ಕೇವಲ ರಸಗುಲ್ಲಾಕ್ಕಾಗಿ ಮದುವೆ ಮನೆ ರಣರಂಗ: ಇನ್ನು ಈ ಕಣ್ಣಲ್ಲಿ ಏನೇನ್ ನೋಡ್ಬೇಕೊ ಕಾಣೆ ಎಂದ ನೆಟ್ಟಿಗರು
ಮದುವೆಯಲ್ಲಿ ರಸಗುಲ್ಲ ಕಡಿಮೆಯಾಗಿದೆ ಎಂಬ ಕಾರಣಕ್ಕೆ 2 ಕುಟುಂಬದವರ ನಡುವೆ ದೊಡ್ಡ ಕಲಹವೇ ಏರ್ಪಟ್ಟ ಘಟನೆ ಬಿಹಾರದ ಬೋಧ್ ಗಯಾದಲ್ಲಿ ನಡೆದಿದೆ. ಮದುವೆ ಸಮಾರಂಭದಲ್ಲಿ ರಸಗುಲ್ಲ ಖಾಲಿಯಾಗಿದೆ ಎಂಬ ಕಾರಣಕ್ಕೆ ವಧು ಮತ್ತು ವರನ ಕುಟುಂಬಗಳ ನಡುವೆ ಜಗಳ ಏರ್ಪಟ್ಟಿದ್ದು ಕೊನೆಗೆ ಮದುವೆಯೇ ರದ್ದಾಗಿದೆ. ಅತಿಥಿಗಳು ಮದುವೆ ಸಮಾರಂಭ ಎಂಬುದನ್ನು ಮರೆತು ಪರಸ್ಪರ ಕಿತ್ತಾಟ ನಡೆಸುತ್ತಿದ್ದು ಸದ್ಯ ಈ ವಿಡಿಯೊ ವೈರಲ್ ಆಗಿದೆ.
ರಸಗುಲ್ಲಾಕ್ಕಾಗಿ ರಣರಂಗವಾದ ಮದುವೆ ಮನೆ. -
ಪಾಟ್ನಾ, ಡಿ. 4: ಮದುವೆ ಸಂದರ್ಭದಲ್ಲಿ ವಧು-ವರರ ಕುಟುಂಬದ ನಡುವೆ ಸಣ್ಣ ಪುಟ್ಟ ಕಾರಣಕ್ಕೆಲ್ಲ ವೈಮನಸ್ಸು ಮೂಡುವುದು ಸಹಜ. ವರನ ಕಡೆಯವರಿಗೆ ಸರಿಯಾಗಿ ಉಪಚಾರ ಮಾಡಿಲ್ಲ, ವಧುವಿಗೆ ಸೀರೆ ಚಿನ್ನ ಉತ್ತಮ ಗುಣಮಟ್ಟದ್ದು ನೀಡಿಲ್ಲ, ಮದುವೆಗೆ ತಾವು ಹೇಳಿದ ಆಹಾರ ಖಾದ್ಯ ತಯಾರಿಸಿಲ್ಲ ಹೀಗೆ ಅನೇಕ ಕಾರಣಕ್ಕೆ ಜಗಳ ನಡೆದಿರುವ ಅದೆಷ್ಟೋ ಉದಾಹರಣೆ ನೋಡಿದ್ದೇವೆ. ಆದರೆ ಇಲ್ಲೊಂದು ಮದುವೆ ಸಮಾರಂಭದಲ್ಲಿ ರಸಗುಲ್ಲ ಕಡಿಮೆಯಾಗಿದೆ ಎಂಬ ಕಾರಣಕ್ಕೆ 2 ಕುಟುಂಬದವರ ನಡುವೆ ದೊಡ್ಡ ಕಲಹವೇ ಏರ್ಪಟ್ಟ ಘಟನೆ ಬಿಹಾರದ ಬೋಧ್ ಗಯಾದಲ್ಲಿ (Bihar's Bodh Gaya) ನಡೆದಿದೆ. ಕೊನೆಗೆ ಮದುವೆಯೇ ರದ್ದಾಗಿದೆ. ರಸಗುಲ್ಲಕ್ಕಾಗಿ ಅತಿಥಿಗಳು ಮದುವೆ ಸಮಾರಂಭ ಎಂಬುದನ್ನು ಮರೆತು ಪರಸ್ಪರ ಕಿತ್ತಾಟ ನಡೆಸುತ್ತಿದ್ದು, ಸದ್ಯ ಈ ಘಟನೆಯ ವಿಡಿಯೊ ವೈರಲ್ (Viral Video) ಆಗಿದೆ.
ಈ ಮದುವೆ ಸಮಾರಂಭದಲ್ಲಿ ವಧು ಮತ್ತು ವರನ ಕಡೆಯ ಕುಟುಂಬದವರು ಮತ್ತು ಅತಿಥಿಗಳು ಪರಸ್ಪರ ಗುದ್ದಾಡುವುದು, ತಳ್ಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಕೆಲವರು ಕೆಂಪು ಪ್ಲಾಸ್ಟಿಕ್ ಕುರ್ಚಿಗಳನ್ನು ಎತ್ತಿಕೊಂಡು ಒಬ್ಬರಿಗೊಬ್ಬರು ಹೊಡೆಯಲು ಮುಂದಾಗುವುದು, ಇತರ ಸಣ್ಣ ಪುಟ್ಟ ವಸ್ತುಗಳನ್ನು ಬಳಸಿ ಪರಸ್ಪರ ಕಿತ್ತಾಡುವುದನ್ನು ದೃಶ್ಯದಲ್ಲಿ ಕಾಣಬಹುದು. ರಸಗುಲ್ಲ ಕೊರತೆಯಿಂದಾಗಿ ಮದುವೆ ರದ್ದಾದ ನಂತರ ವಧುವಿನ ಕುಟುಂಬದವರು ವರನ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಡಿಯೊ ವೀಕ್ಷಿಸಿ:
Video: Chairs, Kicks, Punches Fly After 'Rasgulla Shortage' At Bihar Wedding https://t.co/UOmNCdt2CC pic.twitter.com/wuX7rtE8eu
— NDTV (@ndtv) December 3, 2025
ನವೆಂಬರ್ 29ರಂದು ಬೋಧ್ ಗಯಾದ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ವಧುವಿನ ಕುಟುಂಬದವರು ಒಂದು ದಿನ ಮೊದಲೇ ಬಂದು ಆ ಹೋಟೆಲ್‌ನಲ್ಲಿ ತಂಗಿದ್ದರು. ವರ ಮತ್ತು ಆತನ ಕುಟುಂಬ ಹತ್ತಿರದ ಹಳ್ಳಿಯಿಂದ ಅಲ್ಲಿಗೆ ಆಗಮಿಸಿತ್ತು. ಎರಡು ಕುಟುಂಬದವರು ಸೇರಿಕೊಂಡು ಮದುವೆಯ ಕೆಲವು ಶಾಸ್ತ್ರ, ವಿಧಿ ವಿಧಾನ ನೆರವೇರಿಸಿದರು. ಇದಾದ ಬಳಿಕ ನೆಂಟರ ನಡುವೆ ರಸಗುಲ್ಲ ಖಾಲಿಯಾಗಿದೆ ಎಂಬ ಕಾರಣಕ್ಕೆ ಜಗಳವಾಗಿದೆ. ವರನ ಕಡೆಯವರಿಂದಲೇ ಈ ಸಮಸ್ಯೆ ದೊಡ್ಡ ಮಟ್ಟಿಗೆ ಹೊಡೆದಾಟವಾಗಿ ಮಾರ್ಪಟ್ಟಿತು ಎಂದು ವಧುವಿನ ಕಡೆಯವರು ಪೊಲೀಸರ ದೂರು ನೀಡಿದ್ದಾರೆ.
ವಿದ್ಯಾರ್ಥಿನಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ ಶಿಕ್ಷಕ
ಮದುವೆ ಸಮಾರಂಭದ ಊಟದ ಹಾಲ್‌ನಲ್ಲಿ ಜನರು ಗುಂಪಾಗಿ ಜಮಾಯಿಸಿರುವುದು ವಿಡಿಯೊದಲ್ಲಿ ಕಾಣಬಹುದು. ಧಾರ್ಮಿಕ ವಿಧಿವಿಧಾನಗಳ ನಂತರ ಜೋಡಿ ಮದುವೆ ಮಂಟಪಕ್ಕೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಎರಡು ಗುಂಪುಗಳ ನಡುವೆ ಜಗಳ ಏರ್ಪಟ್ಟಿತು. ಅನೇಕರು ಹೊಡೆಯಲು ಕುರ್ಚಿ, ತಟ್ಟೆ, ಲೋಟ, ಸೌಟು ಇತ್ಯಾದಿ ಕೈಗೆತ್ತಿಕೊಂಡರು. ಘಟನೆಯಲ್ಲಿ ಎರಡು ಕಡೆಯವರೂ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ʼʼಘಟನೆಯ ನಂತರ ವಧುವಿನ ಕುಟುಂಬದವರು ವರದಕ್ಷಿಣೆ ಪ್ರಕರಣ ದಾಖಲಿಸಿದೆ. ಆದರೆ ಇದು ಸುಳ್ಳು. ರಸಗುಲ್ಲದ ಕೊರತೆಯಿಂದಾಗಿ ಜಗಳ ನಡೆದಿದೆ. ನಾವು ಕುಟುಂಬವು ಮದುವೆಯನ್ನು ಮುಂದುವರಿಸಲು ಒಪ್ಪಿಕೊಂಡರೆ, ವಧುವಿನ ಕುಟುಂಬವು ಮದುವೆ ರದ್ದುಗೊಳಿಸಲು ನಿರ್ಧರಿಸಿದೆʼʼ ಎಂದು ವರನ ತಂದೆ ಮಹೇಂದ್ರ ಪ್ರಸಾದ್ ತಿಳಿಸಿದ್ದಾರೆ.
ʼʼಜಗಳ ನಡೆಯುತ್ತಿರುವಾಗ ವಧುವಿನ ಕುಟುಂಬವು ಉಡುಗೊರೆಯಾಗಿ ತಂದಿದ್ದ ಆಭರಣಗಳನ್ನು ತೆಗೆದುಕೊಂಡು ಹೋಗಿದೆʼʼ ಎಂದು ವರನ ತಾಯಿ ಮುನ್ನಿ ದೇವಿ ಆರೋಪಿಸಿದ್ದಾರೆ. ʼʼಮದುವೆ ಮುಂದುವರಿಯಬೇಕೆಂದು ನಾವು ವಧುವಿನ ಕುಟುಂಬದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದೆವು. ಆದರೆ ಅದಕ್ಕೆ ಅವರು ಒಪ್ಪಲಿಲ್ಲʼʼ ಎಂದು ವರನ ಸೋದರ ಸಂಬಂಧಿ ಸುಶೀಲ್ ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ.