ಧ ಮುಗಿದ ಬಳಿಕ ಆಟ ಪುನರಾರಂಭವಾಗುತ್ತಿದ್ದಂತೆಯೇ 106ನೇ ನಿಮಿಷದಲ್ಲಿ ಸ್ಪೇನ್‌ಗೆ ಕೊನೆಗೂ ಬಹು ನಿರೀಕ್ಷಿತ ಗೋಲು ಲಭಿಸಿತು. ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿದ್ದ ಫೆರಾನ್ ಟೊರೆಸ್, ಅದ್ಭುತ ಫಿನಿಶಿಂಗ್ ಮೂಲಕ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ಸೇರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. 105 ನಿಮಿಷಗಳ ಹೋರಾಟ, ಕೈತಪ್ಪಿದ ಹಲವು ಅವಕಾಶಗಳು ಹಾಗೂ ಅಮಾನ್ಯಗೊಂಡ ಒಂದು ಗೋಲಿನ ಬಳಿಕ ಸ್ಪೇನ್‌ನ ನಿರಂತರ ಪ್ರಯತ್ನಕ್ಕೆ ಕೊನೆಗೂ ಫಲ ಲಭಿಸಿತು. ಈ ಗೋಲಿನೊಂದಿಗೆ ಮೆಸ್ಸಿ ನಾಯಕತ್ವದ ಅರ್ಜೆಂಟೀನಾದ ಬಲಿಷ್ಠ ರಕ್ಷಣಾ ಕೋಟೆಯೂ ಮೊದಲ ಬಾರಿ ಭೇದಿಸಲ್ಪಟ್ಟಿತು.
Spain have added another star above their crest 🌟#FIFAWorldCup pic.twitter.com/sFvm9NE2Lz
— FIFA World Cup (@FIFAWorldCup) July 19, 2026
ಮೊದಲಾರ್ಧದಲ್ಲಿ ಗೋಲುರಹಿತ ಸಮಬಲ
ಸ್ಪೇನ್ ಮತ್ತು ಅರ್ಜೆಂಟೀನಾ ತಂಡಗಳ ನಡುವಣ ಮೊದಲಾರ್ಧವು ತೀವ್ರ ಪೈಪೋಟಿ ಹಾಗೂ ರಕ್ಷಣಾತ್ಮಕ ತಂತ್ರಗಳಿಗೆ ಸಾಕ್ಷಿಯಾಯಿತು. ಇದರ ಪರಿಣಾಮ ಮೊದಲ 45 ನಿಮಿಷಗಳ ಆಟ ಗೋಲುರಹಿತವಾಗಿ ಅಂತ್ಯಗೊಂಡಿತು. ಆದರೆ ಆಟದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು ಸ್ಪೇನ್. ಶೇಕಡಾ 64ರಷ್ಟು ಚೆಂಡಿನ ನಿಯಂತ್ರಣ (ಬಾಲ್ ಪೊಸೆಷನ್) ಹೊಂದಿದ್ದ ಸ್ಪೇನ್, ಗೋಲು ದಾಖಲಿಸಲು ಮೂರು ಪ್ರಯತ್ನಗಳನ್ನು ನಡೆಸಿದ್ದು, ಅದರಲ್ಲಿ ಒಂದು ಶಾಟ್ ಗೋಲುಪೆಟ್ಟಿಗೆಯ ಗುರಿಯತ್ತ ಸಾಗಿತ್ತು.
ಮತ್ತೊಂದೆಡೆ, ಕೇವಲ ಶೇಕಡಾ 36 ರಷ್ಟು ಚೆಂಡಿನ ನಿಯಂತ್ರಣ ಹೊಂದಿದ್ದ ಅರ್ಜೆಂಟೀನಾಗೆ ಮೊದಲಾರ್ಧದಲ್ಲಿ ಸ್ಪೇನ್‌ನ ರಕ್ಷಣೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಗೋಲು ಪಟ್ಟಿಯತ್ತ ಒಂದೇ ಒಂದು ಶಾಟ್ ಹೊಡೆಯಲು ಮೆಸ್ಸಿ ಪಡೆಯಿಂದ ಆಗಲಿಲ್ಲ.
Spain are #FIFAWorldCup Champions. 🏆 pic.twitter.com/mWLw5iis2C
— FIFA World Cup (@FIFAWorldCup) July 19, 2026
ಪಂದ್ಯದ ನಿಗದಿತ ಅವಧಿಯಲ್ಲಿ ಗೋಲು ಮೂಡಲಿಲ್ಲ
ನಿಗದಿತ 90 ನಿಮಿಷಗಳ ಆಟ ಮುಗಿದರೂ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದ ಕಾರಣ ಪಂದ್ಯ 0-0 ಸಮಬಲದಲ್ಲೇ ಉಳಿದು ಹೆಚ್ಚುವರಿ ಸಮಯಕ್ಕೆ ಸಾಗಿತು. ಪಂದ್ಯದುದ್ದಕ್ಕೂ ಸ್ಪೇನ್ ಸಂಪೂರ್ಣ ಮೇಲುಗೈ ಸಾಧಿಸಿತು. ಶೇಕಡಾ 65ರಷ್ಟು ಚೆಂಡಿನ ನಿಯಂತ್ರಣ ಹೊಂದಿದ್ದ ಸ್ಪೇನ್, ಒಟ್ಟು 17 ಬಾರಿ ಗೋಲು ಪ್ರಯತ್ನ ನಡೆಸಿದ್ದು, ಅದರಲ್ಲಿ 11 ಶಾಟ್‌ಗಳು ಗೋಲುಪೆಟ್ಟಿಗೆಯ ಗುರಿಯತ್ತ ಸಾಗಿದ್ದವು.
ಮತ್ತೊಂದೆಡೆ ಹಾಲಿ ಚಾಂಪಿಯನ್ ಅರ್ಜೆಂಟೀನಾ ಪಂದ್ಯದುದ್ದಕ್ಕೂ ಗೋಲುಪಟ್ಟಿಯತ್ತ ಒಂದೇ ಒಂದು ಶಾಟ್ ಕೂಡ ದಾಖಲಿಸಲು ಸಾಧ್ಯವಾಗಲಿಲ್ಲ. ಇದರ ನಡುವೆ ಗಾಯದ ಅವಧಿಯ (90+3ನೇ ನಿಮಿಷ) ವೇಳೆ ಎಂಜೊ ಫರ್ನಾಂಡಿಸ್‌ಗೆ ರೆಡ್ ಕಾರ್ಡ್ ತೋರಿಸಲಾಯಿತು. ಇದರಿಂದ ಅರ್ಜೆಂಟೀನಾ ಉಳಿದ ಪಂದ್ಯವನ್ನು 10 ಆಟಗಾರರೊಂದಿಗೆ ಮುಂದುವರಿಸಬೇಕಾಯಿತು, ಇದು ತಂಡಕ್ಕೆ ದೊಡ್ಡ ಹಿನ್ನಡೆಯನ್ನು ತಂದೊಡ್ಡಿತು.