ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anganwadi in Kerala: ಇದೇನು ಅಂಗನವಾಡಿಯೋ, ರೆಸಾರ್ಟೋ?! ಕೇರಳದಲ್ಲಿ ನಿರ್ಮಾಣವಾಗಿದೆ ಅತ್ಯಾಧುನಿಕ ಸೌಲಭ್ಯವಿರುವ ಅಂಗನವಾಡಿ; ಇಲ್ಲಿದೆ ವಿಡಿಯೊ

Viral Video: ಕೇರಳದ ಅಂಗನವಾಡಿಯೊಂದರ ಒಳಾಂಗಣ ಮತ್ತು ಆಕರ್ಷಕ ಹೊರ ವಿನ್ಯಾಸವನ್ನು ಪಂಚಾಯತ್ ಸದಸ್ಯರೊಬ್ಬರು ನಿರ್ಮಿಸಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಮಲಪ್ಪುರಂನ ಆಲಮ್‌ಕೋಡ್ ಪಂಚಾಯತ್‌ನ ಚಿಯ್ಯನೂರಿನ ಸದಸ್ಯ ಅಬ್ದುಲ್ ಮಜೀದ್ ಟಿಎ ಸೊಗಸಾದ ಅಂಗನವಾಡಿಯನ್ನು ಹೇಗೆ ನಿರ್ಮಿಸಿದರು ಎಂಬುದನ್ನು ವೈರಲ್ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ಕೇರಳದಲ್ಲಿ ನಿರ್ಮಿಸಲಾಗಿದೆ ಅತ್ಯಾಧುನಿಕ ಸೌಲಭ್ಯವಿರುವ ಅಂಗನವಾಡಿ

Priyanka P Priyanka P Aug 13, 2025 10:48 PM

ತಿರುವನಂತಪುರ: ಅಂಗನವಾಡಿ ಅಂದ್ರೆ ನಿಮ್ಮ ಮನದ ಪುಟದಲ್ಲಿ ಯಾವ ರೀತಿಯ ಕಲ್ಪನೆ ಮೂಡುತ್ತೆ. ಬಹುಶಃ ಎಲ್ಲೆಡೆ ಯಾವ ರೀತಿಯ ಅಂಗನವಾಡಿ ಇರುತ್ತೋ ಅದೇ ರೀತಿಯ ಪಟ ನಿಮ್ಮ ಮನದಲ್ಲಿ ಮೂಡಬಹುದು. ಆದರೆ, ಇಲ್ಲೊಂದೆಡೆ ನಿರ್ಮಿಸಿರುವ ಅಂಗನವಾಡಿಯನ್ನು ನೋಡಿದ್ರೆ ಅಚ್ಚರಿಯಾಗಬಹುದು (Anganwadi in Kerala). ಹೌದು, ಕೇರಳದ ಅಂಗನವಾಡಿಯೊಂದರ ಒಳಾಂಗಣ ಮತ್ತು ಆಕರ್ಷಕ ಹೊರ ವಿನ್ಯಾಸವನ್ನು ಪಂಚಾಯತ್ ಸದಸ್ಯರೊಬ್ಬರು ನಿರ್ಮಿಸಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಮಲಪ್ಪುರಂನ ಆಲಮ್‌ಕೋಡ್ ಪಂಚಾಯತ್‌ನ ಚಿಯ್ಯನೂರಿನಲ್ಲಿ ಚುನಾಯಿತ ಸದಸ್ಯ ಅಬ್ದುಲ್ ಮಜೀದ್ ಟಿಎ ಸೊಗಸಾದ ಅಂಗನವಾಡಿಯನ್ನು ಹೇಗೆ ನಿರ್ಮಿಸಿದರು ಎಂಬುದನ್ನು ವೈರಲ್ ಪೋಸ್ಟ್‌ನಲ್ಲಿ (Viral Video) ಬಹಿರಂಗಪಡಿಸಿದ್ದಾರೆ.

ಸುಂದರ ನೀಲಿಬಣ್ಣದ ಛಾಯೆ, ಸಾಕಷ್ಟು ಸೂರ್ಯನ ಬೆಳಕು, ಮೀನಿನ ಟ್ಯಾಂಕ್‌ ಇತ್ಯಾದಿಗಳೊಂದಿಗೆ ಸುಂದರವಾಗಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. 1,300 ಚದರ ಅಡಿಗಳಷ್ಟು ವಿಸ್ತೀರ್ಣದಲ್ಲಿರುವ ಸಂಪೂರ್ಣ ಹವಾನಿಯಂತ್ರಿತ ಕಟ್ಟಡದ ಫೋಟೊ ಮತ್ತು ವಿಡಿಯೊಗಳಿಂದ ಲಕ್ಷಾಂತರ ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಅಂಗನವಾಡಿಯಲ್ಲಿ ಮೀಸಲಾದ ಆಟದ ಪ್ರದೇಶ, ಮಾಡ್ಯುಲರ್ ಅಡುಗೆಮನೆ, ದೂರದರ್ಶನ, ವೈ-ಫೈ ಸಂಪರ್ಕ, ಮೆತ್ತನೆಯ ಆಸನ ಮತ್ತು ಒಳಾಂಗಣಗಳು ಸೇರಿವೆ. ಸಂಪೂರ್ಣ ರೂಪಾಂತರಕ್ಕೆ ಸುಮಾರು 25 ಲಕ್ಷ ರೂ. ವೆಚ್ಚವಾಗಿದೆ ಎಂದು ಮಜೀದ್ ಹೇಳಿದ್ದಾರೆ. ಜತೆಗೆ ಒಳಾಂಗಣ ಮತ್ತು ಸಲಕರಣೆಗಳಿಗಾಗಿ ಹೆಚ್ಚುವರಿಯಾಗಿ 3 ಲಕ್ಷ ರೂ.ಗಳನ್ನು ಪಾವತಿಸಲಾಗಿದೆಯಂತೆ.

ವಿಡಿಯೊ ವೀಕ್ಷಿಸಿ:

“ಈ ಅಂಗನವಾಡಿಯ ಅಭಿವೃದ್ಧಿ ನಮ್ಮ ಚುನಾವಣಾ ಪ್ರಣಾಳಿಕೆಯ ಭಾಗವಾಗಿತ್ತು. ಹಳೆಯ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿತ್ತು. ಹೀಗಾಗಿ ಅಂಗನವಾಡಿಯನ್ನು ಆಧುನೀಕರಣಗೊಳಿಸಲು ಪಣತೊಟ್ಟೆವು. ಆದರೆ, ಅಂತಹ ರೂಪಾಂತರ ಅಸಾಧ್ಯವೆಂದು ಹಲವರು ಹೇಳಿದರೂ ನಾವು ಅದನ್ನು ಸಾಧ್ಯವಾಗಿಸಿದೆವು” ಎಂದು ಮಜೀದ್ ಹೇಳಿದರು.

ಮಲಪ್ಪುರಂ ಜಿಲ್ಲಾ ಪಂಚಾಯತ್ ಸದಸ್ಯೆ ಆರಿಫಾ ನಾಸರ್ ಈ ಯೋಜನೆಗೆ 15 ಲಕ್ಷ ರೂಪಾಯಿಗಳ ಬಜೆಟ್ ಅನ್ನು ಮಂಜೂರು ಮಾಡಿದರು. ಆದರೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಅಧಿಕಾರಿಗಳು ಹೆಚ್ಚುವರಿಯಾಗಿ 10 ಲಕ್ಷ ರೂಪಾಯಿಗಳನ್ನು ನೀಡಿದರು. ಇದರಿಂದಾಗಿ ಯೋಜನೆಯನ್ನು ಒಂದೇ ಬಾರಿಗೆ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಮಜೀದ್ ವಿವರಿಸಿದರು.

ಅಂಗನವಾಡಿಯನ್ನು ಇಷ್ಟು ಚೆನ್ನಾಗಿ ನಿರ್ಮಿಸಿದರೂ ಕೆಲವು ಟೀಕೆಗಳು ಕೇಳಿಬಂದಿದೆ. ಕೆಲವರು ಯುಪಿವಿಸಿ ನಿರ್ಮಾಣ ಮತ್ತು ಟೆಫ್ಲಾನ್ ಗಾಜಿನ ಕಿಟಕಿಗಳ ಬಳಕೆಯಿಂದಾಗಿ ಮಕ್ಕಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆದರೆ, ಇಂದಿನ ಮಕ್ಕಳು ಅಂತಹ ಪರಿಸರಕ್ಕೆ ಒಗ್ಗಿಕೊಂಡಿದ್ದಾರೆ. ಅನೇಕ ಅಂಗನವಾಡಿಗಳಲ್ಲಿ ನೈರ್ಮಲ್ಯವು ಯಾವಾಗಲೂ ಸಮಸ್ಯೆಯಾಗಿರುತ್ತದೆ. ಆದರೆ ಇಲ್ಲಿ ಮಕ್ಕಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಮಜೀದ್ ಹೇಳಿದ್ದಾರೆ.