ಕಪ್ಪು, ದಟ್ಟವಾದ ಕೂದಲಿಗೆ ಏನು ಮಾಡಬೇಕು?
ಕಪ್ಪು, ದಟ್ಟವಾದ ಕೂದಲು ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಕೂದಲನ್ನು ಚೆನ್ನಾಗಿ ಇಟ್ಟುಕೊಳ್ಳುವುದೇ ಸಮಸ್ಯೆ. ಹೆಚ್ಚಾಗಿ ಕೂದಲಿನ ನಾನಾ ರೀತಿಯ ಸಮಸ್ಯೆಗಳಿಗೆ ಸರಿಯಾಗಿ ಎಣ್ಣೆ ಹಚ್ಚದಿರುವುದೇ ಮುಖ್ಯ ಕಾರಣ. ಕೂದಲಿನ ಯಾವ ಸಮಸ್ಯೆಗೆ ಯಾವ ಎಣ್ಣೆ ಹಚ್ಚಬೇಕು ಎನ್ನುವ ಕುರಿತು ವಿಶ್ವವಾಣಿ ಹೆಲ್ತ್ ನಲ್ಲಿ ಆಯುರ್ವೇದಿಕ್ ಬ್ಯೂಟಿ ಥೆರಪಿಸ್ಟ್ ದೀಪಾ ನಾಗೇಶ್ ಅವರು ನೀಡಿರುವ ಮಾಹಿತಿ ಇಲ್ಲಿದೆ.
ಬೆಂಗಳೂರು: ಕೂದಲು ಉದುರುವುದು, ಸೀಳುವಿಕೆ, ತಲೆಹೊಟ್ಟಿಗೆ ಮುಖ್ಯ ಕಾರಣ ಕೂದಲನ್ನು ಸರಿಯಾಗಿ ಆರೈಕೆ ಮಾಡದೇ ಇರುವುದು. ಅದರಲ್ಲೂ ಮುಖ್ಯವಾಗಿ ಎಣ್ಣೆ ಹಾಕದೇ ಇರುವುದಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಮನೆಯಲ್ಲೇ ತಯಾರಿಸಿದ ಎಣ್ಣೆಯನ್ನು ಬಳಸಬಹುದು. ಈ ಕುರಿತು ವಿಶ್ವವಾಣಿ ಹೆಲ್ತ್ (Vishwavani Health)ನಲ್ಲಿ ಮಾಹಿತಿ ನೀಡಿದ ಆಯುರ್ವೇದಿಕ್ ಬ್ಯೂಟಿ ಥೆರಪಿಸ್ಟ್ (Ayurvedic Beauty Therapist) ದೀಪಾ ನಾಗೇಶ್, ಕರಿಬೇವು, ಕರಿಮೆಣಸು, ಕೊಬ್ಬರಿ ಎಣ್ಣೆ, ಮೆಂತೆ ಹಾಕಿ ಚೆನ್ನಾಗಿ ಬಿಸಿ ಮಾಡಿದ ಎಣ್ಣೆಯನ್ನು ಸ್ವಲ್ಪ ತಣ್ಣಗಾದ ಮೇಲೆ ಬಳಕೆ ಮಾಡುವುದರಿಂದ ಕೂದಲು ಉದುರುವುದನ್ನು ತಡೆಯಬಹುದಾಗಿದೆ. ಬೃಂಗಾರಾಜ, ಬ್ರಾಹ್ಮಿಯನ್ನು (ಒಂದೆಲಗ) ಚೆನ್ನಾಗಿ ತೊಳೆದು ಜಜ್ಜಿ ತೆಂಗಿನ ಎಣ್ಣೆ ಹಾಕಿ ಬಿಸಿ ಪಚ್ಚೆ ಕರ್ಪುರ ಸೇರಿಸಿ ಬಳಕೆ ಮಾಡುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಬೃಂಗಾರಾಜ, ಬ್ರಾಹ್ಮಿ ಜೊತೆಗೆ ಶಂಖಪುಷ್ಪ ಹೂವು ಸೇರಿಸಿ ತಯಾರಿಸಿದ ಎಣ್ಣೆ, ಲಾವಂಚ ಬೇರಿನ ಎಣ್ಣೆ ಕೂಡ ಕೂದಲನ್ನು ಚೆನ್ನಾಗಿ ಪೋಷಣೆ ಮಾಡುತ್ತದೆ. ಈ ಎಣ್ಣೆಗಳನ್ನು ನಿಯಮಿತವಾಗಿ ವಾರದಲ್ಲಿ ಒಂದೆರಡು ದಿನ ಬಳಕೆ ಮಾಡುವುದು ಒಳ್ಳೆಯದು ಎಂದು ಅವರು ತಿಳಿಸಿದರು.