ಇಂಡೋನೇಷ್ಯಾವನ್ನೇ ನಲುಗಿಸಿದ 7.7 ತೀವ್ರತೆಯ ಭೂಕಂಪ: 38 ಮಂದಿ ಸಾವು
Indonesia Earthquake: ಇಂಡೋನೇಷ್ಯಾದ ಪೂರ್ವ ಕರಾವಳಿಯ ಸಮುದ್ರದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 38 ಮಂದಿ ಮೃತಪಟ್ಟಿದ್ದಾರೆ. ಭೂಕಂಪದ ಬಳಿಕ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಮೌಮೆರೆ ಸೇರಿ ಹಲವು ಪ್ರದೇಶಗಳಲ್ಲಿ ಕಟ್ಟಡಗಳಿಗೆ ಹಾನಿಯಾಗಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.
ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪ -
ಜಕಾರ್ತಾ, ಆ. 15: ಇಂಡೋನೇಷ್ಯಾದ ಪೂರ್ವ ಕರಾವಳಿಯ ಸಮುದ್ರದಲ್ಲಿ ಶನಿವಾರ ಬೆಳಗ್ಗೆ 7.7 ತೀವ್ರತೆಯ ಪ್ರಬಲ ಭೂಕಂಪ (Indonesia Earthquake) ಸಂಭವಿಸಿದ್ದು, ಕನಿಷ್ಠ 38 ಮಂದಿ ಮೃತಪಟ್ಟಿದ್ದಾರೆ. ಭೂಕಂಪದ ಬಳಿಕ ಅಧಿಕಾರಿಗಳು ಸುನಾಮಿ ಎಚ್ಚರಿಕೆ (Tsunami Warning) ನೀಡಿದ್ದರು. ಸುಮಾರು ಮೂರು ಗಂಟೆಗಳ ಬಳಿಕ ಎಚ್ಚರಿಕೆಯನ್ನು ಹಿಂಪಡೆಯಲಾಯಿತು. ಇಂಡೋನೇಷ್ಯಾದ ಭೂಭೌತಶಾಸ್ತ್ರ ಸಂಸ್ಥೆ BMKG ಪ್ರಕಾರ, ಸ್ಥಳೀಯ ಕಾಲಮಾನ ಬೆಳಗ್ಗೆ 4:58ಕ್ಕೆ ಭೂಕಂಪ ಸಂಭವಿಸಿದ್ದು, ಸಮುದ್ರದ ಸುಮಾರು 15 ಕಿ.ಮೀ. ಆಳದಲ್ಲಿ ಅದರ ಕೇಂದ್ರಬಿಂದು ದಾಖಲಾಗಿದೆ. ಭೂಕಂಪದ ಬಳಿಕ ಹಲವು ಪ್ರದೇಶಗಳಲ್ಲಿ 1 ಮೀಟರ್‌ಗಿಂತ ಕಡಿಮೆ ಎತ್ತರದ ಸುನಾಮಿ ಅಲೆಗಳು ದಾಖಲಾಗಿವೆ.
ಮೌಮೆರೆ ನಗರದಲ್ಲಿ ಭಾರಿ ಹಾನಿ
ಪೂರ್ವ ಇಂಡೋನೇಷ್ಯಾದ ಫ್ಲೋರೆಸ್ ದ್ವೀಪದಲ್ಲಿರುವ ಸಿಕ್ಕಾ ರೀಜೆನ್ಸಿಯ ಪ್ರಮುಖ ಬಂದರು ನಗರವಾದ ಮೌಮೆರೆ ಮತ್ತು ಸುತ್ತಮುತ್ತ ರಕ್ಷಣಾ ಕಾರ್ಯಾಚರಣೆ ನಡೆಸಿದ ತಂಡಗಳು ಕನಿಷ್ಠ 20 ಮೃತದೇಹಗಳನ್ನು ಪತ್ತೆಹಚ್ಚಿವೆ. ಆರು ಮಂದಿ ಗಾಯಗೊಂಡಿದ್ದು, ಇಬ್ಬರು ಅವಶೇಷಗಳಡಿ ಸಿಲುಕಿರುವುದು ವರದಿಯಾಗಿದೆ.
ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪ:
🚨7.7-magnitude earthquake hits Indonesia, killing 2; several buildings collapse, people injured and tsunami warning issued pic.twitter.com/tHF3zME7dy
— The Tatva (@thetatvaindia) August 15, 2026
ಭೂಕಂಪದ ಕೇಂದ್ರಬಿಂದುವಿಗೆ ಸಮೀಪವಿರುವ ನಗೆಕಿಯೋ ಪ್ರದೇಶಕ್ಕೆ ರಕ್ಷಣಾ ತಂಡಗಳು ತೆರಳಲು ಸಂಪರ್ಕ ವ್ಯವಸ್ಥೆ ಹದಗೆಟ್ಟಿರುವುದು ಹಾಗೂ ಭೂಕುಸಿತದಿಂದ ರಸ್ತೆಗಳು ಬಂದ್ ಆಗಿರುವುದು ಅಡ್ಡಿಯಾಗಿದೆ. ಮತ್ತೊಂದು ತಂಡವು ದೋಣಿ ಮೂಲಕ ಪ್ರದೇಶವನ್ನು ತಲುಪಲು ಪ್ರಯತ್ನಿಸುತ್ತಿದೆ. ನಗೆಕಿಯೋದಲ್ಲಿ ಸುಮಾರು 2,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಮನೆಗಳು, ಗೋದಾಮುಗಳು ಹಾಗೂ ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. ಕೆಲವು ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಮತ್ತು ವಿದ್ಯುತ್ ವ್ಯತ್ಯಯವೂ ವರದಿಯಾಗಿದೆ.
ಒಂದು ನಿಮಿಷಕ್ಕೂ ಹೆಚ್ಚು ಕಾಲ ಕಂಪನ ಅನುಭವ
ಪೂರ್ವ ನುಸಾ ತೆಂಗಾರಾ, ಪಶ್ಚಿಮ ನುಸಾ ತೆಂಗಾರಾ ಹಾಗೂ ದಕ್ಷಿಣ ಸುಲಾವೆಸಿಯ ಕೆಲವು ಭಾಗಗಳಲ್ಲಿ ಪ್ರಬಲ ಕಂಪನ ಅನುಭವವಾಗಿದೆ. ಹಲವು ನಿವಾಸಿಗಳು ಸುಮಾರು ಒಂದು ನಿಮಿಷದವರೆಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿಸಿದ್ದಾರೆ. ಭೂಕಂಪದ ತೀವ್ರತೆಗೆ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಆಸ್ಪತ್ರೆಯೊಂದರಲ್ಲಿ ರೋಗಿಗಳನ್ನು ಸುರಕ್ಷತೆಗಾಗಿ ಹೊರಗೆ ಸ್ಥಳಾಂತರಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಭೂಕುಸಿತವೂ ಸಂಭವಿಸಿದೆ.
ಮತ್ತೆ ಭೂಕಂಪದ ಸಾಧ್ಯತೆ
ಮುಖ್ಯ ಭೂಕಂಪದ ಬಳಿಕ ಹಲವು ಬಾರಿ ಭೂಮಿ ಕಂಪಿಸಿದ್ದು, ಹಾನಿಯ ಪ್ರಮಾಣವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದೇ ಪ್ರದೇಶದಲ್ಲಿ 1992ರಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿ ಭಾರೀ ನಾಶ ಉಂಟಾಗಿತ್ತು. ಆಸ್ಟ್ರೇಲಿಯಾದ ಸುನಾಮಿ ಎಚ್ಚರಿಕೆ ಕೇಂದ್ರವು ಈ ಸಮುದ್ರದಾಳದ ಭೂಕಂಪದಿಂದ ಆಸ್ಟ್ರೇಲಿಯಾದ ಮುಖ್ಯ ಭೂಭಾಗ, ದ್ವೀಪಗಳು ಅಥವಾ ಪ್ರದೇಶಗಳಿಗೆ ಸುನಾಮಿ ಅಪಾಯವಿಲ್ಲ ಎಂದು ತಿಳಿಸಿದೆ.
ಇಂಡೋನೇಷ್ಯಾ ಪೆಸಿಫಿಕ್ ರಿಂಗ್ ಆಫ್ ಫೈರ್ ಪ್ರದೇಶದಲ್ಲಿದ್ದು, ಇಲ್ಲಿ ಹಲವು ಟೆಕ್ಟಾನಿಕ್ ಫಲಕಗಳು ಸೇರುವುದರಿಂದ ಭೂಕಂಪ ಮತ್ತು ಜ್ವಾಲಾಮುಖಿ ಚಟುವಟಿಕೆಗಳು ಸಾಮಾನ್ಯವಾಗಿವೆ.