ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಯು-ಟರ್ನ್‌ ಹೊಡೆದ ಪಾಕ್‌; ಭಾರತ ವಿರುದ್ಧ ಆಡಲು ನಿರ್ಧಾರ?

India vs Pakistan: ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಶಮ್ಮಿ ಡಿ ಸಿಲ್ವಾ ಅವರು ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಜತೆ ಖುದ್ದಾಗಿ ಮಾತನಾಡಿದ್ದು, ತಮ್ಮ ನಿಲುವನ್ನು ಬದಲಿಸುವಂತೆ ಒತ್ತಡ ಸಹ ಹೇರಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿರುವ ನಖ್ವಿ, ಪಾಕ್ ಸರ್ಕಾರದ ಜತೆ ಮಾತನಾಡುವೆ ಎಂದಿದ್ದಾರೆ ಎಂದು ತಿಳಿದುಬಂದಿದೆ.

ಯು-ಟರ್ನ್‌ ಹೊಡೆದ ಪಾಕ್‌; ಭಾರತ ವಿರುದ್ಧ ಆಡಲು ನಿರ್ಧಾರ?

Pakistan Team -

Abhilash BC
Abhilash BC Feb 8, 2026 2:49 PM

ನವದೆಹಲಿ, ಫೆ.8: ಫೆ.15ರಂದು ಭಾರತ ವಿರುದ್ಧ ಶ್ರೀಲಂಕಾದ ಕೊಲಂಬೊದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್‌ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದ ಪಾಕಿಸ್ತಾನ ಇದೀಗ ಯೂ-ಟರ್ನ್‌ ಹೊಡೆದು ಪಂದ್ಯ ಆಡಲು ನಿರ್ಧರಿಸಿದೆ ಎನ್ನಲಾಗಿದೆ. ಪಂದ್ಯದಲ್ಲಿ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ), ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಜೊತೆ ಹೊಸದಾಗಿ ಮಾತುಕತೆ ಆರಂಭಿಸಿದೆ ಎಂದು ತಿಳಿದುಬಂದಿದೆ.

ಕಳೆದ ಭಾನುವಾರ ಪಾಕಿಸ್ತಾನ ಸರಕಾರ, ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡ ಪಾಲ್ಗೊಳ್ಳಲಿದೆ. ಆದರೆ ಭಾರತ ವಿರುದ್ಧದ ಮಹತ್ವದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿತ್ತು. ಇದರ ಬೆನ್ನಲ್ಲೇ ಐಸಿಸಿ, ಕಾರಣವಿಲ್ಲದೆ ಪಂದ್ಯ ಬಹಿಷ್ಕರಿಸಿದರೆ ಮುಂದೆ ಪಾಕ್‌ ವಿರುದ್ಧ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಿತ್ತು.

ಇಕ್ಕಟಿಗೆ ಸಿಲುಕಿದ ಪಾಕ್‌ ಕ್ರಿಕೆಟ್‌ ಮಂಡಳಿ ತನ್ನ ನಿರ್ಧಾರದ ಬಗ್ಗೆ ಐಸಿಸಿಗೆ ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ಎದುರಾದಾಗ, ಪಿಸಿಬಿಯು ‘ಅನಿವಾರ್ಯ ಸಂದರ್ಭ’ ಷರತ್ತಿನಡಿ ತನ್ನ ನಿರ್ಧಾರವನ್ನು ಪರಿಗಣಿಸುವಂತೆ ಐಸಿಸಿಗೆ ತಿಳಿಸಿತ್ತು.

ಇದಕ್ಕೆ ಐಸಿಸಿ, ಅನಿವಾರ್ಯ ಸಂದರ್ಭ ಎದುರಾಗಿದ್ದಾದರೂ ಯಾವಾಗ? ಎಂದು ಪ್ರಶ್ನಿಸಿತ್ತು. ಐಸಿಸಿಯ ನಿಯಮದ ಪ್ರಕಾರ, ಯುದ್ಧ ಅಥವಾ ನೈಸರ್ಗಿಕ ವಿಕೋಪದಂತಹ ಸಂದರ್ಭಗಳಲ್ಲಿ ತಂಡಗಳು ಪ್ರಯಾಣಿಸಲು ಆಗದೆ ಇದ್ದಾಗ ಅದನ್ನು ‘ಅನಿವಾರ್ಯ ಸಂದರ್ಭ’ ಎಂದು ಪರಿಗಣಿಸಲಾಗುತ್ತದೆ. ಆದರೆ, ಪಾಕ್‌ ನೀಡುತ್ತಿರುವ ವಿವರಣೆಯಲ್ಲಿ ಯಾವುದೇ ತರ್ಕವಿಲ್ಲ ಎಂದು ತಿಳಿಸಿದೆ. ಪಂದ್ಯದಲ್ಲಿ ಆಡದಿದ್ದರೆ ಪಿಸಿಬಿ ಎದುರಿಸಬೇಕಾದ ಆರ್ಥಿಕ ಸಂಕಷ್ಟದ ಬಗ್ಗೆ ಮತ್ತೊಮ್ಮೆ ಎಚ್ಚರಿಸಿದೆ. ಇದಕ್ಕೆ ಹೆದರಿದ ಪಾಕ್‌ ಮಂಡಳಿ ಬಹಿಷ್ಕಾರ ನಿರ್ಧಾರವನ್ನು ಸದ್ಯದಲ್ಲೇ ಹಿಂಪಡೆಯಲಿದೆ ಎನ್ನಲಾಗುತ್ತಿದೆ.

ಭಾರತ ವಿರುದ್ಧದ ವಿಶ್ವಕಪ್ ಪಂದ್ಯ ಬಹಿಷ್ಕಾರ; ಪಾಕ್‌ ನಾಯಕನ ಪ್ರತಿಕ್ರಿಯೆ ಏನು?

ಇನ್ನೊಂದೆಡೆ, ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಶಮ್ಮಿ ಡಿ ಸಿಲ್ವಾ ಅವರು ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಜತೆ ಖುದ್ದಾಗಿ ಮಾತನಾಡಿದ್ದು, ತಮ್ಮ ನಿಲುವನ್ನು ಬದಲಿಸುವಂತೆ ಒತ್ತಡ ಸಹ ಹೇರಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿರುವ ನಖ್ವಿ, ಪಾಕ್ ಸರ್ಕಾರದ ಜತೆ ಮಾತನಾಡುವೆ ಎಂದಿದ್ದಾರೆ ಎಂದು ತಿಳಿದುಬಂದಿದೆ.

ಬಹಿಷ್ಕಾರದ ಪರಿಣಾಮ ಏನು?

ಕಾರಣವಿಲ್ಲದೆ ಬಹಿಷ್ಕರಿಸಿದ್ದರಿಂದ ಪಾಕ್‌ ವಿರುದ್ಧ ಐಸಿಸಿ ಕ್ರಮ(ದಂಡ, ನಿಷೇಧ) ಕೈಗೊಳ್ಳಬಹುದು.

ವಿಶ್ವಕಪ್‌ ವೀಕ್ಷಣೆ ಸಂಖ್ಯೆ, ಪ್ರಾಯೋಜಕತ್ವ, ಪ್ರಸಾರ ಆದಾಯದ ಮೇಲೆ ಭಾರೀ ಹೊಡೆತ. ಐಸಿಸಿಗೆ ನಷ್ಟ.

ವಿಶ್ವಕಪ್‌ ಮಾತ್ರವಲ್ಲದೆ ಭವಿಷ್ಯದಲ್ಲೂ ಪಾಕ್‌ ಕ್ರಿಕೆಟ್‌ಗೆ ಭಾರೀ ಆರ್ಥಿಕ ಹೊಡೆತ ಬೀಳುವ ಸಾಧ್ಯತೆ.

ಪಾಕ್‌ ನಾಕೌಟ್‌ಗೇರಿ, ಭಾರತ ವಿರುದ್ಧ ಆಡಬೇಕಿದ್ದರೆ ಆ ಪಂದ್ಯವನ್ನೂ ಬಹಿಷ್ಕರಿಸಲಿದೆಯೇ? ಬಹಿಷ್ಕರಿಸಿದರೆ ಪಾಕ್‌ ಹೊರಕ್ಕೆ.