Shreyas Iyer: ಗಾಯದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಶ್ರೇಯಸ್ ಅಯ್ಯರ್
ಶಸ್ತ್ರಚಿಕಿತ್ಸೆ ಬಳಿಕ ಚೇತರಿಕೆ ಕಂಡಿರುವ ಅಯ್ಯರ್ ಜತೆ ಅಭಿಮಾನಿಯೊಬ್ಬರು ತೆಗೆಸಿಕೊಂಡಿರುವ ಫೋಟೊವನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಯ್ಯರ್ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲು ಮೂರು ವಾರಗಳ ವಿಶ್ರಾಂತಿ ಪೂರ್ತಿಗಳಿಸಬೇಕಿದೆ. ಇದೇ ಕಾರಣಕ್ಕೆ ಅವರನ್ನು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಿಂದ ಕೈಬಿಡಲಾಗಿದೆ.
-
ಸಿಡ್ನಿ: ಭಾರತದ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್(Shreyas Iyer) ಅವರು ಸಿಡ್ನಿಯಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದಾಗ್ಯೂ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಈಗ ಗಮನಾರ್ಹವಾಗಿ ಚೇತರಿಸಿಕೊಂಡಿದ್ದಾರೆ ಮತ್ತು ಗಾಯದ ನಂತರ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಚಿತ್ರ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಅಲೆಕ್ಸ್ ಕ್ಯಾರಿ ಹೊಡೆದ ಚೆಂಡನ್ನು ಹಿಂದಕ್ಕೆ ಓಡಿ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಅದ್ಭುತವಾಗಿ ಕ್ಯಾಚ್ ಪಡೆದು ಔಟ್ ಮಾಡಿದ್ದರು. ಆ ಸಂದರ್ಭದಲ್ಲಿ ಅಯ್ಯರ್ ಅವರ ಪಕ್ಕೆಲುಬು ನೆಲಕ್ಕೆ ಉಜ್ಜಿಹೋಗಿತ್ತು. ಆರಂಭದಲ್ಲಿ ಇದು ಸಣ್ಣ ಪರಿಣಾಮದ ಗಾಯ ಎಂದು ಭಾವಿಸಲಾಗಿತ್ತು. ಆದರೆ ಆ ಬಳಿಕ ಡ್ರೆಸಿಂಗ್‌ರೂಮ್‌ನಲ್ಲಿ ಅಯ್ಯರ್ ಪ್ರಜ್ಞೆತಪ್ಪಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಗುಲ್ಮಕ್ಕೆ (ಪ್ಲೀಹ ಸ್ಪ್ಲೀನ್) ಸೀಳು ಗಾಯವಾಗಿರುವುದು ಸ್ಕ್ಯಾನ್‌ಗಳಿಂದ ದೃಢಪಟ್ಟಿತ್ತು. ಹೀಗಾಗಿ ಅವರಿಗೆ ಸಿಡ್ನಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಶಸ್ತ್ರಚಿಕಿತ್ಸೆ ಬಳಿಕ ಚೇತರಿಕೆ ಕಂಡಿರುವ ಅಯ್ಯರ್ ಜತೆ ಅಭಿಮಾನಿಯೊಬ್ಬರು ತೆಗೆಸಿಕೊಂಡಿರುವ ಫೋಟೊವನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಯ್ಯರ್ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲು ಮೂರು ವಾರಗಳ ವಿಶ್ರಾಂತಿ ಪೂರ್ತಿಗಳಿಸಬೇಕಿದೆ.
ಇದನ್ನೂ ಓದಿ Shreyas Iyer: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶ್ರೇಯಸ್ ಅಯ್ಯರ್
ಅಯ್ಯರ್ ಅವರು ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ತಮ್ಮ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ್ದರು. "ನಾನು ಪ್ರಸ್ತುತ ಚೇತರಿಕೆಯ ಪ್ರಕ್ರಿಯೆಯಲ್ಲಿದ್ದೇನೆ ಮತ್ತು ದಿನ ಕಳೆದಂತೆ ಸುಧಾರಿಸುತ್ತಿದ್ದೇನೆ. ನನಗೆ ದೊರೆತ ಎಲ್ಲಾ ರೀತಿಯ ಶುಭಾಶಯಗಳು ಮತ್ತು ಬೆಂಬಲವನ್ನು ನೋಡಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇದು ನಿಜವಾಗಿಯೂ ಬಹಳಷ್ಟು ಅರ್ಥಪೂರ್ಣವಾಗಿದೆ. ನನ್ನನ್ನು ನಿಮ್ಮ ಆಲೋಚನೆಗಳಲ್ಲಿ ಇರಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು" ಎಂದು ಹೇಳಿದ್ದರು.
ಅಯ್ಯರ್ ಚೇತರಿಕೆಗೆಗಾಗಿ ಸೂರ್ಯಕುಮಾರ್ ಯಾದವ್ ಅವರ ತಾಯಿ ಸ್ವಪ್ನ ಯಾದವ್, ಛಠ್ ಪೂಜೆ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಈ ವಿಡಿಯೊ ಎಲ್ಲೆಡೆ ವೈರಲ್ ಆಗಿತ್ತು. "ಎಲ್ಲರೂ ಶ್ರೇಯಸ್ ಅಯ್ಯರ್ ಅವರ ಒಳಿತಿಗಾಗಿ ಪ್ರಾರ್ಥನೆ ಮಾಡಿ, ಏಕೆಂದರೆ, ಅವರ ಆರೋಗ್ಯ ಸರಿಯಾಗಿಲ್ಲ ಎಂದು ನಾನು ಕೇಳಿದ್ದೇನೆ. ನನಗೆ ಇದರಿಂದ ತುಂಬಾ ದುಃಖವಾಗಿದೆ,” ಎಂದು ಹೇಳಿದ್ದರು.