PBKS vs GT: ಕ್ರಿಸ್ ಗೇಲ್ ಸಾರ್ವಕಾಲಿಕ ದಾಖಲೆ ಮುರಿದ ಸಾಯಿ ಸುದರ್ಶನ್
IPL 2026: ಪಂಜಾಬ್ ಪರ ಯುವ ಬ್ಯಾಟರ್ ಸೂರ್ಯಾಂಶ್ ಶೆಡ್ಗೆ (57) ಮತ್ತು ಮಾರ್ಕಸ್ ಸ್ಟೊಯಿನಿಸ್ (40) ಉಪಯುಕ್ತ ಕಾಣಿಕೆ ನೀಡಿದರು. ಉಳಿದಂತೆ ಶ್ರೇಯಸ್ ಅಯ್ಯರ್, ಪ್ರಭ್‌ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ ಬ್ಯಾಟಿಂಗ್ ವೈಫಲ್ಯ ಕಂಡರು.
B Sai Sudharsan -
ಅಹಮದಾಬಾದ್, ಮೇ 4: ಗುಜರಾತ್ ಟೈಟಾನ್ಸ್ (ಜಿಟಿ) ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್(B Sai Sudharsan) ಅವರು ಕ್ರಿಸ್ ಗೇಲ್ ಅವರ ದೀರ್ಘಾವಧಿಯ ದಾಖಲೆಯನ್ನು ಮುರಿದಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸುದರ್ಶನ್ 41 ಎಸೆತಗಳಲ್ಲಿ 57 ರನ್ ಗಳಿಸುವ ಮೂಲಕ, ತಮ್ಮ 50ನೇ ಐಪಿಎಲ್ ಇನ್ನಿಂಗ್ಸ್‌ನಲ್ಲಿ 2178 ರನ್ ಗಳಿಸುವ ಮೂಲಕ ಅತಿ ಕಡಿಮೆ ಇನಿಂಗ್ಸ್‌ನಿಂದ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿದರು.
ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್(2061) ಹೆಸರಿನಲ್ಲಿತ್ತು. ಪಂಜಾಬ್‌ನ ಮಾಜಿ ಬ್ಯಾಟ್ಸ್‌ಮನ್ ಮಿಚೆಲ್ ಮಾರ್ಷ್(1933) ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಗೇಲ್ ಅವರ ಈ ದಾಖಲೆ 13 ವರ್ಷಗಳ ಕಾಲ ಮುಂದುವರೆದಿತ್ತು, ಆದರೆ ಸುದರ್ಶನ್ ಈ ದಾಖಲೆನ್ನು ಇದೀಗ ಮೀರಿ ನಿಂತರು.
ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ವೇಗದ ಬೌಲರ್‌ಗಳಾದ ಜೇಸನ್ ಹೋಲ್ಡರ್ (24ಕ್ಕೆ 4), ಮೊಹಮ್ಮದ್ ಸಿರಾಜ್ (28ಕ್ಕೆ 2) ಮತ್ತು ಕಗಿಸೊ ರಬಾಡ (22ಕ್ಕೆ 2) ಸಂಘಟಿತ ದಾಳಿಯ ಮುಂದೆ ಪಂಜಾಬ್ ತಂಡ 9 ವಿಕೆಟ್‌ಗೆ 163 ರನ್‌ಗಳ ಸಾಧಾರಣ ಮೊತ್ತ ಗಳಿಸಲಷ್ಟೇ ಶಕ್ತವಾಯಿತು.
PBKS vs GT: ಟೇಬಲ್ ಟಾಪರ್ ಪಂಜಾಬ್‌ಗೆ ಸೋಲುಣಿಸಿದ ಟೈಟಾನ್ಸ್
ಗುರಿ ಬೆನ್ನಟ್ಟಿದ ಗುಜರಾತ್ ತಂಡವು ಆರಂಭಿಕ ಆಟಗಾರ ಸಾಯಿ ಸುದರ್ಶನ್ (57) ಮತ್ತು ವಾಷಿಂಗ್ಟನ್ ಸುಂದರ್ (ಔಟಾಗದೇ 40) ಅವರ ಬ್ಯಾಟಿಂಗ್ ನೆರವಿನಿಂದ ಒಂದು ಎಸೆತ ಬಾಕಿ ಇರುವಂತೆ 6 ವಿಕೆಟ್‌ಗೆ 167 ರನ್ ಗಳಿಸಿ ಸಂಭ್ರಮಿಸಿತು. ಒಂದು ಹಂತದಲ್ಲಿ ಪಂಜಾಬ್ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ನಡೆಸಿದರು. ಆದರೆ, ವಾಷಿಂಗ್ಟನ್ ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪಂಜಾಬ್ ಪರ ಯುವ ಬ್ಯಾಟರ್ ಸೂರ್ಯಾಂಶ್ ಶೆಡ್ಗೆ (57) ಮತ್ತು ಮಾರ್ಕಸ್ ಸ್ಟೊಯಿನಿಸ್ (40) ಉಪಯುಕ್ತ ಕಾಣಿಕೆ ನೀಡಿದರು. ಉಳಿದಂತೆ ಶ್ರೇಯಸ್ ಅಯ್ಯರ್, ಪ್ರಭ್‌ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ ಬ್ಯಾಟಿಂಗ್ ವೈಫಲ್ಯ ಕಂಡರು.