NAM vs NED: ಬಾಸ್ ಡಿ ಲೀಡೆ ಆಲ್‌ರೌಂಡರ್ ಆಟ; ಭರ್ಜರಿ ಗೆಲುವು ಸಾಧಿಸಿದ ನೆದರ್ಲ್ಯಾಂಡ್
T20 World Cup: ಚೇಸಿಂಗ್ ವೇಳೆ ನೆದರ್ಲ್ಯಾಂಡ್‌ಗೆ ಬಾಸ್ ಡಿ ಲೀಡೆ ಅವರು ಅಜೇಯ ಅರ್ಧಶತಕ ಬಾರಿಸಿ ನೆರವಾದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಅವರು 48 ಎಸೆತಗಳಲ್ಲಿ 4 ಸೊಗಸಾದ ಸಿಕ್ಸರ್ ಮತ್ತು 5 ಬೌಂಡರಿ ನೆರವಿನಿಂದ ಅಜೇಯ 72 ರನ್ ಬಾರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಮೈಕೆಲ್ ಲೆವಿಟ್(28) ಮತ್ತು ಕಾಲಿನ್ ಅಕರ್ಮನ್(32) ಉತ್ತಮ ಸಾಥ್ ನೀಡಿದರು.
Bas de Leede -
ನವದೆಹಲಿ, ಫೆ.10: ಬಾಸ್ ಡಿ ಲೀಡೆ(72*) ಅವರ ಆಲ್‌ರೌಂಡರ್ ಆಟದ ನೆರವಿನಿಂದ ನೆದರ್ಲ್ಯಾಂಡ್ ತಂಡ(NAM vs NED) ಟಿ20 ವಿಶ್ವಕಪ್(T20 World Cup) ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ನಮೀಬಿಯಾ ಎದುರು 7 ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ ತಂಡದ ಸೂಪರ್-8 ರೇಸ್ ಇನ್ನೂ ಜೀವಂತವಿದೆ.
ಇಲ್ಲಿನ ಅರಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲ್ಯಾಂಡ್ ಬೌಲಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಆಹ್ವಾನ ಪಡೆದ ನಮೀಬಿಯಾ 8 ವಿಕೆಟ್‌ಗೆ 156 ರನ್ ಬಾರಿಸಿತು. ಜವಾಬಿತ್ತ ನೆದರ್ಲ್ಯಾಂಡ್ ಈ ಸ್ಪರ್ಧಾತ್ಮಕ ಮೊತ್ತವನ್ನು 18 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು. ನೆದರ್ಲ್ಯಾಂಡ್‌ಗೆ ಇದು ಎರಡನೇ ಪಂದ್ಯವಾಗಿತ್ತು. ಇದಕ್ಕೂ ಮುನ್ನ ಪಾಕಿಸ್ತಾನ ವಿರುದ್ಧ ಸೋಲು ಕಂಡಿತ್ತು.
ಚೇಸಿಂಗ್ ವೇಳೆ ನೆದರ್ಲ್ಯಾಂಡ್‌ಗೆ ಬಾಸ್ ಡಿ ಲೀಡೆ ಅವರು ಅಜೇಯ ಅರ್ಧಶತಕ ಬಾರಿಸಿ ನೆರವಾದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಅವರು 48 ಎಸೆತಗಳಲ್ಲಿ 4 ಸೊಗಸಾದ ಸಿಕ್ಸರ್ ಮತ್ತು 5 ಬೌಂಡರಿ ನೆರವಿನಿಂದ ಅಜೇಯ 72 ರನ್ ಬಾರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಮೈಕೆಲ್ ಲೆವಿಟ್(28) ಮತ್ತು ಕಾಲಿನ್ ಅಕರ್ಮನ್(32) ಉತ್ತಮ ಸಾಥ್ ನೀಡಿದರು. ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಮಿಂಚಿದ ಬಾಸ್ ಡಿ ಲೀಡೆ 2 ವಿಕೆಟ್ ಕಿತ್ತರು. ಅವರ ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿಯಿತು. ಉಳಿದಂತೆ ಲೋಗನ್ ವ್ಯಾನ್ ಬೀಕ್ 2 ವಿಕೆಟ್ ಪಡೆದರು.
ಬಹಿಷ್ಕಾರದಿಂದ ಪಾಕ್ ಯೂಟರ್ನ್; ಬಿಸಿಸಿಐ ಮೊದಲ ಪ್ರತಿಕ್ರಿಯೆ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ನಮೀಬಿಯಾ ಪರ ಆರಂಭಿಕ ಬ್ಯಾಟರ್ ಜಾನ್ ಫ್ರೈಲಿಂಕ್ ಮತ್ತು ಜಾನ್ ನಿಕೋಲ್ ಲಾಫ್ಟಿ ಹೊರತುಪಡಿಸಿ ಉಳಿದವರಿಂದ ಉತ್ತಮ ನೆರವು ಲಭಿಸಲಿಲ್ಲ. ಇದು ತಂಡದ ದೊಡ್ಡ ಮೊತ್ತ್ಕೆ ಹಿನ್ನಡೆಯಾಯಿತು. ಜಾನ್ ನಿಕೋಲ್ ಲಾಫ್ಟಿ 42 ರನ್ ಬಾರಿಸಿದರೆ, ಜಾನ್ ಫ್ರೈಲಿಂಕ್ 30 ರನ್ ಗಳಿಸಿದರು. ಉಳಿದಂತೆ ಜೆಜೆ ಸ್ಮಿತ್ 22 ರನ್ ಕೊಡುಗೆ ನೀಡಿದರು. ತಂಡದ ಪರ 5 ಮಂದಿ ಒಂದಂಕಿಗೆ ಸೀಮಿತರಾದರು. ನಮೀಬಿಯಾ ಪರ ಬರ್ನಾರ್ಡ್ ಸ್ಕೋಲ್ಟ್ಜ್, ರೂಬೆನ್ ಟ್ರಂಪೆಲ್‌ಮನ್ ಮತ್ತು ಜಾನ್ ನಿಕೋಲ್ ಲಾಫ್ಟಿ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ನಮೀಬಿಯಾ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 156(ಜಾನ್ ನಿಕೋಲ್ ಲಾಫ್ಟಿ 42, ಜಾನ್ ಫ್ರೈಲಿಂಕ್ 30, ಬಾಸ್ ಡಿ ಲೀಡೆ 20 ಕ್ಕೆ 2, ವ್ಯಾನ್ ಬೀಕ್ 13 ಕ್ಕೆ 2. ನೆದರ್ಲ್ಯಾಂಡ್: 18 ಓವರ್‌ಗಳಲ್ಲಿ 3 ವಿಕೆಟ್‌ಗೆ 159(ಬಾಸ್ ಡಿ ಲೀಡೆ 79*, ಕಾಲಿನ್ ಅಕರ್ಮನ್ 32, ಬರ್ನಾರ್ಡ್ ಸ್ಕೋಲ್ಟ್ಜ್ 27ಕ್ಕೆ 1). ಪಂದ್ಯಶ್ರೇಷ್ಠ: ಬಾಸ್ ಡಿ ಲೀಡೆ.