ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs SRH: ಅಗ್ರ ಎರಡು ಸ್ಥಾನ ಬಲಪಡಿಸುವತ್ತ ಆರ್‌ಸಿಬಿ ಚಿತ್ತ; ಸನ್‌ರೈಸರ್ಸ್‌ ಸವಾಲು

ಲೀಗ್‌ನಲ್ಲಿ 12 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿ ಒಟ್ಟು 17 ಅಂಕಗಳನ್ನು ಗಳಿಸಿರುವ ಆರ್‌ಸಿಬಿ, ಸದ್ಯ ಪಾಯಿಂಟ್‌ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅಗ್ರ ಎರಡು ಸ್ಥಾನದಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ಆರ್‌ಸಿಬಿಗೆ ಹೈದರಾಬಾದ್‌ ವಿರುದ್ಧ ಗೆಲುವು ಅತ್ಯಗತ್ಯ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಹೈದರಾಬಾದ್‌ ಪಾಲಿಗೆ ಇದು ಔಪಚಾರಿಕ ಪಂದ್ಯವಷ್ಟೇ.

ಅಗ್ರ ಎರಡು ಸ್ಥಾನ ಬಲಪಡಿಸುವತ್ತ ಆರ್‌ಸಿಬಿ ಚಿತ್ತ; ಸನ್‌ರೈಸರ್ಸ್‌ ಸವಾಲು

Profile Abhilash BC May 22, 2025 3:00 PM

ಲಕ್ನೋ: ಈಗಾಗಲೇ ಪ್ಲೇಆಫ್‌ ಪ್ರವೇಶಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಶುಕ್ರವಾರ ಇಲ್ಲಿ ನಡೆಯಲಿರುವ ಐಪಿಎಲ್‌(IPL 2025) ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌(RCB vs SRH) ತಂಡವನ್ನು ಎದುರಿಸಲಿದೆ. ಮೂಲ ವೇಳಾಪಟ್ಟಿಯಂತೆ ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಮಳೆ ಆತಂಕದಿಂದಾಗಿ ಪಂದ್ಯವನ್ನು ಲಕ್ನೋಗೆ ಸ್ಥಳಾಂತರಿಸಲಾಗಿದೆ.

ಲೀಗ್‌ನಲ್ಲಿ 12 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿ ಒಟ್ಟು 17 ಅಂಕಗಳನ್ನು ಗಳಿಸಿರುವ ಆರ್‌ಸಿಬಿ, ಸದ್ಯ ಪಾಯಿಂಟ್‌ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅಗ್ರ ಎರಡು ಸ್ಥಾನದಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ಆರ್‌ಸಿಬಿಗೆ ಹೈದರಾಬಾದ್‌ ವಿರುದ್ಧ ಗೆಲುವು ಅತ್ಯಗತ್ಯ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಹೈದರಾಬಾದ್‌ ಪಾಲಿಗೆ ಇದು ಔಪಚಾರಿಕ ಪಂದ್ಯವಷ್ಟೇ.

ಸವಾಲು ಕಡೆಗಣಿಸುವಂತಿಲ್ಲ

ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸಿರೂ ಹೈದರಾಬಾದ್‌ ಸವಾಲನ್ನು ಹಗುರವಾಗಿ ಕಾಣುವಂತಿಲ್ಲ. ಅಗ್ರ ಎರಡು ಸ್ಥಾನಗಳ ಪೈಕಿ ಕಾಣಿಸಿಕೊಳ್ಳುವ ಇರಾದೆಯೊಂದಿಗೆ ಆಡಲಿಳಿಯಬೇಕಿದೆ. ಅಗ್ರ ಎರಡರಲ್ಲಿ ಸ್ಥಾನ ಪಡೆದರೆ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಸೋತರೂ ಮತ್ತೊಂದು ಪಂದ್ಯ ಆಡಲು ಅವಕಾಶ ಸಿಗುತ್ತದೆ. ಮೂರು ಮತ್ತು ನಾಲ್ಕನೇ ಸ್ಥಾನಿಗಳಿಗೆ ಈ ಅವಕಾಶ ಸಿಗುವುದಿಲ್ಲ. ಹೀಗಾಗಿ ಆರ್‌ಸಿಬಿ ಉಳಿದ ಎರಡು ಪಂದ್ಯಗಳನ್ನು ಮಹತ್ವದ ಪಂದ್ಯ ಎಂದು ಪರಿಗಣಿಸಿ ಆಡಬೇಕು.

ಹೈದರಾಬಾದ್‌ ತಂಡ ಇದೇ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ಗೆ ಸೋಲುಣಿಸಿತ್ತು. ಹೀಗಾಗಿ ಇಲ್ಲಿನ ಪಿಚ್‌ ವರ್ತನೆ ಬಗ್ಗೆ ತಂಡಕ್ಕೆ ಹೆಚ್ಚು ತಿಳಿದಿದೆ. ಸ್ಫೋಟಕ ಬ್ಯಾಟರ್‌ಳಾದ ಅಭಿಷೇಕ್‌ ಶರ್ಮ, ಇಶಾನ್‌ ಕಿಶನ್‌, ನಿತೇಶ್‌ ಕುಮಾರ್‌ ರೆಡ್ಡಿ, ಹೆನ್ರಿಚ್‌ ಕ್ಲಾಸೆನ್‌ ಸಿಡಿದು ನಿಂತರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಕಾರಣದಿಂದ ಆರ್‌ಸಿಬಿ ಬೌಲರ್‌ಗಳು ಇವರನ್ನು ಹೆಚ್ಚು ಹೊತ್ತು ಕ್ರೀಸ್‌ ಆಕ್ರಮಿಸಲು ಬಿಡಬಾರದು. ಕೋವಿಡ್‌ ಪಾಸಿಟಿವ್‌ ಕಂಡುಬಂದ ಕಾರಣ ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಟ್ರಾವಿಸ್‌ ಹೆಡ್‌ ಸದ್ಯ ಚೇತರಿಸಿಕೊಂಡಿದ್ದು ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ.

ಇದನ್ನೂ ಓದಿ IPL 2025: ಮುಂಬೈಗೆ ಇನ್ನೂ ಇದೆ ಅಗ್ರ 2ರಲ್ಲಿ ಸ್ಥಾನ ಪಡೆಯುವ ಅವಕಾಶ; ಈ ಲೆಕ್ಕಾಚಾರ ಇಲ್ಲಿದೆ

ಸದ್ಯ ಇದುವರೆಗೆ ಆರ್‌ಸಿಬಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಸಮರ್ಥ ಪ್ರದರ್ಶನ ತೋರಿದೆ. ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ಟಿಮ್‌ ಡೇವಿಡ್‌, ಜಿತೇಶ್‌ ಶರ್ಮ, ನಾಯಕ ಪಾಟೀದಾರ್‌ ಉತ್ತಮ ಬ್ಯಾಟಿಂಗ್‌ ನಡೆಸಿದ್ದಾರೆ. ಬೌಲರ್‌ಗಳಾದ ಯಶ್‌ ದಯಾಳ್‌, ಭುವನೇಶ್ವರ್‌ ಕುಮಾರ್‌, ಹ್ಯಾಜಲ್‌ವುಡ್‌ ಕಠಿಣ ಸವಾಲೊಡ್ಡಬಲ್ಲರು. ಕಳೆದ ಆವೃತ್ತಿಯಲ್ಲಿ ಲಕ್ನೋ ಪರ ಆಡಿದ್ದ ಕೃಣಾಲ್‌ ಪಾಂಡ್ಯಗೆ ಈ ಮೈದಾನದಲ್ಲಿ ಆಡಿದ ಅನುಭವವಿದೆ. ಇದನ್ನು ಅವರು ಈ ಪಂದ್ಯದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು.



ಮುಖಾಮುಖಿ: 25

ಆರ್‌ಸಿಬಿ: 11 ಗೆಲುವು

ಹೈದರಾಬಾದ್‌: 13 ಗೆಲುವು

ರದ್ದು: 1

ಸಂಭಾವ್ಯ ತಂಡಗಳು

ಆರ್‌ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್‌, ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಯಶ್ ದಯಾಲ್.

ಹೈದರಾಬಾದ್‌: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವೀ.ಕೀ.), ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಕಮಿಂದು ಮೆಂಡಿಸ್, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಹರ್ಷ್ ದುಬೆ, ಜೀಶನ್ ಅನ್ಸಾರಿ, ಈಶಾನ್ ಮಾಲಿಂಗ.