ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stray Dog Protest: ಬೀದಿ ನಾಯಿ ವಿರುದ್ಧ ಕ್ರಮ; ಪ್ರಾಣಿ ಹಕ್ಕುಗಳ ಹೋರಾಟಗಾರರು-ಪೊಲೀಸರ ನಡುವೆ ಗುದ್ದಾಟ: ಇಲ್ಲಿದೆ ವಿಡಿಯೊ

ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇವುಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಪ್ರಾಣಿ ಹಕ್ಕುಗಳ ಹೋರಾಟಗಾರರು ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆದಿರುವ ವಿಡಿಯೊ ವೈರಲ್ ಆಗಿದೆ.

ಪ್ರಾಣಿ ಹಕ್ಕುಗಳ ಹೋರಾಟಗಾರರು-ಪೊಲೀಸರ ನಡುವೆ ಗುದ್ದಾಟ

Priyanka P Priyanka P Aug 13, 2025 8:49 PM

ದೆಹಲಿ: ಮಕ್ಕಳ ಮೇಲೆ ಬೀದಿನಾಯಿಗಳ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇವುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ (Supreme Court) ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ (Stray Dog Protest) ಭುಗಿಲೆದ್ದಿದೆ.

ಇಂಡಿಯಾ ಗೇಟ್‌ನಲ್ಲಿ, ಪ್ರಾಣಿ ಹಕ್ಕುಗಳ ಹೋರಾಟಗಾರರು ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸ್ ಬಸ್‌ನೊಳಗೆ ದೆಹಲಿಯ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಮಹಿಳಾ ಕಾರ್ಯಕರ್ತೆಯರ ನಡುವಿನ ಮಾತಿನ ಚಕಮಕಿ ನಡೆದಿದೆ. ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಬಂಧಿತ ಮಹಿಳಾ ಪ್ರತಿಭಟನಾಕಾರ ಮಹಿಳೆ ಮತ್ತು ಮಹಿಳಾ ಪೊಲೀಸ್ ನಡುವೆ ವಾಗ್ವಾದ ನಡೆದಿದೆ. ಈ ಸಮಯದಲ್ಲಿ ಪೊಲೀಸ್ ಆ ಮಹಿಳೆಯನ್ನು ಬಸ್ಸಿನ ಹಿಂಭಾಗಕ್ಕೆ ಎಳೆದಿದ್ದಾರೆ. ಈ ವೇಳೆ ಹೋರಾಟಗಾರ್ತಿ, ನೀವು ನನ್ನನ್ನು ಏಕೆ ತಳ್ಳುತ್ತಿದ್ದೀರಿ? ಎಂದು ಕೂಗಿದ್ದಾರೆ. ಸಿಟ್ಟಿಗೆದ್ದ ಪೊಲೀಸ್ ಅಧಿಕಾರಿ, ಮಹಿಳೆಗೆ ಕಪಾಳಮೋಕ್ಷ ಮಾಡಿ ಕೈಯಲ್ಲೇ ಥಳಿಸಿದ್ದಾರೆ. ಒಂದು ಹಂತದಲ್ಲಿ, ಪ್ರತಿಭಟನಾಕಾರರು ಪ್ರತಿದಾಳಿ ನಡೆಸಲು ಪ್ರಯತ್ನಿಸುತ್ತಿರುವಂತೆ ಕಂಡುಬಂದಿದೆ.

ವಿಡಿಯೊ ವೀಕ್ಷಿಸಿ:



ಅವರು ಮೊದಲು ಹೊಡೆದರು ಎಂಬ ಮಾತು ಹಿನ್ನೆಲೆಯಲ್ಲಿ ಕೇಳಿಬಂದಿದೆ. ಈ ವೇಳೆ ಮಾತಿನ ಚಕಮಕಿ ಮುಂದುವರಿದಿದೆ. ಪೊಲೀಸ್ ಸಿಬ್ಬಂದಿ ಕಾರ್ಯಕರ್ತರಿಗೆ ಕುಳಿತುಕೊಳ್ಳಲು ಸೂಚಿಸಿದ್ದಾರೆ. ಈ ವಿಡಿಯೊವನ್ನು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಪೋಸ್ಟ್ ಮಾಡಿದ್ದು, “ಶಾಂತಿಯುತ ಪ್ರತಿಭಟನೆಯನ್ನು ಸರ್ವಾಧಿಕಾರಿ ರೀತಿಯಲ್ಲಿ ನಿರ್ವಹಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ. ದೆಹಲಿ ಪೊಲೀಸರು ಸಂಯಮ ವಹಿಸಬೇಕು. ಪ್ರತಿಭಟಿಸುವ ಹಕ್ಕು ಮೂಲಭೂತ ಮತ್ತು ಸಾಂವಿಧಾನಿಕ ಹಕ್ಕಾಗಿದ್ದು, ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ” ಎಂದು ಬರೆದಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ಏನು?

ಸೋಮವಾರ, ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರ ಮತ್ತು ಗುರುಗ್ರಾಮ, ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿರುವ ನಾಗರಿಕ ಸಂಸ್ಥೆಗಳಿಗೆ ಬೀದಿನಾಯಿಗಳನ್ನು ಹಿಡಿದು, ಸಂತಾನಶಕ್ತಿಹರಣ ಚಿಕಿತ್ಸೆ ಮಾಡಿ ಎಂಟು ವಾರಗಳ ಒಳಗೆ ಶಾಶ್ವತವಾಗಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಆದೇಶಿಸಿದೆ. ಬೀದಿನಾಯಿಗಳ ದಾಳಿಯನ್ನು ಅತ್ಯಂತ ಭೀಕರ ಎಂದು ಕರೆದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು, ಸುಮಾರು 5,000 ನಾಯಿಗಳಿಗೆ ಸಾಮರ್ಥ್ಯವಿರುವ ಆಶ್ರಯ ತಾಣಗಳನ್ನು ಸಂತಾನಶಕ್ತಿಹರಣ ಚಿಕಿತ್ಸೆ ಮತ್ತು ಲಸಿಕೆ ಹಾಕಲು ಸಾಕಷ್ಟು ಸಿಬ್ಬಂದಿಯೊಂದಿಗೆ ಸ್ಥಾಪಿಸಬೇಕು ಎಂದು ಹೇಳಿದೆ.