ಸಂಪುಟದಲ್ಲಿ ಹೆಚ್ಚುತ್ತಿರುವ ಅಸಮಾಧಾನದ ನಡುವೆ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
Shivakumar Visits Annamma Devi Temple: ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ್ದು, ಸಚಿವರಿಗೆ ಖಾತೆಯನ್ನೂ ಹಂಚಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಸಂಪುಟದಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಜಲ ಸಂಪನ್ಯೂಲ ಖಾತೆ ನಿರಾಕರಿಸಿ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತ ಕೆ.ಎಚ್. ಮುನಿಯಪ್ಪ ಕೂಡ ಅತೃಪ್ತಿ ಪ್ರಕಟಿಸಿದ್ದಾರೆ. ಈ ಮಧ್ಯೆ ಡಿಕೆಶಿ ಬೆಂಗಳೂರಿನ ಪ್ರಸಿದ್ಧ ಅಣ್ಣಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
Priyanka P
Jun 5, 2026 4:50 PM
ಬೆಂಗಳೂರು, ಜೂ. 5: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Karnataka CM DK Shivakumar) ಬೆಂಗಳೂರಿನ ಪ್ರಸಿದ್ಧ ಅಣ್ಣಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ಮೆಜೆಸ್ಟಿಕ್‌ನಲ್ಲಿರುವ ಬೆಂಗಳೂರಿನ ನಗರದೇವತೆ ಅಣ್ಣಮ್ಮ ದೇವಿಗೆ ಶುಕ್ರವಾರ (ಜೂನ್ 5) ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಕಾಂಗ್ರೆಸ್ ನಾಯಕರಾದ ದಿನೇಶ್ ಗುಂಡೂರಾವ್, ಶ್ರೀನಿವಾಸ್ ಮಾನೆ ಜತೆಗಿದ್ದರು. ಪೂಜೆಯ ನಂತರ ಅರ್ಚಕರು ಡಿಕೆಶಿ ಅವರಿಗೆ ತೀರ್ಥ ಪ್ರಸಾದ ನೀಡಿ, ಸಾಂಪ್ರದಾಯಿಕವಾಗಿ ಶಾಲು ಹೊದಿಸಿ ಹೂವಿನ ಹಾರ ಹಾಕಿ ಗೌರವಿಸಿದರು.