ಗೇಟ್‌ಗೆ ಡಿಕ್ಕಿ ಹೊಡೆದು ಅಪಾರ್ಟ್‌ಮೆಂಟ್‌ಗೆ ನುಗ್ಗಿದ ವೇಗದ ಕಾರ್; ಬೆಂಗಳೂರಿನಲ್ಲಿ ಕೂದಲೆಳೆ ಅಂತರದಲ್ಲಿ ಸೆಕ್ಯೂರಿಟಿ ಗಾರ್ಡ್ ಪಾರು
Viral Video: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಅಪಾರ್ಟ್‌ಮೆಂಟ್ ಒಂದರ ಗೇಟ್‌ಗೆ ಕಾರೊಂದು ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಪ್ರವೇಶ ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಾರಿನ ವೇಗಕ್ಕೆ ಕಬ್ಬಿಣದ ಗೇಟ್ ಪುಡಿ ಪುಡಿಯಾಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರಿನ ಅಪಾರ್ಟ್‌ಮೆಂಟ್ ಗೇಟ್‌ಗೆ ನುಗ್ಗಿದ ಕಾರ್ -
ಬೆಂಗಳೂರು, ಆ. 11: ಸಾರಿಗೆ ಇಲಾಖೆ ವಾಹನ ಸವಾರರ ಸುರಕ್ಷತೆಗಾಗಿ ನಿಯಮಗಳನ್ನು ಕಠಿಣಗೊಳಿಸಿದರೂ ಅಪಘಾತ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದೆ. ಅಪಾರ್ಟ್‌ಮೆಂಟ್ ಒಂದರ ಗೇಟ್‌ಗೆ ಕಾರೊಂದು ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಪ್ರವೇಶದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಾರಿನ ವೇಗಕ್ಕೆ ಕಬ್ಬಿಣದ ಗೇಟ್ ಪುಡಿ ಪುಡಿಯಾಗಿದ್ದು ಸಿಸಿಟಿವಿಯಲ್ಲಿ (Viral News) ಈ ದೃಶ್ಯ ಸೆರೆಯಾಗಿದೆ.
ಬೆಳಗಿನ ಜಾವ 1:42ರ ಸುಮಾರಿಗೆ ಈ ಘಟನೆ ನಡೆದಿದೆ. ಬಿಳಿ ಕಾರೊಂದು ವೇಗವಾಗಿ ಬಂದಿದ್ದು ಅಪಾರ್ಟ್‌ಮೆಂಟ್‌ನ ಕಬ್ಬಿಣದ ಗೇಟ್‌ಗೆ ಡಿಕ್ಕಿಯಾಗಿದೆ. ಕಾರ್ ತನ್ನ ಹತ್ತಿರ ಬರುತ್ತಿರುವುದನ್ನು ಗಮನಿಸಿದ ಸಿಬ್ಬಂದಿ, ತಕ್ಷಣವೇ ಸಮಯಪ್ರಜ್ಞೆ ಮೆರೆದು ಪಕ್ಕಕ್ಕೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಕಾರ್ ಬಹಳಷ್ಟು ವೇಗವಾಗಿ ಅಪಾರ್ಟ್‌ಮೆಂಟ್‌ನ ಮುಚ್ಚಿದ ಪ್ರವೇಶದ್ವಾರಕ್ಕೆ ರಭಸವಾಗಿ ಡಿಕ್ಕಿಯನ್ನು ಹೊಡೆದಿರುವುದನ್ನು ಕಾಣಬಹುದು. ಇದರಿಂದ ಗೇಟ್ ಸಂಪೂರ್ಣ ಪುಡಿ ಪುಡಿಯಾಗಿದೆ.
ವಿಡಿಯೊ ನೋಡಿ:
ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಪ್ರಾಣ ಉಳಿಸಿಕೊಳ್ಳಲು ಪಕ್ಕಕ್ಕೆ ಜಿಗಿದಿದ್ದಾರೆ. ಕಾರ್ ಗೇಟ್‌ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಅವರು ನೆಲಕ್ಕೆ ಬಿದ್ದಿದ್ದು, ಕೆಲ ಕ್ಷಣಗಳ ನಂತರ ಚೇತರಿಸಿಕೊಂಡು ಎದ್ದು ನಿಂತಿದ್ದಾರೆ. ಶಬ್ದ ಕೇಳಿ ಓಡಿ ಬಂದ ಸಾರ್ವಜನಿಕರು ಸೆಕ್ಯುರಿಟಿಯ ಆರೋಗ್ಯ ಪರಿಶೀಲಿಸಿದ್ದಾರೆ. ಸಾರ್ವಜನಿಕರು ಕಾರ್ ಚಾಲಕನ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಚಾಲಕನ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ; ಇದೇನು ನಿಮ್ಮ ಮನೆಯ ಆಸ್ತಿಯೇ? ನೆಟ್ಟಿಗರ ಪ್ರಶ್ನೆ
ಈ ಘಟನೆಯು ವಸತಿ ಕಟ್ಟಡಗಳಲ್ಲಿ ಕೆಲಸ ಮಾಡುವ ಮತ್ತು ಪ್ರವೇಶದ್ವಾರಗಳ ಬಳಿ ಇರುವ ಭದ್ರತಾ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಮತ್ತೆ ಕಳವಳಗಳನ್ನು ಹುಟ್ಟುಹಾಕಿದೆ. ಚಾಲಕ ಮದ್ಯಪಾನ ಮಾಡಿದ್ದನೇ ಅಥವಾ ಕಾರು ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.