ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗಂಟೆಗೆ 100 ಕಿ.ಮೀ. ವೇಗದಲ್ಲಿ ಕಾರ್‌ ಓಡಿಸುತ್ತ ನಿದ್ರಿಸಿದ ಚಾಲಕ; ವಿಡಿಯೊ ವೈರಲ್

Viral Video: ವೇಗವಾಗಿ ಕಾರು ಚಲಾಯಿಸುತ್ತಿದ್ದ ವೇಳೆ ಚಾಲಕ ನಿದ್ರಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಈ ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಕಾರ್‌ ವೇಗವಾಗಿ ಚಲಾಯಿಸುತ್ತ ನಿದ್ರಿಸಿದ ಚಾಲಕ

ಸಾಂದರ್ಭಿಕ ಚಿತ್ರ -

Priyanka P
Priyanka P Jan 5, 2026 6:15 PM

ಚಂಡೀಗಢ, ಜ. 5: ಸಾರ್ವಜನಿಕ ರಸ್ತೆಯಲ್ಲಿ ಚಾಲಕನೊಬ್ಬ ಅಪಾಯಕಾರಿಯಾಗಿ ವರ್ತಿಸಿದ ಆಘಾತಕಾರಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಚಂಡೀಗಢ (Chandigarh) ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಕಾರು ಚಾಲಕನೊಬ್ಬ ವೇಗವಾಗಿ ವಾಹನ ಓಡಿಸುತ್ತ ನಿದ್ರಿಸುತ್ತಿರುವುದನ್ನು ವಿಡಿಯೊದಲ್ಲಿ ಕಂಡು ಬಂದಿದೆ. ವಾಹನವು ಗಂಟೆಗೆ ಸುಮಾರು 100 ಕಿ.ಮೀ ವೇಗದಲ್ಲಿ ಚಲಿಸುತ್ತಲೇ ಇತ್ತು. ಇದು ರಸ್ತೆ ಸುರಕ್ಷತೆಯ ಬಗ್ಗೆ ವ್ಯಾಪಕ ಕಳವಳವನ್ನು ಹುಟ್ಟುಹಾಕಿದೆ.

ಪಕ್ಕದಲ್ಲಿ ವಾಹನ ಚಲಾಯಿಸುತ್ತಿದ್ದ ಮತ್ತೊಬ್ಬ ವಾಹನ ಸವಾರ, ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾನೆ. ಈ ವಿಡಿಯೊದಲ್ಲಿ ಚಾಲಕ ಸ್ಟೀರಿಂಗ್ ಮೇಲೆ ಮಲಗಿ ನಿದ್ರಿಸುತ್ತಿರುವುದು ಕಂಡುಬಂದಿದೆ. ಆದರೆ ಈತನಿಗೆ ಯಾವುದೇ ಅರಿವಿಲ್ಲದೆ, ವಾಹನವನ್ನು ವೇಗವಾಗಿ ಚಲಾಯಿಸಿದ್ದಾನೆ. ಚಿತ್ರೀಕರಿಸುತ್ತಿರುವ ವ್ಯಕ್ತಿಯು ಚಾಲಕನ ಮೇಲೆ ಕೂಗುತ್ತಿರುವುದು ಮತ್ತು ಅವನನ್ನು ಎಬ್ಬಿಸಲು ಪ್ರಯತ್ನದಲ್ಲಿ ಪದೇ ಪದೆ ಹಾರ್ನ್ ಮಾಡುತ್ತಿರುವುದು ಕೇಳಿಸುತ್ತದೆ. ಆದರೆ ಆ ವ್ಯಕ್ತಿ ನಿದ್ರಿಸುತ್ತಿರುವುದರಿಂದ ಈ ಪ್ರಯತ್ನಗಳಿಂದ ಪ್ರಯೋಜನವಾಗಿಲ್ಲ.

ವಿಡಿಯೊ ಇಲ್ಲಿದೆ:



ದೆಹಲಿ-ಜೈಪುರ ಹೆದ್ದಾರಿಯಲ್ಲಿ ಇದೇ ರೀತಿಯ ಘಟನೆ

2025ರ ಜೂನ್‌ನಲ್ಲಿ ಗುರುಗ್ರಾಮ ಬಳಿಯ ದೆಹಲಿ-ಜೈಪುರ ಹೆದ್ದಾರಿಯಲ್ಲಿ ಇಂತಹದ್ದೇ ಮತ್ತೊಂದು ಘಟನೆ ನಡೆದಿತ್ತು. ಸಿವಿಲ್ ಎಂಜಿನಿಯರ್ ಒಬ್ಬರು ಚಾಲನೆ ಮಾಡುವಾಗ ನಿದ್ರಿಸಿದ್ದರಿಂದ ಡಾಬಾದ ಹೊರಗೆ ಮೋಟಾರ್ ಸೈಕಲ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ಡಿಕ್ಕಿ ಹೊಡೆದಿದ್ದರು. ಈ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿ ಮತ್ತು ಅವರ ಸ್ನೇಹಿತ ತೀವ್ರವಾಗಿ ಗಾಯಗೊಂಡಿದ್ದರು. ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿತ್ತು.

ಭಾರತದಲ್ಲಿ, ವಿಶೇಷವಾಗಿ ಹೆದ್ದಾರಿಗಳಲ್ಲಿ, ತೂಕಡಿಕೆಯ ಸಮಯದಲ್ಲಿ ವಾಹನ ಅಪಘಾತವಾಗುವ ಪ್ರಮಾಣ ಹೆಚ್ಚಾಗಿದೆ ಎನ್ನುತ್ತಾರೆ ತಜ್ಞರು. ಸುಮಾರು ಶೇ. 20–40ರಷ್ಟು ರಸ್ತೆ ಅಪಘಾತಗಳಿಗೆ ಆಯಾಸವೇ ಕಾರಣ ಎಂದು ಅಂದಾಜಿಸಿದ್ದಾರೆ.

ಅಮಲಿನಲ್ಲಿದ್ದ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ಕ್ಯಾಬ್‌ ಚಾಲಕ

ಎಚ್ಚರಿಕೆ ಚಿಹ್ನೆಗಳನ್ನು ಮೊದಲೇ ಗುರುತಿಸಿ

ಚಾಲಕರು ಈ ಕೆಳಗಿನ ಅನುಭವಗಳನ್ನು ಅನುಭವಿಸಿದರೆ ತಕ್ಷಣವೇ ನಿಲ್ಲಿಸಬೇಕು:

  • ಆಗಾಗ್ಗೆ ಆಕಳಿಕೆ ಅಥವಾ ಕಣ್ಣು ಮಿಟುಕಿಸುವುದು.
  • ಕಣ್ಣುಗಳನ್ನು ತೆರೆದಿಡಲು ತೊಂದರೆಯಾಗುವುದು.
  • ಲೇನ್‌ ಬದಿಯಲ್ಲಿರುವ ರಸ್ತೆ ಚಿಹ್ನೆಗಳು ಕಾಣೆಯಾಗಿರುವುದು.
  • ವೇಗ ಕಾಯ್ದುಕೊಳ್ಳುವಲ್ಲಿ ತೊಂದರೆ.
  • 7ರಿಂದ 9 ಗಂಟೆಗಳ ಕಾಲ ಸಾಕಷ್ಟು ವಿಶ್ರಾಂತಿ ಪಡೆದು ನಂತರ ವಾಹನ ಚಲಾಯಿಸುವುದು ಮುಖ್ಯ.

ಕಾರಿನ ಬಾನೆಟ್ ಮೇಲೆ ಕುಳಿತು ದುಸ್ಸಾಹಸ

ವಾಹನ ಚಲಾಯಿಸುವಾಗ ಯುವಕರ ಹುಚ್ಚಾಟ ಕೆಲವೊಮ್ಮೆ ಮಿತಿ ಮೀರಿ, ವ್ಹೀಲಿಂಗ್ ಮಾಡುವುದು, ಅಪಾಯಕಾರಿ ರೀಲ್ಸ್ ಮಾಡುವುದು, ಸ್ಟಂಟ್ ಮಾಡುವುದು ಮುಂತಾದ ಹುಚ್ಚಾಟ ಮೆರೆದಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಚಳಿಗಾಲದ ಮಂಜಿನ ನಡುವೆ ಪ್ರಯಾಣ ಮಾಡಲು ಯುವಕರ ತಂಡವೊಂದು ಅಪಾಯಕಾರಿ ದುಸ್ಸಾಹಸ ಮಾಡಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಯುವಕನೊಬ್ಬ ಕಾರಿನ ಬಾನೆಟ್ ಮೇಲೆ ಕುಳಿತು ಅಪಾಯಕಾರಿ ಸಾಹಸವನ್ನು ಮಾಡಿದ ದೃಶ್ಯ ವೈರಲ್‌ ಆಗಿತ್ತು.